»   » ಸ್ವಲ್ಪ ಅಡ್ಜೆಸ್ಟ್‌ ಮಾಡಿಕೊಂಡರೆ ಬದುಕು ಸಹನೀಯ ಎನ್ನುವುದು ಕೇವಲ ಕೂಡ್ಲು ರಾಮಕೃಷ್ಣ ಅವರ ಥಿಯರಿ ಅಲ್ಲ. ನೋಡುಗರದೂ ಆಗಿರಬೇಕೆಂಬುದು ನಮ್ಮ ತೀರ್ಮಾನ.

ಸ್ವಲ್ಪ ಅಡ್ಜೆಸ್ಟ್‌ ಮಾಡಿಕೊಂಡರೆ ಬದುಕು ಸಹನೀಯ ಎನ್ನುವುದು ಕೇವಲ ಕೂಡ್ಲು ರಾಮಕೃಷ್ಣ ಅವರ ಥಿಯರಿ ಅಲ್ಲ. ನೋಡುಗರದೂ ಆಗಿರಬೇಕೆಂಬುದು ನಮ್ಮ ತೀರ್ಮಾನ.

Subscribe to Filmibeat Kannada

ಚಿತ್ರ : ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳ್ಳಿನಿರ್ಮಾಪಕ : ಕೆ.ಟಿ. ವೀರೇಶಗೌಡಕತೆ- ಚಿತ್ರಕತೆ - ನಿರ್ದೇಶನ : ಕೂಡ್ಲು ರಾಮಕೃಷ್ಣತಾರಾಗಣ : ಅನಂತ್‌ನಾಗ್‌, ಸುಹಾಸಿನಿ, ರಾಮ್‌ಕುಮಾರ್‌, ದಾಮಿನಿ, ತಾರಾ, ಚೈತಾಲಿ, ಗುರುಕಿರಣ್‌.
*ಹಂಸಕ್ಷೀರ

ಈಗಂತೂ ಎಲ್ಲ ಕ್ಷೇತ್ರದಲ್ಲೂ ಕೇಳಿ ಬರುವ ಒಂದೇ ಮಾತು ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳ್ಳಿ ಅನ್ನೋದು. ಈ ಹೊತ್ತು ಕನ್ನಡದಲ್ಲಿ ಇದೇ ಹೆಸರಿನ ಚಿತ್ರ ತೆರೆಕಂಡಿದೆ. ಚಿತ್ರದ ಆದಿಯಿಂದ ಅಂತ್ಯದವರೆಗೂ ನೀವು ಸ್ವಲ್ಪ ಅಡ್ಜೆಸ್ಟ್‌ ಮಾಡಿಕೊಂಡು ನೋಡಿದ್ರೆ... ನೀತಿಪಾಠಗಳ ಸರಮಾಲೆ ಧರಿಸಿಯೇ ಹೊರಬರಬಹುದು.

ನೀತಿಯ ಮಟ್ಟಿಗೆ ಹೇಳುವುದಾದರೆ, ಇದೊಂದು ನೀತಿ ಕತೆಯ ಸಮಾಗಮ. ಮಕ್ಕಳನ್ನು ಬೆಳೆಸುವ ಬಗೆ ಹೇಗೆ ಎಂಬ ಬಗ್ಗೆಯೂ ಪಾಲಕರಿಗೆ ಚಿತ್ರದಲ್ಲಿ ಪಾಠ ಹೇಳಲಾಗಿದೆ. ಸಮುದ್ರದ ತಡಿಯ ಮಂಗಳೂರು, ಪರಂಪರೆ ಇತಿಹಾಸದ ಮೈಸೂರು, ಗಂಡು ಮೆಟ್ಟಿನ ನಾಡಾದ ಉತ್ತರ ಕರ್ನಾಟಕ ಪ್ರಾಂತಗಳ ಪ್ರತಿನಿಧಿಸುವ ನಾಯಕಿಯರ ಪಾತ್ರ ಕರ್ನಾಟಕ ಏಕೀಕರಣದ ಛಾಪೂ ಮೂಡಿಸಿಬಿಟ್ಟಿದೆ.

ಸಂಬಳದ ಜತೆ ಗಿಂಬಳ ನುಂಗಲು ಯಾವ ಇಲಾಖೆ ಸೇರಬೇಕು ಎಂಬ ನೀತಿಯೂ ನಿರುದ್ಯೋಗಿಗಳಿಗಿಲ್ಲಿದೆ. ಹಿಂದೂ ಅವಿಭಕ್ತ ಕುಟುಂಬದ ನೋವು ನಲಿವುಗಳ ಸುತ್ತ ಹೆಣೆದ ಕತೆಯುಳ್ಳ ಚಿತ್ರದಲ್ಲಿ ವಾಸುದೇವರಾವ್‌ ಪಾತ್ರಧಾರಿ ಅನಂತ್‌ನಾಗ್‌ಗೆ ಮೂವರು ಗಂಡು ಮಕ್ಕಳು. ಮನೆಗೆ ಎಂತಹ ಸೊಸೆಯರನ್ನು ತರಬೇಕೆಂಬ ಬಗ್ಗೆ ಅಮ್ಮನ ಪೂರ್ವ ನಿರ್ಧಾರ. ರಾಜ್ಯದ ಮೂರು ಭಾಗದಿಂದ ತಂದ ಸೊಸೆಯರ ಅಭಿರುಚಿಯೂ ಭಿನ್ನ.

ಒಣ ಪ್ರತಿಷ್ಠೆ, ಹೆಣ್ಣಿಗೆ ಸಹಜವಾದ ಅತ್ಯಾಸೆಗಳ ಹಿನ್ನೆಲೆಯಲ್ಲಿ ಹೆಂಡತಿಯರ ಆಸೆ ಪೂರೈಸಲು ಸಾಲ ಮಾಡುವ ಗಂಡಂದಿರು. (ಇಲ್ಲಿ ಇನ್ಸ್‌ಸ್ಟಾಲ್‌ಮೆಂಟ್‌ ಜೀವನದ ಸುಂದರ ನಿರೂಪಣೆ ಇದೆ) ಮನೆಯ ಮರ್ಯಾದೆ ಬೀದಿಗೆ ಬಿತ್ತು ಎನ್ನುವ ಹೊತ್ತಿಗೆ ರಕ್ಷಣೆಗೆ ನಿಲ್ಲುವ ತಂದೆ. ಚಿತ್ರಾರಂಭದಿಂದ ವಿರಾಮದವರೆಗೂ ಮನೆ, ಮದುವೆಯ ಕತೆ, ವಿರಾಮಾನಂತರ ಜಂಜಾಟ. ಮನೆಯಾಡೆಯ ಅನಂತನಾಗ್‌ರ ಫ್ಲಾಷ್‌ ಬ್ಯಾಕ್‌ಗಳು.

ಪಾತ್ರಧಾರಿಗಳ ಆಯ್ಕೆಯಲ್ಲೇ ಚಿತ್ರ ಅರ್ಧ ಗೆದ್ದಿದೆ. ಕೂಡ್ಲು ರಾಮಕೃಷ್ಣರ ನಿರೂಪಣೆ ಸರಳವಾಗಿದೆ. ಆದರೆ, ಸರಾಗವಾಗೇನೂ ಇಲ್ಲ. ಆದರೂ ಸ್ವಲ್ಪ ಅಡ್ಜೆಸ್ಟ್‌ ಮಾಡಿಕೊಂಡು ಮನೆ ಮಂದಿಯೆಲ್ಲಾ ಕುಳಿತು ನೋಡಲು ಇದೊಂದು ಉತ್ತಮ ಚಿತ್ರ.

ಕೆಲವು ಸನ್ನಿವೇಶಗಳ ನಿರೂಪಣೆ ಚೆನ್ನಾಗೇ ಇದೆ. ಇದು ಹಾಸ್ಯ ಪ್ರಧಾನ ಚಿತ್ರ ಅಲ್ಲದಿದ್ದರೂ ಕೆಲವು ಕಡೆ ಹಾಸ್ಯದ ಲೇಪವಿದೆ. ಹೆಂಗರುಳಿನ ಪ್ರೇಕ್ಷಕರ ಸೆಳೆಯುವ ಉದ್ದೇಶ, ಅಷ್ಟರ ಮಟ್ಟಿಗೆ ಯಶಸ್ವಿಯಾಗಿದೆ. ಅಪ್ಪಟ ಸೆಂಟಿಮೆಂಟ್‌ ಇದಕ್ಕೆ ಪೂರಕ.

ಚಿತ್ರದಲ್ಲಿ ಅನಂತ್‌ನಾಗ್‌, ಸುಹಾಸಿನಿ ಮಿಂಚಿದ್ದರೆ, ಹೆಚ್ಚು ಅವಕಾಶ ಇಲ್ಲದ ರಾಮಕೃಷ್ಣ, ಗುರುಕಿರಣ್‌, ರಾಮ್‌ಕುಮಾರ್‌, ಸಿಕ್ಕ ಅವಕಾವನ್ನು ಬಾಚಿಕೊಂಡಿರುವ ತಾರಾ, ಚೈತಾಲಿ ಹಾಗೂ ದಾಮಿನಿ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಮುನ್ನುಡಿ, ಕಾನೂರು ಹೆಗ್ಗಡಿತಿ ಖ್ಯಾತಿಯ ತಾರಾ ಅಂತೂ ಹಿರಿಯ ಸೊಸೆಯ ಗತ್ತನ್ನು ಚೆನ್ನಾಗಿಯೇ ಮೆರೆದಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಪ್ರೇರಣೆ ತಮಿಳಿನ ಭಾಮಾ ವಿಜಯಂ. ದಯವಿಟ್ಟು ಅಡ್ಜೆಸ್ಟ್‌ ಮಾಡಿಕೊಳ್ಳಿ ಮಾರಾಯ್ರೆ , ಪ್ಲೀಸ್‌ ಪ್ಲೀಸ್‌ !

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada