twitter
    For Quick Alerts
    ALLOW NOTIFICATIONS  
    For Daily Alerts

    ನವಿರು ನಿರೂಪಣೆಯ ಸಿನೆಮಾ “ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು

    By ಭಾಸ್ಕರ್ ಬಂಗೇರ
    |

    ಈ ತರಹದ ವಸ್ತು ಇಟ್ಟುಕೊಂಡು ಪ್ರಶಸ್ತಿ ಹಾಗು ಸರಕಾರದ ಸಬ್ಸಿಡಿಗಾಗಿ ಸಿನೆಮಾ ಮಾಡುವುದು ಸುಲಭ. ಆದರೆ ದಿನನಿತ್ಯದ ಜಂಜಾಟಗಳ ನಡುವೆ ಮನರಂಜನೆಗಾಗಿ ಸಿನೆಮಾ ನೋಡಲು ಬರುವ ಸಾಮಾನ್ಯ ಪ್ರೇಕ್ಷಕರಿಗೆ ಒಂದು ಗಂಭೀರ ವಿಚಾರವನ್ನು ತಲುಪಿಸಬೇಕು ಅಂತಾದರೆ ಅದು ಅಷ್ಟು ಸರಳ ಕಾರ್ಯವಲ್ಲ.

    ಇದು ಹೀಗೆ ಇರಬೇಕು ಎನ್ನುವವರ ನಡುವೆ ಹೇಳಲು ಹೊರಟಿರುವ ವಿಚಾರ ತಲುಪಬೇಕಾದ ಜಾಗದ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಜನಪ್ರಿಯ ಶೈಲಿಗೆ ಅದನ್ನು ಒಗ್ಗಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಅದನ್ನು ನಿರ್ದೇಶಕ ರಿಷಬ್ ಶೆಟ್ಟಿ ಸಮರ್ಥವಾಗಿ ನಿಭಾಯಿಸಿದ್ದಾರೆ.

    ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'

    ಸ್ವಾತಂತ್ರ್ಯದ ನಂತರ ಭಾರತವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಂಗಡಿಸುವ ಚಳುವಳಿ ನಡೆಯುತ್ತಿದ್ದಾಗ ಫಸಲ್ ಅಲಿ ಸಮಿತಿ ಕಾಸರಗೋಡನ್ನು ಕೇರಳಕ್ಕೆ ಸೇರಿಸಬೇಕು ಎನ್ನುವ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುತ್ತದೆ. ಅದನ್ನು ವಿರೋಧಿಸುವ ಹೋರಾಟದಲ್ಲಿ ಇಬ್ಬರು ವಿದ್ಯಾರ್ಥಿಗಳು ಗುಂಡೇಟಿಗೆ ಬಲಿಯಾಗುತ್ತಾರೆ. ನೂರಾರು ಕನ್ನಡಿಗರು ಜೈಲು ಸೇರುತ್ತಾರೆ.

    ಕಾಸರಗೋಡಿನ ಕನ್ನಡಿಗರಿಗೆ ಆದ ಅನ್ಯಾಯವನ್ನು ರಾಷ್ಟ್ರಕವಿ ಗೋವಿಂದ ಪೈ, ಕವಿ ಕಯ್ಯಾರ ಕಿಞ್ಞಣ್ಣ ರೈ, ಕನ್ನಡ ಹೋರಾಟಗಾರರಾದ ಮಹಾಬಲ ಭಂಡಾರಿ, 'ನಾಡಪ್ರೇಮಿ' ಪತ್ರಿಕೆ ನಡೆಸುತ್ತಿದ್ದ ಎಂ. ವಿ. ಬಳ್ಳುಳ್ಳಾಯ ಹಾಗು ಇನ್ನಿತರ ಹಿರಿಯರು ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿಲ್ಲ.

    1967 ಮಹಾಜನ್ ವರದಿಗೆ ಸಿಕ್ಕಿಲ್ಲ ಬೆಲೆ

    1967 ಮಹಾಜನ್ ವರದಿಗೆ ಸಿಕ್ಕಿಲ್ಲ ಬೆಲೆ

    ಕಾಸರಗೋಡು ಕರ್ನಾಟಕಕ್ಕೆ ಸೇರಿದ್ದು ಎಂದು ಮಹಾಜನ್ ವರದಿ 1967ರಲ್ಲೇ ವರದಿ ಸಲ್ಲಿಸಿದ್ದರು ಇಂದಿಗೂ ಅದು ಕೇರಳದ ತೆಕ್ಕೆಯಲ್ಲಿದೆ. ಇಂತಹ ಹಿನ್ನೆಲೆ ಹೊಂದಿರುವ ಕಾಸರಗೋಡಿನ ಸರಕಾರಿ ಕನ್ನಡ ಶಾಲೆಯೊಂದರ ಇಂದಿನ ಸ್ಥಿತಿಗತಿಗಳ ಕುರಿತಾದ ನವಿರು ನಿರೂಪಣೆಯ ಸಿನೆಮಾ "ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು. ಕೊಡುಗೆ ರಾಮಣ್ಣ ರೈ"

    ರಿಷಬ್ ಶೆಟ್ಟಿ ಅಭಿರುಚಿಯನ್ನು ತೋರಿಸುತ್ತದೆ

    ರಿಷಬ್ ಶೆಟ್ಟಿ ಅಭಿರುಚಿಯನ್ನು ತೋರಿಸುತ್ತದೆ

    ಕನ್ನಡ ಶಾಲೆಯನ್ನು ಉಳಿಸುವ ಗುರಿಗಷ್ಟೇ ಈ ಸಿನೆಮಾವನ್ನು ಸೀಮಿತಗೊಳಿಸದೆ ಕಾಸರಗೋಡಿನ ವೈವಿಧ್ಯತೆ ಹಾಗು ಅಲ್ಲಿನ ಪ್ರಾದೇಶಿಕತೆಯನ್ನು ಚಿತ್ರಕತೆಯ ಒಳಗೆ ಅಂದವಾಗಿ ಜೋಡಿಸಿರುವುದು ನಿರ್ದೇಶಕ ರಿಷಬ್ ಶೆಟ್ಟಿ ಅಭಿರುಚಿಯನ್ನು ತೋರಿಸುತ್ತದೆ. ಕನ್ನಡ ಸಿನೆಮಾಗಳ ಮಟ್ಟಿಗೆ ಪ್ರಾದೇಶಿಕವಾಗಿ ಭಿನ್ನ ಪರಿಸರ ಹಾಗು ವೈವಿದ್ಯಮಯ ಕನ್ನಡ ಭಾಷೆಯನ್ನು ತೆರೆಯ ಮೇಲೆ ಅದಿರುವ ಸಹಜ ಸ್ಥಿತಿಯಲ್ಲೇ ತಂದಿದ್ದು ಕಡಿಮೆಯೇ.

    ಆದರೆ, ಈ ಸಿನೆಮಾ ಕಾಸರಗೋಡಿನ ಆಡು ಭಾಷೆಗೆ ಚ್ಯುತಿಯಾಗದಂತೆ ಚಿನಕುರಳಿ ಸಂಭಾಷಣೆಗಳ ಮೂಲಕ ಹೇಳಬೇಕಾದ್ದನ್ನು ನಗಿಸುತ್ತಲೇ ಹೇಳುತ್ತದೆ. ಜೇನುತುಪ್ಪದಲ್ಲಿ ಮಕ್ಕಳಿಗೆ ಮಾತ್ರೆ ಪುಡಿ ಮಾಡಿ ಕೊಟ್ಟಂತೆ! ಸಂಭಾಷಣೆಗಳನ್ನು ಬರೆದ ಅಭಿಜಿತ್ ಮಹೇಶ್ ಹಾಗು ರಾಜ್ ಬಿ. ಶೆಟ್ಟಿ ಸಿನೆಮಾದ ನಿಜವಾದ ಹೀರೋಗಳು.

    ಕಿರಿಕ್ ಪಾರ್ಟಿ ಸಿನೆಮಾದಂತೆ ನಿರೂಪಣೆ

    ಕಿರಿಕ್ ಪಾರ್ಟಿ ಸಿನೆಮಾದಂತೆ ನಿರೂಪಣೆ

    ಕಿರಿಕ್ ಪಾರ್ಟಿ ಸಿನೆಮಾದಲ್ಲಿ ಬಳಸಿದ ನಿರೂಪಣಾ ತಂತ್ರವನ್ನೇ ಇಲ್ಲಿಯೂ ಬಳಸಿರುವ ನಿರ್ದೇಶಕರು ವಸ್ತುವಿನ ಆಯ್ಕೆ ಹಾಗು ಅದನ್ನು ಎಲ್ಲರಿಗೂ ತಲುಪಿಸಲು ಏನೆಲ್ಲ ತೆರೆಯ ಮೇಲೆ ಕಾಣಿಸಬೇಕು ಎನ್ನುವುದರ ಕುರಿತು ಸ್ಪಷ್ಟತೆಯಿದೆ. ಎಲ್ಲ ಭಾಗದ ಪ್ರೇಕ್ಷಕರನ್ನು ಸಿನೆಮಾದ ಭಾಗವಾಗಿಸುವ ಸದುದ್ದೇಶದಿಂದ ಹೆಣೆದ ಚಿತ್ರಕತೆಯಿದು. ಮಂಗಳೂರು ಶೈಲಿಯ ಕನ್ನಡ, ಉತ್ತರ ಕರ್ನಾಟಕದ ಭಾಷೆ ಮಾತನಾಡುವ ವಿದ್ಯಾರ್ಥಿನಿ, ಮೈಸೂರಿನಿಂದ ಬರುವ ಸಮಾಜ ಸೇವಕನ ಭಾಷೆ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹೇಂದ್ರ ಅಭಿನಯಿಸಿದ ಬಾಲಕನ ಭಾಷೆ, ಮಲಯಾಳಂ ಮಿಶ್ರಿತ ಕನ್ನಡ.. ಹೀಗೆ ಎಲ್ಲವೂ ಕೃತಕ ಎನಿಸದಂತೆ ಸಿನೆಮಾದಲ್ಲಿವೆ.

    ಹಾಡುಗಳು ಅನಗತ್ಯ ಅನಿಸುವುದಿಲ್ಲ

    ಹಾಡುಗಳು ಅನಗತ್ಯ ಅನಿಸುವುದಿಲ್ಲ

    ಮೊದಲಾರ್ಧ ಮುಗಿದ್ದದ್ದೆ ಗೊತ್ತಾಗದಂತೆ ಓಡುವ ಸಿನೆಮಾದ ವೇಗ ವಿರಾಮದ ನಂತರ ಕುಗ್ಗುತ್ತದೆ. ಪೋಲಿಸ್ ಸ್ಟೇಷನ್ನಿನಲ್ಲಿ ನಡೆಯುವ ಮಾತುಕತೆಯ ದೃಶ್ಯ ತುಸು ಹೆಚ್ಚಾಯಿತು ಅನಿಸುತ್ತದೆ. ಅನಂತ್ ನಾಗ್ ಪಾತ್ರದ ಹಿನ್ನಲೆಯ ವಿವರಣೆ ಇನ್ನಷ್ಟು ಚುಟುಕಾಗಬಹುದಿತ್ತು ಎನಿಸಿತು.

    ಸಿನೆಮಾದ ದ್ವಿತಿಯಾರ್ಧದಲ್ಲಿ ಬರುವ ಹಾಡುಗಳು ಅನಗತ್ಯ ಅನಿಸುವುದಿಲ್ಲ, ಆದರೆ ಅವುಗಳ ಅವಧಿಯಲ್ಲಿ ಒಂದಿಷ್ಟು ಕಡಿತಗೊಳಿಸುವ ಸಾಧ್ಯತೆಯಿತ್ತು. ಇವಿಷ್ಟು ಸಣ್ಣ ವಿಚಾರಗಳನ್ನು ಬಿಟ್ಟರೆ "ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು. ಕೊಡುಗೆ ರಾಮಣ್ಣ ರೈ" ಸಿನೆಮಾ ಒಂದು ಕೌಟುಂಬಿಕ ಮನರಂಜನೆಯ ಸಿನೆಮಾ.

    ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಹಿತ

    ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಹಿತ

    ವಾಸುಕಿ ವೈಭವ್ ಸಂಗೀತ ನಿರ್ದೇಶನದ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಸಿನೆಮಾವಿಡೀ ಹಿತ ಎನಿಸುತ್ತದೆ. ಆದರೆ ಕೊನೆಯ ದೃಶ್ಯದಲ್ಲಿ ಅನಂತ್ ನಾಗ್ ಅಭಿನಯಿಸಿದ ಪಾತ್ರ ಮಾತನಾಡುವಾಗ ಅಲ್ಲಿ ಒಂದಿಷ್ಟು ಮೌನ ಇರಬೇಕಿತ್ತು ಅನಿಸಿತು.

    ನಟರ ವಿಚಾರದಲ್ಲಿ ಎಲ್ಲರ ಅಭಿನಯವು ಸಿನೆಮಾದ ಅಗತ್ಯಕ್ಕೆ ತಕ್ಕಂತಿದೆ. ಅಪ್ಪಿಕೊಳ್ಳುವಷ್ಟು ಖುಷಿ ಕೊಡುವ ಹಿರಿಯ ನಟ ಅನಂತ್ ನಾಗ್, ಅಬ್ಬರಿಸುತ್ತಲೇ ನಗಿಸುವ ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ, ಹೆದರುತ್ತಲೇ ಕಾಲು ಎಳೆಯುವ ಪ್ರಕಾಶ್ ತೂಮಿನಾಡು, ಹಿರಿಯರಿಗಿಂತ ನಾವೇನು ಕಡಿಮೆಯಿಲ್ಲ ಎನ್ನುವಂತೆ ನಟಿಸಿರುವ ರಂಜನ್, ಮಹೇಂದ್ರ, ಸಂಪತ್ ಹಾಗು ಇನ್ನಿತರ ಎಲ್ಲ ಮಕ್ಕಳು ನಮ್ಮ ಬಾಲ್ಯವನ್ನು ನೆನಪಿಸುತ್ತಾರೆ. ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಕೂಡ ಕಥೆಯ ಅಗತ್ಯಕ್ಕೆ ತಕ್ಕಂತೆ ದೃಶ್ಯಗಳನ್ನು ಹಿಡಿದು ಕೊಟ್ಟಿದೆ.

    ಯಾವುದೇ ಮುಜುಗರವಿಲ್ಲದೆ ನೋಡಬಹುದಾದ ಸಿನೆಮಾ

    ಯಾವುದೇ ಮುಜುಗರವಿಲ್ಲದೆ ನೋಡಬಹುದಾದ ಸಿನೆಮಾ

    ಇಂತಹ ಹಲವಾರು ಸದಭಿರುಚಿಯ ಯೋಚನೆಗಳಿಗೆ ಸಿನೆಮಾದ ರೂಪ ಕೊಡಲು ಕಾಯುತ್ತಿರುವ ಬಹಳಷ್ಟು ಮಂದಿ ಚಂದನವನದಲ್ಲಿ ಇದ್ದಾರೆ. ಅವರಿಗೆಲ್ಲ ನಿರ್ಮಾಪಕರು ಸಿಗಬೇಕು ಅಂತಾದರೆ ಇಂತಹ ಸಿನೆಮಾಗಳು ಗೆಲ್ಲಬೇಕು. ಯಾವುದೇ ಮುಜುಗರವಿಲ್ಲದೆ ನೋಡಬಹುದಾದ ಸಿನೆಮಾ ಇದಾಗಿದ್ದು ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಲು, ಜೊತೆಗೆ ಗಡಿಯಾಚೆಗಿನ ಕನ್ನಡ ಮನಸ್ಸುಗಳ ವ್ಯಥೆಯನ್ನು ಒಂದಿಷ್ಟಾದರೂ ಅರ್ಥ ಮಾಡಿಕೊಳ್ಳಲು ಈ ಸಿನೆಮಾ ನೋಡಿ.

    English summary
    Sarkari Hiriya Prathamika Shale Kannada film review by Bhaskar Bangera.
    Sunday, August 26, 2018, 14:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X