Jailer Review: 'ಜೈಲರ್' ಸಿನಿಮಾ ಕಂಪ್ಲೀಟ್ ರಿವ್ಯೂ ಮತ್ತು ರೇಟಿಂಗ್

Rating:
3.5/5
Star Cast: ರಜನಿಕಾಂತ್, ರಮ್ಯಾಕೃಷ್ಣ, ಶಿವರಾಜ್‌ಕುಮಾರ್, ಮೋಹನ್ ಲಾಲ್, ಜಾಕಿಶ್ರಾಫ್, ತಮನ್ನಾ, ಯೋಗಿ ಬಾಬು, ಸುನಿಲ್ ಮುಂತಾದವರು
Director: ನೆಲ್ಸನ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ತೆರೆಗಪ್ಪಳಿಸಿದೆ. ಪಕ್ಕಾ ಫ್ಯಾಮಿಲಿ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಗೆದ್ದಿದೆ. 'ಬೀಸ್ಟ್' ಸಿನಿಮಾ ಮಾಡಿ ಸೋಲುಂಡಿದ್ದ ನೆಲ್ಸನ್ ಈ ಬಾರಿ ರಜನಿಕಾಂತ್ ಇಮೇಜ್‌ಗೆ ತಕ್ಕ ಸಿನಿಮಾ ಮಾಡುವಲ್ಲಿ ಗೆದ್ದಿದ್ದಾರೆ. ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಸೇರಿಸಿ ಒಂದೊಳ್ಳೆ ಸಿನಿಮಾ ಪ್ರೇಕ್ಷಕರಿಗೆ ಕೊಟ್ಟಿದ್ದಾರೆ.

ಕ್ಲಾಸ್, ಮಾಸ್ ಎಲ್ಲಾ ಆಡಿಯನ್ಸ್‌ಗೂ ಇಷ್ಟವಾಗುವಂತಿದೆ 'ಜೈಲರ್' ರಜನಿಕಾಂತ್ ಆರ್ಭಟ. ಕಾಮಿಡಿ ಜೊತೆ ಜೊತೆಗೆ ಕಳ್ಳ, ಪೊಲೀಸ್(ನಿವೃತ್ತ ಜೈಲರ್) ಆಟ ಸಿನಿಮಾದಲ್ಲಿದೆ. ರಜನಿಕಾಂತ್ ಯೂನಿಕ್ ಸ್ಟೈಲ್, ಮ್ಯಾನರಿಸಂನಿಂದ ಧೂಳೆಬ್ಬಿಸಿದ್ದಾರೆ. ಟ್ರೈಲರ್ ಮತ್ತು ಸಾಂಗ್ಸ್‌ನಿಂದ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ನಿರೀಕ್ಷೆ ತಲುಪುವಲ್ಲಿ ಸಂಪೂರ್ಣವಾಗಿ ಗೆದ್ದಿದೆ. ಶಿವರಾಜ್‌ಕುಮಾರ್, ಮೋಹನ್ ಲಾಲ್, ಜಾಕಿಶ್ರಾಫ್ ಗೆಸ್ಟ್ ಅಪಿಯರೆನ್ಸ್ 'ಜೈಲರ್' ಚಿತ್ರದ ಹೈಲೆಟ್. ಅನಿರುದ್ಧ್ ರವಿಚಂದರ್ ಮ್ಯೂಸಿಕ್, ವಿಜಯ್ ಕಾರ್ತಿಕ್ ಕಣ್ಣನ್ ಸಿನಿಮಾಟೋಗ್ರಫಿ 'ಜೈಲರ್' ಆರ್ಭಟಕ್ಕೆ ಪ್ಲಸ್ ಆಗಿದೆ. ಅಷ್ಟಕ್ಕೂ ಸಿನಿಮಾ ಕಥೆಯೇನು? 'ಜೈಲರ್' ದರ್ಬಾರ್ ಹೇಗಿದೆ? ಕಲಾವಿದರ ಅಭಿನಯಕ್ಕೆ ಎಷ್ಟು ಮಾರ್ಕ್ಸ್‌? ಕಂಪ್ಲೀಟ್ ರಿವ್ಯೂ ಮುಂದೆ ಓದೆ.

Rajinikath Starring Jailer Movie Review in Kannada Along with Ratings

'ಜೈಲರ್' ಸಿನಿಮಾ ಕಥೆ?

ಮಡದಿ, ಮಗ, ಸೊಸೆ ಹಾಗೂ ಮೊಮ್ಮಗನ ಜೊತೆ ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್‌ದು ಸುಖೀ ಕುಟುಂಬ. ಮಗ ಅರ್ಜುನ್ ಪೊಲೀಸ್ ಆಫೀಸರ್. ಆತ ಪುರಾತನ ಕಾಲದ ಆಂಟಿಕ್ ವಿಗ್ರಹಗಳನ್ನು ಕದಿಯುವ ವರ್ಮನ್ ಮತ್ತವರ ಗ್ಯಾಂಗ್ ಹಿಂದೆ ಬೀಳ್ತಾನೆ. ಈ ಆದಿಯಲ್ಲಿ ಕಣ್ಮರೆಯಾಗುತ್ತಾನೆ. ಮಗ ಕಣ್ಮರೆಯಾಗಲು ಕಾರಣರಾದವರ ವಿರುದ್ಧ ಸಮರಕ್ಕೆ ನಿಲ್ತಾನೆ ಮುತ್ತುವೇಲ್ ಪಾಂಡಿಯನ್.

ತಮ್ಮ ಕುಟುಂಬದವರನ್ನು ಉಳಿಸಿಕೊಳ್ಳುವುದರ ಜೊತೆಗೆ ವರ್ಮನ್ ಮತ್ತವನ ಗ್ಯಾಂಗ್‌ಗೆ ಮುತ್ತುವೇಲ್ ಸಿಂಹಸ್ವಪ್ನನಾಗುತ್ತಾನೆ. ಈ ಹಾದಿಯಲ್ಲಿ ಮಂಡ್ಯದ ಮಾಫಿಯಾ ಡಾನ್ ನರಸಿಂಹ(ಶಿವರಾಜ್‌ಕುಮಾರ್), ಮ್ಯಾಥ್ಯೂ(ಮೋಹನ್ ಲಾಲ್), ಬಿಹಾರದ ಮತ್ತೊಬ್ಬ ಡಾನ್(ಜಾಕೀ ಶ್ರಾಫ್) ಯಾಕೆ ಸಹಾಯ ಮಾಡುತ್ತಾರೆ? ಮುತ್ತುವೇಲ್ ಪಾಂಡಿಯನ್‌ಗೂ ಇವರಿಗೂ ಏನು ಸಂಬಂಧ? ತಿಹಾರ್ ಜೈಲಿನಲ್ಲಿ ಜೈಲರ್ ಆಗಿದ್ದ ಮುತ್ತುವೇಲ್ ಬಹಳ ಸೌಮ್ಯವಾಗಿ ಜೀವನ ಸಾಗಿಸುವುದು ಯಾಕೆ? ಕಣ್ಮರೆಯಾದ ಮಗ ಅರ್ಜುನ್ ಕಥೆ ಏನಾಯ್ತು? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಬೇಕು ಅಂದರೆ ನೀವು ಸಿನಿಮಾ ನೋಡಲೇಬೇಕು.


ಸಿನಿಮಾ ಹೇಗಿದೆ?

ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್‌ ಇಮೇಜ್‌ಗೆ ತಕ್ಕಂತೆ ಸಿನಿಮಾ ಮಾಡೋದು ನಿಜಕ್ಕೂ ಕಷ್ಟದ ಕೆಲಸ. ಆದರೆ ಆ ವಿಷಯದಲ್ಲಿ ನೆಲ್ಸನ್ ಬಹುತೇಕ ಸಕ್ಸಸ್ ಕಂಡಿದ್ದಾರೆ. ಅಭಿಮಾನಿಗಳು ಸೂಪರ್ ಸ್ಟಾರ್‌ನ ಹೇಗೆ ನೋಡೋಕೆ ಇಷ್ಟಪಡುತ್ತಾರೋ ಅದೇ ಸಿನಿಮಾ ತೆರೆಮೇಲೆ ತೋರಿಸಿದ್ದಾರೆ. ಹಾಗಂತ ತಲೈವಾಗೆ ಮಾತ್ರವಲ್ಲ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಅಷ್ಟೇ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಟ್ರೈಲರ್ ನೋಡಿದಾಗ ಇದು 'ಬಾಷಾ' ಸಿನಿಮಾದಂತಿದೆ ಎಂದು ಕೆಲವರು ಹೇಳಿದ್ದರು. ಆದರೆ ಅದಕ್ಕಿಂತ ಭಿನ್ನವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಅಲ್ಲಲ್ಲಿ ಬ್ಲ್ಯಾಕ್ ಕಾಮಿಡಿ(ಗಂಭೀರವಾದ ಸನ್ನಿವೇಶಗಳಲ್ಲೂ ಕಾಮಿಡಿ) ಸೀನ್ಸ್ ಇಷ್ಟವಾಗುತ್ತದೆ. ರಜನಿಕಾಂತ್ ತೆರೆಮೇಲೆ ಇದ್ದಷ್ಟು ಹೊತ್ತು ಅಭಿಮಾನಿಗಳಿಗೆ ಹಬ್ಬ. ಸಣ್ಣ ಡೈಲಾಗ್‌ಗಳು ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತದೆ. ಫಸ್ಟ್‌ ಹಾಫ್ ಸಿಕ್ಕಾಪಟ್ಟೆ ನೀಟ್ ಆಗಿದೆ. ಆದರೆ ಓಪನಿಂಗ್ ಚೆನ್ನಾಗಿದ್ದರೂ ನಂತರ ಒಂದರ್ಧ ಗಂಟೆ ಬೋರ್ ಎನಿಸಲು ಆರಂಭಿಸುತ್ತದೆ. ಆದರೆ ಕ್ಲೈಮ್ಯಾಕ್ಸ್ ವೇಳೆಗೆ ಕಥೆ ಮತ್ತೆ ಟ್ರ್ಯಾಕ್‌ಗೆ ಮರಳುತ್ತದೆ. ಇನ್ನು ಕ್ಲೈಮ್ಯಾಕ್ಸ್ ಫೈಟ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಡಿಸೈನ್ ಮಾಡಲಾಗಿದೆ. ಒಂದೊಳ್ಳೆ ಮೆಸೇಜ್ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟವಾಗುವಂತೆ ನೆಲ್ಸನ್ ಕಥೆ ತಿದ್ದಿ ತೀಡಿದ್ದಾರೆ.

ಕಲಾವಿದರ ಅಭಿನಯ

ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಅವರದ್ದು ಮಾಗಿದ ಅಭಿನಯ. ವಯಸ್ಸು 70 ದಾಟಿದ್ರು ಸೂಪರ್ ಸ್ಟಾರ್ ಸ್ಟೈಲ್‌ಗೆ ಇನ್ನು ಇಪ್ಪತ್ತರ ಹರೆಯ. ಆರಂಭದಲ್ಲಿ ಮೊಮ್ಮಗನಿಗೂ ಹೆದರುವಂತಹ ಮುತ್ತುವೇಲ್ ನಂತರ ಕಿಡಿಗೇಡಿಗಳ ತಲೆಗಳನ್ನು ಕತ್ತರಿಸುವ ದೃಶ್ಯಗಳು ಮೈ ಜುಮ್ ಎನಿಸುತ್ತಾರೆ. ಇನ್ನು ತಿಹಾರ್ ಜೈಲ್ ಎಪಿಸೋಡ್‌ನಲ್ಲಿ ಕೊಂಚ ಯಂಗ್ ಲುಕ್‌ನಲ್ಲಿ ರಜನಿಕಾಂತ್ ಅಭಿಮಾನಿಗಳಿಗೆ ಕಿಕ್ ಕೊಡ್ತಾರೆ. ಆ ಸನ್ನಿವೇಶದಲ್ಲಿ ತಲೈವಾ ಖಡಕ್ ಆಗಿ ಕಂಡರೂ ಅವರ ದೇಹ ಸಂಪೂರ್ಣವಾಗಿ ಅದಕ್ಕೆ ಸಹಕರಿಸಿದಂತೆ ಕಾಣಲ್ಲ.

ಮಂಡ್ಯದ ಮಾಫಿಯಾ ಡಾನ್ ನರಸಿಂಹ ಆಗಿ ಶಿವರಾಜ್‌ ಕುಮಾರ್ ದರ್ಶನ ಕೊಟ್ಟಿದ್ದಾರೆ. ಮುತ್ತುವೇಲ್‌ಗೆ ಸಹಾಯ ಮಾಡುವ ಆಪ್ತನ ಪಾತ್ರದಲ್ಲಿ ಶಿವಣ್ಣ ಇಷ್ಟವಾಗುತ್ತಾರೆ. ಫಸ್ಟ್ ಹಾಫ್‌ನಲ್ಲಿ ಮೂರ್ನಾಲ್ಕು ನಿಮಿಷ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ನಾಲ್ಕೈದು ನಿಮಿಷ ಮಾತ್ರ ಕಾಣಿಸಿಕೊಳ್ಳುವ ಹ್ಯಾಟ್ರಿಕ್ ಹೀರೊ ಗಮನ ಸೆಳೆಯುತ್ತಾರೆ. ಕ್ಲೈಮ್ಯಾಕ್ಸ್‌ನಲ್ಲಿ ಕಣ್ಣಲ್ಲೇ ಕೊಲ್ಲುವ ಅವರ ಅಭಿನಯ ಮತ್ತೊಮ್ಮೆ ಬೈರತಿ ರಣಗಲ್ ಪಾತ್ರವನ್ನು ನೆನಪಿಸುತ್ತದೆ. ಮುತ್ತುವೇಲ್ ಮಡದಿಯಾಗಿ ರಮ್ಯಾಕೃಷ್ಣ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೋಹನ್ ಲಾಲ್, ಜಾಕಿಶ್ರಾಫ್ ಕೂಡ ಚಿತ್ರಕ್ಕೆ ಬಲ ತುಂಬಿದ್ದಾರೆ.

'ಜೈಲರ್' ಚಿತ್ರದ ಮತ್ತೊಂದು ಹೈಲೆಟ್ ಡೆಡ್ಲಿ ವಿಲನ್ ಆಗಿ ಅಬ್ಬರಿಸಿರುವ ಮಲಯಾಳಂ ನಟ ವಿನಾಯಕನ್. ಒಣಕಲು ದೇಹದ ವಿನಾಯಕನ್ ಅಭಿಯನಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ. ಕೆಲವೊಮ್ಮೆ ಕಾಮಿಡಿ ಎನಿಸುವ ಮತ್ತೆ ಕೆಲವೊಮ್ಮೆ ಭಯ ಹುಟ್ಟಿಸುವ ಆತನ ಅಭಿನಯ ಥಿಯೇಟರ್‌ನಿಂದ ಹೊರ ಬಂದಮೇಲೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ಮುಂದಿನ ದಿನಗಳಲ್ಲಿ ಪರಭಾಷೆಗಳಲ್ಲಿ ವಿನಾಯಕನ್ ಅಬ್ಬರಿಸುವ ಸುಳಿವು ಸಿಗುತ್ತಿದೆ.

ಇನ್ನುಳಿದಂತೆ ಸಿನಿಮಾ ನಟಿ ಕಾಮನ ಆಗಿ ತಮನ್ನಾ, ಬ್ಲಾಸ್ಟ್ ಮೋಹನ್ ಆಗಿ ತೆಲುಗು ನಟ ಸುನೀಲ್, ಯೋಗಿ ಬಾಬು ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಒಂದೇ ಒಂದು ಸನ್ನಿವೇಶದಲ್ಲಿ ಸಣ್ಣ ಝಲಕ್‌ನಲ್ಲಿ ಕನ್ನಡ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ.

ಟೆಕ್ನಿಕಲಿ ಸಿನಿಮಾ ಹೇಗಿದೆ?

ನೆಲ್ಸನ್ ಕಥೆ, ಚಿತ್ರಕಥೆ, ಸಂಭಾಷಣೆ ಚೆನ್ನಾಗಿದೆ. ವಿಜಯ್ ಕಾರ್ತಿಕ್ ಕಣ್ಣನ್ ಸಿನಿಮಾಟೋಗ್ರಫಿ, ಆರ್. ನಿರ್ಮಲ್ ಎಡಿಟಿಂಗ್ ಎಲ್ಲವೂ ಚಿತ್ರಕ್ಕೆ ಪೂರಕವಾಗಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಚಿತ್ರದ ಹೈಲೆಟ್‌ಗಳಲ್ಲಿ ಒಂದು. 'ಹುಕುಂ' ಹಾಗೂ 'ಕಾವಾಲಾ' ಸಾಂಗ್ಸ್ ಥಿಯೇಟರ್‌ನಲ್ಲಿ ಅಭಿಮಾನಿಗಳನ್ನು ಕುಣಿಸುತ್ತದೆ. ಇನ್ನುಳಿದಂತೆ ಎಲ್ಲವೂ ಥೀಮ್ ಸಾಂಗ್ಸ್ ಆಗಿದ್ದು ಅಷ್ಟಾಗಿ ಸದ್ದು ಮಾಡಿಲ್ಲ. ಆದರೆ ರೀ-ರೆರ್ಕಾಡಿಂಗ್ ಚೆನ್ನಾಗಿದೆ. ಕ್ಲೈಮ್ಯಾಕ್ಸ್‌ ಬಿಜಿಎಂ ಸಖತ್ ಕಿಕ್ ಕೊಡುತ್ತದೆ.

ಕೊನೆ ಮಾತು

'ಜೈಲರ್' ರೆಗ್ಯುಲರ್ ಕಮರ್ಷಿಯಲ್ ಸಿನಿಮಾ. ಕಥೆ ಹಳೆಯದ್ದೇ ಅನ್ನಿಸಿದರೂ ಅದನ್ನು ಹೊಸ ರೀತಿಯಲ್ಲಿ ನೆಲ್ಸನ್ ಕಟ್ಟಿಕೊಟ್ಟಿದ್ದಾರೆ. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟರೆ 'ಜೈಲರ್' ನಿಜಕ್ಕೂ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಒಂದೆರಡು ಸನ್ನಿವೇಶಗಳಲ್ಲಿ ಹಿಂಸೆ, ರಕ್ತಪಾತ ಅತಿಯಾಯಿತು ಅನ್ನಿಸೋದು ನಿಜ. ಇನ್ನುಳಿದಂತೆ ಫ್ಯಾಮಿಲಿ ಸಮೇತ 'ಜೈಲರ್' ಆರ್ಭಟ ನೋಡಿ ಎಂಜಾಯ್ ಮಾಡಬಹುದು.

More from Filmibeat

English summary
Rajnikath, Shivarajkumar, Tamannah Starrer Jailer Movie Review and Rating in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X