»   » ಕನ್ನಡ ಚಿತ್ರಗಳನ್ನು ಜನ ಯಾಕೆ ನೋಡೋಲ್ಲ , ಉತ್ತರಕ್ಕಾಗಿ ರಾಷ್ಟ್ರಗೀತೆ ನೋಡಬಹುದು

ಕನ್ನಡ ಚಿತ್ರಗಳನ್ನು ಜನ ಯಾಕೆ ನೋಡೋಲ್ಲ , ಉತ್ತರಕ್ಕಾಗಿ ರಾಷ್ಟ್ರಗೀತೆ ನೋಡಬಹುದು

Subscribe to Filmibeat Kannada

ಚಿತ್ರ : ರಾಷ್ಟ್ರಗೀತೆನಿರ್ದೇಶನ : ಕೆ.ವಿ. ರಾಜುತಾರಾಗಣ : ಸಾಯಿ ಕುಮಾರ್‌, ವಿನೋದರಾಜ್‌, ಸ್ವರ್ಣ, ಮಂಜುಳಾ ಶರ್ಮ
*ಎಂ. ವಿನೋದಿನಿ

ಕಾನೂನು ಮತ್ತು ವ್ಯಕ್ತಿಯ ಸಂಘರ್ಷದಲ್ಲಿ ಗೆಲುವು ಯಾರಿಗೆ ? ನಮ್ಮ ಸಿನಿಮಾಗಳಿಗೆ ಈ ಪ್ರಶ್ನೆಗೆ ಉತ್ತರ ಸಿಕ್ಕಿ ಐವತ್ತು ವರ್ಷಗಳೇ ಕಳೆದಿವೆ. ಇಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡವನೇ ಜಯಶಾಲಿ. ರಾಷ್ಟ್ರಗೀತೆ ಚಿತ್ರವೂ ಇದೇ ಸವಕಲು ವಾದವನ್ನು ಬೇರೆಯೇ ರೀತಿಯಲ್ಲಿ ಮಂಡಿಸುತ್ತದೆ. ಇಲ್ಲಿ ನಾಯಕ ಕಾನೂನನ್ನು ಅಮ್ಮ ಎಂದು ಕರೀತಾನೆ, ರಾಜಕೀಯವನ್ನು ಅಪ್ಪ ಅನ್ನುತ್ತಾನೆ. ಪ್ರಜಾಪ್ರಭುತ್ವದಲ್ಲಿ ಮಕ್ಕಳು ಸದಾ ಅಮ್ಮನ ಮಾತನ್ನು ಕೇಳಬೇಕು ಅನ್ನುತ್ತಾನೆ. ಹಾಗನನ್ನುತ್ತಲೇ ಅಮ್ಮನನ್ನು ಅಂದರೆ ಕಾನೂನನ್ನು ತನ್ನ ಇಷ್ಟಾರ್ಥಕ್ಕೆ ಅನುಗುಣವಾಗಿ ಬಗ್ಗಿಸುತ್ತಾ ವೈರಿಗಳ ರುಂಡ ಚೆಂಡಾಡುತ್ತಾನೆ.

ದೀವಾರ್‌ ಚಿತ್ರವನ್ನು ಆಗಾಗ ನೆನಪಿಸುವ ರಾಷ್ಟ್ರಗೀತೆಯಲ್ಲಿ ಇಬ್ಬರು ನಾಯಕರಿದ್ದಾರೆ. ಅವರಿಬ್ಬರೂ ಭಾರತೀದೇವಿಯ ಪುತ್ರರು. ಇಬ್ಬರೂ ಪೊಲೀಸ್‌ ಅಧಿಕಾರಿಗಳಾದರೂ ಇವರಲ್ಲಿ ಒಬ್ಬಾತ ಕಳ್ಳರ ಕೈ ಗೊಂಬೆ. ಆತ ಭಾರತೀದೇವಿ ಅಸಲಿ ಪುತ್ರನಲ್ಲ ಅನ್ನುವ ಸಂಗತಿಯೂ ಕೊನೆಗೆ ಬಹಿರಂಗವಾಗುತ್ತದೆ. ಅಣ್ಣ ಕಾನೂನಿನ ವಕ್ತಾರ, ಅಮ್ಮ ವಂದೇ ಮಾತರಂ ಗೀತೆಯ ಕಾಪಿರೈಟ್‌ ಪಡೆದುಕೊಂಡವಳು ! ಅಮ್ಮ-ಮಕ್ಕಳಿಗೆ ಎದುರಾಗಿ ರಾಜ್ಯದ ಗೃಹ ಮಂತ್ರಿ ಮತ್ತು ಅಂಡರ್‌ ವರ್ಲ್ಡ್‌ ಡಾನ್‌ ಇದ್ದಾರೆ. ಆ ಡಾನ್‌ಗೆ ಇಬ್ಬರು ಸಾಕುಪುತ್ರಿಯರು ಇದ್ದಾರೆ. ಅವರು ನಾಯಕಿಯರಲ್ಲ. ನಾಯಕರ ತನುಮನವನ್ನು ಕಾನೂನು ಬಾಹಿರ ರೀತಿಯಲ್ಲಿ ಗೆಲ್ಲುವುದಕ್ಕೆ ಪಿತೂರಿ ನಡೆಸುವ ವ್ಯಾಂಪ್‌ಗಳು. ಈ ಐದು ಮುಖ್ಯ ಪಾತ್ರಗಳ ಜೊತೆಗೆ ಅಸಂಖ್ಯ ಪೊಲೀಸರು, ರೌಡಿಗಳು, ಜನ ಸಾಗರವೂ ಇವೆ.

ವಂದೇಮಾತರಂನ್ನು ರಾಷ್ಟ್ರಗೀತೆ ಎಂದು ಕರೆಯುತ್ತಾ, ಅದರ ಮಹತ್ವವನ್ನು ಸಾರುವುದಕ್ಕೆ ಈ ಚಿತ್ರ ಎನ್ನುವ ಬಗ್ಗೆ ಆರಂಭದಲ್ಲಿ ಸೂಚನೆ ಸಿಕ್ಕಿದರೂ ಅನಂತರ ಚಿತ್ರ ಸಾಗುವುದು ನೆತ್ತರ ಕಾಲುವೆಯಲ್ಲಿ.

ಎಲ್ಲಾ ಪಾತ್ರಗಳು ರೋಷದಿಂದ ಅಬ್ಬರಿಸುತ್ತವೆ. ಮೈಲುದ್ದ ಡೈಲಾಗ್‌ ಹೊಡೆಯುತ್ತವೆ, ವಿನಾಕಾರಣ ಬಡಿದಾಡುತ್ತವೆ, ಕೊನೆಗೆ ಖಳರಿಬ್ಬರೂ ತಾರಸಿಯ ಮೇಲಿನಿಂದ ಬೀಳುವಲ್ಲಿಗೆ ಚಿತ್ರ ಮುಗಿಯುತ್ತದೆ.

ನಿರ್ದೇಶಕ ಕೆ.ವಿ. ರಾಜು ಅವರಿಗೆ ತಮ್ಮ ಲೇಖನಿಯ ಬಗ್ಗೆ ಅಪಾರ ನಂಬಿಕೆ. ಹಾಗಾಗಿ ಸಿನಿಮಾ ಎಂಬ ದೃಶ್ಯ ಮಾಧ್ಯಮವನ್ನು ನಾಟಕದ ಮಟ್ಟಕ್ಕೆ ಇಳಿಸಿಬಿಡುತ್ತಾರೆ. ಕ್ಯಾಮರಾ ಹೆಂಡ ಕುಡಿದ ಕೋತಿಯಂತೆ ಎಲ್ಲೆಲ್ಲೋ ಜಿಗಿದಾಡುತ್ತದೆ. ಪ್ರೇಕ್ಷಕನ ಕಣ್ಣನ್ನು ದೇವರೇ ಕಾಪಾಡಬೇಕು. ಹಾಗಂತ ಕಣ್ಣು ಮುಚ್ಚಿದರೆ, ಕಿವಿತಮ್ಮಟೆಯನ್ನು ಬೇಧಿಸುವ ಮಾತು, ಸಂಗೀತ ಹಾಜರಾಗುತ್ತದೆ. ಚಿತ್ರಹಿಂಸೆ ಕೊಡುವುದೇ ರಂಜನೆ ಎಂಬ ಹೊಸ ವ್ಯಾಖ್ಯಾನವನ್ನು ಬರೆಯುವಲ್ಲಿ ನಿರ್ದೇಶಕರು ಯಶಸ್ವಿಯಾಗುತ್ತಾರೆ.

ನಾಯಕರಾದ ವಿನೋದ್‌ರಾಜ್‌ ಮತ್ತು ಸಾಯಿಕುಮಾರ್‌ ಇಬ್ಬರೂ ಅರಚಾಡುತ್ತಾ ಹೊಡೆದಾಡುತ್ತಾ ಕಾಲ ಕಳೆಯುತ್ತಾರೆ. ನಾಯಕಿಯರಿಗೆ ಕ್ಷಮಿಸಿ ಖಳನಾಯಕಿಯರಿಗೆ ಅಭಿನಯಕ್ಕಿಂತ ಕಾಸ್ಟ್ಯೂಮ್‌ ಬಗ್ಗೆಯೇ ಹೆಚ್ಚಿನ ಗಮನ. ಹಾಗಾಗಿ ಚಿತ್ರವನ್ನು ತಮ್ಮ ಬಗಲಲ್ಲಿಟ್ಟುಕೊಂಡು ಸಾಗುತ್ತಾರೆ ವಿಲನ್‌ ಪಾತ್ರಧಾರಿ ಶ್ರೀನಿವಾಸಪ್ರಭು. ಇನ್ನೊಬ್ಬ ವಿಲನ್‌ನ ಕೊರತೆಯನ್ನು ಸಂಕಲಕಾರ ಶಿವು ನೀಗಿದ್ದಾರೆ. ಚಿತ್ರದುದ್ದಕ್ಕೂ ಎದ್ದುಕಾಣುವುದು ನಿರ್ಮಾಪಕರ ಧಾರಾಳಿತನ ಹಾಗೂ ನಿರ್ದೇಶಕರಿಂದ ಅದರ ದುರುಪಯೋಗ.

ಕನ್ನಡ ಚಿತ್ರಗಳನ್ನು ಜನ ಯಾಕೆ ನೋಡೋಲ್ಲ ಅನ್ನುವುದಕ್ಕೆ ರಾಷ್ಟ್ರಗೀತೆಯನ್ನು ಉದಾಹರಣೆಯಾಗಿ ನೀಡಬಹುದು.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada