twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : ಈ ಮಂಡ್ಯದ ಗಂಡು ಅಯೋಗ್ಯ ಅಲ್ಲ 'ಯೋಗ್ಯ'

    By Naveen
    |

    'ಅಯೋಗ್ಯ' ಚಿತ್ರದ ಮೇಲೆ ನಿರೀಕ್ಷೆ ಇಟ್ಟು ಚಿತ್ರಮಂದಿರಕ್ಕೆ ಹೋದರೆ ಅದು ನಿರಾಸೆ ಮಾಡುವುದಿಲ್ಲ. ಇದು ಒಂದು ಪಕ್ಕಾ ಹಳ್ಳಿ ಸಿನಿಮಾ. ಸುಂದರ ಕಥೆ, ಸುಮಧುರ ಸಂಗೀತ, ಸಹಜ ಹಾಸ್ಯ ಇರುವ ಈ ಸಿನಿಮಾ ಮಾಸ್ ಹಾಗೂ ಕ್ಲಾಸ್ ಎರಡು ವರ್ಗದ ಪ್ರೇಕ್ಷಕರನ್ನು ತಲುಪುತ್ತದೆ.

    Rating:
    3.5/5

    ಚಿತ್ರ: ಅಯೋಗ್ಯ
    ನಿರ್ದೇಶನ: ಮಹೇಶ್ ಕುಮಾರ್
    ನಿರ್ಮಾಣ: ಟಿ ಆರ್ ಚಂದ್ರಶೇಖರ್
    ಸಂಗೀತ : ಅರ್ಜುನ್ ಜನ್ಯ
    ಸಂಭಾಷಣೆ : ಮಂಜು ಮಾಸ್ತಿ, ಶರತ್ ಚಕ್ರವರ್ತಿ
    ಸಾಹಿತ್ಯ : ಚೇತನ್ ಕುಮಾರ್
    ಕಲಾವಿದರು: ಸತೀಶ್ ನೀನಾಸಂ, ರಚಿತಾ ರಾಮ್, ಶಿವು ಕೆ ಆರ್ ಪೇಟೆ, ಸುಂದರ್ ರಾಜ್, ತಬಲ ನಾಣಿ, ಕುರಿ ಪ್ರತಾಪ್, ಸಾಧು ಕೋಕಿಲ ಮತ್ತು ಇತರರು
    ಬಿಡುಗಡೆ: ಆಗಸ್ಟ್ 17, 2018

    ಗ್ರಾಮ ಪಂಚಾಯ್ತಿ ಸದಸ್ಯನಾಗುವ ಕನಸು

    ಗ್ರಾಮ ಪಂಚಾಯ್ತಿ ಸದಸ್ಯನಾಗುವ ಕನಸು

    ಮಂಡ್ಯದ ಒಂದು ಹಳ್ಳಿಯ ಯುವಕ ಸಿದ್ದೇಗೌಡ (ಸತೀಶ್ ನೀನಾಸಂ) ನಿಗೆ ಸಣ್ಣ ವಯಸ್ಸಿನಿಂದ ಒಂದೇ ಕನಸು ಅದು 'ಗ್ರಾಮ ಪಂಚಾಯ್ತಿ ಸದಸ್ಯ' ಆಗಬೇಕು ಎಂಬುದು. ಚಿಕ್ಕವಯಸ್ಸಿನಲ್ಲಿ ತನ್ನ ತಾಯಿಗೆ ಆದ ಅವಮಾನ ಹಾಗೂ ಊರಿಗೆ ಒಳ್ಳೆಯದು ಮಾಡುವ ದೃಷ್ಟಿಯಿಂದ ಈ ಯುವಕ ಚುನಾವಣೆಗೆ ನಿಲ್ಲುವ ಆಸೆ ಇಟ್ಟುಕೊಂಡಿರುತ್ತಾನೆ. ಶೌಚಾಲಯವೂ ಇಲ್ಲದ ಊರಿನಲ್ಲಿ ಹುಟ್ಟಿದ ಸಿದ್ದೇಗೌಡ ಆ ಊರನ್ನು ಉದ್ಧಾರ ಮಾಡಬೇಕು ಎಂದು ಹೊರಡುತ್ತಾನೆ. ಸಿದ್ದೇಗೌಡ ಗ್ರಾಮ ಪಂಚಾಯ್ತಿ ಸದಸ್ಯ ಆಗುತ್ತಾನೋ ಇಲ್ವೋ ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ.

    ಸಿದ್ದೇಗೌಡ V/S ಬಚ್ಚೇಗೌಡ

    ಸಿದ್ದೇಗೌಡ V/S ಬಚ್ಚೇಗೌಡ

    ''ನೀನು ಬಚ್ಚ ನಾನು ಬಚ್ಚೇಗೌಡ..'' ಇದು ಸಿನಿಮಾದಲ್ಲಿ ನಟ ರವಿಶಂಕರ್ ಹೇಳುವ ಡೈಲಾಗ್. ಈಗಾಗಲೇ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದ ಬಚ್ಚೇಗೌಡ (ರವಿಶಂಕರ್) ಊರಿನ ಜನರನ್ನು ಜೀತದ ಆಳುಗಳಂತೆ ನೋಡುತ್ತಿರುತ್ತಾನೆ. ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಬಚ್ಚೇಗೌಡನನ್ನು ಎದುರಿಸುವ ಶಕ್ತಿ ಊರಿನ ಯಾರಿಗೂ ಇರುವುದಿಲ್ಲ. ಈ ರೀತಿ ಇರುವ ಬಚ್ಚೇಗೌಡನ ಮುಂದೆ ಸಿದ್ದೇಗೌಡ ತೊಡೆ ತಟ್ಟುತ್ತಾನೆ, ಆತನ ವಿರುದ್ಧ ಚುನಾವಣೆಗೆ ನಿಲ್ಲುತ್ತಾನೆ. ಈ ಇಬ್ಬರಲ್ಲಿ ಯಾರು ಗ್ರಾಮ ಪಂಚಾಯ್ತಿ ಸದಸ್ಯ ಆಗುತ್ತಾರೆ ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು.

    ವಿಮರ್ಶೆ : 'ಪ್ಲೇ ಬಾಯ್ ಪಾದರಸ' ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ! ವಿಮರ್ಶೆ : 'ಪ್ಲೇ ಬಾಯ್ ಪಾದರಸ' ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ!

    ಪಂಚಾಯ್ತಿ ಕಥೆ ಜೊತೆಗೆ ಪ್ರೇಮ ಕಥೆ

    ಪಂಚಾಯ್ತಿ ಕಥೆ ಜೊತೆಗೆ ಪ್ರೇಮ ಕಥೆ

    ಒಂದು ಕಡೆ ಗ್ರಾಮ ಪಂಚಾಯ್ತಿ ಸದಸ್ಯನಾಗಲು ಸಾಹಸ ಮಾಡುತ್ತಿರುವ ಸಿದ್ದೇಗೌಡ ಇನ್ನೊಂದು ಕಡೆ ಮದುವೆಗೆ ಹುಡುಗಿ ಹುಡುಕುತ್ತಿರುತ್ತಾನೆ. ಆಸ್ತಿ, ಕೆಲಸ ಏನೂ ಇಲ್ಲದ ಈತನಿಗೆ ಯಾರೂ ಹೆಣ್ಣು ಕೊಡುವುದಿಲ್ಲ. ಬಳಿಕ ನಂದಿನಿ (ರಚಿತಾ ರಾಮ್) ಜೊತೆಗೆ ಪ್ರೀತಿ ಶುರು ಆಗುತ್ತದೆ. ಒಂದು ಕಡೆ ನಂದಿನಿಯ ಅಪ್ಪನನ್ನು ಒಪ್ಪಿಸಿ ಸಿದ್ದೇಗೌಡ ಆಕೆಯನ್ನು ಮದುವೆ ಆಗುತ್ತಾನಾ? ಎನ್ನುವುದು ಹಾಗೂ ಇನ್ನೊಂದು ಕಡೆ ಇದೇ ಸಿದ್ದೇಗೌಡ ಗ್ರಾಮ ಪಂಚಾಯ್ತಿ ಸದಸ್ಯ ಆಗುತ್ತಾನಾ? ಎನ್ನುವುದು ಈ ಎರಡು ಪ್ರಶ್ನೆಗೆ ಉತ್ತರ ಚಿತ್ರಮಂದಿರದಲ್ಲಿ ಸಿಗಲಿದೆ.

    ಮತ್ತೆ ಮಂಡ್ಯದ ಗಂಡಾದ ಸತೀಶ್

    ಮತ್ತೆ ಮಂಡ್ಯದ ಗಂಡಾದ ಸತೀಶ್

    ಸಿನಿಮಾದಲ್ಲಿ ಸತೀಶ್ ನೀನಾಸಂ ಮತ್ತೆ ಮಂಡ್ಯದ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಸಿದ್ದೇಗೌಡನ ಪಾತ್ರವನ್ನು ನೀರು ಕುಡಿದಷ್ಟು ಸುಲಭವಾಗಿ ಅವರು ಮಾಡಿ ಬಿಟ್ಟಿದ್ದಾರೆ. ಆಕ್ಟಿಂಗ್, ಆಕ್ಷನ್, ಕಾಮಿಡಿ, ಡ್ಯಾನ್ಸ್ ಹೀಗೆ ಪ್ರತಿ ವಿಭಾಗದಲ್ಲಿಯೂ ಸತೀಶ್ ಪೂರ್ಣ ಅಂಕ ಪಡೆಯುತ್ತಾರೆ. ತಮ್ಮ ಅಭಿಮಾನಿಗಳಿಗೆ ಏನು ಬೇಕೋ ಆ ರೀತಿಯ ಚಿತ್ರವನ್ನು ಅವರು ಆರಿಸಿಕೊಂಡಿದ್ದಾರೆ. ಮೊದಲು ಎಲ್ಲರ ಕಣ್ಣಿಗೆ 'ಅಯೋಗ್ಯ'ನಾಗಿ ಕಾಣುವ ಇವರು ಕೊನೆಗೆ 'ಯೋಗ್ಯ'ನಾಗುತ್ತಾರೆ.

    ಮಂಡ್ಯದ ಸಕ್ಕರೆ ರಚಿತಾ ರಾಮ್

    ಮಂಡ್ಯದ ಸಕ್ಕರೆ ರಚಿತಾ ರಾಮ್

    ಸಿನಿಮಾದಲ್ಲಿ ರಚಿತಾ ರಾಮ್ ಅವರ ನಂದಿನಿ ಪಾತ್ರ ತುಂಬ ಮುದ್ದಾಗಿದೆ. ಚಿತ್ರದಲ್ಲಿ ಅವರು ಮಂಡ್ಯದ ಸಕ್ಕರೆ ಎಂದು ಹೇಳಬಹುದು. ಹಳ್ಳಿ ಹುಡುಗಿಯಾಗಿ ರಚಿತಾ ತುಂಬ ಚೆನ್ನಾಗಿ ಕಾಣುತ್ತಾರೆ. ಅದೇ ರೀತಿ ನಟನೆಯಲ್ಲಿಯೂ ಅವರು ಹಿಂದೆ ಬಿದ್ದಿಲ್ಲ. ಹಳ್ಳಿ ಹಸಿರಿನ ಮಧ್ಯೆ ನಡೆಯುವ ಈ ಕಥೆಯಲ್ಲಿ ಅವರು ಹೂವಿನಂತೆ ಅರಳಿದ್ದಾರೆ.

    ರವಿಶಂಕರ್ ಚಿತ್ರದ ಎರಡನೇ ಹೀರೋ

    ರವಿಶಂಕರ್ ಚಿತ್ರದ ಎರಡನೇ ಹೀರೋ

    ಒಂದು ಸಣ್ಣ ಪಾತ್ರವನ್ನು ಸಹ ಅದ್ಬುತವಾಗಿಸುವ ಶಕ್ತಿ ನಟ ರವಿಶಂಕರ್ ಅವರಿಗೆ ಇದೆ. ಈ ಚಿತ್ರದಲ್ಲಿ ಬಚ್ಚೇಗೌಡ ಪಾತ್ರವನ್ನು ಮಾಡಿರುವ ಅವರು ತಮ್ಮ ಪಾತ್ರವನ್ನು ಅಮೋಘವಾಗಿ ನಿರ್ವಹಿಸಿದ್ದಾರೆ. ತೆರೆ ಮೇಲೆ ಅವರು ಬಂದಾಗಲೆಲ್ಲ ಸಿನಿಮಾ ನೋಡುವ ಪ್ರೇಕ್ಷಕರಿಗೆ ಮಜಾ ಸಿಗುತ್ತದೆ. ಉಳಿದಂತೆ, ಶಿವು ಕೆ ಆರ್ ಪೇಟೆ ಹೆಚ್ಚು ನಗಿಸುತ್ತಾರೆ. ಸುಂದರ್ ರಾಜ್, ತಬಲ ನಾಣಿ ಹೀಗೆ ಪ್ರತಿ ಪಾತ್ರಗಳು ಸಹ ಸಹಜವಾಗಿ ಮೂಡಿ ಬಂದಿದೆ. ಕೊನೆಗೆ ಬಂದರೂ ಕುರಿ ಪ್ರತಾಪ್ ಹಾಗೂ ಸಾಧು ಕೋಕಿಲ ನಗಿಸುತ್ತಾರೆ.

    ಹಾಡುಗಳು, ಡೈಲಾಗ್, ಕಾಮಿಡಿ

    ಹಾಡುಗಳು, ಡೈಲಾಗ್, ಕಾಮಿಡಿ

    'ಅಯೋಗ್ಯ' ಸಿನಿಮಾದ ನಿಂತಿರುವುದು ನಾಲ್ಕು ಕಂಬಗಳ ಮೇಲೆ ಎಂದುಕೊಂಡರೆ ಅವರಲ್ಲಿ ಮೂರು ಕಂಬಗಳು ಹಾಡು, ಡೈಲಾಗ್, ಕಾಮಿಡಿ ಎಂದು ಹೇಳಬಹುದು. ಈ ಮೂರು ಅಂಶಗಳು ಚಿತ್ರದ ಶಕ್ತಿಯನ್ನು ಹೆಚ್ಚು ಮಾಡಿವೆ. ಮಂಜು ಮಾಸ್ತಿ ಮತ್ತು ಶರತ್ ಚಕ್ರವರ್ತಿ ಅವರ ಸಂಭಾಷಣೆ ಸಖತ್ ಕಿಕ್ ನೀಡುತ್ತದೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ತೂಕ ಜಾಸ್ತಿ ಮಾಡಿದೆ. ಇಡೀ ಸಿನಿಮಾದಲ್ಲಿ ಇರುವ ಕಾಮಿಡಿ ಚಿತ್ರಕ್ಕೆ ಜೀವಂತಿಕೆಯನ್ನು ತುಂಬಿಸಿದೆ.

    ನಿರೀಕ್ಷೆಗೆ ತಕ್ಕ ಚಿತ್ರ ಮಾಡಿದ ನಿರ್ದೇಶಕ

    ನಿರೀಕ್ಷೆಗೆ ತಕ್ಕ ಚಿತ್ರ ಮಾಡಿದ ನಿರ್ದೇಶಕ

    ನಿರ್ದೇಶಕ ಮಹೇಶ್ ಕುಮಾರ್ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಒಂದು ಹಳ್ಳಿ ಕಥೆಯನ್ನು ಆದಷ್ಟು ಮನರಂಜನೆ ಇಟ್ಟುಕೊಂಡು ಹೇಳಿದ್ದಾರೆ. ಹಾಡುಗಳಿಂದ ಸಿನಿಮಾದ ಮೇಲೆ ಹುಟ್ಟಿಕೊಂಡಿದ್ದ ನಿರೀಕ್ಷೆಯನ್ನು ಅವರು ಹುಸಿ ಮಾಡಿಲ್ಲ. ಒಂದು ಕಮರ್ಷಿಯಲ್ ಚಿತ್ರವನ್ನು ಅಷ್ಟೇ ನೀಟ್ ಆಗಿ ಮಾಡಿದ್ದಾರೆ.

    ಆರಾಮಾಗಿ ನೋಡಬಹುದು

    ಆರಾಮಾಗಿ ನೋಡಬಹುದು

    ಒಳ್ಳೆಯ ಹಾಡುಗಳು, ಒಂದೆರಡು ಫೈಟುಗಳು, ಬೇಕಾದಷ್ಟು ಕಾಮಿಡಿ, ಹೀರೋ - ವಿಲನ್ ಜುಗಲ್ ಬಂದಿ, ಜೊತೆಗೆ ಜೊತೆಗೆ ಪ್ರೀತಿ - ಪ್ರೇಮ ಇವಿಷ್ಟು ಅಂಶಗಳು ಅಯೋಗ್ಯ ಸಿನಿಮಾದಲ್ಲಿ ಇವೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಎಲ್ಲ ವರ್ಗದವರು ನೋಡಬಹುದಾದ 'ಯೋಗ್ಯ' ಸಿನಿಮಾ ಇದು.

    English summary
    Actor Sathish Neenasam's 'Ayogya' kananda movie review.
    Saturday, August 18, 2018, 10:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X