Shaakuntalam Review: ಕೆಟ್ಟ ವಿಎಫ್ಎಕ್ಸ್, ಮಹಾ ಬೋರ್; ಅದ್ಭುತ ಕಥೆ ಹಾಳು, ಸಮಯವೂ ಹಾಳು!

ಚಿತ್ರ: ಶಾಕುಂತಲಂ ( ತೆಲುಗು )
ನಿರ್ದೇಶಕ: ಗುಣಶೇಖರ್
ತಾರಾಗಣ: ಸಮಂತಾ ರುತ್ ಪ್ರಭು, ದೇವ್ ಮೋಹನ್, ಮೋಹನ್ ಬಾಬು, ಪ್ರಕಾಶ್ ರಾಜ್, ಅಲ್ಲು ಆಹ್ರಾ ಹಾಗೂ ಇನ್ನಿತರರು.
ಇತ್ತೀಚೆಗಿನ ದಿನಗಳಲ್ಲಿ ಸಿನಿ ರಸಿಕರು ಪೌರಾಣಿಕ ಚಿತ್ರಗಳನ್ನು ಹೆಚ್ಚು ನೋಡಲು ಇಚ್ಛಿಸುತ್ತಿದ್ದಾರೆ. ಪೌರಾಣಿಕ ಚಿತ್ರಗಳು ಬಂದಾಗ ಚಿತ್ರಮಂದಿರಗಳಿಗೆ ಕುಟುಂಬ ಸಮೇತರಾಗಿ ತೆರಳಿ ವೀಕ್ಷಿಸಿ ಚಿತ್ರವನ್ನು ನೋಡಿ ಮನರಂಜನೆ ಪಡೆದುಕೊಳ್ಳುವುದರ ಜತೆಗೆ ಇತಿಹಾಸವನ್ನೂ ಸಹ ತಿಳಿದುಕೊಳ್ಳುತ್ತಿದ್ದಾರೆ. ಹೀಗಾಗಿ ಪೌರಾಣಿಕ ಚಿತ್ರಗಳಿಗೆ ಅವುಗಳದ್ದೇ ಆದ ಬೇಡಿಕೆ ಇದೆ.
ಹೀಗಾಗಿಯೇ ಕೆಲ ನಿರ್ದೇಶಕರು ಪೌರಾಣಿಕ ಕಥೆಗಳನ್ನು ತೆರೆ ಮೇಲೆ ತರುವತ್ತ ಆಸಕ್ತಿ ತೋರುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ನಿರ್ದೇಶಕ ಗುಣಶೇಖರ್. 1997ರಲ್ಲಿ ಇವರು ರಾಮಾಯಣಂ ಎಂಬ ಪೌರಾಣಿಕ ಚಿತ್ರವನ್ನೂ ಮಾಡಿದ್ದರಾದರೂ ವಿಎಫ್ಎಕ್ಸ್ ಹಾಗೂ ಮೇಕಿಂಗ್ ಮೂಲಕ ಅದ್ದೂರಿಯಾಗಿ ಪೌರಾಣಿಕ ಕಥೆಯನ್ನು ಹೇಳಲು ಮುಂದಾಗಿದ್ದು ಇದೇ ಮೊದಲ ಬಾರಿ. ಕವಿ ಕಾಳಿದಾಸ ಬರೆದಿರುವ ಅಭಿಜ್ಞಾನ ಶಾಕುಂತಲದಲ್ಲಿನ ಶಾಕುಂತಲ ಹಾಗೂ ದುಷ್ಯಂತ ಕಥೆಯನ್ನು ನಿರ್ದೇಶಕ ತೆರೆ ಮೇಲೆ ತಂದಿದ್ದಾರೆ.
ಮೇನಕ ತನಗೆ ಹಾಗೂ ವಿಶ್ವಾಮಿತ್ರನಿಗೆ ಜನಿಸಿದ ಮಗುವನ್ನು ಕನ್ವ ಮುನಿ ಆಶ್ರಮದ ಮುಂದೆ ಇಟ್ಟು ಇಂದ್ರನ ಆಸ್ಥಾನಕ್ಕೆ ತೆರಳುತ್ತಾಳೆ. ಆ ಮಗುವಿಗೆ ಶಾಕುಂತಲ ಎಂದು ಹೆಸರಿಟ್ಟ ಕನ್ವ ಮುನಿ ಸ್ವಂತ ತಂದೆಯಂತೆ ಸಾಕುತ್ತಾನೆ. ಆಶ್ರಮದಲ್ಲಿ ಬೆಳೆಯುವ ಶಾಕುಂತಲೆಗೆ ಆಶ್ರಮದಲ್ಲಿನ ಪರಿಸರವೇ ಪ್ರಪಂಚ. ಗಿಡ ಮರ ಬಳ್ಳಿ, ನವಿಲು, ಜಿಂಕೆಗಳೇ ಸ್ನೇಹಿತರು. ಹೀಗೆ ಆಶ್ರಮದಲ್ಲಿ ವಾಸಿಸುತ್ತಿದ್ದ ಶಾಕುಂತಲೆಗೆ ಒಂದು ದಿನ ಆಶ್ರಮದ ಪ್ರದೇಶಕ್ಕೆ ಬರುವ ರಾಜ ದುಷ್ಯಂತ ಪರಿಚಯವಾಗ್ತಾನೆ.
ಇಬ್ಬರೂ ಮೊದಲ ಭೇಟಿಯಲ್ಲಿಯೇ ಪ್ರೇಮಬಂಧನಕ್ಕೆ ಒಳಗಾಗ್ತಾರೆ. ಬಳಿಕ ಗಾಂಧರ್ವ ವಿವಾಹಕ್ಕೆ ಒಳಗಾಗಿ ಶಾಕುಂತಲ ಗರ್ಭಿಣಿಯೂ ಸಹ ಆಗ್ತಾಳೆ. ಈ ಸಂದರ್ಭದಲ್ಲಿ ತಾನು ಮರಳಿ ಬಂದು ಆಕೆಯನ್ನು ತನ್ನ ಆಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇನೆಂದು ಮಾತು ಕೊಡ್ತಾನೆ. ತನ್ನ ಪತಿ ಆಗಮಿಸುತ್ತಾನೆ ಎಂದು ಹಗಲುಗನಸು ಕಾಣುತ್ತಾ ಕುಳಿತಿದ್ದ ವೇಳೆ ಶಾಕುಂತಲ ಬಳಿ ಬಂದ ದುರ್ವಾಸ ಮುನಿ ತನ್ನ ಮಾತಿಗೆ ಸ್ಪಂದಿಸದ ಶಾಕುಂತಲ ಕಂಡು ಆಕೆ ಯಾರ ಬಗ್ಗೆ ಯೋಚಿಸುತ್ತಿದ್ದಾಳೋ ಅವರು ಇವಳನ್ನು ಮರೆತುಹೋಗಲಿ ಎಂದು ಶಾಪ ನೀಡಿ ಹೊರಟು ಹೋಗುತ್ತಾನೆ.
ಹೀಗೆ ಶಾಪಕ್ಕೆ ಒಳಗಾದ ಶಾಕುಂತಲ ತನ್ನ ಬಳಿ ಬಾರದ ದುಷ್ಯಂತನನ್ನು ಹುಡುಕಿಕೊಂಡು ಆತನ ಆಸ್ಥಾನಕ್ಕೆ ಹೋಗುತ್ತಾಳೆ. ಆದರೆ ತನ್ನ ಜತೆ ಗಾಂಧರ್ವ ವಿವಾಹವಾದ ಪತಿ ತಾನು ಯಾರೆಂದು ಗೊತ್ತಿಲ್ಲ ಎಂದು ಹೇಳಿಬಿಡುತ್ತಾನೆ. ಆತ ಕೊಟ್ಟ ರಾಜಮುದ್ರಿಕೆಯ ಉಂಗುರವೂ ಇರುವುದಿಲ್ಲ. ಬಳಿಕ ಆಕೆಗೆ ಅವಮಾನವಾಗುತ್ತದೆ. ಮೀನುಗಾರನಿಗೆ ಆ ಉಂಗುರ ಸಿಗುತ್ತೆ. ಬಳಿಕ ದುಷ್ಯಂತನಿಗೆ ಹಳೆಯದ್ದೆಲ್ಲಾ ನೆನಪಾಗಿ ಶಾಕುಂತಲ ಬಳಿ ಬರುತ್ತಾನೆ. ಹೀಗೆ ಕಾಳಿದಾಸ ಬರೆದಿರುವ ಹಾಗೆ ಹಾಗೂ ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ಹೇಳಿರುವ ಹಾಗೆಯೇ ಈ ಚಿತ್ರದಲ್ಲಿಯೂ ಶಾಕುಂತಲ ಹಾಗೂ ದುಷ್ಯಂತನ ಕಥೆಯನ್ನು ಹೇಳಲಾಗಿದೆ.
ಹೀಗೆ ಈಗಾಗಲೇ ಹಲವಾರು ಬಾರಿ ಬಂದಿರುವ ಈ ಕಥೆಯನ್ನು ಮತ್ತೆ ಹೇಳಲು ಹೊರಟವರು ಈ ಬಾರಿ ಕಡ್ಡಾಯವಾಗಿ ರಿಚ್ ಮೇಕಿಂಗ್, ಭರ್ಜರಿ ವಿಎಫ್ಎಕ್ಸ್ ಕಡೆ ಗಮನ ಕೊಡಬೇಕಿತ್ತು. ಆದರೆ ಚಿತ್ರಕ್ಕೆ ಆ ಅಂಶಗಳೇ ವಿಲನ್ ಆಗಿ ನಿಂತಿವೆ. ಯುದ್ಧದ ದೃಶ್ಯಗಳ ವಿಎಫ್ಎಕ್ಸ್ ನೋಡಿದಾಗ ನಗು ಬಂದರೂ ಆಶ್ಚರ್ಯವಿಲ್ಲ. ಕಾಮಿಡಿಯೇ ಇಲ್ಲದ ಕಥೆಯಲ್ಲಿ ಜನ ನಗುತ್ತಿದ್ದಾರೆ ಎಂದರೆ ಅದಕ್ಕೆ ಕಾರಣವೇ ಈ ವಿಎಫ್ಎಕ್ಸ್. ಎಷ್ಟು ಕಳಪೆ ಮಟ್ಟದಲ್ಲಿ ವಿಎಫ್ಎಕ್ಸ್ ಇದೆ ಎಂದರೆ ಒಮ್ಮೊಮ್ಮೆ ಇದು ಚಿಕ್ಕ ಮಕ್ಕಳಿಗಾಗಿ ಮಾಡಿದ ಚಿತ್ರವಾ ಎನಿಸಿಬಿಡುತ್ತದೆ. ಆನೆ ಆಶ್ರಮಕ್ಕೆ ನುಗ್ಗಿದಾಗ ನಾಯಕ ಹಾಗೂ ಆನೆ ನಡುವಿನ ಕಾದಾಟದ ದೃಶ್ಯಕ್ಕಿಂತ ಚೋಟಾ ಭೀಮ್ ಎಷ್ಟೋ ವಾಸಿ.
ಇನ್ನು ಶಾಕುಂತಲ ಪಾತ್ರದಲ್ಲಿ ಸಮಂತಾ ಚೆನ್ನಾಗಿ ನಟಿಸಿದ್ದಾರೆ. ದುಷ್ಯಂತನಾಗಿ ದೇವ್ ಮೋಹನ್ ನಟನೆ ಚೆನ್ನಾಗಿದೆ. ಆದರೆ ಆಕ್ಷನ್ ದೃಶ್ಯಗಳಲ್ಲಿ ಇವರೂ ಸಹ ಅಷ್ಟಕ್ಕಷ್ಟೇ. ಇನ್ನುಳಿದಂತೆ ಯಾರ ಪಾತ್ರವೂ ಸಹ ಹೊಂದಿಕೊಂಡಿಲ್ಲ. ಕೆಟ್ಟ ವಿಎಫ್ಎಕ್ಸ್ ಕಾರಣದಿಂದಾಗಿಯೋ ಏನೋ ಒಳ್ಳೆಯ ಪ್ರೇಮಕಥೆ ಸಹ ಬೋರ್ ಹೊಡೆಸಿಬಿಡುತ್ತದೆ. ಸಮಂತಾ ನಟನೆ ಚಿತ್ರದ ಪ್ಲಸ್ ಪಾಯಿಂಟ್ ಎನ್ನಬಹುದಾಗಿದ್ದು, ಮೈನಸ್ ಪಾಯಿಂಟ್ ಲಿಸ್ಟ್ ದೊಡ್ಡಾಗಿದೆ.
ಈಗಾಗಲೇ ಬಹುತೇಕರಿಗೆ ತಿಳಿದಿರುವ ಈ ಕಥೆಯನ್ನು ಮತ್ತೊಮ್ಮೆ ಅದ್ಭುತ ಮೇಕಿಂಗ್‌ನೊಂದಿಗೆ ನೋಡಬಹುದು ಎಂಬ ನಿರೀಕ್ಷೆ ಇದ್ದರೆ ಖಂಡಿತ ಈ ಚಿತ್ರ ನಿಮಗಲ್ಲ. ಸಮಯವಿದೆ, ವಿಎಫ್ಎಕ್ಸ್ ಹೇಗಿದ್ದರೂ ಪರವಾಗಿಲ್ಲ, ಸಮಂತಾ ನಟಿಸಿರುವ ಶಾಕುಂತಲಂ ಚಿತ್ರವನ್ನು ನೋಡಬೇಕು ಎನ್ನುವವರು ಈ ಚಿತ್ರವನ್ನು ನೋಡುವ ಸಾಹಸ ಮಾಡಬಹುದು.


Click it and Unblock the Notifications











