ಕಳಪೆ ಛಾಯಾಗ್ರಹಣ, ಒಳ್ಳೆ ಸಂಗೀತ ಇರುವ ಮೂರು ಮನಸ್ಸುಗಳ ‘ಸರೋವರ’ದ ಕ್ಲೈಮ್ಯಾಕ್ಸ್‌ ನೋಡಿದರಷ್ಟೇ ಸಾಕು!

By Staff

ಚಿತ್ರ : ಸರೋವರನಿರ್ದೇಶನ : ಸೀತಾರಾಮ ಕಾರಂತತಾರಾಗಣ : ರಾಮ್‌ಕುಮಾರ್‌, ಸುಮಂತ್‌, ಅರ್ಚನಾ.
* ವಿನೋದಿನಿ

ಮನಸ್ಸು ಒಂದು ಸರೋವರದಂತೆ. ಅದು ನಿರ್ಮಲವಾದದ್ದು. ಆದರೆ ಒಂದು ಕಲ್ಲು ಬಿದ್ದರೆ ಸರೋವರ ಕಲಕುತ್ತದೆ, ಕೆಲವೊಮ್ಮೆ ಬಗ್ಗಡವಾಗುತ್ತದೆ.

‘ಸರೋವರ’ ಚಿತ್ರ ಮೂರು ಮನಸ್ಸುಗಳ ಕತೆ. ಇಲ್ಲಿ ಮನಸ್ಸು ಮುರಿದುಕೊಂಡವರು ಮತ್ತು ಕೆಡಿಸಿಕೊಂಡವರೂ ಇದ್ದಾರೆ. ಕೊನೆಗೆ ಅರಿವು ಎಂಬ ಮಹಾಮಂತ್ರದಿಂದ ಮುರಿದ ಮನಸ್ಸುಗಳು ಒಂದುಗೂಡುವ ಚಮತ್ಕಾರವೂ ಇದೆ.

‘ಚಂದ್ರಮುಖಿ ಪ್ರಾಣಸಖಿ’ ಮತ್ತು ‘ಶ್ರೀರಸ್ತು ಶುಭಮಸ್ತು’ ಚಿತ್ರಗಳ ಮೂಲಕ ಸಂವೇದನಾಶೀಲ ನಿರ್ದೇಶಕ ಎಂಬ ಹೆಸರು ಪಡೆದುಕೊಂಡ ಸೀತಾರಾಮ ಕಾರಂತರು ಈ ಚಿತ್ರದಲ್ಲಿ ಕಂಪ್ಯೂಟರ್‌ನ್ನು ಬಳಸಿಕೊಂಡು ಚಿತ್ರವನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತೆರೆಯ ಮೇಲೆ ಕಂಪ್ಯೂಟರ್‌ ಪದೇಪದೇ ಕಾಣಿಸುತ್ತದೆ ಅನ್ನೋದರ ಹೊರತಾಗಿ ಮಿಕ್ಕಂತೆ ಇದೊಂದು ಮಾಮೂಲು ಪ್ರೇಮಕಥಾನಕವಾಗಿದೆ.

ಸುಮಂತ್‌ ಮತ್ತು ರಾಮ್‌ಕುಮಾರ್‌ - ಈ ಇಬ್ಬರು ಗೆಳೆಯರ ದಿನಚರಿಯ ವಿವರಗಳೇ ಚಿತ್ರದ ಮೊದಲ ಅರ್ಧವನ್ನು ಆವರಿಸಿದೆ. ಒಂದೇ ಮನೆಯಲ್ಲಿ ವಾಸಿಸುವ, ಒಂದೇ ಕಂಪನಿಯಲ್ಲಿ ಕೆಲಸ ಮಾಡುವ ಅವರಿಬ್ಬರೂ ಕಾಫಿ ಕುಡಿಯುತ್ತಾ, ಟೈಮ್‌ ಪಾಸ್‌ ಮಾಡುತ್ತಾರೆ. ಇಡೀ ಚಿತ್ರವೇ ಒಂದು ಕಾಫಿ ಕಂಪನಿಯ ಜಾಹೀರಾತು ಅಗುತ್ತದೇನೋ ಎಂಬ ಭಯ ಕಾಡುವ ಹೊತ್ತಿಗೆ ನಾಯಕಿ ಅರ್ಚನಾ ಪ್ರವೇಶ. ಇಬ್ಬರು ನಾಯಕರಿಗೂಆಕೆಯ ಬಗ್ಗೆ ಆಸಕ್ತಿ ಮೂಡುತ್ತದೆ. ಸುಮಂತ್‌ ಕಂಪ್ಯೂಟರ್‌ನಲ್ಲಿ ಚಾಟ್‌ ಮಾಡುವ ಮೂಲಕ ಆಕೆಯ ಪ್ರೀತಿಗೆ ಪಾತ್ರನಾಗುತ್ತಾನೆ. ರಾಮ್‌ಕುಮಾರ್‌ ಬಗ್ಗೆ ಅವಳು ಆಸಕ್ತಿ ತೋರಿಸುವುದಿಲ್ಲ. ಮಧ್ಯಂತರದ ನಂತರ ಸುಮತ್‌ಗೆ ಸತ್ಯದ ಅರಿವಾಗುತ್ತದೆ. ರಾಮ್‌ಕುಮಾರ್‌ನ ಹೆಂಡತಿಯೇ ಅರ್ಚನಾ ಅನ್ನುವುದನ್ನು ಸಾರುವ ಆಲ್ಬಂ ಪತ್ತೆಯಾಗುತ್ತದೆ. ಇಲ್ಲೊಂದು ಫ್ಲಾಷ್‌ಬ್ಯಾಕ್‌. ಅರ್ಚನಾ ತನ್ನ ಮದುವೆ ಮುರಿದುಬಿದ್ದ ಕತೆ ಹೇಳುತ್ತಾಳೆ. ರಾಮ್‌ಕುಮಾರ್‌ ತನ್ನ ಅಕ್ಕನನ್ನು ಅತಿಯಾಗಿ ಪ್ರೀತಿಸುವುದೇ ಅರ್ಚನಾ ಸಿಟ್ಟಿಗೆ ಕಾರಣ. ಸುಮಂತ್‌ ಆಕೆಗೆ ಮರು ಜೀವನ ಕೊಡುವುದಕ್ಕೆ ಸಿದ್ಧವಾಗುತ್ತಾನೆ. ರಾಮ್‌ಕುಮಾರ್‌ಗೆ ಈ ವಿಷಯ ಗೊತ್ತಾದಾಗ ಆಘಾತವಾದರೂ, ತಮ್ಮ ಮಾಜಿ ಪತ್ನಿ ಸುಖವಾಗಿದ್ದರೆ ಸಾಕು ಎನ್ನುತ್ತಾ ತಾನೇ ಈ ಮದುವೆಗೆ ಪ್ರೋತ್ಸಾಹಿಸುತ್ತಾನೆ. ಕ್ಲೈಮ್ಯಾಕ್ಸ್‌ನಲ್ಲಿ ನಾಯಕಿಗೆ ತನ್ನ ತಪ್ಪು ಅರಿವಾಗುವಂತೆ ಮಾಡುವಲ್ಲಿ ಸುಮಂತ್‌ ಯಶಸ್ವಿ... ಮಾಜಿ ದಂಪತಿಗಳು ಒಂದುಗೂಡುವಲ್ಲಿಗೆ ಶುಭಂ.

ಮೂರು ಮುಖ್ಯ ಪಾತ್ರಗಳಲ್ಲಿ ನಾಯಕ ಅತಿಸಜ್ಜನ, ನಾಯಕಿ ಹಠಮಾರಿ ಹೆಣ್ಣು. ಇವೆರಡು ಕಪ್ಪು ಬಿಳುಪು ಪಾತ್ರಗಳ ನಡುವೆ ಸುಮಂತ್‌ ಪಾತ್ರ ಮಾತ್ರ ಸಹಜವಾಗಿದೆ. ಎರಡೇ ತಿರುವುಗಳಿರುವ ಚಿತ್ರವನ್ನು ಎರಡೂವರೆ ತಾಸಿನ ತನಕ ಜಗ್ಗುವುದಕ್ಕೆ ನಿರ್ದೇಶಕರು ಸಂಭಾಷಣೆಯನ್ನು ನೆಚ್ಚಿಕೊಂಡಿದ್ದಾರೆ. ಶಶಿಧರ ಭಟ್ಟರು ಈ ಅವಕಾಶವನ್ನು ವ್ಯರ್ಥಗೊಳಿಸಿಲ್ಲ ! ಅಗತ್ಯ ಇರಲಿ, ಇಲ್ಲದೇ ಇರಲಿ, ಪಾತ್ರಗಳು ಬಾಯ್ತಂಬಾ ಮಾತಾಡುವಂತೆ ಮಾಡಿದ್ದಾರೆ. ಹಾಗಾಗಿ ಚಿತ್ರ ತೀರಾ ವಾಚ್ಯವಾಗಿದೆ. ಪಾತ್ರಗಳ ಮಾನಸಿಕ ತುಮಲಗಳನ್ನು ಹೊರಗೆಡವುದಕ್ಕೆ ಕಂಪ್ಯೂಟರೇ ಒಂದು ವಾಹಕವಾಗುವ ಬದಲಾಗಿ ಅಡ್ಡಿಯಾಗಿದೆ. ಆಧುನಿಕ ಮಾಹಿತಿ ತಂತ್ರಜ್ಞಾನವೊದನ್ನು ತೆರೆಗೆ ಅಳವಡಿಸುವ ಹೊತ್ತಿಗೆ ನಿರ್ದೇಶಕರು ಅದರ ಬಗ್ಗೆ ಪ್ರಾಥಮಿಕ ಜ್ಞಾನವನ್ನಾದರೂ ಹೊಂದಿರಬೇಕು. ಇಲ್ಲಿ ಕಾರಂತ್‌ ಸೋತಿದ್ದಾರೆ. ಅಷ್ಟಕ್ಕೂ ಕಂಪ್ಯೂಟರ್‌ ಇಲ್ಲದಿದ್ದರೂ ಚಿತ್ರದ ಕತೆಗಾಗಲೀ, ನಿರೂಪಣೆಗಾಗಲಿ ಅಂಥಾ ತೊಡಕಾಗುತ್ತಿರಲಿಲ್ಲ.

ಕಮರ್ಷಿಯಲ್‌ ವಸ್ತುವನ್ನು ಹೊಂದಿರುವ ಕಲಾತ್ಮಕ ಚಿತ್ರದಂತೆ ಕಾಣಿಸುವ ಸರೋವರದಲ್ಲಿ ರಾಮ್‌ಕುಮಾರ್‌ ಅಭಿನಯ ಇಷ್ಟವಾಗುತ್ತದೆ. ಸುಮಂತ್‌ ಪಾತ್ರಕ್ಕೆ ಅವಕಾಶವಿದ್ದರೂ ಆತನ ಅಭಿನಯದಲ್ಲಿರುವ ಮಿತಿ ಮತ್ತು ದೌರ್ಬಲ್ಯಗಳು ಈ ಮೂಲಕ ಬಹಿರಂಗವಾಗಿದೆ. ಅರ್ಚನಾ ಅಂತೂ ತೀರಾ ದುಬಾರಿ ಆಯ್ಕೆ. ಕಳಪೆ ಛಾಯಾಗ್ರಹಣ, ಒಳ್ಳೆ ಸಂಗೀತ ಚಿತ್ರದ ಇತರೇ ಹೈಲೈಟ್ಸ್‌. ಸರೋವರ ಚಿತ್ರವನ್ನು ನೋಡಲೇಬೇಕು ಎಂಬ ಹಠ ನಿಮಗಿದ್ದರೆ, ಕ್ಲೈಮ್ಯಾಕ್ಸ್‌ನ್ನಷ್ಟೇ ನೋಡಿ.

ಮುಖಪುಟ / ಸ್ಯಾಂಡಲ್‌ವುಡ್‌

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X