Beguru Colony Review; 'ಕಾಲೋನಿ' ಮೈದಾನಕ್ಕಾಗಿ ರಾಘವ-ಶಿವ ದೋಸ್ತಿ ಹೋರಾಟ
ಚಿತ್ರರಂಗಕ್ಕೆ ಹೊಸಬರ ಪ್ರವೇಶ ಆಗುತ್ತಲೇ ಇರುತ್ತದೆ. ಹಳಬರ ಜೊತೆ ಸೇರಿ ಹೊಸಬರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ವಾರ ತೆರೆಗೆ ಬಂದಿರುವ 'ಬೇಗೂರು ಕಾಲೋನಿ' ಅಂಥದ್ದೇ ಒಂದೊಳ್ಳೆ ಪ್ರಯತ್ನ. ಫ್ಲೈಯಿಂಗ್ ಸ್ಟಾರ್ ಮಂಜು ನಿರ್ದೇಶಿಸಿ ನಟಿಸಿರುವ ಚಿತ್ರದಲ್ಲಿ ರಾಜೀವ್ ಹನು ಮುಖ್ಯವಾದ ಪಾತ್ರ ಮಾಡಿದ್ದಾರೆ. ಕಿಚ್ಚ ಸುದೀಪ್, ದಾಸ ದರ್ಶನ್ ಕೂಡ ಚಿತ್ರದ ಬೆಂಬಲಕ್ಕೆ ನಿಂತಿದ್ದರು.
ಒಂದು ಕಾಲೋನಿ. ಅಲ್ಲಿನ ಜನ ಹಾಡು ಪಾಡು, ನೋವು ನಲಿವು. ಇದರ ನಡುವೆ ಇಬ್ಬರು ಸ್ನೇಹಿತರು. ವ್ಯಾಜ್ಯ ನಡೆಯುತ್ತಿರುವ ಕಾಲೋನಿ ಪಕ್ಕದ ಭೂಮಿ. ಅಲ್ಲಿ ತಮ್ಮ ಕಾಲೋನಿ ಮಕ್ಕಳು ಆಡಿ ಬೆಳೆಯಬೇಕು ಎನ್ನುವುದು ಅಲ್ಲಿನ ಜನರ ಆಸೆ. ಆದರೆ ಅದು ಸುಲಭಕ್ಕೆ ಸಾಧ್ಯವಾಗುತ್ತಾ ಎನ್ನುವ ಕಥೆ ಆಧರಿಸಿ ನಿರ್ಮಾಣವಾಗಿರುವ ಸಿನಿಮಾ ಇದು.

ಸಿನಿಮಾ ಕಥೆಯೇನು?
ಬೇಗೂರು ಕಾಲೋನಿ. ಟೈಟಲ್ಲೇ ಹೇಳುವಂತೆ ನಗರದ ಮೂಲೆಯೊಂದರ ಕಾಲೋನಿ. ಅಲ್ಲಿ ರಾಘವ(ರಾಜೀವ್), ಶಿವ(ಮಂಜು) ಎಂಬ ಇಬ್ಬರೂ ಸ್ನೇಹಿತರು. ಕಾಲೋನಿ ಪಕ್ಕದ ಜಾಗದಲ್ಲಿ ಮೈದಾನ ಆಗಬೇಕು ಎನ್ನುವುದು ಅಪ್ಪನ ಕಾಲದಿಂದಲೂ ಕಾಣುತ್ತಿರುವ ಕನಸು. ರಾಘವ-ಶಿವನದ್ದು ಅದೇ ಆಸೆ. ಅದಕ್ಕಾಗಿ ಇಬ್ಬರೂ ಹೋರಾಡುತ್ತಲೇ ಇರುತ್ತಾರೆ. ಈ ನಡುವೆ ರಾಘವ ಮದುವೆ, ಶಿವ ಪ್ರೀತಿ ಕಥೆಯೂ ಇರುತ್ತದೆ.
ಕಾಲೋನಿ ಜನರ ಮತಗಳ ಮೇಲೆ ಅಲ್ಲಿನ ರಾಜಕಾರಣಗಳ ಕಣ್ಣು. ಅದಕ್ಕಾಗಿ ಕಣ್ಣೊರುವ ಕೆಲಸ ಮಾಡಿಕೊಂಡು ಇರುತ್ತಾರೆ. ಶಾಂತಿಯಿಂದ ದೊಡ್ಡವರ ವಿಶ್ವಾಸ ಗಳಿಸಿ ಮೈದಾನ ಜಾಗ ಬಿಡಿಸಿಕೊಳ್ಳಬೇಕು ಎನ್ನುವುದು ರಾಘವ ಲೆಕ್ಕಾಚಾರ. ಸ್ವಾಭಿಮಾನದಿಂದ ಅದನ್ನು ಧಕ್ಕಿಸಿಕೊಳ್ಳಬೇಕು ಎನ್ನುವುದು ಶಿವನ ಉದ್ದೇಶ. ಈ ಹಾದಿಯಲ್ಲಿ ಗೆಲ್ಲುವುದು ಯಾರು? ಅಷ್ಟು ಸುಲಭವಾಗಿ ಶಾಸಕ ಮುನೇಗೌಡ(ಪೋಸಾನಿ ಕೃಷ್ಣಮುರಳಿ) ಆ ಜಾಗ ಬಿಟ್ಟುಕೊಡ್ತಾನಾ? ಅಣ್ಣ, ತಮ್ಮಂದಿರಂತಿದ್ದ ರಾಘವ- ಶಿವ ದೂರಾಗುವುದು ಏಕೆ? ಇದಕ್ಕೆಲ್ಲ ಉತ್ತರ ಬೇಕು ಅಂದ್ರೆ ಸಿನಿಮಾ ನೋಡಬೇಕು.
ಸಿನಿಮಾ ಹೇಗಿದೆ?
ಕಾಲೋನಿಯ ಲೋಕಲ್ ಹುಡುಗರ ಕತೆ ಚಿತ್ರದಲ್ಲಿದೆ. ಮೊದಲಾರ್ಧ ಕಥೆಗೆ ಪೀಠಿಕೆ ಹಾಕಿಕೊಂಡಿದ್ದಾರೆ. ಕಾಲೋನಿ, ಅಲ್ಲಿ ಇಬ್ಬರು ಸ್ನೇಹಿತರು. ಪ್ರೀತಿಸಿದ ಹುಡುಗನಿಗಾಗಿ ಮನೆಬಿಟ್ಟು ಬಂದ ಹುಡುಗಿ. ಆ ಹುಡುಗ ಮದುವೆಗೆ ಹಿಂದೇಟು ಹಾಕಿದಾಗ ಹಿಂದು ಮುಂದು ನೋಡದೇ ರಾಘವ ಆಕೆಗೆ ತಾಳಿ ಕಟ್ಟಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅಷ್ಟರಮಟ್ಟಿಗೆ ಒಳ್ಳೆಯವನು.
ಶಿವ ಲೋಕಲ್ ಗಲ್ಲಿ ಹುಡುಗ. ಸದಾ ಮೂಗಿನ ಮೇಲೆ ಕೋಪ. ತನ್ನ ಸಹವಾಸಕ್ಕೆ ಬಂದವರನ್ನು ತನ್ನವರ ತಂಟೆಗೆ ಬರುವವರನ್ನು ಸುಮ್ಮನೆ ಬಿಡಲ್ಲ. ರಾಮ ಲಕ್ಷ್ಮಣರಂತಿದ್ದ ಸ್ನೇಹಿತರ ನಡುವೆ ಅದೇ ಮೈದಾನದ ವಿಚಾರಕ್ಕೆ ಮನಸ್ತಾಪ ಬರುತ್ತದೆ. ಒಂದು ಘಟನೆ ಇಬ್ಬರನ್ನು ದೂರ ಮಾಡಿ ಬಿಡುತ್ತದೆ. ಆದರೂ ಮೈದಾನಕ್ಕಾಗಿ ಹೋರಾಟ ಬಿಡಲ್ಲ. ಅದಕ್ಕಾಗಿ ದುಷ್ಟರನ್ನು, ಪೊಲೀಸರನ್ನು ಎದುರಾಗಿಕೊಳ್ಳುತ್ತಾರೆ.
ಅಂತೂ ಇಂತೂ ಮೈದಾನ ಜಾಗ ಪಡೆದುಕೊಳ್ಳುವಲ್ಲಿ ಗೆದ್ದುಬಿಡ್ತಾರೆ. ಆದರೆ ಅದಕ್ಕಾಗಿ ಎದುರು ಹಾಕಿಕೊಂಡವರು ಇವರಿಬ್ಬರನ್ನು ಸುಮ್ಮನೆ ಬಿಡ್ತಾರಾ? ಮುಂದೆ ಏನೆಲ್ಲಾ ಆಗುತ್ತದೆ? ಎನ್ನುವುದು ಇನ್ನುಳಿದ ಕಥೆ. ಕಾಲೋನಿ ಹುಡುಗರ ಆರ್ಭಟದ ನಡುವೆ ಶಿವನ ಒಂದು ಸಣ್ಣ ಲವ್ ಟ್ರ್ಯಾಕ್ ಕೂಡ ಇದೆ. ಬಹಳ ಚೆನ್ನಾಗಿ ಬರೆದುಕೊಂಡಿರುವ ಮಂಜು ಅದನ್ನು ಅಷ್ಟೇ ಸೊಗಸಾಗಿ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ.
ಶಿವನ ತಂದೆ ನಾಗಪ್ಪ ಯಾರು? ಆತನ ಹಿನ್ನೆಲೆ ಏನು? ಎನ್ನುವುದನ್ನೆಲ್ಲಾ ಫ್ಲ್ಯಾಶ್‌ಬ್ಯಾಕ್ ತಂತ್ರ ಬಳಸಿ ಅಲ್ಲಲ್ಲಿ ಹೇಳುತ್ತಾ ಹೋಗಿದ್ದಾರೆ. ಅಂಬೇಡ್ಕರ್ ಆಶಯದ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ. ಸಂಗೀತ, ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಒಟ್ಟಾರೆ ಒಂದು ಲೋಕಲ್ ಕಮರ್ಷಿಯಲ್ ಸಿನಿಮಾ ಬೇಗೂರು ಕಾಲೋನಿ.
ಕಲಾವಿದರ ಅಭಿನಯ
ನಟನೆಯ ವಿಚಾರಕ್ಕೆ ಬಂದರೆ ನಾಯಕ ರಾಘವನಾಗಿ ರಾಜೀವ್ ಸೊಗಸಾಗಿ ನಟಿಸಿದ್ದಾರೆ. ಅಚ್ಚರಿ ಎಂದರೆ ಫ್ಲೈಯಿಂಗ್ ಸ್ಟಾರ್ ಮಂಜು. ನಿರ್ದೇಶನದ ಜೊತೆಗೆ ಮತ್ತೊಬ್ಬ ನಾಯಕನಾಗಿ ಗಮನ ಸೆಳೆದಿದ್ದಾರೆ. ತಂದೆ ಮಗನಾಗಿ ದ್ವಿಪಾತ್ರದಲ್ಲಿ ನಟಿಸಿ ಒಳ್ಳೆ ಅಂಕ ಗಿಟ್ಟಿಸಿದ್ದಾರೆ. ಹೊಸ ಪ್ರತಿಭೆ ಆಗಿದ್ದರೂ ನಟನೆ, ಡ್ಯಾನ್ಸ್, ಫೈಟ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ.
ನಾಯಕಿಯರಾಗಿ ಪಲ್ಲವಿ ಪರ್ವ, ಕೀರ್ತಿ ಭಂಡಾರಿ ಇಷ್ಟವಾಗುತ್ತಾರೆ. ಇನ್ನುಳಿದಂತೆ ಪೋಸಾನಿ ಕೃಷ್ಣ ಮುರಳಿ, ಬಾಲ ರಾಜವಾಡಿ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ
ಫ್ಲೈಯಿಂಗ್ ಸ್ಟಾರ್ ಮಂಜು ನಿರ್ದೇಶನ, ಚಿತ್ರಕಥೆಯಲ್ಲಿ ಒಳ್ಳೆ ಪ್ರಯತ್ನ ಮಾಡಿದ್ದಾರೆ. ಸಂಭಾಷಣೆ ಕೂಡ ಕತೆಗೆ ಪೂರಕವಾಗಿದೆ. ಬೇಡದ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾ ಮತ್ತಷ್ಟು ಸೊಗಸಾಗಿ ಇರುತ್ತಿತ್ತು. ಕಾರ್ತಿಕ್ ಛಾಯಾಗ್ರಹಣ ಹೈಲೆಟ್. ಅದರಲ್ಲೂ ನೈಟ್ ಶಾಟ್ಸ್ ಕೆಲವಡೆ ಬಹಳ ಇಷ್ಟವಾಗುತ್ತದೆ. ಅಭಿನಂದನ್ ಕಶ್ಯಪ್ ಸಂಗೀತ ಕೆಲವಡೆ ಅತಿಯಾಯಿತು ಎನಿಸದೇ ಇರದು.
ಕೊನೆ ಮಾತು
'ಬೇಗೂರು ಕಾಲೋನಿ' ಒಂದೊಳ್ಳೆ ಪ್ರಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೊಸ ಪ್ರತಿಭೆಗಳು ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಸಣ್ಣಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಮಾಸ್ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ.


Click it and Unblock the Notifications











