twitter
    For Quick Alerts
    ALLOW NOTIFICATIONS  
    For Daily Alerts

    ಓದುಗರ ವಿಮರ್ಶೆ: ಏನು ಇಲ್ಲದವರ ಪಾಲಿನ 'ರಾಜಕುಮಾರ'!

    By ಭಾಸ್ಕರ ಬಂಗೇರ
    |

    ನಡುಮನೆಯಲ್ಲಿ ಹಚ್ಚಿಟ್ಟ ಗಂಧದ ಕಡ್ಡಿಯ ಘಮ ಮಂದವಾಗಿ ಇಡೀ ಮನೆಯನ್ನು ತುಂಬಿಕೊಳ್ಳುವಂತೆ 'ರಾಜಕುಮಾರ' ನಿಧಾನವಾಗಿ ನಮ್ಮನ್ನು ಆವರಿಸಿಕೊಳ್ಳುತ್ತಾನೆ. ಹೆಸರೇ ಹೇಳುವಂತೆ ಸಿನಿಮಾದ ಮುಖ್ಯ ಪಾತ್ರ ಎಲ್ಲವನ್ನು ಕಳೆದುಕೊಂಡವರ ಪಾಲಿನ 'ರಾಜಕುಮಾರ'. ತನ್ನೊಳಗಿನ ಎದೆಗುದಿಯನ್ನು ಬಚ್ಚಿಟ್ಟುಕೊಳ್ಳುತ್ತ ಬದುಕನ್ನು ವಿಸ್ತರಿಸಿಕೊಳ್ಳುವ ಪರಿ ಆಪ್ತವೆನಿಸುತ್ತದೆ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

    ಮಾಸ್ ಹಾಗೂ ಕೌಟುಂಬಿಕ ಪ್ರೇಕ್ಷಕರಿಬ್ಬರಿಗೂ ರುಚಿಸುವಂತಹ ನಿರೂಪಣಾ ತಂತ್ರ ಈ ಸಿನಿಮಾದಲ್ಲಿದೆ. ಈ ಕಾಲಘಟ್ಟದ ಕಹಿ ವಾಸ್ತವವನ್ನು ಪಠ್ಯ ಅನಿಸದಂತೆ ಪ್ರಸ್ತುತ ಪಡಿಸುತ್ತಾ ನಮ್ಮನ್ನು ತಲುಪಿರುವ ರೀತಿಯೇ ಸಿನಿಮಾದ ಮುಖ್ಯ ಜೀವಾಳ.

     ಹಠಕ್ಕೆ ಬಿದ್ದಿರುವ ನಿರ್ದೇಶಕ ಸಂತೋಷ್ ಆನಂದರಾಮ್

    ಹಠಕ್ಕೆ ಬಿದ್ದಿರುವ ನಿರ್ದೇಶಕ ಸಂತೋಷ್ ಆನಂದರಾಮ್

    ಸಿನಿಮಾದ ನಿರ್ದೇಶಕರಾದ ಸಂತೋಷ್ ಆನಂದರಾಮ್ ಮನರಂಜನೆ ಬಯಸಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನನ್ನು ಸರ್ವ ರೀತಿಯಲ್ಲಿಯೂ ರಂಜಿಸುವ ಹಠಕ್ಕೆ ಬಿದ್ದಿದ್ದಾರೆ. ಹಾಗೂ ಆ ಪ್ರಯತ್ನದಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ತಮ್ಮ ಹಿಂದಿನ ಚಿತ್ರವಾದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಯಲ್ಲಿ ಗಡುಸಾಗಿದ್ದ ಮುಖ್ಯಪಾತ್ರ 'ರಾಜಕುಮಾರ'ದಲ್ಲಿ ಮೆತ್ತಗಾಗಿದೆ ಹಾಗೂ ಹೊಡೆದಾಟಗಳ ನಡುವೆಯೂ ಹಿತವಾಗಿದೆ.

     ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ

    ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ

    ಸಂತೋಷ್ ಆನಂದರಾಮ್ ಒಟ್ಟಾರೆ ಸಿನಿಮಾವನ್ನು ಚಿತ್ರಕತೆಯ ಆರಂಭದಿಂದ ನೋಡದೆ ಬಿಡಿ ದೃಶ್ಯಗಳ ಮೂಲಕ 'ರಾಜಕುಮಾರ'ನನ್ನು ಸಹ್ಯವಾಗಿಸುತ್ತ, ನಮ್ಮೊಳಗೇ ಚಿತ್ರದೊಂದಿಗೆ ಬಂಧವನ್ನು ಬೆಳೆಸುತ್ತ ಸಾಗುತ್ತಾರೆ. ಕೌಟುಂಬಿಕ ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಇವರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಭ್ಯ ಸಿನಿಮಾಗಳನ್ನು ನಾವು ನಿರೀಕ್ಷಿಸಬಹುದು.

     ಪುನೀತ್ ಆಕ್ಟಿಂಗ್ ಸೂಪರ್

    ಪುನೀತ್ ಆಕ್ಟಿಂಗ್ ಸೂಪರ್

    'ರಾಜಕುಮಾರ' ಸಿನಿಮಾದಲ್ಲಿ ಪುನೀತ್ ನಟನೆ ನೋಡಿದರೆ ಅಣ್ಣಾವ್ರು ನೆನಪಾಗುತ್ತಾರೆ. ಆರ್ದ್ರ ಕಣ್ಣುಗಳಲ್ಲಿ ಕಾಣುವ ಮಿಂಚು, ವಿಷಣ್ಣ ಭಾವವನ್ನು ವ್ಯಕ್ತಪಡಿಸುತ್ತಲೇ ಮಗುವಿನಂತೆ ನಗುವ ಅಪ್ಪು ನಟನೆಯಲ್ಲಿ ಮತ್ತಷ್ಟು ಮಾಗಿದ್ದಾರೆ. ಚಿಗರೆಯ ಚುರುಕಿನ ಅವರ ಕಾಲುಗಳು ಕುಣಿಯುವುದು ಹಾಗೂ ಹೊಡೆದಾಡುವುದನ್ನು ನೋಡುವುದೇ ಒಂದು ಅದ್ಭುತ ಅನುಭವ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಪುನೀತ್ ರಾಜಕುಮಾರ್ ಅವರಿಗೆ ಈ ಸಿನಿಮಾ ಮತ್ತಷ್ಟು ಪ್ರೀತಿಯನ್ನು ಸಂಪಾದಿಸಿಕೊಡಲಿದೆ.

     ಕಾಡುವ 'ಬೊಂಬೆ ಹೇಳುತೈತೆ..'' ಹಾಡು

    ಕಾಡುವ 'ಬೊಂಬೆ ಹೇಳುತೈತೆ..'' ಹಾಡು

    ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ 'ಬೊಂಬೆ ಹೇಳುತೈತೆ' ಹಾಗೂ ಸಾಗರದ ಅಲೆಗೂ ದಣಿವು ಹಾಡುಗಳು ಅದ್ಭುತವಾಗಿವೆ. ಹಿನ್ನಲೆ ಸಂಗೀತ ಸಿನಿಮಾಕ್ಕೆ ಅಂತಹ ಕೊಡುಗೆಯನ್ನೇನು ಕೊಡುವುದಿಲ್ಲ. ಅನಂತನಾಗ್, ಪ್ರಕಾಶ್ ರೈ, ದತ್ತಣ್ಣ, ಭಾರ್ಗವಿ ನಾರಾಯಣ್, ಅಶೋಕ್, ಚಿತ್ರಾ ಶೆಣೈ, ಅವಿನಾಶ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ ಹಾಗೂ ಶರತ್ ಕುಮಾರ್ ರಂತಹ ಹಿರಿಯ ನಟರ ದಂಡೆ ಚಿತ್ರದಲ್ಲಿದೆ. ಮತ್ತೊಂದು ಮುಖ್ಯಪಾತ್ರದಲ್ಲಿ ನಟಿಸಿರುವ ಪ್ರಿಯಾ ಆನಂದ್ ಪಾತ್ರ ಪೋಷಣೆ ಹಾಗೂ ನಟನೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನು ಇಲ್ಲ.

     ಇಂತಹ ಸಿನಿಮಾಗಳು ಅವಶ್ಯ

    ಇಂತಹ ಸಿನಿಮಾಗಳು ಅವಶ್ಯ

    ಕೌಟುಂಬಿಕ ಮೌಲ್ಯಗಳು ಒಡೆದು ಚೂರು ಚೂರಾಗುತ್ತಿರುವ ಈ ದುರಿತ ಕಾಲದಲ್ಲಿ ಇಂತಹ ಸಿನಿಮಾಗಳ ಅನಿವಾರ್ಯತೆ ನಮ್ಮೆಲ್ಲರಿಗಿದೆ. ಸಾಧ್ಯವಾದರೆ ನಿಮ್ಮ ಹೆತ್ತವರ ಹಾಗೂ ಮನೆಯ ಇತರ ಸದಸ್ಯರ ಜೊತೆ 'ರಾಜಕುಮಾರ' ನೋಡಿ.

    English summary
    Power Star Puneeth Rajkumar starrer Kannada Movie 'Raajakumara' has hit the screens today (March 24th). Here is the Movie Review by Filmibeat Kannada Reader Bhaskar.
    Friday, March 24, 2017, 17:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X