ಅಲ್ಲು ಅರ್ಜುನ್ ಬೆಂಕಿ, ಜಾತ್ರೆ ಸೀನ್ ಜ್ವಾಲಾಮುಖಿ, ಪ್ರೇಕ್ಷಕ ಮಹಾಪ್ರಭು ಕಂಡಂತೆ ಹೇಗಿದೆ ಪುಷ್ಪ 2..?
ಅಲ್ಲು ಅರ್ಜುನ್ ಪಾಲಿಗೆ ಈ ದಿನ ತುಂಬಾ ಮಹತ್ವವಾದದ್ದು. ಯಾಕೆಂದರೆ ಪುಷ್ಪ 2 ಚಿತ್ರಕ್ಕೆ ಅಲ್ಲು ಅರ್ಜುನ್ ತಮ್ಮ ತನು ಮನ ಅರ್ಪಿಸಿದ್ದಾರೆ. ಪುಷ್ಪ 2 ಚಿತ್ರಕ್ಕೆ ಹೆಚ್ಚು ಕಡಿಮೆ ಐದು ವರ್ಷ ಹಗಲಿರುಳು ಬೆವರು ಸುರಿಸಿದ್ದಾರೆ.
ಇನ್ನೂ ಪುಷ್ಪ ಚಿತ್ರ ಶುರುವಾದ ದಿನದಿಂದ ಈ ಚಿತ್ರದ ಮೇಲೆ ಕೆ.ಜಿ.ಎಫ್ ನೆರಳು ಇದ್ದೇ ಇದೆ. ಕೆ.ಜಿ.ಎಫ್ ಮಾದರಿಯಲ್ಲಿಯೇ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಜೋಡಿ ಯಶಸ್ವಿ ಕೂಡ ಆಗಿದೆ. ನಿನ್ನೆ ರಾತ್ರಿ ಭಾರತದೆಲ್ಲೆಡೆ ಚಿತ್ರ ಭರ್ಜರಿ ಪ್ರದರ್ಶನವನ್ನು ಕಂಡಿದೆ. ಹಾಗಿದ್ದರೆ ಪುಷ್ಪ 2 ಹೇಗಿದೆ ? ಚಿತ್ರವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಈ ಚಿತ್ರದ ಕುರಿತು ಹೇಳುವುದೇನು ಎಂದು ತಿಳಿಯಲು ಮುಂದೆ ಓದಿ

ಗಂಗಮ್ಮ ತಲ್ಲಿ ಜಾತ್ರೆ ದೃಶ್ಯ ಚಿತ್ರದ ಮಹಾಕಾವ್ಯ
ಹದಿನೈದು ನಿಮಿಷ ಅವಧಿಯ ಗಂಗಮ್ಮ ತಲ್ಲಿ ಜಾತ್ರೆ ಈ ಚಿತ್ರದಲ್ಲಿನ ಮಹಾಕಾವ್ಯ ಎನ್ನುವ ಅಭಿಪ್ರಾಯವನ್ನು ಒಬ್ಬರು ವ್ಯಕ್ತಪಡಿಸಿದ್ದು, ಅಲ್ಲು ಅರ್ಜುನ್ ಪೂರ್ತಿ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಇದೇ ಗಂಗಮ್ಮ ತಲ್ಲಿ ಜಾತ್ರೆಯ ದೃಶ್ಯದಲ್ಲಿ ಅಲ್ಲು ಅರ್ಜುನ್ ತಮ್ಮ ಅಭಿನಯದ ವಿಶ್ವರೂಪ ಪ್ರದರ್ಶನವನ್ನು ಮಾಡಿದ್ದಾರೆ ಎಂದು ಹೇಳಿದ್ದು ರಶ್ಮಿಕಾ ಮಂದಣ್ಣ ಅವರ ದೃಶ್ಯಗಳನ್ನು ಹೊರತು ಪಡಿಸಿದರೆ ಚಿತ್ರ ಚೆನ್ನಾಗಿದೆ ಎಂದಿದ್ದಾರೆ.
ಅಲ್ಲು ಅರ್ಜುನ್ ಫುಲ್ ಮಾಸ್
ಮೊದಲಾರ್ಧ ಚೆನ್ನಾಗಿದೆ. ಅದಕ್ಕೆ ಪೂರಕವಾಗಿ ದ್ವೀತಿಯಾರ್ಧ ಕೂಡ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ಅಂತ್ಯ ಡಿಸೆಂಟ್ ಆಗಿದೆ ಎಂದಿರುವ ಇನ್ನೊಬ್ಬರು ಅಲ್ಲು ಅರ್ಜುನ್ ಅವರದ್ದು ಚಿತ್ರದಲ್ಲಿ ಸಂಪೂರ್ಣ ಮಾಸ್ ಅವತಾರ ಎಂದಿದ್ದಾರೆ. ಸುಕುಮಾರ್ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರವನ್ನು ರೂಪಿಸಿದ್ದಾರೆ, ಫಹಾದ್ ಫಾಸಿಲ್ ಅಭಿನಯ ಚೆನ್ನಾಗಿದೆ. ಹಿನ್ನೆಲೆ ಸಂಗೀತ ಬಹುತೇಕ ಕಡೆ ಚೆನ್ನಾಗಿ ಮೂಡಿ ಬಂದಿದೆ ಎಂದಿದ್ದಾರೆ. ಚಿತ್ರದ ಅವಧಿಯೇ ಸಮಸ್ಯೆ ಎಂದು ಕೂಡ ಹೇಳಿರುವ ಇವರು ಒಟ್ಟಾರೆ ತೃಪ್ತಿ ನೀಡುವಂತಹ ಸಿನಿಮಾ ಎಂದು ಹೇಳಿದ್ದಾರೆ.
ಸೆಕೆಂಡ್ ಹಾಫ್ ಚೆನ್ನಾಗಿಲ್ಲ
ಚಿತ್ರದ ಸೆಕೆಂಡ್ ಹಾಫ್ ಚೆನ್ನಾಗಿಲ್ಲ. ಜಾತ್ರೆ ದೃಶ್ಯ ಚೆನ್ನಾಗಿದೆ. ಆದರೆ ಜಾತ್ರೆ ದೃಶ್ಯದ ನಂತರ ಚಿತ್ರವನ್ನು ಪುಷ್ಪ 3 ಚಿತ್ರಕ್ಕೋಸ್ಕರ ಎಳೆಯಲಾಗಿದೆ. ಸುಕುಮಾರ್ ಅತ್ಯುತ್ತಮವಾದ ಅವಕಾಶ ಕಳೆದುಕೊಂಡಿದ್ದಾರೆ. ಸಾಧಾರಣ ಸಿನಿಮಾ ಎಂದು ಪ್ರೇಕ್ಷಕರು ಒಬ್ಬರು ಬರೆದಿದ್ದಾರೆ.
ಅಲ್ಲು ಅರ್ಜುನ್ ವೃತ್ತಿ ಬದುಕಿನ ಶ್ರೇಷ್ಠ ಚಿತ್ರ
ಅಲ್ಲು ಅರ್ಜುನ್ ವೃತ್ತಿ ಜೀವನದ ಅತ್ಯುತ್ತಮ ಚಿತ್ರ ಇದು ಎಂದಿರುವ ಇನ್ನೊಬ್ಬ ಪ್ರೇಕ್ಷಕರು ಚಿತ್ರದ ಮೊದಲಾರ್ಧದ ಕಥೆ, ಚಿತ್ರಕಥೆ ಎಲ್ಲವೂ ತುಂಬಾ ಚೆನ್ನಾಗಿದೆ. ಹಿನ್ನೆಲೆ ಸಂಗೀತ ಡಿಫರೆಂಟ್ ಲೆವಲ್‌ನಲ್ಲಿದ್ದು ಛಾಯಾಗ್ರಹಣದ ಕೆಲಸ ಕೂಡ ಚೆನ್ನಾಗಿದೆ ಎಂದಿದ್ದಾರೆ. ಚಿತ್ರದಲ್ಲಿ ನೆಗೆಟಿವ್ ಅಂಶ ಅನ್ನುವುದು ಯಾವುದಾದರೂ ಇದ್ದರೆ ಅದು ರಶ್ಮಿಕಾ ಮಂದಣ್ಣ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಕೆಲವರು ಚಿತ್ರದ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಲೆಳೆಯಲು ಎಂದೇ ಕಾದು ಕುಳಿತಿರುವಂತೆ ಚಿತ್ರದ ಕುರಿತು ನೆಗೆಟಿವ್ ಮಾತುಗಳನ್ನಾಡುತ್ತಿದ್ದಾರೆ. ಇದೊಂದು ಸಿನಿಮಾನಾ ಎನ್ನುತ್ತಿದ್ದಾರೆ. ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಬಂದ ಅತ್ಯಂತ ಕಳಪೆ ಚಿತ್ರ ಇದು ಎನ್ನುತ್ತಿದ್ದಾರೆ.
ಒಟ್ನಲ್ಲಿ ಪುಷ್ಪ 2 ಚಿತ್ರಕ್ಕೆ ಬಹುತೇಕ ಪ್ರೇಕ್ಷಕರು ಬಹುಪರಾಕ್ ಹಾಕಿದ್ದಾರೆ. ಚಿತ್ರದ ಅವಧಿ ಹೆಚ್ಚಿದ್ದರೂ ಕೂಡ ಪಕ್ಕಾ ಪೈಸಾ ವಸೂಲ್ ಸಿನಿಮಾ ಎನ್ನುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಅಭಿನಯವನ್ನು ಕೊಂಡಾಡುತ್ತಿದ್ದಾರೆ. ಹೀಗೆ ಪ್ರೇಕ್ಷಕರ ಹೃದಯವನ್ನು ಮೊದಲ ದಿನ ಗೆದ್ದ ಈ ಚಿತ್ರದ ಗಳಿಕೆ ಎಷ್ಟಾಗಲಿದೆ, ಪುಷ್ಪ 2 ಚಿತ್ರ ಯಾವೆಲ್ಲ ದಾಖಲೆಗಳನ್ನು ಮುರಿಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications










