Raid 2 Review ; ಅಜಯ್ ದೇವಗನ್-ರಿತೇಶ್ ದೇಶಮುಖ್ ಮುಖಾಮುಖಿ ಬೆಂಕಿ, ಆದರೆ..? ಇಲ್ಲಿದೆ ಕಂಪ್ಲೀಟ್ ರಿವ್ಯೂ..!
ಈ ವರ್ಷ ಛಾವಾ ಹೊರತು ಪಡಿಸಿದರೆ ಬಾಲಿವುಡ್‌ನಲ್ಲಿ ಬೇರೆ ಯಾವ ಚಿತ್ರ ಕೂಡ ಮ್ಯಾಜಿಕ್ ಮಾಡಿಲ್ಲ. ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿದ್ದವಾದರೂ ಚಿತ್ರ ಮಕಾಡೆ ಮಲಗಿತು. ಈ ಮೂಲಕ ಸಲ್ಮಾನ್ ಖಾನ್‌ಗೆ ಭಾರೀ ಮುಖಭಂಗವೂ ಆಯಿತು. ಇರುವುದರಲ್ಲಿ ಸನ್ನಿ ಡಿಯೋಲ್ ಅಭಿನಯದ ಜಾಟ್ ಚಿತ್ರ ಹತ್ ಹತ್ರ ನೂರು ಕೋಟಿಯ ಗಡಿಯನ್ನು ತಲುಪಿದೆ.
ಇನ್ನು ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಚಿತ್ರ ಬಾಕ್ಸಾಫೀಸ್‌ನಲ್ಲಿ ಇನ್ನು ತೆವಳುತ್ತಾ ಸಾಗಿದೆ. ಪ್ರೇಕ್ಷಕರು ಮತ್ತು ವಿಮರ್ಷಕರು ಚಿತ್ರವನ್ನು ಮೆಚ್ಚಿಕೊಂಡರು ಕೂಡ ಕೇಸರಿ 2 ನೋಡಲು ಜನ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ.

ಹೀಗಿರುವಾಗ ಇದೀಗ ಅಜಯ್ ದೇವಗನ್ ಅಭಿನಯದ ರೇಡ್ 2 ಚಿತ್ರ ತೆರೆಗೆ ಬಂದಿದೆ. ಹಾಗಿದ್ದರೆ ರೇಡ್ 2 ಚಿತ್ರ ಹೇಗಿದೆ. ಅಮಯ್ ಪಟ್ನಾಯಕ್ ಈ ಬಾರಿ ಯಾರ ಮನೆಯ ದಾಳಿ ಮಾಡ್ತಾನೇ ? ಯಾಕೆ ಮಾಡ್ತಾನೆ ? ಚಿತ್ರದ ಕಥಾಹಂದರವೇನು ? ತಿಳಿಯಲು ಮುಂದೆ ಓದಿ.
ಕಥಾ ಹಂದರ
ಭ್ರಷ್ಟನ ಮನೆಯ ಮೇಲೆ ಅಜಯ್ ದೇವಗನ್ ಮತ್ತು ತಂಡ ದಾಳಿ ಮಾಡುವ ದೃಶ್ಯದಿಂದ ಚಿತ್ರ ಆರಂಭವಾಗುತ್ತೆ. ಆದರೆ.. ಹಿಂದಿನ ರೇಡ್‌ನಲ್ಲಿ ಪ್ರಾಮಾಣಿಕವಾಗಿದ್ದ ಅಮಯ್ ಪಟ್ನಾಯಕ್ { ಅಜಯ್ ದೇವಗನ್ } ಈ ಬಾರಿ ಲಂಚಕ್ಕೆ ಬೇಡಿಕೆ ಇಡುತ್ತಾನೆ. ಆ ನಂತರ ಲಂಚ ಪಡೆದ ಆರೋಪದಡಿ ರಾಜಸ್ತಾನಕ್ಕೆ ವರ್ಗಾಯಿಸಲ್ಪಡುತ್ತಾನೆ.
ಅಲ್ಲಿ ದಾದಾ ಭಾಯಿ { ರಿತೇಶ್ ದೇಶಮುಖ್ } ರಾಜಕಾರಣಿ ಮಾತ್ರವಲ್ಲ ಅಲ್ಲಿನ ಸರ್ಕಾರದ ಉಪಮುಖ್ಯಮಂತ್ರಿ ಕೂಡ ಹೌದು. ರಾಜಕಾರಣ ಮಾಡುವುದಲ್ಲದೇ ನಿಜವಾದ ಜನ ಸೇವಕನಾಗಿ ದಾದಾ ಭಾಯಿ ಗುರತಿಸಿಕೊಂಡಿರುತ್ತಾನೆ. ಅಲ್ಲಿನ ಜನರ ಪಾಲಿಗೆ ಅಕ್ಷರಶಃ ದೇವರಗಾಗಿರುತ್ತಾನೆ. ಆದರೆ ದಾದಾ ಭಾಯಿ ಪಾಲಿಗೆ ತಾಯಿಯೇ ದೇವರು. ತಾಯಿಯ ಪಾದ ಪೂಜೆಯಿಂದಲೇ ಇವನ ದಿನನಿತ್ಯದ ಕೆಲಸ ಆರಂಭ ಆಗುತ್ತಿರುತ್ತೆ. ತಾಯಿಯ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿರುವ ಈ ದಾದಾ ಭಾಯಿ ತನ್ನ ಪೌಂಡೇಷನ್ ಮೂಲಕ ಹಲವರ ಬದುಕನ್ನು ರೂಪಿಸಿರುತ್ತಾನೆ.
ಆದರೂ ದಾದಾ ಭಾಯಿಯ ಮೇಲೆ ಅಮಯ್ ಪಟ್ನಾಯಕ್‌ಗೆ ಡೌಟು. ಹೀಗಾಗಿಯೇ ತನ್ನ ವೃತ್ತಿ ಬದುಕಿನ 75ನೇ ದಾಳಿಗೆ ಸಿದ್ಧವಾಗುವ ಅಮಯ್ ಪಟ್ನಾಯಕ್ ತನ್ನ ತಂಡದ ಜೊತೆ ದಾದಾ ಭಾಯಿಯ ಮನೆ, ಕಛೇರಿ, ಪೌಂಡೇಷನ್‌ನ ಮೇಲೆ ದಾಳಿ ಮಾಡುತ್ತಾನೆ. ಆದರೆ ಈ ಬಾರಿ ಅಮಯ್ ಪಟ್ನಾಯಕ್ ಕೈಗೆ ಚಿನ್ನ ಹಣ ಅಲ್ಲ ಬದಲಿಗೆ ನಿರಾಸೆ ಸಿಗುತ್ತೆ. ಎಷ್ಟೇ ತಡಕಾಡಿದರು ಕೂಡ ಅಮಯ್ ಕೈಗೆ ದಾದಾ ಭಾಯಿ ಅಕ್ರಮವಾಗಿ ಗಳಿಸಿದ್ದಾನೆ ಎನ್ನಲಾದ ಒಂದು ರೂಪಾಯಿ ಕೂಡ ಸಿಗುವುದಿಲ್ಲ.
ಇದರಿಂದ ಮುಖಭಂಗಕ್ಕೊಳಗಾದ ಅಮಯ್ ಪಟ್ನಾಯಕ್ ಗೆ ನಂತರ ಕೆಲಸದಿಂದಲೇ ತೆಗೆದು ಹಾಕಲಾಗುತ್ತೆ. ಮುಂದೇನಾಗುತ್ತೆ ? ರಾಜಕಾರಣಿಯ ಸೋಗಿನಲ್ಲಿರುವ ದಾದಾ ಭಾಯಿ ನಿಜಕ್ಕೂ ಯಾರು ? ಅಮಯ್ ಪಟ್ನಾಯಕ್ ಮತ್ತೆ ಕೆಲಸಕ್ಕೆ ಮರಳಿ ಬರುತ್ತಾನಾ ? ಕೆಲಸ ಕಳೆದುಕೊಂಡ ಅಮಯ್ ಪಟ್ನಾಯಕ್ ಮುಂದೆ ಏನ್ಮಾಡುತ್ತಾನೆ ? ದಾದಾ ಭಾಯಿ ಕಥೆ ಏನಾಗುತ್ತೆ ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಿ ಪಡೆಯಬೇಕು.
ಪರ್ಫಾಮೆನ್ಸ್ ಹೇಗಿದೆ ?
ಅಮಯ್ ಪಟ್ನಾಯಕ್ ಪಾತ್ರ ಅಜಯ್ ದೇವಗನ್‌ಗೆ ಸೂಕ್ತವಾದ ಪಾತ್ರ. ಕಳೆದ ಬಾರಿ ಕೂಡ ಈ ಪಾತ್ರದಲ್ಲಿ ಅಜಯ್ ದೇವಗನ್ ಮೋಡಿ ಮಾಡಿದ್ದರು. ಈ ಬಾರಿ ಕೂಡ ತಮ್ಮ ಪಾತ್ರಕ್ಕೆ ಸಂಪೂರ್ಣವಾಗಿ ಅಜಯ್ ದೇವಗನ್ ನ್ಯಾಯ ಸಲ್ಲಿಸಿದ್ದಾರೆ. ಹೈವೋಲ್ಟೇಜ್ ಆಕ್ಷನ್ ದೃಶ್ಯಗಳು ಚಿತ್ರದಲ್ಲಿ ಇರದಿದ್ದರೂ ಅಜಯ್ ದೇವಗನ್ ಪ್ಯಾಂಟ್ ಶರ್ಟ್ ಚಪ್ಪಲ್ ಧರಿಸುವ ಸರಳ ವ್ಯಕ್ತಿಯಾಗಿ, ಪ್ರಾಮಾಣಿಕ ಅಧಿಕಾರಿಯಾಗಿ, ತಂದೆಯಾಗಿ ಇಷ್ಟವಾಗುತ್ತಾರೆ.
ಇನ್ನು ರಿತೇಶ್ ದೇಶಮುಖ್ ಕೇವಲ ಹಾಸ್ಯ ನಟ ಮಾತ್ರ ಅಲ್ಲ. ಅತ್ಯುತ್ತಮ ಕಲಾವಿದ ಕೂಡ ಹೌದು. ಪಾತ್ರ ಯಾವುದೇ ಇರಲಿ ಆ ಪಾತ್ರವೇ ತಾವಾಗುತ್ತಾರೆ ರಿತೇಶ್ ದೇಶಮುಖ್. ಈ ಚಿತ್ರದಲ್ಲಿ ಕೂಡ ಇದು ಮತ್ತೊಮ್ಮೆ ಸಾಬೀತಾಗಿದೆ.
ಇನ್ನು ಮೊದಲ ಭಾಗದಲ್ಲಿ ಅಜಯ್ ದೇವಗನ್ ಪತ್ನಿಯ ಪಾತ್ರವನ್ನು ಇಲಿಯಾನ ನಿರ್ವಹಿಸಿದ್ದರು. ಈ ಬಾರಿ ಆ ಜಾಗಕ್ಕೆ ವಾಣಿ ಕಪೂರ್ ಬಂದಿದ್ದಾರೆ. ವಾಣಿ ಕಪೂರ್‌ಗೆ ಚಿತ್ರದಲ್ಲಿ ಮಾಡಲು ಹೆಚ್ಚೇನು ಕೆಲಸ ಇಲ್ಲ. ರಿತೇಶ್ ದೇಶಮುಖ್ ಅವರ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಸುಪ್ರಿಯಾ ಪಾಠಕ್ ಅವರದ್ದು ಪ್ರಬುದ್ಧ ಅಭಿನಯ.
ಅಮಿತ್ ಸಿಯಾಲ್ ಈ ಚಿತ್ರದ ಬಹುದೊಡ್ಡ ಅಚ್ಚರಿ. ದ್ವೀತಿಯಾರ್ಧದಲ್ಲಿ ಬರುವ ಅಮಿತ್ ಸಿಯಾಲ್ ತಾವು ಕೇವಲ ಗಂಭೀರ ಪಾತ್ರಗಳನ್ನು ಮಾತ್ರವಲ್ಲ ಕಾಮಿಡಿ ರೋಲ್ ಕೂಡ ಮಾಡಬಹುದು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ಧಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಭಾಗದಲ್ಲಿ ಕೂಡ ಅಮಿತ್ ಸಿಯಾಲ್ ಇದ್ದರು. ಆದರೆ ಈ ಬಾರಿ ಇವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ.
ಇನ್ನು ಮೊದಲ ಭಾಗದಲ್ಲಿದ್ದ ಸೌರಭ್ ಶುಕ್ಲಾ ಇಲ್ಲಿಯೂ ಇದ್ದು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಜತ್ ಕಪೂರ್ ಮತ್ತು ಯಶ್‌ಪಾಲ್ ಶರ್ಮಾ ಅವರದ್ದು ಚಿಕ್ಕ ಪಾತ್ರವಾದರು ಅಚ್ಚು ಕಟ್ಟಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಮೈನಸ್ ಪಾಯಿಂಟ್ ಏನು ?
ನಿರ್ದೇಶಕ ರಾಜ್ ಕುಮಾರ್ ಗುಪ್ತಾ ಈ ಬಾರಿ ಕೂಡ ಒಂದೊಳ್ಳೆಯ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಳೆದ ಬಾರಿ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದ ರಾಜ್ ಕುಮಾರ್ ಗುಪ್ತಾ ಈ ಬಾರಿ ಎಡವಿದ್ದಾರೆ. ಚಿತ್ರದ ಮೊದಲಾರ್ಧ ಅದರಲ್ಲಿಯೂ ಆರಂಭದ 30 ನಿಮಿಷ ತಾಳ್ಮೆಯನ್ನು ಪರೀಕ್ಷೆ ಮಾಡುತ್ತೆ. ಈ ತರಹದ ಚಿತ್ರಗಳಲ್ಲಿ ಹಾಡುಗಳು ಅನವಶ್ಯಕ.
ಆದರೂ ಮೂರು ಹಾಡುಗಳಿಗೆ ರಾಜ್ ಕುಮಾರ್ ಗುಪ್ತಾ ಇಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಅದರಲ್ಲಿ ಎರಡು ಹಾಡುಗಳು ವಾಣಿ ಕಪೂರ್ ಅವರಿಗೆ ಬೇಸರವಾಗಬಾರದೆಂದೇ ಬಳಿಸಿದಂತೆ ಇವೆ. ಚಿತ್ರದ ಸೆಕೆಂಡ್ ಹಾಫ್ ಮೇಲೆ ನೀಡಿದ ಗಮನವನ್ನು ರಾಜ್ ಕುಮಾರ್ ಗುಪ್ತಾ ಮತ್ತು ಅವರ ಬರವಣಿಗೆಯ ತಂಡ ಚಿತ್ರದ ಮೊದಲಾರ್ಧದ ಮೇಲೆ ಕೂಡ ನೀಡಿದ್ದರೆ ಚಿತ್ರ ಮತ್ತಷ್ಟು ಆಪ್ತವಾಗುತ್ತಿತ್ತು. ಇದಲ್ಲದೇ ಸೌರಭ್ ಶುಕ್ಲಾ ಅವರ ಪಾತ್ರಕ್ಕೆ ಇನ್ನು ಹೆಚ್ಚಿನ ಪ್ರಾಮುಖ್ಯತೆಯನ್ನು ಕೂಡ ನಿರ್ದೇಶಕರು ನೀಡಬೇಕಿತ್ತು.
Star Cast: ಅಜಯ್ ದೇವಗನ್, ರಿತೇಶ್ ದೇಶಮುಖ್, ವಾಣಿ ಕಪೂರ್, ಸುಪ್ರಿಯಾ ಪಾಠಕ್, ಅಮಿತ್ ಸಿಯಾಲ್, ರಜತ್ ಕಪೂರ್, ಸೌರಭ್ ಶುಕ್ಲಾ, ಮುಂತಾದವರು
Director : ರಾಜ್ ಕುಮಾರ್ ಗುಪ್ತಾ
ಕೊನೆ ಮಾತು
2018ರಲ್ಲಿ ಬಂದಿದ್ದ ರೇಡ್ ಚಿತ್ರದ ಮೊದಲ ಭಾಗ 1981ರ ಕಥೆಯನ್ನು ಹೊಂದಿತ್ತು. ಇದೀಗ ಬಂದ ರೇಡ್ 2 1989ರ ಕಥೆಯನ್ನು ಹೊಂದಿದೆ. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗದಲ್ಲಿ ಕೆಲವೊಂದು ನ್ಯೂನತೆಗಳಿವೆ. ಈ ನ್ಯೂನತೆಗಳ ನಡುವೆ ಚಿತ್ರ ನೋಡಿಸಿಕೊಂಡು ಹೋಗುತ್ತೆ. ಕುತೂಹಲಭರಿತ ಚಿತ್ರಗಳನ್ನು ನೋಡಲು ಬಯಸುವವರು ಒಮ್ಮೆ ಮನೆಮಂದಿ ಜೊತೆ ಆರಾಮಾಗಿ ಕುಳಿತು ಈ ಚಿತ್ರವನ್ನು ನೋಡಬಹುದು.


Click it and Unblock the Notifications










