Ranganayaka Review: ಜಗ್ಗೇಶ್-ಗುರುಪ್ರಸಾದ್ ಜನ್ಮ-ಜನ್ಮಾಂತರದ ಕಥೆ, ನೋಡುವುದೇ ವ್ಯಥೆ!
ಜಗ್ಗೇಶ್- ಗುರುಪ್ರಸಾದ್ ಹ್ಯಾಟ್ರಿಕ್ ಕಾಂಬಿನೇಷನ್ 'ರಂಗನಾಯಕ' ರಂಗಸಜ್ಜಿಕೆ ಮೇಲೆ ಬಂದಿದೆ. ಅರ್ಥಾತ್ ತೆರೆಗಪ್ಪಳಿಸಿದೆ. 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾಗಳಲ್ಲಿ ಈ ಜೋಡಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿತ್ತು. ಇಬ್ಬರೂ ಸೇರಿ ಒಟ್ಟಿಗೆ ಮತ್ತೊಮ್ಮೆ ಸಿನಿಮಾ ಮಾಡುತ್ತಾರೆ ಎಂದಾಗ ಸಹಜವಾಗಿಯೇ ಕುತೂಹಲ ಮೂಡಿತ್ತು.
ವಿಖ್ಯಾತ್ ನಿರ್ಮಾಣದ 'ರಂಗನಾಯಕ' ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತವಿದೆ. ಚಿತ್ರದ ಹಾಡುಗಳು, ಟ್ರೈಲರ್ ಕೊಂಚಮಟ್ಟಿಗೆ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ರಾಜ್ಯಾದ್ಯಂತ ಸಿನಿಮಾ ತೆರೆಕಂಡಿದೆ. 'ರಂಗನಾಯಕ' ಜೊತೆಗೆ ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಸಿನಿಮಾ ಕೂಡ ಬಿಡುಗಡೆಯಾಗಿದೆ. ಆದರೂ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಎನ್ನುವಂತಿಲ್ಲ. ಕಾರಣ ಯೋಗರಾಜ್ ಭಟ್ ಕೂಡ 'ರಂಗನಾಯಕ'ನ ಪಾತ್ರವರ್ಗದಲ್ಲಿದ್ದಾರೆ.

'ರಂಗನಾಯಕ' ಟ್ರೈಲರ್ ನೋಡಿದಾಗಲೇ ತೆರೆ ಹಿಂದೆ ಇರಬೇಕಿದ್ದ ಗುರುಪ್ರಸಾದ್ ತೆರೆಮೇಲೆ ಏನು ಮಾಡೋಕೆ ಹೊರಟಿದ್ದಾರೆ ಎನ್ನುವ ಕುತೂಹಲವಿತ್ತು. ಉಪೇಂದ್ರ, ಶಿವಣ್ಣ, ಸುದೀಪ್, ಡಿಬಾಸ್, ಯಶ್ ಹೆಸರುಗಳನ್ನು ತಂದು ಗಮನ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಅಷ್ಟಕ್ಕೂ ಸಿನಿಮಾ ಕಥೆಯೇನು? ಸಿನಿಮಾ ಹೇಗಿದೆ? ಮುಂದೆ ಓದಿ.
'ರಂಗನಾಯಕ' ಕಥೆಯೇನು?
ಖಾಸಗಿ ವಾಹಿನಿಯೊಂದರಲ್ಲಿ ಭೂತಕನ್ನಡಿ ಎನ್ನುವ ಸಮ್ಮೋಹಿನಿ ಕಾರ್ಯಕ್ರಮ ನಡೆಯುತ್ತಿರುತ್ತದೆ. ಸಿನಿಮಾ ನಿರ್ದೇಶಕ ಗುರುಪ್ರಸಾದ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರ ಹಿಂದಿನ ಜನ್ಮದ ಬಗ್ಗೆ ತಿಳಿಯುವುದರ ಮೂಲಕ ಸಿನಿಮಾ ಕಥೆ ಆರಂಭವಾಗುತ್ತದೆ. ಹಿಂದಿನ ಜನ್ಮದಲ್ಲಿ ಪದ್ಮನಾಭ ಶರ್ಮ ಆಗಿದ್ದ ಗುರುಪ್ರಸಾದ್ ಭಾರತದಲ್ಲೇ ಮೊದಲು ಸಿನಿಮಾ ನಿರ್ದೇಶನ ಮಾಡಬೇಕು, ಅದು ಕನ್ನಡಿಗರ ಸಿನಿಮಾ, ಕನ್ನಡ ಸಿನಿಮಾವೇ ಆಗಿರಬೇಕು ಎಂದುಕೊಳ್ಳುತ್ತಾನೆ.

ಪದ್ಮನಾಭ ಶರ್ಮಾ ಮಾಡುವ ಸಿನಿಮಾ ಹೆಸರು 'ರಂಗನಾಯಕ'. ಅಂದಹಾಗೆ ಆ ಚಿತ್ರದ ನಾಯಕ ಈ ಜನ್ಮದಲ್ಲಿ ನವರಸ ನಾಯಕ ಜಗ್ಗೇಶ್. ಪದ್ಮನಾಭ ಶರ್ಮ ನಿರ್ದೇಶನದ 'ರಂಗನಾಯಕ' ಸಿನಿಮಾ ತೆರೆ ಕಾಣುತ್ತಾ? ಇಲ್ವಾ? ಪದ್ಮನಾಭ ಶರ್ಮ ಕನಸು ನನಸಾಗುತ್ತಾ? ಅವರಿಬ್ಬರ ಕನಸು ಈ ಜನ್ಮದಲ್ಲಿ ಹೇಗೆ ನಿಜವಾಯ್ತು? ಎನ್ನುವ ಪ್ರಶ್ನೆಗಳಿಗೆಲ್ಲಾ ಉತ್ತರ ಬೇಕು ಅಂದ್ರೆ ನೀವು ಸಿನಿಮಾ ನೋಡಬೇಕು.
ಸಿನಿಮಾ ಹೇಗಿದೆ?
ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ, ಒಂದು ವೇಳೆ ಸಂಭವಿಸಿದ್ದರೆ ಕಾಕತಾಳೀಯ ಎನ್ನುವ ನಿರೀಕ್ಷಣಾ ಜಾಮೀನು ತೆಗೆದುಕೊಂಡೇ ಗುರುಪ್ರಸಾದ್ ಕಥೆ ಆರಂಭಿಸುತ್ತಾರೆ. ಆರಂಭದಲ್ಲೇ ತಮ್ಮ ಬಗ್ಗೆ ತಾವೇ ಸೆಲ್ಫ್ ಬಿಲ್ಡಪ್ ಕೊಟ್ಟುಕೊಂಡು ನಿರ್ದೇಶಕರು ಬೇಸರ ಮೂಡಿಸುತ್ತಾರೆ. ಮೊದಲಾರ್ಧ ತುಂಬಾ ಗುರುಪ್ರಸಾದ್ ಆವರಿಸಿಕೊಂಡುಬಿಟ್ಟಿದ್ದಾರೆ. ಜಗ್ಗೇಶ್ ಹಾಗೂ ನಾಯಕಿ ಮಹಾಲಕ್ಷ್ಮಿ ಎರಡು ಹಾಡುಗಳಿಗೆ ಸೀಮಿತವಾಗಿಬಿಡುತ್ತಾರೆ.
ಮೊದಲ ಭಾಗದಲ್ಲಿ ಗುರು ಪ್ರಸಾದ್ ಲೀಡ್ ಆಗಿ ಕಾಣಿಸಿಕೊಂಡು ಜಗ್ಗೇಶ್ ಅವರದ್ದು ಗೆಸ್ಟ್ ಅಪಿಯರೆನ್ಸ್ ಎನಿಸಿಬಿಡುತ್ತದೆ. ಎರಡನೇ ಭಾಗದಲ್ಲಿ ಅಸಲಿ ಸಿನಿಮಾ ಕಥೆ ಆರಂಭವಾಗುತ್ತದೆ. ಸಿನಿಮಾದೊಳಗೆ ಸಿನಿಮಾ ಮಾಡಿ ರಂಜಿಸುವ ತಂತ್ರವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಆ ಸಿನಿಮಾವನ್ನೇ ದ್ವಿತಿಯಾರ್ಧಲದಲ್ಲಿ ತೋರಿಸುತ್ತಾ ಹೋಗುವಂತೆ ತೋರಿಸಲಾಗಿದೆ. ಸಹವಾಸ ದೋಷದಿಂದ ಕೆಟ್ಟ 'ರಂಗನಾಯಕ'ನನ್ನು ಪತ್ನಿ ಬದಲಾಯಿಸುವುದಾಗಿ ಪಣ ತೊಡುವುರೊಂದಿಗೆ ಚಿತ್ರಕ್ಕೆ ಶುಭಂ ಕಾರ್ಡ್ ಬೀಳುತ್ತದೆ.
ಇದು ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ. ಇಲ್ಲೊಂದು ಕಾಸ್ಟ್ಯೂಮ್ ಡ್ರಾಮಾ ಕೂಡ ಇದೆ. 'ಎದ್ದೇಳು ಮಂಜುನಾಥ' ಟೈಟಲ್ ಸಾಂಗ್‌ನಲ್ಲಿ ರಾಜಪೋಷಾಕಿನಲ್ಲಿ ದರ್ಶನ ಕೊಟ್ಟಿದ್ದ ಜಗ್ಗೇಶ್, 'ರಂಗನಾಯಕ' ಚಿತ್ರದ ಬಹುತೇಕ ದೃಶ್ಯಗಳಲ್ಲಿ ಇದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಮಾತಿನಂತೆ ಅತಿಯಾದ ಹಾಸ್ಯ ಕೆಲವೊಮ್ಮೆ ಹಾಸ್ಯಾಸ್ಪದವಾಗಿ ನಗೆಪಾಟಲಿಗೆ ಈಡಾಗುವ ಸಾಧ್ಯತೆ ಇರುತ್ತದೆ. ಹಾಸ್ಯ ಒಳ್ಳೆಯದಾದರು, ಅಪಹಾಸ್ಯ ಒಳ್ಳೆಯದಲ್ಲ, ಹಾಸ್ಯ ಮಿತವಾಗಿದ್ದರೆ ಚೆನ್ನ. ಅತಿಯಾದರೆ ಮಾತ್ರ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ಸಿನಿಮಾ ಸಣ್ಣದಾಗಿ ಟ್ರೋಲ್ ಆದರೆ ಚೆನ್ನ. ಆದರೆ ಟ್ರೋಲ್ ಮಾಡುವುದನ್ನೇ ಸಿನಿಮಾ ಮಾಡಿದರೆ 'ರಂಗನಾಯಕ' ರೀತಿ ಇರುತ್ತದೆ ಅನ್ನಿಸುತ್ತದೆ.
ಇನ್ನು ಇನ್ನು ಹೊಸ ಟೆಂಪ್ಲೇಟ್‌ನಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಗುರುಪ್ರಸಾದ್ ಎಂದಿನ ತಮ್ಮ ಬರವಣಿಗೆಯಿಂದ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಕೆಲವೊಮ್ಮೆ ಅತಿರೇಕ ಎನಿಸುತ್ತದೆ. ಗ್ಯಾರೆಂಟಿ, ಇಡಿ, ಸಿಡಿ ಹೀಗೆ ರಾಜಕೀಯ ವಿಡಂಬನೆಯೂ ಇದೆ. ಭೂತ ಕನ್ನಡಿ ಕಿರುತೆರೆ ಕಾರ್ಯಕ್ರಮದ ತಂತ್ರಜ್ಞರೇ ಗುರುಪ್ರಸಾದ್ ಹಿಂದಿನ ಜನ್ಮದ ಪಾತ್ರಗಳಾಗಿ ಬರುವ ಕಾನ್ಸೆಪ್ಟ್ ಚೆನ್ನಾಗಿದೆ. ಇನ್ನು ಕನ್ನಡಾಭಿಮಾನದ ಡೈಲಾಗ್‌ಗಳು, ಹಾಡು ಇಷ್ಟವಾಗುತ್ತದೆ.
ಕಲಾವಿದರ ಅಭಿನಯ
ನವರಸ ನಾಯಕ ಜಗ್ಗೇಶ್ ಅಭಿನಯ ಇಡೀ ಚಿತ್ರದ ಹೈಲೆಟ್. ಎಂದಿನ ತಮ್ಮ ಹಾವಭಾವದಿಂದಲೇ ಜಗ್ಗಣ್ಣ ಪ್ರೇಕ್ಷಕರನ್ನು ಹೆಚ್ಚು ರಂಜಿಸುತ್ತಾರೆ. ಅಭಿಮಾನಿಗಳಿಗಂತೂ ಅವರ ಅಭಿನಯ ಬಹಳ ಇಷ್ಟವಾಗುತ್ತದೆ. ಕನ್ನಡ ಖ್ಯಾತನಟರನ್ನು ಮಿಮಿಕ್ರಿ ಮಾಡುವುದು ಹಾಗೂ ಹಿಂದಿನ ಜನಪ್ರಿಯ ಹಾಡುಗಳ ಸಾಹಿತ್ಯ ಬದಲಿಸಿ ಹಾಡುವ ಸನ್ನಿವೇಶಗಳಲ್ಲಿ ಬಹಳ ಇಷ್ಟವಾಗುತ್ತಾರೆ.
ಇನ್ನುಳಿದಂತೆ ಭೂತ ಕನ್ನಡಿ ಕಿರುತೆರೆ ಕಾರ್ಯಕ್ರಮದ ವಿಶ್ಲೇಷಣೆಗೆ ಬರುವ ಚಿಂತಕನ ಪಾತ್ರದಲ್ಲಿ ಯೋಗರಾಜ್ ಭಟ್ ಕಾಣಿಸಿಕೊಂಡಿದ್ದಾರೆ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಚೈತ್ರಾ ಕೋಟೂರ್ ಮಹಾರಾಣಿ ಪಾತ್ರದಲ್ಲಿ ನಗಿಸುತ್ತಾರೆ. ಇನ್ನುಳಿದಂತೆ ಎಂ. ಕೆ ಮಠ ಪಾತ್ರವೂ ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತದೆ.
ಕೊನೆ ಮಾತು
'ರಂಗನಾಯಕ' ಚಿತ್ರದಲ್ಲಿ ಕೆಲವೆಡೆ ಹಾಸ್ಯ ಹಾಸ್ಯಸ್ಪದ ಆಗಿಬಿಟ್ಟಿದೆ. ನಾವು ಏನೇ ಮಾಡಿದರೂ ಜನ ನೋಡುತ್ತಾರೆ ಎಂದುಕೊಂಡು ನಿರ್ದೇಶಕರು ಏನೇನೋ ಮಾಡಲು ಹೋಗಿ ಪ್ರೇಕ್ಷಕರಿಗೆ ತಲೆನೋವು ತರಿಸುತ್ತಾರೆ. ಪ್ರತಿಭಾನ್ವಿತ ನಿರ್ದೇಶಕರು, ಅದ್ಭುತ ನಟ ಸೇರಿ ಒಂದು ಸದಭಿರುಚಿಯ ಸಿನಿಮಾ ಕೊಡುವಲ್ಲಿ ಸೋತಿದ್ದಾರೆ. ತಂಡದ ಟಾರ್ಗೆಟ್ ಆಡಿಯೆನ್ಸ್ ಯಾರು ಎನ್ನುವುದುಏ ಗೊತ್ತಿಲ್ಲ. ಕೊನೆ ಪಕ್ಷ ಪಡ್ಡೆ ಹುಡುಗರಿಗೂ ಈ ಸಿನಿಮಾ ಇಷ್ಟವಾಗುವುದು ಕಷ್ಟ. ಗುರುಪ್ರಸಾದ್- ಜಗ್ಗೇಶ್ ಹಿಂದಿನ ಎರಡೂ ಸಿನಿಮಾಗಳನ್ನು ತಲೆಯಲ್ಲಿಟ್ಟುಕೊಂಡು 'ರಂಗನಾಯಕ'ನನ್ನು ನೋಡಲು ಹೋಗುವ ಸಾಹಸ ಯಾರು ಮಾಡಬಾರದು.


Click it and Unblock the Notifications











