Kantara- 1 Review: ಈಶ್ವರನ ಹೂದೋಟದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಗುಳಿಗ, ಚಾವುಂಡಿ ರುದ್ರ ನರ್ತನ

ಅಂತೂ ಇಂತೂ 'ಕಾಂತಾರ- 1' ಸಿನಿಮಾ ತೆರೆಗಪ್ಪಳಿಸಿದೆ. 3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಇದು. ಅರ್ಥಾತ್ ಆ ಕಥೆಗಿಂತ ಬಹಳ ಹಿಂದಿನ ಕಥೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಒಂದು ದಿನ ಮುನ್ನವೇ ಪೇಯ್ಡ್ ಪ್ರೀಮಿಯರ್ ಶೋಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ.

ರಿಷಬ್ ಶೆಟ್ಟಿ ಅಂಡ್ ಟೀಂ 3 ವರ್ಷಗಳ ಪರಿಶ್ರಮ ಈಗ ತೆರೆಮೇಲೆ ಅನಾವರಣವಾಗಿದೆ. 'ಕಾಂತಾರ- 1' ಸಿನಿಮಾ ನೋಡಿದವರು ಥ್ರಿಲ್ ಆಗಿದ್ದಾರೆ. ತಂಡದ ಪ್ರಯತ್ನಕ್ಕೆ ಬಹುಪರಾಕ್ ಎನ್ನುತ್ತಿದ್ದಾರೆ. ತೆರೆಮೇಲೆ ಜಾದೂ ಸೃಷ್ಟಿಸಿ ರಿಷಬ್ ಶೆಟ್ಟಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಿನಿಮಾ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಗುತ್ತಿದೆ. ಅಷ್ಟಕ್ಕೂ ಸಿನಿಮಾ ಹೇಗಿದೆ? ಕಥೆ ಏನು? ಇಲ್ಲಿದೆ ನೋಡಿ ರಿವ್ಯೂ ರಿಪೋರ್ಟ್.

Rishab Shetty and Rukmini Vasantha starrer Kantara Chapter-1 review in kannada

ಕಾಂತಾರ-1 ಕಥೆ

ಕಾಡುಬೆಟ್ಟು ಶಿವ ಅದೃಶ್ಯನಾಗುವ 'ಕಾಂತಾರ'ದಲ್ಲಿ ಪ್ರೀಕ್ವೆಲ್ ಕಥೆ ಶುರುವಾಗುತ್ತದೆ. ಅಷ್ಟಕ್ಕೂ ಆತ ಅಲ್ಲೇ ಮಾಯವಾಗುವುದು ಯಾಕೆ? ಆ ಜಾಗದ ಹಿನ್ನೆಲೆ ಏನು? ಆ ಭೂಮಿಗಾಗಿ ಹರಿದ ನೆತ್ತರ ಕಥೆಯೇನು? ಅಲ್ಲಿನ ದೈವಗಳ ಮಹಿಮೆ ಎಂಥಾದ್ದು? ಎನ್ನುವ ಕಥೆ 'ಕಾಂತಾರ-1' ಚಿತ್ರದಲ್ಲಿದೆ.

ಕದಂಬರ ಕಾಲದಲ್ಲಿ ಕರಾವಳಿ ಭಾಗದ ಬಾಂಗ್ರಾ ಎಂಬ ಪುಟ್ಟ ಸಾಮಂತ ರಾಜ್ಯ. ಆ ಮನೆತನದ ಅರಸ ಈಶ್ವರನ ಹೂದೋಟ ಕಾಂತಾರದ ಮೇಲೆ ಕಣ್ಣಾಗಿ ಪ್ರಾಣಬಿಡುತ್ತಾನೆ. ಕಾಂತಾರದ ಹೆಸರು ಕೇಳಿದರೆ ರಾಜ ಮನೆತನ ಬೆಚ್ಚಿಬೀಳುತ್ತಿರುತ್ತದೆ. ಆದರೆ ಮುಂದೆ ಆತನ ಮೊಮ್ಮಗ ಕುಲಶೇಖರ(ಗುಲ್ಶನ್ ದೇವಯ್ಯ) ಅಲ್ಲಿಗೆ ಹೋಗುವ ದುಸ್ಸಾಹಸ ಮಾಡುತ್ತಾನೆ. ಅತ್ತ ಕಾಂತಾರದ ರಕ್ಷಕ ಬೆರ್ಮೆ(ರಿಷಬ್ ಶೆಟ್ಟಿ) ಬಾಂಗ್ರಾಗೆ ಕಾಲಿಡುತ್ತಾನೆ. ಅಲ್ಲಿಂದ ಮುಂದೆ ಬಾಂಗ್ರಾ ಹಾಗೂ ಕಾಂತಾರದ ಬುಡಕಟ್ಟು ಜನರ ನಡುವಿನ ಸಂಘರ್ಷ ಇನ್ನುಳಿದ ಕಥೆ. ಇದೆಲ್ಲದರ ನಡುವೆ ಬರುವ ಕಡಪ ದಿಕ್ಕಿನವರ ಕಥೆ ಏನು? ಎನ್ನುವುದನ್ನು ತೆರೆಮೇಲೆ ನೋಡಬೇಕು.

Rating:
3.0/5
Star Cast: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಂ ಮುಂತಾದವರು
Director: ರಿಷಬ್ ಶೆಟ್ಟಿ

ಸಿನಿಮಾ ಹೇಗಿದೆ?

ಯಾವುದೇ ಸಿನಿಮಾ ಹಿಟ್ ಆಗಿಬಿಟ್ಟರೆ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಮಾಡುವುದು ಅಷ್ಟು ಸುಲಭವಲ್ಲ. ಸಹಜವಾಗಿಯೇ ಪ್ರೇಕ್ಷಕರ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೆ ಇರುತ್ತದೆ. ಅದನ್ನು ತಲುಪುವುದು ಅಷ್ಟು ಸಾಮಾನ್ಯದ ಮಾತಲ್ಲ. 'ಕಾಂತಾರ'-1 ವಿಚಾರದಲ್ಲೂ ಇದೇ ಲೆಕ್ಕಾಚಾರ ಇತ್ತು. ಆದರೆ ರಿಷಬ್ ಶೆಟ್ಟಿ ಅಂಡ್ ಟೀಮ್ ಆ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ.

ಒಳ್ಳೆ ಕಥೆ, ಚಿತ್ರಕಥೆ ಬರೆದುಕೊಂಡಿರುವ ರಿಷಬ್ ಶೆಟ್ಟಿ ಅದನ್ನು ಅಷ್ಟೇ ಸೊಗಸಾಗಿ ತೆರೆಗೆ ತಂದಿದ್ದಾರೆ. ರಿಷಬ್ ಕನಸಿಗೆ ಹೊಂಬಾಳೆ ಸಂಸ್ಥೆ ನೀರಿನಂತೆ ಚೆಲ್ಲಿದೆ. ಅದೆಲ್ಲವೂ ತೆರೆಮೇಲೆ ಕಾಣುತ್ತದೆ. ಕಾಂತಾರದ ಕಥೆ ಹೇಳಲು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಕದಂಬರ ಕಾಲದಲ್ಲಿ ಕರಾವಳಿ ಭಾಗದಲ್ಲಿ ಮಸಾಲೆ ಪದಾರ್ಥಗಳ ವ್ಯಾಪಾರದ ವಿಚಾರವನ್ನು ಬಳಸಿಕೊಂಡು ಕರಾವಳಿ ದೈವಗಳ ಹಿನ್ನೆಲೆಮ ನಂಬಿಕೆಯನ್ನು ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ದೊಡ್ಡದೊಂದು ಟ್ವಿಸ್ಟ್ ಇಟ್ಟು ಇಡೀ ಕಥೆಯ ದಿಕ್ಕನೇ ಬದಲಿಸುತ್ತಾರೆ.

Rishab Shetty and Rukmini Vasantha starrer Kantara Chapter-1 review in kannada

'ಕಾಂತಾರ' ಚಿತ್ರದಲ್ಲಿ ತೋರಿಸಿದ್ದ ಗುಳಿಗ ದೈವದ ಆವಾಹನೆ, ಆರ್ಭಟವನ್ನು ರಿಷಬ್ ಈ ಬಾರಿ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಫಸ್ಟ್ ಹಾಫ್‌ನಲ್ಲಿ ನಿಧಾನವಾಗಿ ಕಥೆಗೆ ವೇದಿಕೆ ಸೃಷ್ಟಿಸಿಕೊಳ್ಳುತ್ತಾ ಹೋಗುವ ರಿಷಬ್ ಶೆಟ್ಟಿ ಸೆಕೆಂಡ್ ಹಾಫ್‌ನಲ್ಲಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯುತ್ತಾರೆ. ಕೊನೆಯ ಅರ್ಧ ಗಂಟೆ ಸಿನಿಮಾ ನೋಡುಗರನ್ನು ಕಟ್ಟಿಹಾಕಿ ಬಿಡುತ್ತದೆ. ಮತ್ತೊಮ್ಮೆ ಕ್ಯಾಮರಾ ಹಿಂದೆ ಹಾಗೂ ಕ್ಯಾಮರಾ ಮುಂದೆ ಶೆಟ್ರು ಕಮಾಲ್ ಮಾಡಿದ್ದಾರೆ.

ಇತ್ತೀಚೆಗೆ ಬಂದ ಚಿತ್ರದ ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಸಿನಿಮಾ ಮಾತ್ರ ಎಲ್ಲವೂ ಲ್ಯಾಗ್ ಅನ್ನಿಸೋದಿಲ್ಲ. ಇನ್ನೇನು ಡಲ್ ಆಯ್ತು ಎನ್ನುವ ಸಮಯಕ್ಕೆ ಟ್ವಿಸ್ಟ್ ಕೊಟ್ಟು ನೋಡುಗರನ್ನು ಬೆರಗಾಗಿಸುತ್ತಾ ಹೋಗುತ್ತಾರೆ ರಿಷಬ್ ಶೆಟ್ಟಿ. ಕಾಮಿಡಿ ಕೂಡ ಚೆನ್ನಾಗಿ ವರ್ಕ್ ಆಗಿದೆ. ಕೊನೆಯಲ್ಲಿ ವಾರ್ ಸೀಕ್ವೆನ್ಸ್ ನಡುವೆ ಕೂಡ ಕಾಮಿಡಿ ತರುವ ಸಾಹಸ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ರಾಕೇಶ್ ಶೆಟ್ಟಿ ಕಾಮಿಡಿ ಮಜಾ ಕೊಡುತ್ತದೆ.

ರಿಷಬ್ ಶೆಟ್ಟಿ ವಿಷನ್‌ಗೆ ಅರವಿಂದ್ ಕಶ್ಯಪ್ ಛಾಯಾಗ್ರಹಣ ಹಾಗೂ ಗ್ರಾಫಿಕ್ಸ್ ಸಾಥ್ ಸಿಕ್ಕಿದೆ. ಅದರಲ್ಲೂ ಹೆಬ್ಬುಲಿಯ ದೃಶ್ಯಗಳು ವಾಹ್ ಎನಿಸದೇ ಇರದು. ಇನ್ನು ಆಕ್ಷನ್ ಸನ್ನಿವೇಶಗಳು ಮೈ ಜುಮ್ ಎನಿಸುವಂತಿದೆ. ಮನುಷ್ಯನ ದುರಾಸೆ ಯಾವೆಲ್ಲಾ ಕೆಡುಕುಗಳನ್ನು ಮಾಡಿಸುತ್ತದೆ ಎನ್ನುವುದನ್ನು ಚಿತ್ರದಲ್ಲಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಈ ಚಿತ್ರದಲ್ಲಿ ಕೂಡ ಪ್ರಕೃತಿ ಹಾಗೂ ಮನುಷ್ಯನ ಸಂಘರ್ಷದ ಕಥೆ ಇದೆ. ಅದನ್ನೇ ಬೇರೆ ಪ್ರಪಂಚದಲ್ಲಿ ಹೇಳಲಾಗಿದೆ. ಕಾಂತಾರ ಹಾಗೂ ಬಾಂಗ್ರಾ ನಡುವಿನ ಸಮರ, ನಂಬಿಕೆ ಹಾಗೂ ದ್ರೋಹ, ದೊಡ್ಡವರು- ಸಣ್ಣವರ ನಡುವಿನ ಹೋರಾಟ ಇಲ್ಲಿದೆ.

ಹಾಡುಗಳು ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ಮುಂದೆ ಮ್ಯಾಜಿಕ್ ಮಾಡುವ ಸುಳಿವು ಸಿಕ್ಕಿದೆ. ಇನ್ನು 'ಕರ್ಮ' ಸಾಂಗ್ ಹಾಗೂ 'ವರಾಹರೂಪಂ' ಸಾಂಗ್‌ ಅನ್ನು ಮತ್ತೆ ಬಳಸಿಕೊಂಡು ತಂಡ ಗೆದ್ದಿದೆ. 'ರೆಬಲ್' ಸಾಂಗ್ ಹಾಗೂ 'ಬ್ರಹ್ಮಕಲಶ' ಸಾಂಗ್‌ಗಳನ್ನು ಚಿತ್ರಮಂದಿರಗಳಲ್ಲಿ ಕೇಳುವುದು ದೊಡ್ಡ ಪರದೆಯಲ್ಲಿ ನೋಡುವುದೇ ಚೆಂದ. ಇನ್ನು ಕಾಂತಾರ ಪಾರ್ಟ್- 2 ಬರುವುದು ಕೂಡ ಖಚಿತವಾಗಿದೆ.

ಕಲಾವಿದರ ನಟನೆ

ಚಿತ್ರದಲ್ಲಿ ರಿಷಬ್ ಶೆಟ್ಟಿ ನಟನೆ ನೋಡುತ್ತಿದ್ದರೆ ಮತ್ತೊಂದು ರಾಷ್ಟ್ರ ಪ್ರಶಸ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಷ್ಟರಮಟ್ಟಿಗೆ ಬೆರ್ಮೆ ಪಾತ್ರವನ್ನು ರಿಷಬ್ ಶೆಟ್ಟಿ ಆವರಿಸಿಕೊಂಡಿದ್ದಾರೆ. ಆಕ್ಷನ್ ಸನ್ನಿವೇಶಗಳಲ್ಲಿ ಬಹಳ ರಿಸ್ಕ್ ತೆಗೆದುಕೊಂಡಿರುವುದು ಗೊತ್ತಾಗುತ್ತದೆ. ಇನ್ನು ಗುಳಿಗ, ಚಾವುಂಡಿ ಸನ್ನಿವೇಶಗಳಲ್ಲಿ ಅಂತೂ ಮೈ ಜುಮ್ ಎನಿಸುವಂತೆ ನಟಿಸಿದ್ದಾರೆ. ರುಕ್ಮಿಣಿ ವಸಂತ್‌ಗೆ ಒಳ್ಳೆ ಪಾತ್ರ ಸಿಕ್ಕಿದೆ. ಫಸ್ಟ್ ಹಾಫ್ ನೋಡಿದಾಗ ಇಷ್ಟೇನಾ ಅನಿಸುತ್ತದೆ. ಆದರೆ ಸೆಕೆಂಡ್ ಹಾಫ್‌ನಲ್ಲಿ ಆಕೆಯ ಪಾತ್ರಕ್ಕೆ ದೊಡ್ಡ ಟ್ವಿಸ್ಟ್ ಇದ್ದು ಅದನ್ನು ತೆರೆಮೇಲೆ ನೋಡಬೇಕು. ರಾಜಕುಮಾರಿ ಕನಕವತಿಯಾಗಿ ಸುಂದರವಾಗಿ ಕಾಣುವ ರುಕ್ಮಿಣಿ ಅಷ್ಟೆ ಸೊಗಸಾಗಿ ಪಾತ್ರ ನಿಭಾಯಿಸಿದ್ದಾರೆ.

ಇನ್ನುಳಿದಂತೆ ದುಷ್ಟ ರಾಜಕುಮಾರನಾಗಿ ಗುಲ್ಶನ್ ದೇವಯ್ಯ ನಟನೆ ಚೆನ್ನಾಗಿದೆ. ತೆಲುಗು ನಟ ಜಯರಾಂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಗತಿ ಶೆಟ್ಟಿ ಹಾಗೂ ಅಚ್ಯುತ್‌ ಕುಮಾರ್ ಕೇವಲ ಒಂದೊಂದು ಸನ್ನಿವೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.

ತಾಂತ್ರಿಕವಾಗಿ ಶ್ರೀಮಂತ ಸಿನಿಮಾ

ಟೆಕ್ನಿಕಲಿ 'ಕಾಂತಾರ- 1' ಸಿನಿಮಾ ಅದ್ಭುತ ಎಂದೇ ಹೇಳಬೇಕು. ಕಾಡನ್ನು ಬಹಳ ಸೊಗಸಾಗಿ ಅರವಿಂದ್ ಕಶ್ಯಪ್ ಕಟ್ಟಿಕೊಟ್ಟಿದ್ದಾರೆ. ಭಾರೀ ಸೆಟ್‌ಗಳನ್ನು ಮಾತ್ರವಲ್ಲ ಲೈವ್ ಲೊಕೇಶನ್‌ಗಳಲ್ಲಿ ಕೂಡ ಅವರ ಛಾಯಾಗ್ರಹಣ ಜಾದೂ ಮಾಡುವಂತಿದೆ. ಇನ್ನು ಪ್ರೀಕ್ವೆಲ್‌ನಲ್ಲಿ ಕೂಡ ಅಜನೀಶ್ ಲೋಕನಾಥ್ ಸಂಗೀತ ಹೈಲೆಟ್ ಆಗಿದೆ. ಇಡೀ ಚಿತ್ರಕ್ಕೆ ಮತ್ತೊಂದು ತೂಕ ತಂದುಕೊಡುತ್ತದೆ. ಕೊನೆಯ 30 ನಿಮಿಷ ಅಜನೀಶ್ ಬಿಜಿಎಂ ಕಿಕ್ ಕೊಡುತ್ತದೆ. ಜಾನಪದ ವಾದ್ಯಗಳನ್ನೇ ಬಳಸಿಕೊಂಡು ಸೊಗಸಾಗಿ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಪ್ರಗತಿ ಶೆಟ್ಟಿ ಬಹಳ ಸೊಗಸಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಿ ಗಮನ ಸೆಳೆಯುತ್ತಾರೆ. ಇನ್ನು ನೂರಾರು ಜನರನ್ನು ಬಳಸಿಕೊಂಡು ವಾರ್ ಸೀಕ್ವೆನ್ಸ್ ರೋಚಕವಾಗಿ ಸೆರೆಹಿಡಿಯಲಾಗಿದೆ.

ಹಾಲಿವುಡ್ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್, ಅರ್ಜುನ್ ಮಾಸ್ಟರ್ ಹಾಗೂ ರಾಮ್‌ ಲಕ್ಷ್ಮಣ್ ಮಾಸ್ಟರ್ ಬಹಳ ಅದ್ಭುತವಾಗಿ ಆಕ್ಷನ್ ಸನ್ನಿವೇಶಗಳನ್ನು ಸಂಯೋಜಿಸಿದ್ದಾರೆ. ಇನ್ನು ಸಾಕಷ್ಟು ಕಡೆಗಳಲ್ಲಿ ಗ್ರಾಫಿಕ್ಸ್ ವರ್ಕ್ ಹುಬ್ಬೇರಿಸುವಂತಿದೆ. ಹಲವು ಗ್ರಾಫಿಕ್ಸ್ ಸಂಸ್ಥೆ ಅದಕ್ಕಾಗಿ ಶ್ರಮಿಸಿವೆ. ಎಡಿಟಿಂಗ್ ಚೆನ್ನಾಗಿದೆ. ಕೆಲ ದೃಶ್ಯಗಳನ್ನು ಟ್ರಿಮ್ ಮಾಡಿದ್ರೆ ಸಿನಿಮಾ ಇನ್ನಷ್ಟು ಅದ್ಭುತ ಅನುಭವ ನೀಡುವ ಸಾಧ್ಯತೆ ಇತ್ತು. ಇನ್ನು ಆರ್ಟ್ ವರ್ಕ್ ಕೂಡ ಚೆನ್ನಾಗಿದೆ. ಬಾಂಗ್ರಾ ರಾಜ್ಯ, ದೇವಸ್ಥಾನ, ರಥದ ಸೆಟ್‌ಗಳು ಬಹಳ ಸೊಗಸಾಗಿದೆ.

ಕೊನೆ ಮಾತು

ಎಲ್ಲೆಲ್ಲೂ 'ಕಾಂತಾರ- 1' ಸೆಲೆಬ್ರೇಷನ್ ಜೋರಾಗಿದೆ. ಸಿನಿಮಾ ನೋಡಿದವರು ಫಿದಾ ಆಗಿದ್ದಾರೆ. ಎಲ್ಲಾ ಕಡೆ ಪ್ರೀಮಿಯರ್ ಶೋಗಳು ಹಿಟ್ ಹೌಸ್‌ಫುಲ್ ಆಗಿದೆ. ಸಿನಿಮಾ ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದೆ. ಸಣ್ಣಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟರೆ 'ಕಾಂತಾರ- 1' ಸಿನಿಮಾ ಭರ್ಜರಿ ಮನರಂಜನೆ ನೀಡುವ ಜೊತೆಗೆ ನೋಡುಗರನ್ನು ಬೆರಗಾಗಿಸುತ್ತದೆ. ದಸರಾ ಸಂಭ್ರಮದಲ್ಲಿ ಮಿಸ್ ಮಾಡದೇ ಫ್ಯಾಮಿಲಿ ಸಮೇತ ಸಿನಿಮಾ ನೋಡಿ.

More from Filmibeat

English summary
Rishab shetty and Rukmini vasanth's Kantara-1 movie review report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X