twitter
    For Quick Alerts
    ALLOW NOTIFICATIONS  
    For Daily Alerts

    Law Movie Review: ಸೂಕ್ಷ್ಮ ವಸ್ತುವಿನ ಸುತ್ತ ಸಶಕ್ತ ಸಸ್ಪೆನ್ಸ್ ಕಥನ

    |

    ಕಾನೂನು ಮತ್ತು ಸತ್ಯದ ಸಂಘರ್ಷ ನಿರಂತರ ಚರ್ಚೆಯಲ್ಲಿರುವ ಸಂಗತಿ. ಕಾನೂನಿಗೆ ಸಾಕ್ಷ್ಯ ಬೇಕು. ಅದು ನ್ಯಾಯಾಲಯಕ್ಕೆ ಹೇಗೆ ಮನದಟ್ಟು ಮಾಡುವಲ್ಲಿ ವಕೀಲರು ಸಫಲರಾಗುತ್ತಾರೋ ಅದಕ್ಕೆ ಅನುಸಾರ ತೀರ್ಪು ಬರುತ್ತದೆ. ಅದು ನ್ಯಾಯದ ಪರವೂ ಆಗಬಹುದು, ಅನ್ಯಾಯದ ಪರವೂ ಆಗಬಹುದು. ಇಂತಹ ಸಂಕೀರ್ಣ ವ್ಯವಸ್ಥೆಯೊಳಗೆ 'ಸಾಮೂಹಿಕ ಅತ್ಯಾಚಾರ' ಎಂಬ ದೇಶವನ್ನು ಪದೇ ಪದೇ ನಲುಗಿಸುವ ವಿಚಾರವನ್ನು ಮುಖಾಮುಖಿಯನ್ನಾಗಿಸಿದ್ದಾರೆ ನಿರ್ದೇಶಕ ರಘು ಸಮರ್ಥ್.

    Rating:
    3.5/5

    ಚಿತ್ರ: ಲಾ

    ನಿರ್ಮಾಪಕರು: ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಎಂ. ಗೋವಿಂದ

    ನಿರ್ದೇಶನ: ರಘು ಸಮರ್ಥ್

    ಕಲಾವಿದರು: ರಾಗಿಣಿ ಪ್ರಜ್ವಲ್, ಅವಿನಾಶ್, ಕೃಷ್ಣ ಹೆಬ್ಬಾಳೆ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಮುಂತಾದವರು.

    ಗಮನ ಸೆಳೆಯುವ ಚಿತ್ರ

    ಗಮನ ಸೆಳೆಯುವ ಚಿತ್ರ

    ಪುನೀತ್ ರಾಜ್ ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನ 'ಲಾ' ಚಿತ್ರ ಒಟಿಟಿ ವೇದಿಕೆಯಲ್ಲಿ ತೆರೆಕಂಡಿದೆ. ಹೀಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣದೆ ನೇರವಾಗಿ ಒಟಿಟಿಯಲ್ಲಿಯೇ ಬಿಡುಗಡೆಯಾದ ಮೊದಲ ಸಿನಿಮಾ 'ಲಾ'. ತನ್ನ ವಸ್ತು, ಚಿತ್ರಕಥೆ, ಹದವಾದ ಅಭಿನಯ ಮತ್ತು ಸೂಕ್ಷ್ಮ ನಿರೂಪಣೆಯ ಕಾರಣದಿಂದ 'ಲಾ' ಚಿತ್ರ ಗಮನ ಸೆಳೆಯುತ್ತದೆ.

    Interview: Interview: "ಸಖತ್ ನರ್ವಸ್ ಆಗಿದ್ದೀನಿ" ಜನ ಪ್ರೀತಿ ತೋರಿಸುತ್ತಾರೆ ಎನ್ನುವ ನಂಬಿಕೆಯಲ್ಲಿ ರಾಗಿಣಿ ಚಂದ್ರನ್

    ಸಾಮೂಹಿಕ ಅತ್ಯಾಚಾರದ ಕಥೆ

    ಸಾಮೂಹಿಕ ಅತ್ಯಾಚಾರದ ಕಥೆ

    ಚಿತ್ರದ ಆರಂಭವಾಗುವುದೇ ನಾಯಕಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪ ಮಾಡುವುದರ ಮೂಲಕ. ತನ್ನ ಆರೋಪಕ್ಕೆ ಪೊಲೀಸರಿಂದ ಸ್ಪಂದನೆ ಸಿಗದೆ ಇದ್ದಾಗ ಆಕೆ ತನಗೆ ಬೆಂಬಲ ಗಿಟ್ಟಿಸಿಕೊಳ್ಳಲು ಬಗೆ ಬಗೆಯ ತಂತ್ರಗಳನ್ನು ಹೆಣೆಯುತ್ತಾಳೆ. ಕೊನೆಗೆ ತನ್ನ ಪ್ರಕರಣದಲ್ಲಿ ತಾನೇ ವಾದ ಮಂಡಿಸಿ ಗೆಲ್ಲಲು ಲಾಯರ್ ಕೋಟು ಧರಿಸುತ್ತಾಳೆ.

    ಗಟ್ಟಿ ಚಿತ್ರಕಥೆ, ನಿರೂಪಣೆ

    ಗಟ್ಟಿ ಚಿತ್ರಕಥೆ, ನಿರೂಪಣೆ

    ಚಿತ್ರದ ಆರಂಭದಿಂದಲೇ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಹಿಡಿದು ಕೂರಿಸುವಂತೆ ರಘು ಸಮರ್ಥ ಅವರ ಗಟ್ಟಿಯಾದ ಚಿತ್ರಕಥೆ ಮತ್ತು ನಿರೂಪಣೆ ಸಶಕ್ತವಾಗಿದೆ. ಈ ಪ್ರಕರಣದ ಸುತ್ತಲೂ ಮತ್ತೊಂದು ಘಟನೆಯ ನೆರಳಿದೆ ಎಂಬ ಸುಳಿವನ್ನು ಅಲ್ಲಲ್ಲಿ ಮಾತ್ರವೇ ಬಿಟ್ಟುಕೊಡುವ ಮೂಲಕ ಆ ಕುತೂಹಲವನ್ನು ಇಮ್ಮಡಿಗೊಳಿಸುವ ಪ್ರಯತ್ನವೂ ಯಶಸ್ವಿಯಾಗುತ್ತದೆ.

    ಸುಖಾಂತ್ಯ ಮತ್ತು ಲೋಪ

    ಸುಖಾಂತ್ಯ ಮತ್ತು ಲೋಪ

    ಚಿತ್ರ ಹೆಚ್ಚು ಗಮನ ಸೆಳೆಯುವುದು ತನ್ನ ವಿಷಯ ವಸ್ತುವಿನಿಂದ. ಸಾಮೂಹಿಕ ಅತ್ಯಾಚಾರದಂತಹ ಹೀನ ಕೃತ್ಯಗಳು ದೇಶದಲ್ಲಿ ನಿರಂತರವಾಗಿ ಸುದ್ದಿಯಾಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಘಟನೆಗಳು ಸಾಮಾಜಿಕ ಸಂಚಲನ ಸೃಷ್ಟಿಸುತ್ತವೆ. ಇನ್ನು ಎಷ್ಟೋ ಘಟನೆಗಳು ಅರಿವಿಗೇ ಬಾರದೆ ತಣ್ಣಗಾಗುತ್ತವೆ. ಕಾನೂನು ಹೋರಾಟ ನಡೆಸುವಲ್ಲಿ ಶಕ್ತರಾಗಿರುವ ಅಪರಾಧಿಗಳು ಅದನ್ನು ವರ್ಷಗಟ್ಟಲೆ ಎಳೆಯುತ್ತಾರೆ. ನ್ಯಾಯದಾನ ಯಾವಾಗಲೂ ವಿಳಂಬ ಎನ್ನುವ ಮಾತಿದೆ. ಆದರೆ ಈ ಚಿತ್ರ ಆ ಆಯಾಮಗಳನ್ನು ಪರಿಗಣಿಸಿಲ್ಲ. ಈ ಪ್ರಕರಣದ ವಿಚಾರಣೆ ನಡೆಯುವ ಕೆಳ ನ್ಯಾಯಾಲಯ ತೀರ್ಪು ನೀಡಿದಾಗ ಎಲ್ಲವೂ ಸುಖಾಂತ್ಯವಾಗುತ್ತದೆ. ಪ್ರೇಕ್ಷಕ ಬಯಸಿದ್ದೂ ಸಿಗುತ್ತದೆ. ಆದರೆ ವಾಸ್ತವ ಕಾನೂನು ಪ್ರಕ್ರಿಯೆಗಳನ್ನು ಕಂಡವರು ಮತ್ತು 'ನಿರ್ಭಯ'ದಂತಹ ಪ್ರಕರಣಗಳನ್ನು ಗಮನಿಸಿದವರಿಗೆ ಈ ಪ್ರಕರಣ ಅಂತ್ಯವಾಗುವುದಿಲ್ಲ ಎಂಬ ಅರಿವಿರುತ್ತದೆ. ಈ ಸಿನಿಮಾ ಕೊನೆಯಲ್ಲಿ ಅದೊಂದು ಲೋಪವನ್ನು ಉಳಿಸುತ್ತದೆ.

    ಅನಗತ್ಯ ಸನ್ನಿವೇಶಗಳು ಕಡಿಮೆ

    ಅನಗತ್ಯ ಸನ್ನಿವೇಶಗಳು ಕಡಿಮೆ

    ಈ ಚಿತ್ರ ಎರಡು ಗಂಟೆ ಕಾಲ ಪ್ರೇಕ್ಷಕರನ್ನು ಕುತೂಹಲದಿಂದ ಕೂರಿಸುವ ಸಾಮರ್ಥ್ಯ ಹೊಂದಿದೆ. ಅನಗತ್ಯ ಎನಿಸುವ ಸನ್ನಿವೇಶಗಳು ತೀರಾ ವಿರಳ. ಹಾಗೆಯೇ ಪಾತ್ರಗಳೂ ಕೂಡ. ಸಿನಿಮಾದ ಕಥೆ ಬೇಡುವ ಸನ್ನಿವೇಶಗಳು ಮತ್ತು ತಾಂತ್ರಿಕತೆಯ ಚೌಕಟ್ಟನ್ನು ಮೀರದಂತೆ ನಿರ್ದೇಶಕರು ಎಚ್ಚರಿಕೆ ವಹಿಸಿದ್ದಾರೆ.

    ನಾಟಕೀಯ ಪ್ರಸಂಗಗಳು

    ನಾಟಕೀಯ ಪ್ರಸಂಗಗಳು

    ಚಿತ್ರದ ವಸ್ತು ಮತ್ತು ಕಥೆ ಎರಡೂ ಗಂಭೀರವಾಗಿದೆ. ಆದರೆ ಪೊಲೀಸ್ ಪಾತ್ರಧಾರಿ ಮಂಡ್ಯ ರಮೇಶ್ ಹಾಗೂ ನ್ಯಾಯಾಧೀಶ ಮುಖ್ಯಮಂತ್ರಿ ಚಂದ್ರು ಅವರ ಪಾತ್ರಗಳಲ್ಲಿ ಹಾಸ್ಯ ಹುಡುಕುವ ಪ್ರಯತ್ನ ಆ ಗಂಭೀರತೆಯನ್ನು ತುಸು ಮಸುಕಾಗಿಸುತ್ತದೆ. ಒಂದಷ್ಟು ನಾಟಕೀಯ ಪ್ರಸಂಗಗಳು ಕೂಡ ಕಥೆಯ ಬಿಗುತವನ್ನು ಸಡಿಲಿಸುತ್ತದೆ.

    ರಾಗಿಣಿ ಮಾಗಿದ ಅಭಿನಯ

    ರಾಗಿಣಿ ಮಾಗಿದ ಅಭಿನಯ

    ಅಪರಾಧವೊಂದಕ್ಕೆ ಸೇಡಿನ ಅಪರಾಧದ ಮೂಲಕವೇ ಪರಿಹಾರ ಕಂಡುಕೊಳ್ಳುವುದೇ ಸರಿ ಎಂಬುದನ್ನು ಬಿಂಬಿಸುವ ಅನೇಕ ಚಿತ್ರಗಳು ಬಂದಿವೆ. ಆದರೆ 'ಲಾ' ಶೀರ್ಷಿಕೆಯಂತೆಯೇ ಕಾನೂನಿನ ಸಮರದ ಮೂಲಕವೇ ಪರಿಹಾರ ಕಂಡುಕೊಳ್ಳುತ್ತದೆ. ಆದರೆ ಅದೂ ಕೂಡ ಸುಳ್ಳಿನ ಬುನಾದಿಯಲ್ಲಿಯೇ ನಡೆಸುವ ಹೋರಾಟ.

    ಇಡೀ ಸಿನಿಮಾ ನಾಯಕಿ ಕೇಂದ್ರಿತ. 'ಈಕೆ ಮೊದಲ ಸಲ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾಳೆ ಎನಿಸುವುದಿಲ್ಲ. ಅಷ್ಟು ಸಿದ್ಧತೆ ನಡೆಸಿದ್ದಾಳೆ' ಎಂದು ನಾಯಕಿಯ ಎದುರಾಳಿ ವಕೀಲ ಹೇಳುವ ಸಂಭಾಷಣೆಯಿದೆ. ಅದು ರಾಗಿಣಿ ಪ್ರಜ್ವಲ್ ಅವರ ಪಾತ್ರ ಪೋಷಣೆಗೂ ಅನ್ವಯವಾಗುತ್ತದೆ. ಅವರದು ಇದು ಮೊದಲ ಸಿನಿಮಾ ಎಂದೆನಿಸದಷ್ಟು ಪಕ್ವತೆ ಕಾಣಿಸುತ್ತದೆ.

    ಕಲಾವಿದರ ಪ್ರಬುದ್ಧ ಅಭಿನಯ

    ಕಲಾವಿದರ ಪ್ರಬುದ್ಧ ಅಭಿನಯ

    ಸುಧಾರಾಣಿ, ಅವಿನಾಶ್, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಮುಂತಾದ ಪ್ರಬುದ್ಧ ಕಲಾವಿದರ ಅಭಿನಯ ಚಿತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಟ್ಟಿಸುತ್ತದೆ. ಅವರ ನಡುವೆ ಹೆಚ್ಚು ಗಮನ ಸೆಳೆಯುವುದು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಕೃಷ್ಣ ಹೆಬ್ಬಾಳೆ. ಅವರ ಧ್ವನಿ ಹಾಗೂ ನಟನೆ ಮತ್ತು ಅಂತ್ಯದಲ್ಲಿ ಅವರ ಪಾತ್ರ ನೀಡುವ ತಿರುವು ಸಿನಿಮಾ ಮುಗಿದ ಬಳಿಕವೂ ಮನದಲ್ಲಿ ಉಳಿಯುತ್ತದೆ.

    ತಾಂತ್ರಿಕ ವರ್ಗ

    ತಾಂತ್ರಿಕ ವರ್ಗ

    ಕಥೆ ಮತ್ತು ನಿರೂಪಣೆಯಂತೆಯೇ ತಾಂತ್ರಿಕವಾಗಿಯೂ ಸಿನಿಮಾ ಮೆಚ್ಚುಗೆಗೆ ಅರ್ಹ. ದೃಶ್ಯಗಳು ಬಯಸುವ ತೀವ್ರತೆಯನ್ನು ಕ್ಯಾಮೆರಾ ಕಣ್ಣಿನಿಂದ ಅಷ್ಟೇ ಗಾಢವಾಗಿ ಚಿತ್ರಿಸಿದಿದ್ದಾರೆ ಛಾಯಾಗ್ರಾಹಕ ಸುಜ್ಞಾನ್. ಸಿನಿಮಾಕ್ಕೆ ಹಾಡುಗಳ ಅವಶ್ಯಕತೆ ಇದೆ ಎನಿಸದೆ ಇದ್ದರೂ ವಾಸುಕಿ ವೈಭವ್ ಸಂಗೀತದಲ್ಲಿ ಬರುವ ಏಕೈಕ ಹಾಡು ಅದರ ವೇಗಕ್ಕೆ ಅಡ್ಡಿಪಡಿಸುವುದಿಲ್ಲ.

    English summary
    Ragini Prajwal Starring Law Kannada movie produced by PRK productions released on Amazon Prime. Here is the review of Law film.
    Friday, July 17, 2020, 18:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X