Not Out Review: ಹುಲಿ ಹಾಗೂ ಕುರಿಗಳ ನಡುವಿನ ಹಾವು ಏಣಿ ಆಟ 'ನಾಟ್‌ಔಟ್'
ಈ ವಾರ ಕನ್ನಡದಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಅಂಬರೀಶ ನಿರ್ದೇಶನದ 'ನಾಟ್ ಔಟ್' ಪ್ರೇಕ್ಷಕರ ಮನಗೆದ್ದಿದೆ. ವಿಭಿನ್ನ ಟೈಟಲ್‌ನಿಂದ ಸಿನಿಮಾ ಗಮನ ಸೆಳೆದಿತ್ತು. 'ಅದೃಶ್ಯ ಅಂಪೈರ್‌ನಿಂದ ತೀರ್ಪು' ಎಂಬ ಅಡಿಬರಹ ಮತ್ತಷ್ಟು ಕುತೂಹಲ ಹುಟ್ಟಿಸಿತ್ತು. ಇದೀಗ ಡಾರ್ಕ್ ಕಾಮಿಡಿ ಸಿನಿಮಾ ನೋಡುಗರಿಗೆ ಹೊಸ ಅನುಭವ ನೀಡುತ್ತಿದೆ.
ರವಿಶಂಕರ್ , ಅಜಯ್ ಪೃಥ್ವಿ, ರಚನಾ ಇಂದರ್, ಕಾಕ್ರೋಚ್ ಸುಧೀ, ಗೋಪಲಕೃಷ್ಣ ದೇಶ್‌ಪಾಂಡೆ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹೊಸಬರ ಜೊತೆಗೆ ಅನುಭವಿ ಕಲಾವಿದರ ಬಲ ಚಿತ್ರಕ್ಕೆ ಸಿಕ್ಕಿದೆ. ಜುಡಾ ಸ್ಯಾಂಡಿ ಸಂಗೀತ, ಹಾಲೇಶ್ ಛಾಯಾಗ್ರಹಣ ಚಿತ್ರಕ್ಕಿದೆ.

ಅಧಿಕಾರ ಹಾಗೂ ದುರಾಸೆಗಿಂತ ಮಾನವೀಯತೆ ಎಷ್ಟು ಮುಖ್ಯ ಎನ್ನುವುದನ್ನು 'ನಾಟ್‌ಔಟ್' ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ತಮಾಷೆಯಾಗಿ ಗಂಭೀರ ವಿಚಾರವನ್ನು ದಾಟಿಸುವ ಪ್ರಯತ್ನ ಮಾಡಲಾಗಿದೆ.
'ನಾಟ್ ಔಟ್' ಸಿನಿಮಾ ಕಥೆ
ಫೈನಾನ್ಶಿಯರ್ ಕಂ ರೌಡಿ ದೇವರಾಜ್(ರವಿ ಶಂಕರ್) ಸುತ್ತಾ 'ನಾಟ್‌ಔಟ್' ಸಿನಿಮಾ ಕಥೆ ಸುತ್ತುತ್ತದೆ. ಹಣಕ್ಕಾಗಿ ದೇವರಾಜ್ ಸಾಲು ಪಡೆದವರನ್ನು ಯಾವುದೇ ಕನಿಕರ ಇಲ್ಲದೇ ದೋಚುತ್ತಿರುತ್ತಾನೆ. ನಾಯಕ ಅಜಯ್ ಆ್ಯಂಬ್ಯುಲೆನ್ಸ್ ಚಾಲಕ. ಸ್ವಂತ ಆ್ಯಂಬುಲೆನ್ಸ್ ಖರೀದಿಸಲು ದೇವರಾಜ್ ಬಳಿ ಸಾಲ ಮಾಡುತ್ತಾನೆ. ಅವನ ದುರಾದೃಷ್ಟಕ್ಕೆ ಆ್ಯಂಬ್ಯುಲೆನ್ಸ್ ಕಳ್ಳತನವಾಗುತ್ತದೆ.

ಒಂದ್ಕಡೆ ಸಾಲದ ಬಡ್ಡಿ ಏರುತ್ತಿರುತ್ತದೆ. ಜೊತೆಗೆ ಅಜಯ್‌ಗೆ ದೇವರಾಜ್ ಬೆದರಿಕೆ ಹೆಚ್ಚಾಗುತ್ತದೆ. ಮತ್ತೊಂದು ಕಡೆ ದೇವರಾಜ್‌ನಿಂದ ತನ್ನ ಪೂರ್ವಜರ ಆಸ್ತಿಯನ್ನು ಶ್ರೀಧರ್ ಕಳೆದುಕೊಂಡಿರುತ್ತಾನೆ. ಅಜಯ್‌ನ ಬಳಸಿಕೊಂಡು ಶ್ರೀಧರ್ ತನ್ನ ಆಸ್ತಿ ಮರಳಿ ಪಡೆಯಲು ಹವಣಿಸುತ್ತಾನೆ. ಮುಂದೇನು ಎನ್ನುವುದು ನಾಟ್ ಔಟ್ ಸಿನಿಮಾ ಕಥೆ.
'ನಾಟ್ ಔಟ್' ಚಿತ್ರ ಹೇಗಿದೆ?
ಒಂದಷ್ಟು ಟ್ವಿಸ್ಟ್‌ಗಳನ್ನು ಕೊಟ್ಟು ಅಂಬರೀಶ್ 'ನಾಟ್ ಔಟ್' ಕಥೆಯನ್ನು ಕಟ್ಟುತ್ತಾ ಹೋಗುತ್ತಾರೆ. ಅಜಯ್ ತನ್ನ ಸಾಲ ಮರು ಪಾವತಿ ಮಾಡ್ತಾನಾ? ಶ್ರೀಧರ್ ಪ್ಲ್ಯಾನ್ ವರ್ಕ್ ಆಗುತ್ತಾ? ಎನ್ನುವ ಕುತೂಹಲದ ಜೊತೆ ಜೊತೆ ಸಿನಿಮಾ ಸಾಗುತ್ತದೆ. ಮೊದಲ ಭಾಗದಲ್ಲಿ ಎಲ್ಲಾ ಪಾತ್ರಗಳನ್ನು ಪರಿಚಯಿಸಿ ಎರಡನೇ ಭಾಗಕ್ಕೆ ಒಂದೇ ವೇದಿಕೆ ಸಿದ್ಧಪಡಿಸಿಕೊಂಡು ಕಥೆ ಹೇಳಿದ್ದಾರೆ.
ಫ್ಲಾಶ್‌ಬ್ಯಾಕ್ ಜೊತೆ ಜೊತೆಗೆ ರವಿಶಂಕರ್ ಪಾತ್ರದ ಮೂಲಕ ಕಥೆಯನ್ನು ನಿರೂಪಿಸುತ್ತಾ ಸಾಗುತ್ತಾರೆ. ಕಾಮಿಡಿ ಥ್ರಿಲ್ಲರ್ ಸಿನಿಮಾ ಆಗಿದ್ದರೂ ಆಕ್ಷನ್ ಸನ್ನಿವೇಶಗಳು ಹೆಚ್ಚು ಇಲ್ಲ. ರೋಚಕತೆಗೆ ಹೆಚ್ಚಿನ ಮಹತ್ವ ಕೊಟ್ಟು ಕಥೆಯನ್ನು ನಿರೂಪಿಸಲಾಗಿದೆ.
ಕಲಾವಿದರ ನಟನೆ
ಅಭಿನಯದ ವಿಚಾರಕ್ಕೆ ಬಂದರೆ ರೌಡಿ ದೇವರಾಜ್ ಆಗಿ ರವಿಶಂಕರ್ ಅಭಿನಯದ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಇಂತಹ ಖಡಕ್ ಪಾತ್ರಗಳಿಗೆ ಹೇಳಿ ಮಾಡಿಸಿದ ನಟ. ಇನ್ನು ಡಾರ್ಕ್ ಕಾಮಿಡಿ ಆಗಿರುವುದರಿಂದ ರವಿಶಂಕರ್ ಈ ಹಿಂದೆ ಕೂಡ ಇಂತಹ ಪಾತ್ರಗಳನ್ನು ಮಾಡಿ ಗೆದ್ದಿದ್ದರು. 'ಅಧ್ಯಕ್ಷ', 'ಜಿಗರ್‌ತಾಂಡ' ಸಿನಿಮಾಗಳಲ್ಲಿ ಇಂಥದ್ದೇ ಪಾತ್ರ ಸಿಕ್ಕಿತ್ತು.
ಗೋಪಾಲ ಕೃಷ್ಣ ದೇಶಪಾಂಡೆ ಇತ್ತೀಚೆಗೆ ತಮ್ಮ ಅದ್ಭುತ ನಟನೆಯಿಂದ ಎಲ್ಲಾ ಸಿನಿಮಾಗಳಲ್ಲಿ ಮೋಡಿ ಮಾಡುತ್ತಾ ಬರುತ್ತಿದ್ದಾರೆ. ಮತ್ತೊಮ್ಮೆ 'ನಾಟ್‌ಔಟ್' ಚಿತ್ರದಲ್ಲೂ ತಮ್ಮ ಅನುಭವ ಧಾರೆ ಎರೆದಿದ್ದಾರೆ. ಇನ್ನುಳಿದಂತೆ ರಚನಾ, ಅಜಯ್ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಜಯ್ ನಟನೆಯಲ್ಲಿ ಮತ್ತಷ್ಟು ಪಳಗಬೇಕಿದೆ. ಜುಡಾ ಸ್ಯಾಂಡಿ ಸಂಗೀತ ಥ್ರಿಲ್ಲರ್ ಕಥೆಗೆ ಪೂರಕವಾಗಿದೆ.
ಕೊನೆ ಮಾತು
'ನಾಟ್‌ಔಟ್' ಅದ್ಭುತ ಥ್ರಿಲ್ಲರ್ ಸಿನಿಮಾ ಅಲ್ಲದೇ ಇದ್ದರೂ ನೋಡಿಸಿಕೊಂಡು ಹೋಗುವ ಗುಣವಿದೆ. ಒಂದಷ್ಟೂ ಲಾಜಿಕ್ ಇಲ್ಲದ ದೃಶ್ಯಗಳು ಇವೆ. ಫ್ಯಾಮಿಲಿ ಎರಡು ಗಂಟೆ ಸಿನಿಮಾ ಕೂತು ಸಿನಿಮಾ ಎಂಜಾಯ್ ಮಾಡಬಹುದು. ಸಣ್ಣಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟು ನೋಡಿದರೆ 'ನಾಟ್ ಔಟ್' ಒಮ್ಮೆ ನೋಡಬಹುದಾದ ಸಿನಿಮಾ ಎನ್ನಬಹುದು.


Click it and Unblock the Notifications











