Don't Miss!
- News
ಜನರ ಆಕ್ರೋಶಕ್ಕೆ ಮಣಿದ ಸರ್ಕಾರ: ನೇಪಾಳದಲ್ಲಿ ಇಳಿಯಿತು ಪೆಟ್ರೋಲ್, ಡೀಸೆಲ್ ಬೆಲೆ
- Sports
Eng vs NZ 3rd Test: ಪಂದ್ಯಕ್ಕೆ ಮಳೆ ಕಾಟ, ಸಂಕಷ್ಟದಲ್ಲಿ ನ್ಯೂಜಿಲೆಂಡ್
- Technology
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
- Finance
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮೇಲೆ ದಂಡ ವಿಧಿಸಿದ ಆರ್ಬಿಐ
- Lifestyle
18 ವರ್ಷಗಳ ಬಳಿಕ ಬರಿಗಣ್ಣಿಗೆ ಗೋಚರಿಸುತ್ತಿದೆ 5 ಗ್ರಹಗಳ ಸಂಯೋಗದ ಅಪರೂಪದ ದೃಶ್ಯ: ನೋಡಲು ಮಿಸ್ ಮಾಡದಿರಿ
- Automobiles
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
Virata Parvam Movie Review: 'ವಿರಾಟ ಪರ್ವಂ': ನಕ್ಸಲ್ ಬಂದೂಕು ಮೀರಿ ಆವರಿಸಿಕೊಳ್ಳುವ 'ವೆನ್ನೆಲ'
ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ ನಟಿಸಿರುವ ತೆಲುಗು ಸಿನಿಮಾ 'ವಿರಾಟ ಪರ್ವಂ' ಹಲವು ಕಾರಣಗಳಿಗೆ ಚರ್ಚೆಯಲ್ಲಿದೆ. ಸಿನಿಮಾ ಇಂದು ಬಿಡುಗಡೆ ಆಗಿದ್ದು, ನಕ್ಸಲ್ ಕತೆಯ ಹಿನ್ನೆಲೆಯಲ್ಲಿನ ಈ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿದೆ.
ಸಿನಿಮಾದ ಕತೆ ನಡೆಯುವುದು 1990 ರಲ್ಲಿ ಹಳ್ಳಿಗಾಡಿನ ಯುವತಿ ವೆನ್ನೆಲ ನಕ್ಸಲ್ ನಾಯಕ ರವನ್ನನ ಕವಿತೆಗಳನ್ನು ಓದಿ ಪ್ರಭಾವಿತಳಾಗಿ ಆತನ ಮೇಲೆ ಪ್ರೇಮ ಬೆಳೆಸಿಕೊಳ್ಳುತ್ತಾಳೆ. ಆತನನ್ನು ಭೇಟಿಯಾಗಿ, ಆತನೊಟ್ಟಿಗೆ ಜೀವನ ಸಾಗಿಸಲು ಮನೆ ಬಿಟ್ಟು ಹೊರಡುತ್ತಾಳೆ. ಆಕೆ ರವನ್ನನನ್ನು ಭೇಟಿ ಆಗುತ್ತಾಳಾ? ಈ ಪಯಣದಲ್ಲಿ ಆಕೆ ಎದುರಿಸುವ ಸವಾಲುಗಳೆಂಥಹವು? ವೆನ್ನೆಲ ಪ್ರೇಮವನ್ನು ರವನ್ನ ಒಪ್ಪಿಕೊಳ್ಳುತ್ತಾನಾ? ಅವರಿಬ್ಬರ ಪ್ರೇಮ ಸಫಲವಾಗುತ್ತಾ?ಇದನ್ನೆಲ್ಲ ಸಿನಿಮಾ ನೋಡಿಯೇ ತಿಳಿಯಬೇಕು.
Sai Pallavi: ಚಿತ್ರರಂಗ ತೊರೆದರೇ 'ಪ್ರೇಮಂ' ಸುಂದರಿ ಸಾಯಿ ಪಲ್ಲವಿ!
ನಕ್ಸಲ್ ವಾದದಂಥಹಾ ಅಭಿಪ್ರಾಯಭೇದಗಳಿರುವ 'ಸೋಷಿಯೋ ಪೋಲಿಟಿಕಲ್ ಸಬ್ಜೆಕ್ಟ್' ಅನ್ನು ಆರಿಸಿಕೊಂಡಾಗ ನಿರ್ದೇಶಕನಿಗೆ ಕರಾರುವಾಕ್ ಖಚಿತತೆ ಇರಬೇಕಾಗುತ್ತದೆ. ನಕ್ಸಲಿಸಂ ಅನ್ನು ಹತ್ತಿರದಿಂದ ನೋಡಿದ್ದರೂ ನಿರ್ದೇಶಕ ವೇಣು ಉಡುಗಲ ಅಲ್ಲಲ್ಲಿ ಗೊಂದಲಕ್ಕೆ ಬಿದ್ದಿದ್ದಾರೆ ಎನಿಸುತ್ತದೆ. ಅಥವಾ ಪ್ರೇಮಕತೆ ಹಾಗೂ ನಕ್ಸಲ್ ಕತೆಯನ್ನು ಒಂದೇ ಸೂತ್ರದಲ್ಲಿ ಬಂಧಿಸುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಹಾಗಾಗಿಯೇ ಕೆಲವೆಡೆ ಸಿನಿಮಾ ತುಸು ಸ್ಲೋ ಎನಿಸುತ್ತದೆ, ಕೆಲವೆಡೆ ಅದ್ಭುತ ವೇಗ ಪಡೆದುಕೊಳ್ಳುತ್ತದೆ. ಆದರೆ ಇಡೀಯ ಸಿನಿಮಾವನ್ನು ಒಟ್ಟಾರೆಯಾಗಿ ಅಳೆದಾಗ ಸಿನಿಮಾ ಚೆನ್ನಾಗಿದೆ ಎಂದೇ ಹೇಳಬೇಕಾಗುತ್ತದೆ.

ಮೀರಾ-ಕೃಷ್ಣನ ಪ್ರೇಮಕತೆ
ರವನನ್ನ ಸಾಹಿತ್ಯ ಓದಿ ವೆನ್ನೆಲಳ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ, ಅಭಿಮಾನ ಪ್ರೇಮವಾಗಿ ಬದಲಾಗುವುದನ್ನು ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕ. ವ್ಯಕ್ತಿಯನ್ನು ನೋಡದೆ, ಕೇವಲ ಆತ ಬರೆದ ಸಾಹಿತ್ಯ ಓದಿ ಪ್ರೇಮದಲ್ಲಿ ಬೀಳುವ ಹುಡುಗಿಯ ವ್ಯಕ್ತಿತ್ವವನ್ನು ಜಸ್ಟಿಫೈ ಮಾಡಲು ಮೀರಾಬಾಯಿ-ಕೃಷ್ಣನ ಪ್ರೇಮಕತೆಯನ್ನು ಉದಾಹರಣೆಯಾಗಿ ಬಳಸಿಕೊಂಡಿರುವುದು ಚೆನ್ನಾಗಿದೆ. ವೆನ್ನೆಲ ಪಾತ್ರದಲ್ಲಿನ ಅಮಾಯಕತ್ವ, ಪ್ರೇಮದ ಉತ್ಕಟತೆ, ಹುಚ್ಚುತನ, ಮೊಂಡುತನ, ಪ್ರೀತಿ, ಕರುಣೆಯನ್ನು ಚೆನ್ನಾಗಿ ಪ್ರೊಜೆಕ್ಟ್ ಮಾಡಿದ್ದಾರೆ.

ಕೊರತೆ ಎನ್ನಿಸುವುದು ನಕ್ಸಲರ ಕತಾ ಎಳೆಯಲ್ಲಿ
ಆದರೆ ಕೊರತೆ ಎನ್ನಿಸುವುದು ನಕ್ಸಲರ ಕತಾ ಎಳೆಯಲ್ಲಿ. ನಕ್ಸಲ್ ವಾದಕ್ಕೆ ಹಲವು ಕೋನಗಳಿವೆ. ಸೀಮಿತ ದೃಶ್ಯಗಳಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವುದು ಸುಲಭದ ಮಾತಲ್ಲ. ಹಾಗಾಗಿ ಪ್ರೇಕ್ಷಕ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿಲ್ಲ ನಕ್ಸಲ್ ಕತೆಯ ಎಳೆ. ನಕ್ಸಲ್ ವಿಷಯವನ್ನು ಆಳವಾಗಿ ಎಕ್ಸ್‌ಪ್ಲೋರ್ ಮಾಡಲು ಸ್ಪೇಸ್ ಅನ್ನು ಕತೆಯಲ್ಲಿ ಸೃಷ್ಟಿಸಿಕೊಂಡಿಲ್ಲ ನಿರ್ದೇಶಕ. ಅಸಲಿಗೆ, ಸಿನಿಮಾ ಮುಗಿದ ಮೇಲೆ ನೆನಪುಳಿಯುವುದು ವೆನ್ನೆಲ ಆಕೆಯ ತಂದೆಯೊಂದಿಗಿನ ಭಾವುಕ ದೃಶ್ಯಗಳು, ರಾವನ್ನ ಆತನ ತಾಯಿಯೊಂದಿಗಿನ ಭಾವುಕ ದೃಶ್ಯ, ವೆನ್ನೆಲಳ ಉತ್ಕಟ ಪ್ರೇಮ, ಆಕೆಯ ಪಯಣ ಹಾಗೂ ಸಾಯಿ ಪಲ್ಲವಿ.

ಸಾಯಿ ಪಲ್ಲವಿ ನಟನೆ ಸಿನಿಮಾದ ಹೈಲೆಟ್
'ವಿರಾಟ ಪರ್ವ' ಸಿನಿಮಾ ವೆನ್ನೆಲಳ ಕತೆ. ಸಿನಿಮಾದ ಕೇಂದ್ರ ಬಿಂದುವೇ ಆಕೆ. ವೆನ್ನೆಲ ಪಾತ್ರದಲ್ಲಿ ಸಾಯಿ ಪಲ್ಲವಿ ಅದ್ಭುತವಾಗಿ ನಟಿಸಿದ್ದಾರೆ. ಕೆಲವು ಕ್ಲೋಸ್ ಅಪ್ ದೃಶ್ಯಗಳಲ್ಲಿ ಆಕೆಯ ಭಾವ ನೇರವಾಗಿ ಪ್ರೇಕ್ಷಕನ ಎದೆಗೆ ಇಳಿಯುತ್ತದೆ. ಆದರೆ ಕೆಲವು ದೃಶ್ಯಗಳಲ್ಲಿ ಪಾತ್ರದ ಭಾವ ತೀವ್ರತೆ ಪ್ರೇಕ್ಷನನ್ನು ತಲುಪುವ ಮುಂಚೆಯೇ ಬೇರೆ ದೃಶ್ಯ ಬದಲಾಗಿ ಬಿಡುತ್ತದೆ. ಕೆಲವು ದೃಶ್ಯಗಳಲ್ಲಿ ಇನ್ನಷ್ಟು ಭಾವ ತೀವ್ರತೆಯ ಅವಶ್ಯಕತೆ ಇತ್ತೇನೋ ಎನಿಸುವಂತೆ ಫ್ಲ್ಯಾಟ್ ಆಗಿಸಿಬಿಟ್ಟಿದ್ದಾರೆ ನಿರ್ದೇಶಕ. ಕ್ಲೈಮ್ಯಾಕ್ಸ್‌ನಲ್ಲಿ ಸಹ ವೆನ್ನೆಲಗೆ ತನ್ನ ಪ್ರೇಮವನ್ನು ವಿವರಿಸುವ ಅವಕಾಶ ಸೂಕ್ತವಾಗಿ ದೊರಕುವುದೇ ಇಲ್ಲ, ರಾಣಾ ದಗ್ಗುಬಾಟಿಗೆ ಸಹ. ಆದರೆ ಕ್ಲೈಮ್ಯಾಕ್ಸ್‌ನಲ್ಲಿರುವ ಬರುವ ಸಾಯಿ ಪಲ್ಲವಿಯ ಸ್ವಗತ ಭಾವುಕವಾಗಿದೆ.

ಎಲ್ಲ ನಟರ ನಟನೆ ಚೆನ್ನಾಗಿದೆ
ಸಿನಿಮಾದ ಪ್ರಮುಖ ಅಂಶ ನಟರ ನಟನೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿ ಪಾತ್ರವೇ ತಾನಾಗಿದ್ದಾರೆ. ರಾಣಾ ಸಹ ಆಂಗ್ರಿ ಲುಕ್‌ನಲ್ಲಿ ಅದ್ಭುತವಾಗಿ ಕಾಣುತ್ತಾರೆ. ಪ್ರಿಯಾಮಣಿ ಹಾಗೂ ಪ್ರಿಯಾ ಚಂದ್ರ ಪಾತ್ರಕ್ಕೆ ಇನ್ನಷ್ಟು ಪ್ರಾಮುಖ್ಯತೆ ಇದ್ದಿದ್ದರೆ ಚೆನ್ನಾಗಿತ್ತು. ಜರೀನಾ ವಹಾಬ್, ನಂದಿತಾ ದಾಸ್ ಪಾತ್ರಗಳು ಚೆನ್ನಾಗಿವೆ.

ಸಂಭಾಷಣೆ ಚೆನ್ನಾಗಿದೆ
ನಿರ್ದೇಶಕ ವೇಣು ಉಡುಗಲಗೆ ಇದು ಎರಡನೇ ಸಿನಿಮಾ. ಸಿನಿಮಾದ ಬರವಣಿಗೆ ಚೆನ್ನಾಗಿದೆ. ಆದರೆ ಅವರು ಅಂದುಕೊಂಡಿದ್ದನ್ನು ಪರಿಣಾಮಕಾರಿ ಪ್ರೆಸೆಂಟ್ ಮಾಡುವಲ್ಲಿ ಅಲ್ಲಲ್ಲಿ ಎಡವಿದ್ದಾರೆ. ಸಿನಿಮಾದ ಆರಂಭದಲ್ಲಿ ನಡೆವ ಘಟನೆಗಳು ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಕತೆಯ ಹೊಳವನ್ನು ಬದಲಾಯಿಸುವಂತಾಗುವುದು ಜಾಣ ಬರವಣೆಗೆ. ಸಿನಿಮಾದ ಸಂಭಾಷಣೆಯನ್ನೂ ಅದ್ಭುತವಾಗಿ ಬರೆದಿದ್ದಾರೆ. ಕೆಲವು ದೃಶ್ಯಗಳು ಪೊಯೆಟಿಕ್ ಎನಿಸುತ್ತವೆ.

ತೆಲಂಗಾಣದ ಮಣ್ಣಿನಿಂದ ಹಿಂಡಿ ತೆಗೆದ ಹಾಡುಗಳು
ಸಿನಿಮಾದ ಸಂಗೀತವೂ ಅದ್ಭುತವಾಗಿದೆ. ಸಂಗೀತ ನಿರ್ದೇಶಕ ಸುರೇಶ್ ಬೊಬ್ಬಿಲಿ, ಕೆಲವು ಹಾಡುಗಳನ್ನಂತೂ ತೆಲಂಗಾಣದ ಮಣ್ಣಿನಿಂದಲೇ ಹಿಂಡಿ ತೆಗೆದಂತಿದೆ. ಕ್ಯಾಮೆರಾ ಕೆಲಸ ಮಾಡಿರುವ ಡ್ಯಾನಿ ಲೋಪೇಜ್ ಹಾಗೂ ದಿವಾಕರ್ ಮಣಿ ಕೆಲವು ಸುಂದರ ದೃಶ್ಯಗಳನ್ನು ಕಂಪೋಸ್ ಮಾಡಿದ್ದಾರೆ. ಆಕ್ಷನ್ ದೃಶ್ಯಗಳು ಇನ್ನಷ್ಟು ಇಂಟೆನ್ಸ್ ಆಗಿರಬಹುದಿತ್ತು ಎನಿಸುತ್ತದೆ. ಒಟ್ಟಾರೆ 'ವಿರಾಟ ಪರ್ವಂ' ಒಂದೊಳ್ಳೆಯ ಸಿನಿಮಾ. ಒಮ್ಮೆ ನೋಡಲಡ್ಡಿಯಿಲ್ಲ. ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ.