twitter
    For Quick Alerts
    ALLOW NOTIFICATIONS  
    For Daily Alerts

    RRR Movie Review: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ

    |

    ಆಕ್ಷನ್, ಭಾವುಕತೆ, ಹಾಸ್ಯ, ಕರುಣೆ, ರೌದ್ರ, ಅಸಹಾಯಕತೆ, ಹತಾಶೆ, ಆಕ್ರೋಶ, ಸಿಟ್ಟು, ಪ್ರೀತಿ, ಸ್ನೇಹ, ದೇಶಪ್ರೇಮ, ತ್ಯಾಗ, ನಂಬಿಕೆ, ನಂಬಿಕೆ ದ್ರೋಹ, ಹಿಂಸೆ, ಮಾನವೀಯತೆ ಎಲ್ಲವನ್ನೂ ಕತೆಯಲ್ಲಿ ಒಂದು ಕ್ರಮದಲ್ಲಿಟ್ಟು ಆ ಕತೆಗೆ ಅದ್ಭುತ ದೃಶ್ಯ ವೈಭವದ ಚೌಕಟ್ಟು ತೊಡಿಸಿದರೆ ಅದೊಂದು ಅದ್ಭುತ ಸಿನಿಮಾ ಆಗಬಹುದಾದರೆ 'RRR' ಆ ಅದ್ಭುತ ಸಿನಿಮಾ.

    'RRR' ಸಿನಿಮಾದ ಪ್ರತಿ ನಿಮಿಷವೂ ರೋಚಕವಾಗಿರುವಂತೆ ನೋಡಿಕೊಂಡಿದ್ದಾರೆ ನಿರ್ದೇಶಕ ರಾಜಮೌಳಿ. ಸಿನಿಮಾದ ಮೊದಲಲ್ಲಿ ಸೀಟಿನ ತುದಿಗೆ ಬಂದು ಕೂರುವ ಪ್ರೇಕ್ಷಕನನ್ನು ಸೀಟಿಗೆ ಒರಗಲು ಬಿಡುವುದೇ ಇಲ್ಲ ರಾಜಮೌಳಿ, ಬದಲಿಗೆ ಸೀಟಿನಿಂದೆದ್ದು ಸೀಟಿ ಹೊಡೆಯುವಂತೆ ಮಾಡಿದ್ದಾರೆ. ರಾಜಮೌಳಿಯನ್ನು ಕಮರ್ಶಿಯಲ್ ಸಿನಿಮಾದ 'ಮಾಸ್ಟರ್' ಎಂದು ಕರೆಯಲಡ್ಡಿಯಿಲ್ಲ.

    RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'

    ಕಮರ್ಶಿಯಲ್ ಸಿನಿಮಾ ಪ್ರಕಾರದಲ್ಲಿ ರಾಜಮೌಳಿ ಅದೆಷ್ಟು ಪಳಗಿಬಿಟ್ಟಿದ್ದಾರೆಂದರೆ ಫೈಟ್ ದೃಶ್ಯದಲ್ಲೂ ಭಾವುಕತೆ ಸ್ಪುರಿಸುವಂತೆ ಮಾಡಬಲ್ಲರು, ಕಮರ್ಶಿಯಲ್ ಸಿನಿಮಾದ ಸಿದ್ಧ ಮಾದರಿಯಾದ ನಾಯಕ-ನಾಯಕಿಯ ಪ್ರೀತಿ-ರೊಮಾನ್ಸ್ ಇಲ್ಲದೆಯೂ ಪ್ರೀತಿಯ ಭಾವ ಪ್ರೇಕ್ಷಕನಿಗೆ ತಟ್ಟುವಂತೆ ಮಾಡಬಲ್ಲರು. ಕರುಣಾಜನಕ ಹಾಡೊಂದರ ಮೂಲಕವೂ ಪ್ರೇಕ್ಷಕನಿಗೆ ಆಕ್ರೋಶದ ಭಾವ ಹುಟ್ಟಿಸಬಲ್ಲರು. ಅಸಾಧ್ಯವೊಂದನ್ನು ತೆರೆಯ ಮೇಲೆ ತೋರಿಸಿಯೂ ಅದನ್ನು ನಿಜವೆಂದು ನಂಬಿಸಿಬಿಡಬಲ್ಲರು ಆ ವ್ಯಕ್ತಿ.

    Rating:
    3.5/5

    ಸಿನಿಮಾದ ಕತೆ ಏನು?

    ಸಿನಿಮಾದ ಕತೆ ಏನು?

    ಸಿನಿಮಾದ ಕತೆ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರದ್ದು, ಸೀತಾರಾಮ ರಾಜು ಬ್ರಿಟೀಷರ ಅಡಿ ಪೊಲೀಸ್ ಅಧಿಕಾರಿ, ಕೋಮರಂ ಭೀಮ್ ಗೋಂಡ ಸಮುದಾಯದ ಕಾವಲುಗಾರ. ಸಿನಿಮಾದ ಕತೆ ಸ್ಥಿತವಾಗಿರುವುದು 1920 ರ ಕಾಲಘಟ್ಟದಲ್ಲಿ. ಬ್ರಿಟೀಷರು ಹೊತ್ತೊಯ್ದ ತನ್ನ ಸಮುದಾಯದ ಬಾಲಕಿಯನ್ನು ಬಿಡಿಸುವ ಪ್ರಯತ್ನದಲ್ಲಿ ಕೋಮರಂ ಭೀಮ್ ಹೊರಟರೆ, ಕಾಡಿನ ಆ ಭೇಟೆಗಾರನನ್ನು ಬಂಧಿಯಾಗಿಸುವುದು ಅಲ್ಲೂರಿ ಸೀತಾರಾಮ ರಾಜು ಗುರಿ. ಇಬ್ಬರದ್ದು ಅಚಲ ಗುರಿ, ತಾವು ನಂಬಿದ ಆದರ್ಶಕ್ಕಾಗಿ ಪ್ರಾಣ ಬೇಕಾದರೂ ತ್ಯಾಗಿಸಬಲ್ಲರು ಮತ್ತೊಬ್ಬರ ಪ್ರಾಣವನ್ನೂ ತೆಗೆಯಬಲ್ಲರು. ಹಾಗಿದ್ದ ಮೇಲೆ ಇವರಿಬ್ಬರ ಹೋರಾಟದಲ್ಲಿ ಗೆಲ್ಲುವರ್ಯಾರು. ಬಲಿಯಾದ ತಮ್ಮ ಗೆಳೆತನವನ್ನು ಅವರು ಉಳಿಸಿಕೊಳ್ಳುವುದು ಹೇಗೆ. ಬ್ರಿಟೀಷರ ವಿರುದ್ಧ ತಿರುಗಿ ಬೀಳುವುದೇಕೆ? ಇತರೆ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸಿನಿಮಾ ನೋಡಬೇಕು.

    ಸ್ಟಾರ್‌ಗಳ ಸಿನಿಮಾ ಅಲ್ಲ, ಸಿನಿಮಾದಲ್ಲಿ ಸ್ಟಾರ್‌ಗಳು!

    ಸ್ಟಾರ್‌ಗಳ ಸಿನಿಮಾ ಅಲ್ಲ, ಸಿನಿಮಾದಲ್ಲಿ ಸ್ಟಾರ್‌ಗಳು!

    ಇಬ್ಬರು ಮೆಗಾ ಸ್ಟಾರ್‌ಗಳನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡಿದರೂ ಕತೆಗೆ ಒಂದಿಷ್ಟು ಕೊಂಕು ತರದಂತೆ ನಿರೂಪಿಸಿದ್ದಾರೆ ರಾಜಮೌಳಿ. ಒಂದು ದೃಶ್ಯದಲ್ಲಿ ಜೂ ಎನ್‌ಟಿಆರ್‌ ಪಾತ್ರದ ಹೆಚ್ಚುಗಾರಿಕೆ ಕಂಡು ಬಂದರೆ ಮರು ದೃಶ್ಯದಲ್ಲಿ ರಾಮ್ ಚರಣ್ ತೇಜ್ ಪಾತ್ರದ ತೂಕ ಎತ್ತರವಾಗಿರುತ್ತದೆ. ಈ 'ಪಾತ್ರ ತೂಕದ' ಏರಿಳಿತದ ಕ್ರಿಯೆ ಬಲವಂತದ್ದಲ್ಲ, ಬದಲಿಗೆ ಕತೆಯಲ್ಲಿಯೇ ಸಹಜವಾಗಿರುವಂತೆ ನೋಡಿಕೊಂಡಿದ್ದಾರೆ ರಾಜಮೌಳಿ. ಹಾಗಾಗಿಯೇ ಇಬ್ಬರು ದೊಡ್ಡ ಸ್ಟಾರ್ ನಟರಿದ್ದರೂ ಇದು ರಾಜಮೌಳಿ ಸಿನಿಮಾ! ಒಂದೊಳ್ಳೆ ಕತೆಯುಳ್ಳ ಸಿನಿಮಾ.

    RRR first half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿRRR first half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿ

    ಕತೆಗಾರನ ಪ್ರತಿಭೆಗೆ ಸಾಕ್ಷಿ

    ಕತೆಗಾರನ ಪ್ರತಿಭೆಗೆ ಸಾಕ್ಷಿ

    ರಾಮ್ ಚರಣ್ ಪಾತ್ರವನ್ನು ಡಿಸೈನ್ ಮಾಡಿರುವ ರೀತಿ ಕತೆಗಾರ ವಿಜಯೇಂದ್ರ ಪ್ರಸಾದ್ ಪ್ರತಿಭೆಗೆ ಸಾಕ್ಷಿ, ಸಿನಿಮಾದ ಆರಂಭದಲ್ಲಿ ರಾಮ್ ಚರಣ್ ಅನ್ನು ಕರುಣಾಹೀನ ಪೊಲೀಸ್ ಅಧಿಕಾರಿಯಂತೆ ತೋರಿಸಲಾಗಿದೆ. ಕೆಲವೊಂದು ದೃಶ್ಯಗಳಲ್ಲಿಯಂತೂ ಖಳನಾಯಕನ ಪಾತ್ರವೆನಿಸುತ್ತದೆ ಆದರೆ ಫ್ಲಾಷ್‌ಬ್ಯಾಕ್ ಬಿಚ್ಚಿಕೊಂಡಾಗ ರಾಮ್ ಚರಣ್ ಪಾತ್ರದ ಮೇಲೆ ಪ್ರೇಕ್ಷಕನಿಗೆ ಗೌರವ ಹೆಚ್ಚಾಗುತ್ತದೆ. ಆರಂಭದಿಂದ ರಾಮ್ ಚರಣ್ ಪಾತ್ರಕ್ಕೆ ನೀಡಲಾಗಿದ್ದ ಮೆದು ನೆಗಟಿವ್ ಶೇಡ್‌ ಅನ್ನು ಸರಿದೂಗಿಸಲೆಂದೋ ಏನೋ ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ಅವರನ್ನು ಅತ್ಯದ್ಭುತವಾಗಿ ಪ್ರೆಸೆಂಟ್ ಮಾಡಲಾಗಿದೆ. ಯಾವುದೇ ನಟನ ಪಾಲಿಗೆ ಡ್ರೀಮ್ ಎಂಟ್ರಿ ಎನ್ನಬಹುದಾದ ಮಾದರಿಯಲ್ಲಿದೆ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಾಮ್ ಚರಣ್ ಎಂಟ್ರಿ. ರಾಮ್ ಚರಣ್ ಪಾತ್ರಕ್ಕೆ ಹೋಲಿಸಿದರೆ ಜೂ.ಎನ್‌ಟಿಆರ್ ಪಾತ್ರ ಹೆಚ್ಚು ಹೀರೋಯಿಕ್ ಮಾದರಿಯಲ್ಲಿದೆ. ಅತ್ಯದ್ಭುತ ಎಂಟ್ರಿ ಸೀನ್ ಜೊತೆಗೆ ನ್ಯಾಯಕ್ಕಾಗಿ ಹೋರಾಡಿದರೂ ದುಷ್ಟರಿಂದ ಅಥವಾ ದುಷ್ಟರ ಪರವಾಗಿರುವವರಿಂದ ಹಿಂಸೆಗೆ ಒಳಪಡುವ ಪ್ರೇಕ್ಷಕರ ಸಹಾನುಭೂತಿ ಗಿಟ್ಟಿಸುವ 'ನಾಯಕ' ಮಾದರಿಯಲ್ಲಿದೆ. ಆದರೆ ರಾಮ್ ಚರಣ್ ಪಾತ್ರದ ಫ್ಲಾಷ್‌ ಬ್ಯಾಕ್ ಬಳಿಕ ಇಬ್ಬರ ಪಾತ್ರಕ್ಕೂ ಸಮಾನ ಗೌರವ ಪ್ರೇಕ್ಷಕನಿಂದ ವ್ಯಕ್ತವಾಗುತ್ತದೆ.

    ಆಲಿಯಾ ಭಟ್‌ಗೆ ಇರುವುದು ಕೆಲವೇ ದೃಶ್ಯ

    ಆಲಿಯಾ ಭಟ್‌ಗೆ ಇರುವುದು ಕೆಲವೇ ದೃಶ್ಯ

    ಸಿನಿಮಾದ ನಾಯಕಿ ಆಲಿಯಾ ಭಟ್‌ ಬರುವುದು ಕೆಲವೇ ಪಾತ್ರಗಳಲ್ಲಿ, ಅವರಿಗಾಗಿ ಇರುವುದು ಒಂದು ಮುಖ್ಯ ದೃಶ್ಯವಷ್ಟೆ. ದ್ವಿತೀಯಾರ್ಧದಲ್ಲಿ ತೆರೆದುಕೊಳ್ಳುವ ಫ್ಲ್ಯಾಷ್‌ಬ್ಯಾಕ್‌ನಲ್ಲಿ ನಟ ಅಜಯ್ ದೇವಗನ್‌ ಕಾಣಿಸಿಕೊಳ್ಳುತ್ತಾರೆ. ಅವರ ಪಾತ್ರ ತೂಕದ್ದಾಗಿದೆ. ಇಬ್ಬರು ನಾಯಕರ ಅಬ್ಬರದ ನಡುವೆಯೂ ಅವರ ಪಾತ್ರ ನೆನಪಿನಲ್ಲಿ ಉಳಿಯುತ್ತದೆ. ಸಮುದ್ರಕಿಣಿ ಸಿನಿಮಾದ ಉದ್ದಕ್ಕೂ ಇದ್ದಾರಾದರೂ ಅವರಿಗೆ ಹೆಚ್ಚಿಗೇನೂ ಕೆಲಸವಿಲ್ಲ. ಸಿನಿಮಾದ ವಿಲನ್ ಎನ್ನಬಹುದಾದ ಸ್ಕಾಟ್ ಪಾತ್ರದಲ್ಲಿ ನಟಿಸಿರುವ ರೇ ಸ್ಟಿವನ್‌ಸನ್ ಹಾಗೂ ಲೇಡಿ ಸ್ಕಾಟ್ ಪಾತ್ರದಲ್ಲಿ ನಟಿಸಿರುವ ಆಲಿಸನ್ ಡೋಲಿ ಚೆನ್ನಾಗಿ ನಟಿಸಿದ್ದಾರೆ. ಸ್ಕಾಟ್ ಪಾತ್ರವಂತೂ ಕೆಲವೆಡೆ ಮಿಂಚುತ್ತದೆ.

    ಸಿನಿಮಾದ ಹಾಡುಗಳು ಅದ್ಭುತವಾಗಿವೆ

    ಸಿನಿಮಾದ ಹಾಡುಗಳು ಅದ್ಭುತವಾಗಿವೆ

    ರಾಜಮೌಳಿ, ಸಿನಿಮಾದ ಕತೆಗೆ ಅದೆಷ್ಟು ನಿಷ್ಟರಾಗಿದ್ದಾರೆಂದರೆ ಸಿನಿಮಾದ ಹಾಡುಗಳು ಸಹ ಕತೆಯಿಂದ ಪ್ರತ್ಯೇಕವಾಗಿ ನಿಲ್ಲುವುದಿಲ್ಲ. ಹಾಡುಗಳು ಸಹ ಸಿನಿಮಾದ ಕತೆಯ ಭಾಗವೇ ಆಗಿವೆ. ಟ್ರೇಲರ್‌ನಲ್ಲಿ ಕಂಡಿದ್ದ ನಾಟು-ನಾಟು, ಸಿನಿಮಾದಲ್ಲಿರುವ ನಾಟು-ನಾಟು ಹಾಡಿನ ಒಂದು ಭಾಗವಷ್ಟೆ. ಪ್ರೇಕ್ಷಕರೆದ್ದು ಕುಣಿಯುವಂತೆ ಮಾಡುತ್ತದೆ ಹಾಡು. ಸಿನಿಮಾದ ದ್ವಿತೀಯಾರ್ಧದಲ್ಲಿ ಬರುವ 'ಕೋಮರಂ ಭೀಮುಡೊ' ಹಾಡು ಅದ್ಭುತವಾಗಿದೆ. ಹಾಡಿನ ಸಾಲುಗಳು, ಕತೆಯಲ್ಲಿ ಹಾಡನ್ನು ಪ್ಲೇಸ್ ಮಾಡಿರುವ ರೀತಿ ಅದ್ಭುತ. ಅಲ್ಲೂರಿ ಸೀತಾರಾಮ ರಾಜು (ರಾಮ್ ಚರಣ್) ತನ್ನ ಆತ್ಮೀಯ ಗೆಳೆಯ ಕೋಮರಂ ಭೀಮ್ (ಜೂ ಎನ್‌ಟಿಆರ್) ಅನ್ನು ನೇಣುಗಂಬಕ್ಕೆ ಕಟ್ಟಿ ಮುಳ್ಳಿನ ಚಾಟಿಯಲ್ಲಿ ಹೊಡೆಯುವಾಗ ಬರುವ ಈ ಹಾಡು ಭಾವುಕವಾಗಿ ತಾಗುತ್ತದೆ.

    ಆಕ್ಷನ್ ದೃಶ್ಯಗಳು ಸಿನಿಮಾದ ಪ್ರಾಣ

    ಆಕ್ಷನ್ ದೃಶ್ಯಗಳು ಸಿನಿಮಾದ ಪ್ರಾಣ

    ಸಿನಿಮಾದ ಆಕ್ಷನ್ ದೃಶ್ಯಗಳು ಅತ್ಯದ್ಭುತ. ಪ್ರೇಕ್ಷಕ ನಿರೀಕ್ಷೆ ಮಾಡಿದ್ದಕ್ಕಿಂತಲೂ ದುಪ್ಪಟ್ಟನ್ನು ರಾಜಮೌಳಿ ಹಾಗೂ ಫೈಟ್ ಮಾಸ್ಟರ್‌ಗಳು ನೀಡಿದ್ದಾರೆ. ಸಾಹಸ ದೃಶ್ಯಗಳು, ಫೈಟ್ ದೃಶ್ಯಗಳು ಸಾಕಷ್ಟಿವೆಯಾದರೂ ಒಂದಕ್ಕಿಂತಲೂ ಒಂದು ಭಿನ್ನವಾಗಿರುವಂತೆ, ರೋಚಕವಾಗಿಯೂ ಇರುವಂತೆ ಜಾಗೃತೆವಹಿಸಲಾಗಿದೆ. ಸಿನಿಮಾದ ಮತ್ತೊಂದು ಪ್ರಮುಖ ಅಂಶ ಕ್ಯಾಮೆರಾ ವರ್ಕ್ ಹಾಗೂ ಎಡಿಟಿಂಗ್. ಸಿನಿಮಾದ ಎಡಿಟಿಂಗ್ ಪ್ರೇಕ್ಷಕನ್ನು ಹಲವೆಡೆ ಚಕಿತಗೊಳಿಸುತ್ತದೆ.

    ಸಿನಿಮಾದ ಋಣಾತ್ಮಕ ಅಂಶಗಳೇನು?

    ಸಿನಿಮಾದ ಋಣಾತ್ಮಕ ಅಂಶಗಳೇನು?

    ಸಿನಿಮಾದಲ್ಲಿ ಕೆಲವು ಋಣಾತ್ಮಕ ಅಂಶಗಳೂ ಇವೆ. ಕೆಲವು ಪಾತ್ರಗಳ ಪ್ರೇಕ್ಷಕನಿಗೆ ಕರುಣೆ ಉಕ್ಕಲೆಂದು ಅನವಶ್ಯಕ ಹಿಂಸೆಯನ್ನು ರಾಜಮೌಳಿ ಬಳಸಿದ್ದಾರೆ. ಉದಾಹರಣೆಗೆ ಕಾರಿಗೆ ಅಡ್ಡ ಬರುವ ಮಹಿಳೆಯನ್ನು ಅಮಾನುಷವಾಗಿ ಹೊಡೆಯುವ ಬ್ರಿಟೀಷ್ ಅಧಿಕಾರಿ, ಬೈಕ್ ರಿಪೇರಿ ಮಾಡಿ ಕೊಟ್ಟ ನಾಯಕನನ್ನು ಸುಖಾ ಸುಮ್ಮನೆ ಹೊಡೆಯುವ ಮತ್ತೊಬ್ಬ ಬ್ರಿಟೀಷ್ ಅಧಿಕಾರಿ ಇನ್ನು ಕೆಲವನ್ನು ಉದಾಹರಣೆಯಾಗಿ ನೀಡಬಹುದು. ಜೊತೆಗೆ, ಸಿನಿಮಾಕ್ಕೆ ಒಂದು 'ಹ್ಯಾಪಿ ಎಂಡಿಂಗ್' ನೀಡಲು ಆತುರತೆ ತೋರಿರುವ ರಾಜಮೌಳಿ ಕೆಲವು ತರ್ಕವನ್ನು ಮಿಸ್ ಮಾಡಿದ್ದಾರೆ. ಕೋಟೆಯನ್ನು ಉರುಳಿಸಿದರೂ ಅದರಲ್ಲಿಯೇ ಇದ್ದ ಜೆನ್ನಿ ಪಾರಾಗಿ ಬರುವುದು ಹೇಗೆ ಗೊತ್ತಾಗುವುದಿಲ್ಲ. 'RRR' ಸಿನಿಮಾದ 'ಹ್ಯಾಪಿ -ಎಂಡಿಂಗ್' 70-80ರ ದಶಕದ ಸಿನಿಮಾಗಳನ್ನು ನೆನಪಿಸುತ್ತದೆ, ಕ್ಲೀಷೆ ಎನಿಸುತ್ತದೆ. ಆದರೆ ಒಟ್ಟಾರೆ ಸಿನಿಮಾ ನೀಡುವ ರೋಚಕ ಅನುಭವದ ಮುಂದೆ ಇವೆಲ್ಲ ಬಹಳ ಗೌಣ. ಒಟ್ಟಾರೆ ಹೇಳುವುದಾದರೆ ರಾಜಮೌಳಿಗೆ ಕರ್ಮಿಶಿಯಲ್ ಸಿನಿಮಾ ಕಟ್ಟುವ ಕಲೆ ಸಿದ್ಧಿಸಿಬಿಟ್ಟಿದೆ. 'ಬಾಹುಬಲಿ'ಯಂಥಹಾ ಸಿನಿಮಾ ನೀಡಿದ ಮೇಲೂ ಅದೇ ಮಾದರಿಯ ಯಶಸ್ಸನ್ನು ರಾಜಮೌಳಿ ಗಳಿಸುವುದು ಅಸಾಧ್ಯವೆಂದು ಕೆಲವರ ಅನುಮಾನವನ್ನು 'RRR' ಮೂಲಕ ಸುಳ್ಳು ಮಾಡಲಿದ್ದಾರೆ ರಾಜಮೌಳಿ.

    English summary
    Jr NTR, Ram Charan, Alia Bhatt, Ajay Devgan starrer RRR Movie Review and Rating in Kannada. Movie directed by SS Rajamouli.
    Friday, March 25, 2022, 12:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X