twitter
    For Quick Alerts
    ALLOW NOTIFICATIONS  
    For Daily Alerts

    'ಸಲಗ' First Day First Show Review: ಮೊದಲ ಪ್ರಯತ್ನದಲ್ಲಿ ದುನಿಯಾ ವಿಜಯ್‌ ಗೆದ್ದರಾ?

    |

    ರೌಡಿಸಂ, ಭೂಗತ ಜಗತ್ತಿಗೆ ಸಂಬಂಧಿಸಿದ ಹಲವು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಗಳಿಸಿರುವ ದುನಿಯಾ ವಿಜಯ್, ತಾವು ನಿರ್ದೇಶಿಸುತ್ತಿರುವ ಮೊದಲ ಸಿನಿಮಾಕ್ಕೆ ಅದೇ ರೌಡಿಸಂ ಕತೆ ಆಯ್ಕೆ ಮಾಡಿಕೊಂಡಾಗಲೇ, ತಾವು ಈಗಾಗಲೇ ನಟಿಸಿರುವ ರೌಡಿಸಂ ಸಿನಿಮಾಗಳಿಗಿಂತಲೂ ಹೊಸದೇನನ್ನು ವಿಜಯ್ ಕೊಡಬಲ್ಲರು ಎಂಬ ಕುತೂಹಲ ಮೂಡಿತ್ತು. ಆದರೆ ದುನಿಯಾ ವಿಜಯ್, ಅದೇ ರೌಡಿಸಂ ಕತೆಗೆ ಕಚ್ಚಾತನದ ಟಚ್ ನೀಡಿ ಹೊಸದಾಗಿ ಪ್ರೆಸೆಂಟ್ ಮಾಡಿದ್ದಾರೆ. ನಿರ್ದೇಶಕರಾಗಿ ದುನಿಯಾ ವಿಜಯ್‌ ಮೇಲೆ ನಿರೀಕ್ಷೆ ಇಡಬಹುದು ಎಂಬ ಭಾವವನ್ನು ಸಿನಿಮಾ ಪ್ರೇಮಿಗಳಲ್ಲಿ ಮೂಡಿಸಲು ಯಶಸ್ವಿಯಾಗಿದ್ದಾರೆ.

    Recommended Video

    ಸಲಗ ಸಿನಿಮಾ ಹೇಗಿದೆ ? ಇಲ್ಲಿದೆ ಸಿನಿಮಾ ರಿವೀವ್

    'ಸಲಗ' ಹೆಸರಿನ ರೌಡಿಯೊಬ್ಬ ತನ್ನ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿ ಕೊಲ್ಲಲು ಹೊರಟಿದ್ದಾನೆ. ಅವನಿಗೆ ಅವನಂಥೆಯೇ ಖಡಕ್ ಆಗಿರುವ ಪೊಲೀಸ್ ಅಧಿಕಾರಿಯೊಬ್ಬ ಎದುರಾಗುತ್ತಾನೆ. ಈ ರೌಡಿ-ಪೊಲೀಸ್ ಆಟದಲ್ಲಿ ಜಯ ಯಾರಿಗೆ? ಎದುರಾಳಿಗಳನ್ನು ಕೊಲ್ಲಲು ಸಲಗನಿಗೆ ಇರುವ ಕಾರಣಗಳೇನು? 'ಸಲಗ' ಯಶಸ್ವಿಯಾಗುತ್ತಾನಾ? ಸಲಗನನ್ನು ಪೊಲೀಸ್ ಅಧಿಕಾರಿ ತಡೆಯುತ್ತಾನಾ? ಇವು 'ಸಲಗ' ಸಿನಿಮಾದ ಔಟ್‌ಲೈನ್‌ಗಳು.

    Rating:
    3.0/5

    ದುನಿಯಾ ವಿಜಯ್ ನಿರ್ದೇಶಕರಾಗಿ ಗೆದ್ದಿರುವುದು ಸಿನಿಮಾದ ಪಾತ್ರಗಳನ್ನು ಚೆನ್ನಾಗಿ ದುಡಿಸಿಕೊಳ್ಳುವ ಮೂಲಕ. ಪಾತ್ರಗಳನ್ನು ಒಂದಕ್ಕಿಂತ ಒಂದನ್ನು ಭಿನ್ನವಾಗಿಸಿ ಎಲ್ಲ ಪಾತ್ರಗಳಿಗೂ ಸಮಾನ ಅವಕಾಶ ನೀಡಿದ್ದಾರೆ. ಸಿನಿಮಾದ ಸಣ್ಣ-ಪುಟ್ಟ ಪಾತ್ರಗಳೂ ನಾಯಕನ ಮಾದರಿ ಖಡಕ್ ಡೈಲಾಗ್ ಉದುರಿಸುತ್ತವೆ. ಚೇಸ್ ಮಾಡುತ್ತವೆ, ಕತ್ತಿ ಬೀಸುತ್ತವೆ. ಆಯಾ ಪಾತ್ರಗಳಿಗೆ ಸಲ್ಲಬೇಕಾದ ನ್ಯಾಯವನ್ನು ನಿರ್ದೇಶಕ ದುನಿಯಾ ವಿಜಯ್ ನೀಡಿದ್ದಾರೆ.

    ದುನಿಯಾ ವಿಜಯ್ ನಿರ್ದೇಶಕನಾಗಿ ಕತೆಯನ್ನು ಸಾಧ್ಯವಾದಷ್ಟು ಕಚ್ಚಾ ಮಾದರಿಯಲ್ಲಿ ಹೇಳಲು ಯತ್ನಿಸಿದ್ದಾರೆ. ಸೊಂಟದ ಕೆಳಗಿನ ಭಾಷೆ, ಕೆಟ್ಟ ಬೈಗುಳಗಳು ಸಿನಿಮಾದಲ್ಲಿ ಸಾಕಷ್ಟು ಬಳಕೆಯಾಗಿವೆ. ಬೆಂಗಳೂರಿನಲ್ಲಿ ಜೀವಂತವಿರುವ ಭೂಗತ ಲೋಕದ ಒಂದು ಪಾರ್ಶವನ್ನು ಸಾಧ್ಯವಾದಷ್ಟು ನಿಜಕ್ಕೆ ಹತ್ತಿರದ ಸ್ವರೂಪದಲ್ಲಿಯೇ ತೋರುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನದ ಭಾಗವಾಗಿಯೇ ಸೊಂಟದ ಕೆಳಗಿನ ಭಾಷೆಯ ಪ್ರಯೋಗ ಹೆಚ್ಚಾಗಿಯೇ ಆಗಿದೆ. ಸಿನಿಮಾದಲ್ಲಿ ರಕ್ತ ಧಾರೆಯಾಗಿ ಹರಿದಿದೆ. ಮರಣೋತ್ತರ ಪರೀಕ್ಷೆ ಮಾಡುವ ದೃಶ್ಯಗಳು ಇವೆ ಆದರೆ ಪ್ರೇಕ್ಷಕನ ಕಣ್ಣಿನ ಹಿತದೃಷ್ಟಿಯಿಂದ ಅವನ್ನು ಬ್ಲರ್ ಮಾಡಲಾಗಿದೆ. ಸಿನಿಮಾದ ಈ ಕಚ್ಚಾತನದ ಕಾರಣದಿಂದ ಸಿನಿಮಾಕ್ಕೆ 'ಎ' ಸರ್ಟಿಫಿಕೇಟ್ ನೀಡಲಾಗಿದೆ.

    ನಿಯಂತ್ರಣ ಹೇರಿಕೊಂಡಿದ್ದಾರೆ ವಿಜಯ್

    ನಿಯಂತ್ರಣ ಹೇರಿಕೊಂಡಿದ್ದಾರೆ ವಿಜಯ್

    ಕತೆಯ ಮೇಲೆ ದುನಿಯಾ ವಿಜಯ್ ಹಿಡಿತ ಇರಿಸಿಕೊಂಡಿದ್ದಾರೆ. ತಾವೇ ನಿರ್ದೇಶಕನಾಗಿದ್ದರೂ ತಮ್ಮ ಪಾತ್ರದ ಮೇಲೆಯೂ ನಿಯಂತ್ರಣ ಹೇರಿದ್ದಾರೆ. ಭೂಗತ ಕತೆಯುಳ್ಳ ಸಿನಿಮಾಗಳಲ್ಲಿ ನಾಯಕನನ್ನು ಉದಾರಿಯೆಂದೂ, ಮಹಾನ್ ದಾನಿಯೆಂದು, ಮಹಾನ್ ಒಳ್ಳೆಯವನೆಂದೂ, ಪರಸೇವಕನೆಂದು ಬಿಂಬಿಸುವ ಯತ್ನಗಳು ಹಿಂದಿನ ಹಲವು ರೌಡಿಸಂ ಸಿನಿಮಾಗಳಲ್ಲಿ ಆಗಿವೆ. ವಿಲನ್ ಪಾತ್ರಗಳ ಮೂಲಕವೂ ನಾಯಕನ ಗುಣಗಾನ ಮಾಡಿಸಲಾಗುತ್ತದೆ. ಇಲ್ಲಿ ಆ ಪ್ರಯತ್ನವನ್ನು ದುನಿಯಾ ವಿಜಯ್ ಮಾಡಿಲ್ಲ. ಸಣ್ಣ-ಪುಟ್ಟ ಪಾತ್ರಗಳು ದುನಿಯಾ ವಿಜಯ್ ನಿರ್ವಹಿಸುವ ಪಾತ್ರವನ್ನು ಕೆಟ್ಟದಾಗಿ ಬೈದುಕೊಳ್ಳುತ್ತವೆ, ಸಲಗನನ್ನು, ಇತರ ಪಾತ್ರಗಳು ತಮ್ಮ ಎದುರಾಳಿಯೆಂದು ನೋಡುತ್ತವೆಯೇ ಹೊರತು ನಾಯಕನಾಗಿ ಅಲ್ಲ. ಹಾಗೆಂದು ನಾಯಕ ಪಾತ್ರಕ್ಕೆ ಬಿಲ್ಡಪ್‌ಗಳೇ ಇಲ್ಲವೆಂದೇನೂ ಇಲ್ಲ. ದುನಿಯಾ ವಿಜಯ್ ತಮ್ಮ ಪಾತ್ರಕ್ಕೆ ಅಗತ್ಯದಷ್ಟು ಬಿಲ್ಡಪ್‌ಗಳನ್ನು ಕೊಟ್ಟುಕೊಂಡಿದ್ದಾರೆ. ಹಾಗೆಯೇ ಇತರ ಪಾತ್ರಗಳಿಗೂ ಕತೆಯ ಅನುಸಾರವಾಗಿ ಪ್ರಾಮುಖ್ಯತೆ ನೀಡಿದ್ದಾರೆ.

    ಪೊಲೀಸರ ಹುಸಿ ಹೀರೋಗಿರಿ ಬಗ್ಗೆ ಪ್ರಶ್ನೆ

    ಪೊಲೀಸರ ಹುಸಿ ಹೀರೋಗಿರಿ ಬಗ್ಗೆ ಪ್ರಶ್ನೆ

    ಸಿನಿಮಾದ ಮೂಲಕ ಕೆಲ ಸಾಮಾಜಿಕ ವಿಷಯಗಳನ್ನು ಮುಟ್ಟುವ ಯತ್ನವನ್ನು ವಿಜಯ್ ಮಾಡಿದ್ದಾರೆ. ನಕಲಿ ಎನ್‌ಕೌಂಟರ್‌ಗಳು, ಕಾರಾಗೃಹ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ. ಪೊಲೀಸರ ಹೀರೋಗಿರಿ ಯತ್ನಗಳು, ಪರೇಡ್ ಹೆಸರಲ್ಲಿ ಮಾಧ್ಯಮಗಳ ಮುಂದೆ ಪೊಲೀಸರು ನಡೆಸುವ ಹೀರೋಗಿರಿ ಹೀಗೆ ಇನ್ನೂ ಕೆಲವು ವಿಷಯಗಳನ್ನು ವಿಜಯ್ ಚರ್ಚಸಿದ್ದಾರೆ. ಈ ದೃಶ್ಯಗಳು ಸಿನಿಮಾದ ಕತೆಯಿಂದ ಹೊರಗೆ ನಿಲ್ಲುತ್ತವೆ ಎಂಬ ಕೊರತೆ ಇದೆಯಾದರೂ ಪೊಲೀಸ್ ವ್ಯವಸ್ಥೆಯಲ್ಲಿನ ಹುಳುಕು ತೋರುವ ಪ್ರಯತ್ನ ಮಾಡಿದ ವಿಜಯ್ ಧೈರ್ಯ ಮೆಚ್ಚಲೇ ಬೇಕಾಗುತ್ತದೆ. ಹಾಗೆಂದು ಸಿನಿಮಾ ಮೂಲಕ ವಿಜಯ್ ರೌಡಿಗಳ ಪರವಹಿಸಿದ್ದಾರೆಂದೂ ಇಲ್ಲ. ಎರಡನ್ನೂ ಬ್ಯಾಲೆನ್ಸ್ ಮಾಡುವ ಯತ್ನ ಮಾಡಿದ್ದಾರೆ.

    ಮಾಸ್ತಿಯವರ ಸಂಭಾಷಣೆಗಳು ಸಿನಿಮಾದ ಹೈಲೈಟ್

    ಮಾಸ್ತಿಯವರ ಸಂಭಾಷಣೆಗಳು ಸಿನಿಮಾದ ಹೈಲೈಟ್

    ಸಿನಿಮಾದ ಪ್ರಮುಖ ಅಂಶ ಸಂಭಾಷಣೆ. ಮಾಸ್ತಿಯವರ ಸಂಭಾಷಣೆಗಳು ಪವರ್‌ಫುಲ್ ಆಗಿವೆ. ಬಹುಕಾಲ ನೆನಪುಳಿಯುವ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಗುಣವುಳ್ಳ ಕೆಲವು ಸಂಭಾಷಣೆಗಳು ಸಿನಿಮಾದಲ್ಲಿವೆ. ಸಿನಿಮಾದ ನಟನೆಯ ವಿಷಯಕ್ಕೆ ಬಂದರೆ ಎಲ್ಲರಿಗೂ ಒಳ್ಳೆಯ ಅಂಕಗಳೇ ಸಿಗುತ್ತವೆ. ವಿಜಿ ಚೆನ್ನಾಗಿ ನಟಿಸಿದ್ದಾರೆ. ಡಾಲಿ ಧನಂಜಯ್ ವಿಜಿಗೆ ಕಠಿಣ ಪೈಪೋಟಿ ನೀಡಿದ್ದಾರೆ. ನಾಯಕಿ ಸಂಜನಾ ಆನಂದ್ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಕಾಕ್ರೊಚ್ ಸುಧಿ ಚೆನ್ನಾಗಿ ನಟಿಸಿದ್ದಾರೆ. ಅವರ ಪಾತ್ರ ಪೋಷಣೆ ಚೆನ್ನಾಗಿದೆ ಆದರೆ ಸಿನಿಮಾ ಮುಗಿಯುವ ಬಹು ಸಮಯದ ಮುಂಚೆಯೇ ಅವರ ಪಾತ್ರ ಕಣ್ಮರೆಯಾಗಿಬಿಡುತ್ತದೆ. ಸಿನಿಮಾದ ಹಾಡುಗಳು ಈಗಾಗಲೇ ಯೂಟ್ಯೂಬ್‌ನಲ್ಲಿ ಹಿಟ್ ಆಗಿವೆ. ಚರಣ್ ರಾಜ್ ನೀಡಿರುವ ಹಿನ್ನೆಲೆ ಸಂಗೀತ ಸಿನಿಮಾದ ದೃಶ್ಯಗಳಿಗೆ ಇನ್ನಷ್ಟು ತೀವ್ರತೆ ಒದಗಿಸಿವೆ. ಸಿನಿಮಾಟೊಗ್ರಾಫರ್ ಶಿವ ಸೇನಾ ಸಹ ಅಭಿನಂದನಾರ್ಹರು.

    ಸಿನಿಮಾ ಯಾರಿಗೆ ಇಷ್ಟವಾಗಬಹುದು?

    ಸಿನಿಮಾ ಯಾರಿಗೆ ಇಷ್ಟವಾಗಬಹುದು?

    ಸಿನಿಮಾಗಳ ಮೂಲಕ ಆದರ್ಶಗಳನ್ನು, ಸಂದೇಶಗಳನ್ನು ಬಯಸುವ ಪ್ರೇಕ್ಷಕರಿಗೆ ಈ ಸಿನಿಮಾ ಖಂಡಿತ ಹಿಡಿಸಲಾರದು. ಆದರೆ ಪಕ್ಕಾ ಮನೊರಂಜನೆ ಬಯಸುವವರಿಗೆ, ಸಿನಿಮಾ ಮೂಲಕ ನಿರ್ದೇಶಕ ಕಟ್ಟಿ ಕೊಡುತ್ತಿರುವ ಕತೆಯನ್ನು ಪ್ರಾಮಾಣಿಕವಾಗಿ ಮಂಡಿಸಿದರೆ ಸಾಕು ಎಂದುಕೊಳ್ಳುವ ಪ್ರೇಕ್ಷಕರಿಗೆ ಸಿನಿಮಾ ನಿರಾಸೆ ಮಾಡುವುದಿಲ್ಲ.

    ದುನಿಯಾ ವಿಜಯ್‌ ನಿರ್ದೇಶನದ ಮೇಲೆ ನಿರೀಕ್ಷೆ ಇಡಬಹುದು

    ದುನಿಯಾ ವಿಜಯ್‌ ನಿರ್ದೇಶನದ ಮೇಲೆ ನಿರೀಕ್ಷೆ ಇಡಬಹುದು

    ಈಗಾಗಲೇ ಹಲವಾರು ರೌಡಿಸಂ ಸಿನಿಮಾಗಳು ಕನ್ನಡದಲ್ಲಿ ಬಂದು ಹೋಗಿವೆ. ದುನಿಯಾ ವಿಜಯ್ ತಮ್ಮ ಬಿಗಿಯಾದ ನಿರ್ದೇಶಕತನದಿಂದ, 'ಸಲಗ' ಮೂರರಲ್ಲಿ ಮತ್ತೊಂದು ರೌಡಿಸಂ ಸಿನಿಮಾ ಆಗಿಬಿಡುವ ಅಪಾಯದಿಂದ ತಪ್ಪಿಸಿದ್ದಾರೆ. ಸಿನಿಮಾವನ್ನು 'ನೋಡೆಬಲ್' ಆಗಿಸಿದ್ದಾರೆ. ನಿರ್ದೇಶಕರಾಗಿ ಮೊದಲ ಪ್ರಯತ್ನದಲ್ಲಿ ದುನಿಯಾ ವಿಜಯ್‌ ಗೆದ್ದಿದ್ದಾರೆಂದು ಹೇಳಬಹುದು. ನಾಯಕನ ವೈಭವೀಕರಣಕ್ಕಿಂತಲೂ ಕತೆಗೆ ಹೆಚ್ಚು ನಿಷ್ಟರಾಗಿ ಸಿನಿಮಾ ಮಾಡಿದರೆ ಕೆಲವು ಒಳ್ಳೆಯ ಸಿನಿಮಾಗಳನ್ನು ದುನಿಯಾ ವಿಜಯ್‌ರಿಂದ ನಿರೀಕ್ಷಿಸಬಹುದು.

    English summary
    Salaga movie first day first show review: Duniya Vijay commendable debut as director. Duniya Vijay delvers rowdyism movie with raw touch.
    Thursday, October 14, 2021, 16:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X