RRR First Review: ಆರ್‌ಆರ್‌ಆರ್ ಸಿನಿಮಾ ಹೇಗಿದೆ? ಇಲ್ಲಿದೆ ಸಿನಿಮಾದ ಮೊದಲ ವಿಮರ್ಶೆ
RRR ಸಿನಿಮಾದ ಅಧಿಕೃತ ಬಿಡುಗಡೆಗೆ ಇನ್ನೂ ನಾಲ್ಕು ದಿನ ಬಾಕಿ ಇದೆ. ಮಾರ್ಚ್ 25 ರಂದು ಸಿನಿಮಾ ವಿಶ್ವದೆಲ್ಲೆಡೆ ಏಕಕಾಲಕ್ಕೆ ತೆರೆ ಕಾಣಲಿದೆ. ಆದರೆ ಸಿನಿಮಾದ ಮೊದಲ ವಿಮರ್ಶೆ ಈಗಾಗಲೇ ಹೊರ ಬಿದ್ದಿದೆ.
RRR ಸಿನಿಮಾವು ಬಿಡುಗಡೆಗೆ ಮುನ್ನ ಸೆನ್ಸಾರ್ ಪ್ರಮಾಣ ಪತ್ರ ಪಡೆದುಕೊಳ್ಳಲು ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಸಿನಿಮಾವನ್ನು ಸಲ್ಲಿಸಿದೆ. ಅರಬ್ ದೇಶಗಳ ಸಿನಿಮಾ ಸೆನ್ಸಾರ್ ಮಂಡಳಿಗೂ ಸಿನಿಮಾವನ್ನು ಸಲ್ಲಿಸಲಾಗಿದ್ದು, ಅಲ್ಲಿ ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ ಸದಸ್ಯರೊಬ್ಬರು RRR ಸಿನಿಮಾದ ಮೊದಲ ವಿಮರ್ಶೆ ಪ್ರಕಟಿಸಿದ್ದಾರೆ.
ಉಮೈರ್ ಸಂದ್ ಓವರ್‌ಸೀಸ್ ಸೆನ್ಸಾರ್ ಮಂಡಳಿಯ ಸದಸ್ಯರಾಗಿದ್ದು, ಭಾರತೀಯ ಸಿನಿಮಾ ಅದರಲ್ಲಿಯೂ ದಕ್ಷಿಣ ಭಾರತ ಸಿನಿಮಾಗಳ ಬಗ್ಗೆ ಅತೀವ ಆಸಕ್ತಿಯುಳ್ಳ ಇವರು ಬಹುನಿರೀಕ್ಷಿತ ದಕ್ಷಿಣ ಭಾರತ ಸಿನಿಮಾಗಳನ್ನು ವೀಕ್ಷಿಸಿ ಅದರ ಬಗ್ಗೆ ಚುಟುಕು ವಿಮರ್ಶೆಗಳನ್ನು ಬರೆಯುತ್ತಾರೆ.

ಕೆಲವು ದಿನಗಳ ಹಿಂದೆ ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾದ ವಿಮರ್ಶೆ ಬರೆದಿದ್ದು ಉಮೈರ್ ಸಂದ್ ಈಗ 'RRR' ಸಿನಿಮಾ ವೀಕ್ಷಿಸಿ ಆ ಸಿನಿಮಾದ ವಿಮರ್ಶೆಯನ್ನು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
''RRR ಸಿನಿಮಾ ನೋಡಿದ ಬಳಿಕ, ಭಾರತೀಯ ಸಿನಿಮಾಕರ್ಮಿಯೊಬ್ಬ ಇಷ್ಟು ದೊಡ್ಡದಾಗಿ ಯೋಚಿಸಿ ಅದನ್ನು ಸಾಕಾರಗೊಳಿಸಿರುವ ಬಗ್ಗೆ ನಿಮಗೆ ಹೆಮ್ಮೆ ಆಗಲಿದೆ. ಈ ಸಿನಿಮಾವನ್ನು ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಇಂದು ಈ ಸಿನಿಮಾ ಬ್ಲಾಕ್ ಬಸ್ಟರ್ ಆದರೆ ಮುಂದೆ ಈ ಸಿನಿಮಾವನ್ನು 'ಕ್ಲಾಸಿಕ್' ಸಿನಿಮಾ ಆಗಿ ಜನ ನೆನಪಿಟ್ಟುಕೊಳ್ಳಲಿದ್ದಾರೆ. ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ್ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಅಭಿನಯವನ್ನು ಈ ಸಿನಿಮಾದಲ್ಲಿ ನೀಡಿದ್ದಾರೆ. ಇವರಿಬ್ಬರದ್ದೂ ಅತ್ಯದ್ಭುತವಾದ ಜೋಡಿ. ಅಜಯ್ ದೇವಗನ್ ನಿಮಗೆ ಒಳ್ಳೆಯ ಸರ್ಪ್ರೈಸ್ ನೀಡುತ್ತಾರೆ'' ಎಂದು ಸಿನಿಮಾ ಬಗ್ಗೆ ಬರೆದಿದ್ದಾರೆ ಉಮೈರ್ ಸಂದ್.
ಉಮೈರ್ ಸಂದ್ ಈ ಹಿಂದೆ ಹಲವು ಸಿನಿಮಾಗಳಿಗೆ ಹೀಗೆ ಚುಟುಕು ವಿಮರ್ಶೆಗಳನ್ನು ಬರೆದಿದ್ದಾರೆ. 'ಪುಷ್ಪ', 'ರಾಧೆ-ಶ್ಯಾಮ್', 'ವಲಿಮೈ' ಹೀಗೆ ಇತ್ತೀಚೆಗೆ ಬಿಡುಗಡೆ ಆದ ಹಲವು ಸಿನಿಮಾಗಳಿಗೆ ಇವರು ವಿಮರ್ಶೆ ಬರೆದಿದ್ದರು. ಬಹುತೇಕ ಬಾರಿ ಇವರು ವಿಮರ್ಶೆ ನಿಜವೇ ಆಗಿದೆ.
RRR ಸಿನಿಮಾವು ಮಾರ್ಚ್ 25 ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಪ್ರತಿ ಭಾಷೆಯಲ್ಲಿಯೂ ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಅವರುಗಳೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿರುವುದು ವಿಶೇಷ. ಕರ್ನಾಟಕದಲ್ಲೇ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ RRR ಬಿಡುಗಡೆ ಆಗುತ್ತಿದೆ.


Click it and Unblock the Notifications











