Salaar Review: ಪ್ರಶಾಂತ್ ನೀಲ್ ಕಲ್ಪನೆಯ ಭಯಾನಕ ಲೋಕದಲ್ಲಿ ಪ್ರಭಾಸ್ 'ಉಗ್ರಾ'ವತಾರ
ಪ್ರೇಕ್ಷಕರ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ತೆರೆಮೇಲೆ ಡೈನೋಸಾರ್ ಬಂದಾಗಿದೆ. ದೇವ-ವರದರಾಜ ಮನ್ನಾರ್ ದೋಸ್ತಿ, ಕುಸ್ತಿಯ ಕಥೆ ಅನಾವರಣವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ಆರ್ಭಟ ಹೇಗಿರುತ್ತದೆ? ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಕನ್ನಡದ 'ಉಗ್ರಂ'ಗೂ ತೆಲುಗಿನ 'ಸಲಾರ್' ಇರುವ ವ್ಯತ್ಯಾಸ, ಸಾಮ್ಯತೆ ಏನು ಎನ್ನುವುದು ಬಹಿರಂಗವಾಗಿದೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ 'ಸಲಾರ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿದೆ. ಶಾರುಖ್ ಖಾನ್ 'ಡಂಕಿ' ಎದುರು ನೀಲ್ 'ಸಲಾರ್' ಆರ್ಭಟ ಜೋರಾಗಿದೆ. ಟೈಟಲ್‌ನಿಂದಲೇ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ 'ಸಲಾರ್' ಸಿನಿಮಾ 'ಉಗ್ರಂ' ರೀಮೇಕ್ ಹೌದೋ ಅಲ್ಲವೋ ಎನ್ನುವ ಚರ್ಚೆ ಹುಟ್ಟುಕ್ಕಿದ್ದು ಸುಳ್ಳಲ್ಲ. ಟ್ರೈಲರ್‌ನಲ್ಲಿ ಅದಕ್ಕೆ ಸುಳಿವು ಸಿಕ್ಕಿಬಿಟ್ಟಿತ್ತು. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಈ ವಿಚಾರವನ್ನು ಒಪ್ಪಿಕೊಂಡು ಪ್ರಶಾಂತ್ ನೀಲ್ ಯ್ಯೆಂಟಿಸಿಪೆಟರಿ ಬೇಲ್ ತಗೊಂಡುಬಿಟ್ಟಿದ್ದರು.

ಪೋಸ್ಟರ್, ಟೀಸರ್, ಟ್ರೇಲರ್, ಸಾಂಗ್ ಹೀಗೆ ಹಂತ ಹಂತವಾಗಿ ಕುತೂಹಲ ಹೆಚ್ಚಿಸುತ್ತಾ ಬಂದಿದ್ದ 'ಸಲಾರ್' ಸಿನಿಮಾ ಕೊನೆಗೂ ರಿಲೀಸ್ ಆಗಿದೆ. ಚಿತ್ರಕ್ಕೆ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಕೂಡ ಸಿಕ್ಕಿದೆ. ಹಾಗಾದರೆ 'ಸಲಾರ್' ಸಿನಿಮಾ ಹೇಗಿದೆ? ಕಥೆಯೇನು? 'ಉಗ್ರಂ' ನೋಡಿದವರಿಗೂ 'ಸಲಾರ್' ಇಷ್ಟವಾಗುತ್ತಾ? ಪ್ರಶಾಂತ್ ನೀಲ್- ಪ್ರಭಾಸ್ ಡೆಡ್ಲಿ ಕಾಂಬೋ ವರ್ಕ್ ಆಯ್ತಾ? ರಿವ್ಯೂ ರಿಪೋರ್ಟ್ ಮುಂದೆ ಓದಿ..
ಸಲಾರ್ ಕಥೆಯೇನು?
ವರದರಾಜ ಮನ್ನಾರ್(ಪೃಥ್ವಿರಾಜ್ ಸುಕುಮಾರನ್) ದೇವ(ಪ್ರಭಾಸ್)ಗೆ ಬಾಲ್ಯದ ಗೆಳೆಯ. ಕಾರಣಾಂತರಗಳಿಂದ ದೇವ ಖಾನ್ಸರ್ ಬಿಟ್ಟು ತಾಯಿ ಜೊತೆ ಅಸ್ಸಾಂನಲ್ಲಿ ನೆಲೆಸಿರುತ್ತಾನೆ. ತಾಯಿಗೆ ಕೊಟ್ಟ ಮಾತಿನಂತೆ ಆತ ಆಯುಧ ಹಿಡಿಯಲ್ಲ. ಯಾರ ಮೇಲೂ ಕೋಪಗೊಳ್ಳದೇ ತಪ್ಪು ಕಂಡಾಗ ಒಳಗೊಳಗೆ ಕುದಿಯುತ್ತಿರುತ್ತಾನೆ. ಹೀಗಿರುವಾಗ ಆದ್ಯ(ಶೃತಿಹಾಸನ್) ವಿದೇಶದಿಂದ ಕೊಲ್ಕತ್ತಾಗೆ ಬರ್ತಾಳೆ.
ಆದ್ಯಗೆ ಪ್ರಾಣಹಾನಿ ಇದೆ ಎಂದು ಆಕೆ ತಂದೆ ತನ್ನ ಸಹಾಯಕನ ಮೂಲಕ ಅಸ್ಸಾಂನಲ್ಲಿರುವ ದೇವ ಬಳಿಗೆ ಕಳುಹಿಸುತ್ತಾನೆ. ಇಷ್ಟಕ್ಕೂ ಆದ್ಯ ಯಾರು? ಆಕೆಗೆ ಇರುವ ಕಂಟಕ ಏನು? ಆಕೆಯನ್ನು ದೇವ ಯಾಕೆ ರಕ್ಷಿಸುತ್ತಾನೆ? ಇದೆಲ್ಲದರ ನಡುವೆ ದೇವ ಹಾಗೂ ವರದ ನಡುವೆ ವೈಮನಸ್ಸು ಮೂಡಲು ಕಾರಣ ಏನು? ಕಥೆಯ ಕೇಂದ್ರಬಿಂದು ಖಾನ್ಸರ್ ಹಿನ್ನೆಲೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ನೀವು 'ಸಲಾರ್' ಸಿನಿಮಾ ನೋಡಬೇಕು.
ಸಿನಿಮಾ ಹೇಗಿದೆ?
ಪ್ರಶಾಂತ್ ನೀಲ್ ಈಗಾಗಲೇ ಹೇಳಿದಂತೆ ಇದು 'ಉಗ್ರಂ' ಚಿತ್ರ ಕಥೆನೇ. ಆದರೆ ಅದನ್ನು ಬಹಳ ದೊಡ್ಡಮಟ್ಟದಲ್ಲಿ ಉಗ್ರಂನ ಮರೆಸುವಂತೆ ಹೊಸ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಅದರಲ್ಲಿ ನೀಲ್ ಅಂತೂ ಇಂತೂ ದಡ ಸೇರಿದ್ದಾರೆ. ಗುಜರಾಜ್, ಪಾಕಿಸ್ತಾನ ನಡುವೆ ಖಾನ್ಸರ್ ಎನ್ನುವ ಒಂದು ಪ್ರದೇಶ ಇದೆ. ಆ ಜಾಗ ಯಾವುದೇ ದೇಶಕ್ಕೆ ಸೇರಲ್ಲ. ಅಲ್ಲಿ ರಾಜ ಮನ್ನಾರ್ ಆಳ್ವಿಕೆ ನಡೆಸುತ್ತಾನೆ. 101 ಭಾಗಗಳಾಗಿ ವಿಭಾಗಸಲ್ಪಟ್ಟ ಆ ಪ್ರದೇಶದಲ್ಲಿ 3 ಬೇರೆ ಬೇರೆ ಸಮುದಾಯದ ಜನರಿದ್ದಾರೆ. ಅವರಲ್ಲೇ ರಾಜನ ಕುರ್ಚಿಗಾಗಿ ಆಂತರ್ಯುದ್ಧಗಳು, ರಾಜಕೀಯ, ಕುತಂತ್ರ ನಡೆಯುತ್ತಿರುತ್ತದೆ. ಅಲ್ಲಿ ದೇವ, ವರದ ಎನ್ನುವ ಇಬ್ಬರು ಸ್ನೇಹಿತರ ಕಥೆಯನ್ನು ಹೇಳಲಾಗಿದೆ.
ರಾಜಮನ್ನಾರ್ ಬಳಿಕ ಆತನ ಮಗ ವರದನಿಗೆ ಆ ಕುರ್ಚಿ ಸಿಗಬೇಕು ಎನ್ನುವುದು ಕೆಲವರ ವಾದ. ಆದರೆ ವರದನನ್ನೇ ಇಲ್ಲವಾಗಿಸಿ ಚುಕ್ಕಾಣಿ ತಾವು ಹಿಡಿಯಬೇಕು ಎಂದು ಹವಣಿಸುವವರ ದೊಡ್ಡ ದಂಡೇ ಇದೆ. ಸ್ನೇಹಿತನಿಗಾಗಿ ಏಣು ಬೇಕಾದರೂ ಮಾಡಲು ಸಿದ್ಧನಾಗಿರುವ ದೇವ, ಆ ಕುರ್ಚಿಯನ್ನು ವರದನಿಗೆ ಧಕ್ಕಿಸಿಕೊಡುತ್ತಾನಾ? ಇಲ್ವಾ? ಎಂದು ಕಥೆ ಮುಂದುವರೆಯುತ್ತದೆ.
ಕತೆ ಯಾವುದೇ ಒಂದು ಸ್ಥಳದಲ್ಲಿ ನಡೆಯಲ್ಲ. ಕೊಲ್ಕತ್ತಾ, ಹೈದರಾಬಾದ್, ಗುಜರಾತ್, ಬರ್ಮಾ ಗಡಿ ಹೀಗೆ ಎಲ್ಲೆಲ್ಲೋ ಸುತ್ತಾಡಿಸುತ್ತದೆ. 'ಉಗ್ರಂ' ಕಥೆಯನ್ನು 'KGF' ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಂತೆ 'ಸಲಾರ್' ಭಾಸವಾಗುತ್ತದೆ. ಆದರೆ ಎರಡೂ ನನ್ನದೇ ಸಿನಿಮಾ. ಹಾಗಾಗಿ ನನ್ನ ಸಿನಿಮಾದಲ್ಲಿರುವುದು ನಾನು ಯಾಕೆ ತೋರಿಸಬಾರದು ಎಂದು ಈಗಾಗಲೇ ನೀಲ್ ಹೇಳಿದ್ದಾರೆ. ಹಾಗಾಗಿ ಆ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ. ಯಾವ ಸನ್ನಿವೇಶ ಆದಮೇಲೆ ಯಾವ ಸನ್ನಿವೇಶ. ಹತ್ತು ಹಲವು ಪಾತ್ರಗಳು, ಆ ಪಾತ್ರಗಳ ನಡುವಿನ ಸಂಬಂಧ ಏನು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ. ಇದು ನೀಲ್ ಹಿಂದಿನ ಸಿನಿಮಾಗಳಲ್ಲಿ ಕೆಲವರ ಅನುಭವಕ್ಕೆ ಬಂದಿತ್ತು.
ಸಾಕಷ್ಟು ಎಲಿವೇಶನ್ ಸೀನ್ಸ್ 'ಸಲಾರ್' ಚಿತ್ರದಲ್ಲಿದೆ. ಡಾರ್ಕ್ ಶೇಡ್, ಸಿನಿಮಾಟೋಗ್ರಫಿ, ಪಾತ್ರಗಳ ಆರ್ಭಟ, ರವಿಬಸ್ರೂರು ಹಿನ್ನೆಲೆ ಸಂಗೀತ ಎಲ್ಲವೂ ನೀಲ್ ಸಿನಿಮಾಗಳನ್ನೇ ಕಣ್ಮುಂದೆ ತರುತ್ತವೆ. ಎಮೋಷನ್ ಮಾತ್ರ ಅಷ್ಟಾಗಿ ವರ್ಕ್ ಆಗಲಿಲ್ಲ ಎಂದೇ ಹೇಳಬೇಕು. ಇನ್ನುಳಿದಂತೆ ಆಕ್ಷನ್ ಸನ್ನಿವೇಶಗಳಲ್ಲಿ ಪ್ರಭಾಸ್ ಕಟೌಟ್‌ನ ನೀಲ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ಪ್ರೀ ಕ್ಲೈಮ್ಯಾಕ್ಸ್ ಫೈಟ್, ಕಾಳಿ ಸನ್ನಿಧಿ ಎದುರು ನಡೆಯುವ ಫೈಟ್ ಮಾಸ್ ಪ್ರೇಕ್ಷಕರಿಗೆ ಹಬ್ಬದೂಟ. ಕ್ಲೈಮ್ಯಾಕ್ಸ್‌ನಲ್ಲಿ ಪ್ರಭಾಸ್, ಪೃಥ್ವಿ ಇಬ್ಬರೂ ರಾಕ್ಷಸರಂತೆ ಅಬ್ಬರಿಸಿ ಹುಬ್ಬೇರಿಸುತ್ತಾರೆ.
ಮೊದಲಾರ್ಧ ಅದ್ಭುತ ಎನಿಸಿದರೂ ದ್ವಿತಿಯಾರ್ಧ ಸಂಪೂರ್ಣ ತೃಪ್ತಿ ಭಾವ ಒದಗಿಸುವುದಿಲ್ಲ. ಯಾಕಂದರೆ ಕಥೆ ಕೂಡ ಸಂಪೂರ್ಣವಾಗಿ ಮುಗಿದಿಲ್ಲ. ಪ್ರೇಕ್ಷಕರ ಸಾಕಷ್ಟು ಪ್ರಶ್ನೆಗಳಿಗೆ 2ನೇ ಭಾಗದಲ್ಲಿ ಉತ್ತರ ಸಿಗಬೇಕಿದೆ. ಆ ಭಾಗವನ್ನು ನೋಡಲೇಬೇಕು.
ಕಲಾವಿದರ ಅಭಿನಯ
ಪ್ರಭಾಸ್ ಹಾಗೂ ಪೃಥ್ವಿರಾಜ್ ತಮ್ಮ ತಮ್ಮ ಪಾತ್ರಗಳನ್ನು ಆವರಿಸಿಕೊಂಡಿದ್ದಾರೆ. ಪ್ರಭಾಸ್ ಲುಕ್ ಚೆನ್ನಾಗಿದೆ. ಆರ್ಭಟದ ಸನ್ನಿವೇಶಗಳಲ್ಲಿ ಬಾಹುಬಲಿ ಸಿನಿಮಾವನ್ನು ನೆನಪಾಗುತ್ತದೆ. ಪೃಥ್ವಿರಾಜ್ ಪಾತ್ರವನ್ನು ಈ ಚಿತ್ರದಲ್ಲಿ ಅಷ್ಟಾಗಿ ತೋರಿಸಿಲ್ಲ. ಕ್ಲೈಮ್ಯಾಕ್ಸ್ ವೇಳೆಗೆ ಕೊಂಚ ಮಟ್ಟಿಗೆ ಅಬ್ಬರಿಸುತ್ತಾರೆ. ಶೃತಿ ಹಾಸನ್ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ಇನ್ನುಳಿದಂತೆ ಜಗಪತಿ ಬಾಬು, ಈಶ್ವರಿ ರಾವ್, ಪ್ರಮೋದ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಭಾರವ ಆಗಿ ಬಾಬಿ ಸಿಂಹ ಪಾತ್ರ ಕಥೆಗೆ ತಿರುವು ಕೊಡುತ್ತದೆ. ಇನ್ನುಳಿದಂತೆ ಸಾಕಷ್ಟು ಪಾತ್ರಗಳಿದ್ದು ಅದನ್ನೆಲ್ಲಾ ನೆನಪಿಟ್ಟುಕೊಂಡು ಹೇಳುವುದು ಕಷ್ಟ.
ಟೆಕ್ನಿಕಲಿ ಸಿನಿಮಾ ಹೇಗಿದೆ?
ಕಂಟೆಂಟ್ ವಿಚಾರದಲ್ಲಿ ತಪ್ಪುಗಳನ್ನು ಹುಕುಕಬಹುದು. ಆದರೆ ಟೆಕ್ನಿಕಲಿ ಸಿನಿಮಾ ಅದ್ಭುತ ಎಂದೇ ಹೇಳಬೇಕು. ಖಾನ್ಸರ್ ನಗರವನ್ನು ತೋರಿಸಿರುವ ಪರಿಯೇ ಅದ್ಭುತ ಎನಿಸುತ್ತದೆ. ಭಾರೀ ಸೆಟ್‌ಗಳನ್ನು ಹಾಕಿ, ಮತ್ತಷ್ಟು ಗ್ರಾಫಿಕ್ಸ್ ಮಾಡಿ ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ ಪ್ರಶಾಂತ್ ನೀಲ್. ಭುವನ್ ಸಿನಿಮಾಟೋಗ್ರಫಿ ಅದಕ್ಕೆ ದೊಡ್ಡ ಶಕ್ತಿ ತುಂಬಿದೆ. ರವಿಬಸ್ರೂರು ಬಿಜಿಎಂ ಚಿತ್ರಕ್ಕೆ ತಕ್ಕನಾಗಿದೆ. ಕಮರ್ಷಿಯಲ್ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ನೀಲ್ ಬೆರಗು ಮೂಡಿಸುತ್ತಾರೆ.
ಮೈನಸ್ ಪಾಯಿಂಟ್ಸ್
ಅತಿಯಾದ ವೈಲೆನ್ಸ್ ಚಿತ್ರದ ಮೈನಸ್ ಪಾಯಿಂಟ್‌ಗಳಲ್ಲಿ ಒಂದು. ಚಿತ್ರತಂಡ ಒಪ್ಪಿ 'ಎ' ಸರ್ಟಿಫಿಕೇಟ್ ಪಡೆದುಕೊಂಡಿದೆ. ಹಾಗಾಗಿ ಇದು ಮಾಸ್ ಪ್ರೇಕ್ಷಕರಿಗೆ ಹೇಳಿಮಾಡಿಸಿದ ಸಿನಿಮಾ ಎನ್ನಬಹುದು. ಕನ್‌ಫ್ಯೂಸ್ ಆಗುವಂತೆ ಸನ್ನಿವೇಶಗಳನ್ನು ಹಿಂದು ಮುಂದು ಮಾಡಿ ಜೋಡಿಸಿರುವುದು ಸಾಮಾನ್ಯ ಪ್ರೇಕ್ಷಕರು ಅರಗಿಸಿಕೊಳ್ಳುವುದು ಕಷ್ಟ.
ಕೊನೆ ಮಾತು
ಲಾಜಿಕ್‌ಗಳನ್ನು ಪಕ್ಕಕ್ಕಿಟ್ಟು ನೀಲ್ ಪ್ರಪಂಚದೊಳಗೆ ಪ್ರವೇಶಿಸಿದರೆ 'ಸಲಾರ್' ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುತ್ತದೆ. 'ಉಗ್ರಂ' ಕಥೆಯ ಅಸ್ತಿಪಂಜರಕ್ಕೆ ಹೊಸದಾಗಿ ಮಾಂಸ, 'ರಕ್ತ' ಸೇರಿಸಿ 'ಸಲಾರ್' ಚಿತ್ರಕ್ಕೆ ಪ್ರಶಾಂತ್ ನೀಲ್ ಜೀವ ತುಂಬಿದ್ದಾರೆ. ಅದಕ್ಕೆ ಹೈವೋಲ್ಟೇಜ್ ಆಕ್ಷನ್ ಪೋಷಾಕು ತೊಡಿಸಿ ಪ್ರೇಕ್ಷಕರ ಮುಂದೆ ನಿಲ್ಲಿಸಿದ್ದಾರೆ. ಮಾಸ್ ಪ್ರೇಕ್ಷಕರು ಮಿಸ್ ಮಾಡ್ಕೊಬೇಡಿ. ಉಳಿದವರು ಯೋಚಿಸಿ.


Click it and Unblock the Notifications











