twitter
    For Quick Alerts
    ALLOW NOTIFICATIONS  
    For Daily Alerts

    Kantara ಚಿತ್ರ ವಿಮರ್ಶೆ: ಕಾಂತಾರ – ಭಾವುಕ ಹಾಗೂ ದೈವಿಕ!

    By ಭಾಸ್ಕರ ಬಂಗೇರ
    |

    "ನೀವು ನಮ್ಮ ಮನೆಗೆ ಬರಬಹುದು, ನಾವು ನಿಮ್ಮನೆಗೆ?" ಇದೊಂದೇ ಸಂಭಾಷಣೆಯ ಸಾಲು ಸಾಕು ಈ ಸಿನೆಮಾದಲ್ಲಿ ಆಪ್ತತೆ, ಆರ್ದ್ರತೆಯ ಜೊತೆಗೆ ಅಬ್ಬರ ಕೂಡ ಯಾಕೆ ಜಾಸ್ತಿಯಿದೆ ಎನ್ನಲು. ಇಲ್ಲಿರುವುದು ತಳ ಸಮುದಾಯದ ಒಂದು ತಲೆಮಾರು ಇನ್ನೊಂದಕ್ಕೆ ತಲುಪಿಸಿರುವ ದೈವಿಕ ನಂಬಿಕೆ ಹಾಗು ಕಣ್ಣು ಮುಚ್ಚಿಕೊಂಡು ಒಪ್ಪಿಕೊಂಡಿರುವ ಅಸ್ಪೃಶ್ಯತೆ. ಬಲಿತ ಬಲಿಷ್ಠರನ್ನು ಬಂಡಾಯದ ಕೂಗು ಕಾಡುವಾಗ ಸದ್ದು ಜೋರಾಗೆ ಇರಬೇಕಲ್ಲವೇ.

    ಒಂದು ವಿಚಾರವನ್ನು ಯಾರಿಗೆ ತಲುಪಿಸಬೇಕು ಎನ್ನುವುದಕ್ಕಿಂತ ಹೇಗೆ ಅದನ್ನು ತಲುಪಿಸಬೇಕು ಎನ್ನುವುದು ಕಲೆ. "ಕಾಂತಾರ" ನೆಲಮೂಲದ ನೋವನ್ನು ದಾಖಲೀಕರಣ ಮಾಡಿ ಅದಕ್ಕೊಂದು ತಾರ್ಕಿಕ ಅಂತ್ಯ ಕೊಟ್ಟು, ಪ್ರಶಸ್ತಿ ಬಂದಿದ್ದಕ್ಕೆ ಶುಭಾಶಯಗಳು ಎಂದಷ್ಟೇ ಹೇಳುವ ಸಿನೆಮಾ ಆಗುವ ಸಾಧ್ಯತೆ ಇತ್ತು. ಆದರೆ ಹೇಳ ಬೇಕಾದ್ದನ್ನು ಪ್ರಸ್ತುತ ಪಡಿಸಿರುವ ಪರಿ, ಭಾವನೆಗಳಿಗೆ ಸ್ಥಳೀಯ ಗಂಧ ಮೆತ್ತಿಸಿ ತೆರೆಯ ಮೇಲೆ ಓಡಾಡಿಸುವ ಕುಸುರಿ "ಕಾಂತಾರ" ಸಿನೆಮಾವನ್ನು ಕನ್ನಡ ಚಿತ್ರರಂಗದ ವಿಶೇಷ ಸಿನೆಮಾಗಳ ಸಾಲಿನಲ್ಲಿ ಸೇರಿಸುತ್ತದೆ.

    Kantara Review: ಅಪ್ಪು, ಯಶ್ ಬಿಟ್ಟು ಮೊದಲ ಬಾರಿಗೆ ಬೇರೆಯವರ ಸಿನಿಮಾ ಮಾಡಿ ಗೆದ್ರಾ ಹೊಂಬಾಳೆ? ಹೇಗಿದೆ ಕಾಂತಾರ?Kantara Review: ಅಪ್ಪು, ಯಶ್ ಬಿಟ್ಟು ಮೊದಲ ಬಾರಿಗೆ ಬೇರೆಯವರ ಸಿನಿಮಾ ಮಾಡಿ ಗೆದ್ರಾ ಹೊಂಬಾಳೆ? ಹೇಗಿದೆ ಕಾಂತಾರ?

    ರಿಷಬ್ ಶೆಟ್ಟಿ ಒಬ್ಬ ನಿರ್ದೇಶಕನಾಗಿ ಸಿನೆಮಾದಿಂದ ಸಿನೆಮಾಕ್ಕೆ ಪರಿಪೂರ್ಣತೆಯನ್ನು ಸಾಧಿಸುತ್ತಿರುವ ರೀತಿ ಅಚ್ಚರಿಯಾಗುತ್ತದೆ. ವೈವಿಧ್ಯಮಯ ವಸ್ತು ಹಾಗು ಚಿತ್ರಕತೆಯನ್ನು ಇಟ್ಟುಕೊಂಡು ಸಾಮಾನ್ಯ ನೋಡುಗರ ಜೊತೆಗೆ ರಂಜನೆಗೆ ಕೊರತೆ ಆಗದಂತೆ ಸಂಪರ್ಕ ಸಾಧಿಸುವುದು ಇದೆಯಲ್ಲ ರಿಷಬ್ ಶೆಟ್ಟಿ ನಿರ್ದೇಶಕರಾಗಿ ಮತ್ತೊಂದು ಮಹತ್ತರ ಹಂತ ಏರಿರುವುದಕ್ಕೆ ಸಾಕ್ಷಿ ಈ ಸಿನೆಮಾ.

    Rishab Shetty starrer Kantara movie review by Bhaskar Bhangera

    ಶಿವ ಎನ್ನುವ ಮಾಸ್ ಪಾತ್ರದ ಸಕಲ ಮಸಾಲೆಗಳ ಮಾತು ಹಾಗು ಭೂತ ಕೋಲದ ದೈವ ನುಡಿ ಸಿನೆಮಾ ಮುಗಿದ ಬಹಳ ಹೊತ್ತು ನಮ್ಮ ಕಿವಿಯಲ್ಲಿ ಅನುರಣಿಸುತ್ತಿದೆ. ರಿಷಬ್ ಇಲ್ಲಿಯವರೆಗೆ ನಟಿಸುವ ಎಲ್ಲ ಪಾತ್ರಗಳಿಗಿಂತ ಬಹುಪಟ್ಟು ದೊಡ್ಡ ತೂಕದ ಪಾತ್ರವಿದು.

    ಕೊನೆಯ ಇಪ್ಪತ್ತು ನಿಮಿಷ ರಿಷಬ್ ನಟನಾಗಿ ಎತ್ತುವ ಹಲವು ಅವತಾರಗಳು ಹಾಗು ಅದಕ್ಕೆ ಚಿತ್ರಮಂದಿರದಲ್ಲಿ ಸಿಗುವ ಸಿಳ್ಳೆ ಚಪ್ಪಾಳೆಗಳ ಅನುಭವವೇ ಅದ್ಭುತ. ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ಸಪ್ತಮಿ ಗೌಡ, ಪ್ರಕಾಶ್ ತುಮಿನಾಡು, ದೀಪಕ್ ರೈ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗು ಆ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

    ದೈವ ನುಡಿ ಕೊಡುವಾಗ ಬರುವ ಸಬ್ ಟೈಟಲ್ ಸ್ವಲ್ಪ ದೊಡ್ಡ ಅಕ್ಷರಗಳಲ್ಲಿ ಇರಬೇಕಿತ್ತು ಅನಿಸಿತು. ಕಂಬಳಕ್ಕೆ ಸಿಕ್ಕ ಜಾಗ ಕಡಿಮೆ ಆಯಿತು. ಅರಣ್ಯ ಒತ್ತುವರಿ ಕುರಿತು ಬರುವ ದೃಶ್ಯಗಳು ಇನ್ನಷ್ಟು ಮಾಹಿತಿಪೂರ್ಣ ಆಗಿರಬೇಕಿತ್ತು. ಆಗ ಸರಕಾರ ಎಲ್ಲವನ್ನು ಸರಿ ಮಾಡುವ ನೆಪದಲ್ಲಿ ಒಕ್ಕಲೆಬ್ಬಿಸುತ್ತಿರುವ ಮೂಲವಾಸಿಗಳ ನೋವುಗಳನ್ನು ಪ್ರೇಕ್ಷಕರ ಮುಂದೆ ಹರಡಿಕೊಳ್ಳಲು ಇನ್ನೊಂದೆರಡು ಅಂಗೈ ಅಗಲದ ಬಯಲು ಸಿಗುತ್ತಿತ್ತು. ಜನಪ್ರಿಯ ಶೈಲಿಯಲ್ಲಿ ವಿಚಾರಗಳನ್ನು ಮಂಡಿಸುವಾಗ ಇದನ್ನೆಲ್ಲ ಸೀಮಿತ ಅವಧಿಯಲ್ಲಿ ಹೇಳಿ ಬಿಡುವ ತುರ್ತಿಗೆ ಚಿತ್ರತಂಡ ತಲೆಬಾಗಿರಬಹುದು.

    Kantara movie review

    ಅಜನೀಶ್ ಲೋಕನಾಥ್ ಸಂಗೀತ ಈ ಸಿನೆಮಾದ ಜೀವಾಳ. ಕರಾವಳಿಯ ಪರಿಸರದ ಜನರ ಕಥೆ ಹಾಗು ಭೂತಾರಾಧನೆಯ ನೆರಳಡಿ ಚಿತ್ರಕಥೆ ವಿಸ್ತರಿಸಿಕೊಳ್ಳುವಾಗ ಅದಕ್ಕೆ ತಕ್ಕುದಾದ ಸಂಗೀತ ಸಂಯೋಜಿಸುವ ಅನಿವಾರ್ಯತೆ ಇರುತ್ತದೆ. ಕರಾವಳಿಯ ಜನಪದ ಹಾಡುಗಳ ಬಳಕೆ ಹಾಗು ಅಲ್ಲಿನ ಕಲಾ ತಂಡಗಳನ್ನು ಅಜನೀಶ್ ಬಳಸಿಕೊಂಡಿದ್ದಾರೆ.

    ಪ್ರಮೋದ್ ಮರವಂತೆ ರಚನೆಯ 'ಸಿಂಗಾರದ ಸಿರಿ' ಹಾಡಿನ ರಾಗ ಸಂಯೋಜನೆ ಹಾಗು ಅದರ ಚಿತ್ರೀಕರಣದ ಜೊತೆಗೆ ಒಟ್ಟಾರೆ ಸಿನೆಮಾದ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಈ ನಿಟ್ಟಿನಲ್ಲಿ ಛಾಯಾಗ್ರಾಹಕ ಅರವಿಂದ್ ಕಶ್ಯಪ್, ವಸ್ತ್ರ ವಿನ್ಯಾಸ ಮಾಡಿರುವ ಪ್ರಗತಿ ರಿಷಬ್ ಶೆಟ್ಟಿ ಅಭಿನಂದನಾರ್ಹರು.

    ಧಾರ್ಮಿಕ ನಂಬಿಕೆಗಳು ಸ್ವಂತದ್ದು. ಒಂದು ವಿಶೇಷ ಅನುಭೂತಿ ನೀಡುವ ಸಿನೆಮಾ ಕಾಂತಾರ. ಭಾರತೀಯ ಚಿತ್ರರಂಗ ಖಂಡಿತವಾಗಿಯೂ ಈ ಸಿನೆಮಾದ ಕುರಿತು ಮಾತನಾಡಲಿದೆ. ಪ್ರಶಸ್ತಿಗಳು ಹುಡುಕಿಕೊಂಡು ಬರಲಿವೆ. ಭಾವುಕ-ದೈವಿಕ ಶಿವಲೀಲೆಯನ್ನು ದೊಡ್ಡ ಪರದೆಯ ಮೇಲೆಯೇ ನೋಡಿ.

    English summary
    Rishab Shetty, Sapthami Gowda starrer Kantara Kannada movie review by Film enthusiast, writer Bhaskar Bhangera.
    Friday, September 30, 2022, 10:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X