Rakkasapuradhol Review: 'ರಕ್ಕಸಪುರದೋಳ್' ಕೊಳ್ಳಿ ದೆವ್ವದ ಕಾಟ;'ಸು ಫ್ರಮ್ ಸೋ' ಆಗುತ್ತಾ ರಾಜ್ ಬಿ ಶೆಟ್ಟಿ ಸಿನಿಮಾ?
'ಸು ಫ್ರಮ್ ಸೋ', '45' ಸಿನಿಮಾ ಬಳಿಕ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ರಕ್ಕಸಪುರದೋಳ್'. ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಕುತೂಹಲ ಮೂಡಿಸಿತ್ತು. 'ರಕ್ಕಸಪುರದೋಳ್' ಇಂದು (ಫೆಬ್ರವರಿ 6) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ರಿಲೀಸ್‌ಗೂ ಮುನ್ನ ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಪ್ರೀಮಿಯರ್ ಶೋ ನಡೆದಿತ್ತು. ಪ್ರೀಮಿಯರ್ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
ಕನ್ನಡದ ಸಾಹಸ ನಿರ್ದೇಶಕ ರವಿವರ್ಮಾ ಮೊದಲ ಬಾರಿಗೆ ನಿರ್ಮಾಣ ಮಾಡಿರುವ 'ರಕ್ಕಸಪುರದೋಳ್' ಈ ವರ್ಷದ ಮೊದಲ ಹಿಟ್ ಸಿನಿಮಾ ಆಗಬಹುದಾ? ಈ ಪ್ರಶ್ನೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ನಿನ್ನೆ-ಮೊನ್ನೆ ನಡೆದ ಪ್ರೀಮಿಯರ್ ಶೋನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಸಿನಿಮಾ ಸಹಜವಾಗಿಯೇ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ.

ಜೋಗಿ ಪ್ರೇಮ್ ಗರಡಿಯಲ್ಲಿ ಪಳಗಿರುವ ರವಿ ಸಾರಂಗ್ 'ರಕ್ಕಸಪುರದೋಳ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಥ್ರಿಲ್ಲರ್ ಕಮ್ ಆಕ್ಷನ್ ಡ್ರಾಮಾ ಆಗಿದ್ದು, ಸಿನಿಮಾದ ಕಥೆಯೇನು? ನಿರ್ದೇಶನ ಹೇಗಿದೆ? ಸಿನಿಮಾ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ರಕ್ಕಸಪುರದೋಳ್' ಕಥೆಯೇನು?
ಪತ್ನಿಯನ್ನು ಕಳೆದುಕೊಂಡು ಕುಡಿತಕ್ಕೆ ದಾಸನಾಗಿರುವ ಪೊಲೀಸ್ ಅಧಿಕಾರಿಯನ್ನು (ರಾಜ್ ಬಿ ಶೆಟ್ಟಿ) ಕ್ರೈಂ ಇಲ್ಲದ ಊರಿಗೆ ವರ್ಗಾವಣೆ ಮಾಡುತ್ತಾರೆ. ಅದುವೇ 'ರಕ್ಕಸಪುರದೋಳ್'. ಈ ಊರಿಗೆ ಬಂದಿಳಿದ ರಾಜ್ ಬಿ ಶೆಟ್ಟಿ ಅಬ್ಸರ್ವೇಷನ್‌ನಲ್ಲಿ ಇರುತ್ತಾರೆ. ಈ ವೇಳೆ ಕೆಲವು ವಿಚಿತ್ರ ಘಟನೆಗಳು ನಡೆಯುವುದಕ್ಕೆ ಶುರುವಾಗುತ್ತವೆ. ಊರಿನವರು ಕೊಳ್ಳಿ ದೆವ್ವ ಎಂದು ಹೆದರುವುದಕ್ಕೆ ಶುರು ಮಾಡುತ್ತಾರೆ. ಈ ಕೇಸ್ ಹಿಂದೆ ಬೀಳುವ ರಾಜ್ ಬಿ ಶೆಟ್ಟಿಗೆ ಏನೆಲ್ಲ ಎದುರಾಗುತ್ತೆ? ಎನ್ನುವುದೇ ಸಿನಿಮಾದ ಕಥೆ.
ನಿರ್ದೇಶನ ಹೇಗಿದೆ?
ಜೋಗಿ ಪ್ರೇಮ್ ಶಿಷ್ಯ ರವಿ ಸಾರಂಗ್ ನಿರ್ದೇಶನ ಚೆನ್ನಾಗಿದೆ. ಕ್ರೈಂ-ಥ್ರಿಲ್ಲರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಪ್ರೇಕ್ಷಕರಿಗೆ ಊಹೆಗೆ ನಿಲುಕದ ದೃಶ್ಯಗಳನ್ನು ಹೆಣೆದಿದ್ದಾರೆ. ಚಿತ್ರಕಥೆಯಲ್ಲಿ ಇನ್ನೂ ಸ್ವಲ್ಪ ಗಮನ ಹರಿಸಿದ್ದರೆ, ಕನ್ನಡ ಬೆಸ್ಟ್ ಕ್ರೈಂ-ಥ್ರಿಲ್ಲರ್ ಸಿನಿಮಾ ಆಗುವುದರಲ್ಲಿ ಅನುಮಾನವೇ ಇರಲಿಲ್ಲ.
'ರಕ್ಕಸಪುದೋಳ್' ಪ್ಲಸ್ ಏನು?
ಈ ಸಿನಿಮಾ ಪ್ರೇಕ್ಷಕರು ಏನೆಲ್ಲ ಊಹೆ ಮಾಡುತ್ತಾರೋ ಅದೆಲ್ಲ ಏನೂ ನಡೆಯುವುದಿಲ್ಲ. ಕಂಪ್ಲೀಟ್ ಆಗಿ ಡಿಫ್ರೆಂಡ್ ಸಿನಿಮಾ ಅಂತನೇ ಹೇಳಬಹುದು. ರಾಜ್ ಬಿ ಶೆಟ್ಟಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ರಾಜ್ ಜೊತೆ ಇರುವ ಗೌರವ್ ಶೆಟ್ಟಿ ಕಾಮಿಡಿ ಸೀನ್‌ಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಮಲಯಾಳಂ ಶೈಲಿಯ ಕ್ರೈಂ-ಥ್ರಿಲ್ಲರ್ ಸಿನಿಮಾದ ಹಾಗೆ 'ರಕ್ಕಸಪುದೋಳ್' ಸಿನಿಮಾವನ್ನು ನೋಡಬಹುದು. ಅರ್ಜುನ್ ಜನ್ಯ ಮ್ಯೂಸಿಕ್ ಸಿನಿಮಾ ಹೈಲೈಟ್‌ಗಳಲ್ಲೊಂದು.

'ರಕ್ಕಸಪುರದೋಳ್' ಮೈನಸ್ ಏನು?
ಹಾರರ್ ಸಿನಿಮಾ ಅಂತ ಹೇಳುತ್ತಾರೆ. ಆದರೆ, ಎಲ್ಲೂ ಹಾರರ್ ಫೀಲ್ ಕೊಡಲಿಲ್ಲ. ವಿಜ್ಯೂವಲ್ ಮತ್ತು ಸೌಂಡ್ ಎರಡೂ ಹಾರರ್ ಫೀಲ್ ಕೊಡುವುದಿಲ್ಲ. ಹೀಗೆ ಕೆಲವು ಸಣ್ಣಪುಟ್ಟ ಮಿಸ್ಟೇಕ್‌ಗಳನ್ನು ಬಿಟ್ಟರೆ, ಥ್ರಿಲ್ಲಿಂಗ್ ಸಿನಿಮಾ ಇಷ್ಟ ಪಡುವವರಿಗೆ 'ರಕ್ಕಸಪುರದೋಳ್' ಸಿಕ್ಕಾಪಟ್ಟೆ ಲೈಕ್ ಆಗುತ್ತೆ.
ಕೊನೆಯಲ್ಲಿ...
'ಸು ಫ್ರಮ್ ಸೋ;', '45' ಸಿನಿಮಾ ಬಳಿಕ ರಾಜ್ ಬಿ ಶೆಟ್ಟಿ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಪ್ರತಿ ಸಿನಿಮಾದಲ್ಲಿಯೂ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿಯೂ ಪೊಲೀಸ್ ಅಧಿಕಾರಿಯಾಗಿ ಇಷ್ಟ ಆಗುತ್ತಾರೆ. ಕ್ರೈಂ-ಥ್ರಿಲ್ಲರ್ ಸಿನಿಮಾ ನೋಡುವವರಿಗೆ ಈ ಸಿನಿಮಾ ಖಂಡಿತವಾಗಿಯೂ ಇಷ್ಟ ಆಗುತ್ತೆ.


Click it and Unblock the Notifications











