Satyaprem Ki Katha Review: ಸೂಕ್ಷ್ಮ ಕಥೆ, ಸೂಪರ್ ಮೆಸೇಜ್; ಬಹು ದಿನಗಳ ಬಳಿಕ 'ಒಂದೊಳ್ಳೆ ಬಾಲಿವುಡ್ ಸಿನಿಮಾ'
ಇತ್ತೀಚೆಗಿನ ದಿನಗಳಲ್ಲಿ, ಅದರಲ್ಲಿಯೂ ಬಾಲಿವುಡ್ ಮೇಲೆ ಸೌತ್ ಇಂಡಸ್ಟ್ರಿಗಳ ಪ್ರಾಬಲ್ಯ ಹೆಚ್ಚಾದ ಬಳಿಕ ಹಿಂದಿ ಚಲನಚಿತ್ರರಂಗ ತನ್ನ ಹಳೆಯ ಶೈಲಿಯ ಚಿತ್ರಗಳನ್ನು ನಿಲ್ಲಿಸಿ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿ ಗೆಲುವಿನ ಸಿಹಿ ನೋಡಲು ಪ್ರಯತ್ನಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ.
ಹೀಗೆ ಪ್ರಯೋಗಕ್ಕೆ ಮುಂದಾಗ ಬಾಲಿವುಡ್‌ಗೆ ಪಾಸಿಟಿವ್‌ಗಿಂತ ನೆಗೆಟಿವ್ ವಿಮರ್ಶೆಗಳು ಸಿಕ್ಕಿದ್ದೇ ಹೆಚ್ಚು. ಬಾಲಿವುಡ್ ತನ್ನ ತನವನ್ನು ಮರೆತು ಚಿತ್ರಗಳನ್ನು ಮಾಡುತ್ತಿದೆ ಎಂದು ಕೆಲವರು ಟ್ರೋಲ್ ಮಾಡಿದರೆ, ಇನ್ನೂ ಕೆಲವರು ಹಳೇ ಹಸಿ ಬಿಸಿ ಬಾಲಿವುಡ್ ಲವ್ ಸ್ಟೋರಿ ಸಿನಿಮಾಗಳಿಗಿಂತ ಈ ಚಿತ್ರಗಳೇ ಎಷ್ಟೋ ವಾಸಿ ಎಂದರು. ಆದರೆ ಬಾಲಿವುಡ್ ಸಿನಿ ರಸಿಕರಲ್ಲಿ ವಿಂಟೇಜ್ ಹಿಂದಿ ಚಿತ್ರಗಳ ರೀತಿಯ ಡಬಲ್ ಮೀನಿಂಗ್ ರಹಿತ ಕ್ಲೀನ್ ಲವ್ ಸ್ಟೋರಿ ಚಿತ್ರಗಳು ಬರಬೇಕು ಎಂಬ ಬೇಡಿಕೆ ಇತ್ತು.

ಈ ಬೇಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಅಲ್ಪಸ್ವಲ್ಪವಾದರೂ ಪೂರೈಸಿದ್ದು ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ 'ಸತ್ಯಪ್ರೇಮ್ ಕಿ ಕಥಾ'. ಜೂನ್ 29ರಂದು ಬಿಡುಗಡೆಗೊಂಡ ಈ ಚಿತ್ರದಲ್ಲಿ ನಾಯಕನಾಗಿ ಕಾರ್ತಿಕ್ ಆರ್ಯನ್ ನಟಿಸಿದ್ದರೆ, ನಾಯಕಿಯಾಗಿ ಕಿಯಾರಾ ಅಡ್ವಾಣಿ ಬಣ್ಣ ಹಚ್ಚಿದ್ದಾರೆ. ಕರಣ್ ಶ್ರೀಕಾಂತ್ ಶರ್ಮಾ ಬರೆದಿರುವ ಕಥೆಗೆ ಸಮೀರ್ ವಿದ್ವಾಂಸ್ ಆಕ್ಷನ್ ಕಟ್ ಹೇಳಿದ್ದು, ನಡಿಯಾವಾಲಾ ಗ್ರಾಂಡ್‌ಸನ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿಬಂದಿದೆ.
ಚಿತ್ರದ ಒನ್‌ಲೈನ್ ಸ್ಟೋರಿ ಏನು?
ಮಧ್ಯಮ ವರ್ಗದ ನಿರುದ್ಯೋಗಿ ನಾಯಕ ಶ್ರೀಮಂತ ವ್ಯಾಪಾರಸ್ಥನ ಮಗಳನ್ನು ವಿವಾಹವಾಗಿ ಬಳಿಕ ಆಕೆಗೆ ಈ ಮದುವೆ ಇಷ್ಟವಿಲ್ಲ ಎಂಬ ಅಂಶ ತಿಳಿದು, ಆಕೆಯನ್ನು ಹೇಗೆ ಮನವೊಲಿಸುತ್ತಾನೆ, ನಾಯಕಿ ಮದುವೆಯಾದ ಮೇಲೂ ಸಹ ನಾಯಕ ಇಷ್ಟವಿಲ್ಲ ಎಂದು ಹೇಳಲು ಕಾರಣವೇನು ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ.
ಸಿಂಪಲ್ ಕಥೆ
ಇನ್ನು ಸತ್ಯಪ್ರೇಮ್ ಕಿ ಕಥಾ ಚಿತ್ರದ ಕಥೆಗೆ ಬಂದರೆ ನಾಯಕ ಸತ್ಯಪ್ರೇಮ್ ಮಧ್ಯಮ ವರ್ಗದ ಎಲ್‌ಎಲ್‌ಬಿ ತೇರ್ಗಡೆಯಾಗದ ನಿರುದ್ಯೋಗಿ, ಅವಿವಾಹಿತನಾಗಿರುತ್ತಾನೆ. ತನಗಿಂತ ಚಿಕ್ಕ ಹುಡುಗರೇ ವಿವಾಹವಾಗುತ್ತಿರುವ ವೇದನೆಯ ನಡುವೆಯೇ ಆತನಿಗೆ ಅದೇ ಊರಿನ ಶ್ರೀಮಂತನ ಮಗಳನ್ನು ಇಷ್ಟಪಡ್ತಾನೆ. ಬಳಿಕ ಆಕೆಗೆ ಈಗಾಗಲೇ ಪ್ರಿಯತಮನಿರುವ ವಿಷಯ ತಿಳಿಯುವ ನಾಯಕ ಕೆಲ ಸಮಯದಲ್ಲಿಯೇ ತಾನು ಇಷ್ಟಪಡುತ್ತಿರುವ ನಾಯಕಿ ಹಾಗೂ ಆಕೆಯ ಬ್ರೇಕ್‌ಅಪ್ ವಿಷಯ ತಿಳಿದು ತಾನು ಆಕೆಯನ್ನು ಮದುವೆಯಾಗುವ ಕನಸು ಕಾಣುತ್ತಿರುತ್ತಾನೆ.
ಈ ನಡುವೆಯೇ ನಾಯಕಿ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಆಕೆಯನ್ನು ನಾಯಕನೇ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸುತ್ತಾನೆ. ಈ ಸಹಾಯ ಮೆಚ್ಚಿದ ನಾಯಕಿಯ ತಂದೆ ತನ್ನ ಮಗಳನ್ನು ನಿರುದ್ಯೋಗಿ ನಾಯಕನಿಗೆ ಕೊಟ್ಟು ಮದುವೆ ಮಾಡ್ತಾನೆ. ಹೀಗೆ ಕೆಲಸಕ್ಕೆ ಹೋಗದ ಮಧ್ಯಮ ವರ್ಗದ ನಾಯಕನಿಗೆ ಶ್ರೀಮಂತ ತಂದೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದಾದರೂ ಯಾಕೆ ಎಂಬ ಅನುಮಾನ ಕಾಡುತ್ತಿರುವಾಗಲೇ ನಾಯಕಿ ತನಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಬಾಂಬ್ ಸಿಡಿಸುತ್ತಾಳೆ ಹಾಗೂ ನಾಯಕನ ಜತೆ ಸಂಸಾರ ಅಸಾಧ್ಯ ಎಂದು ಕಟ್ಟುನಿಟ್ಟಾಗಿಯೂ ಸಹ ಹೇಳ್ತಾಳೆ.
ನಾಯಕಿಯ ಈ ನಿರ್ಧಾರದ ಹಿಂದೆ ಬಲವಾದ ನೋವಿರುವುದು ನಾಯಕನಿಗೆ ಅರ್ಥವಾಗುತ್ತೆ. ಬೇರೊಬ್ಬನನ್ನು ಇಷ್ಟಪಟ್ಟಿದ್ದ ನಾಯಕಿ ಆತ್ಮಹತ್ಯೆಗೆ ಯತ್ನಿಸಿದ್ದಾದರೂ ಯಾಕೆ, ಇಬ್ಬರ ಬ್ರೇಕ್‌ಅಪ್‌ಗೆ ಕಾರಣವೇನು ಹಾಗೂ ನಾಯಕನನ್ನು ಮದುವೆಯಾದ ನಂತರವೂ ಆತನೊಂದಿಗೆ ಸಂಸಾರ ನಡೆಸಲು ವಿರೋಧಿಸುವುದು ಯಾಕೆ ಎಂಬುದೇ ಚಿತ್ರದ ಕಥೆ.
ಸೂಕ್ಷ್ಮ ವಿಚಾರ, ಸೂಪರ್ ಮೆಸೇಜ್
ಆರಂಭದಲ್ಲಿ ಡಾನ್ಸ್ ಮಾಡುತ್ತಾ ಖುಷಿಯಾಗಿ ಬಾಯ್‌ಫ್ರೆಂಡ್ ಜತೆ ತಿರುಗುತ್ತಿದ್ದ ನಾಯಕಿಯಲ್ಲಿ ದಿಢೀರ್ ಬದಲಾವಣೆಯಾಗಲು ಬಲವಾದ ಸೂಕ್ಷ್ಮ ವಿಚಾರ ಕಾರಣವಾಗಿರುತ್ತದೆ. ತನ್ನದಲ್ಲದ ತಪ್ಪಿಗೆ ಒಳಗಾಗುವ ಆಕೆ ಇಕ್ಕಟ್ಟಿಗೆ ಸಿಲುಕಿಕೊಳ್ತಾಳೆ. ಆಕೆ ತನ್ನಲ್ಲೇ ಮುಚ್ಚಿಟ್ಟುಕೊಟ್ಟಿದ್ದ 'ಅಲೈಂಗಿಕ' ಸಮಸ್ಯೆಯನ್ನು ನಾಯಕನೊಂದಿಗೆ ಹಂಚಿಕೊಳ್ತಾಳೆ. ಹೀಗೆ ತನ್ನ ಪತ್ನಿಗಿರುವ ಸೂಕ್ಷ್ಮ ಸಮಸ್ಯೆ ತಿಳಿದ ನಾಯಕ ಅದರ ವಿರುದ್ಧ ಹೇಗೆ ಹೋರಾಡ್ತಾನೆ, ಆ ಸಮಸ್ಯೆಗೆ ಕಾರಣವೇನು ಎಂಬುದನ್ನು ಒಂದೊಳ್ಳೆ ಸಂದೇಶದೊಂದಿಗೆ ತೆರೆಮೇಲೆ ತಂದಿದ್ದಾರೆ ನಿರ್ದೇಶಕರು.
ಡಬಲ್ ಮೀನಿಂಗ್ ಇಲ್ಲದ ಕಾಮಿಡಿ
ಇನ್ನು ಬಾಲಿವುಡ್ ಸಿನಿಮಾಗಳಲ್ಲಿ ನಗಿಸಲು ಡಬಲ್ ಮೀನಿಂಗ್ ಕಡ್ಡಾಯ ಎಂಬ ಮಾತುಗಳನ್ನು ಇತ್ತೀಚೆಗಿನ ಹಲವಾರು ಚಿತ್ರಗಳು ನಿರೂಪಿಸಿಬಿಟ್ಟಿವೆ. ಆದರೆ ಈ ಚಿತ್ರದಲ್ಲಿ ಹಾಗಿಲ್ಲ. ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದಂತಹ ಕಾಮಿಡಿ ಸನ್ನಿವೇಶಗಳಿವೆ.
ಪಾಸಿಟಿವ್ ಹಾಗೂ ಮೈನಸ್
ಈ ಚಿತ್ರದ ಬಿಗ್ಗೆಸ್ಟ್ ಪಾಸಿಟಿವ್ ಎಂದರೆ ತಾರಾಗಣ. ನಾಯಕ ಹಾಗೂ ನಾಯಕಿ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದು, ಕಿಯಾರಾ ಸಿನಿ ಜೀವನದಲ್ಲಿ ಇದು ಎಂದೂ ಮರೆಯಲಾಗದ ಸಿನಿಮಾ ಎನ್ನಬಹುದು. ಚಿತ್ರವನ್ನು ಅಹ್ಮದಾಬಾದ್‌ನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದ್ದು, ಕ್ಯಾಮೆರಾ ವರ್ಕ್, ಮ್ಯೂಸಿಕ್ ಎಲ್ಲವೂ ಸುಂದರ. ಇನ್ನು ಚಿತ್ರದಲ್ಲಿ ಹೆಚ್ಚೇನೂ ಮೈನಸ್ ಪಾಯಿಂಟ್ ಇಲ್ಲ. ದೊಡ್ಡ ನಿರೀಕ್ಷೆಯೊಂದಿಗೆ ಚಿತ್ರವನ್ನು ವೀಕ್ಷಿಸಿದರೆ ಚಿತ್ರದಲ್ಲಿ ಅಂತಹ ದೊಡ್ಡ ಕಂಟೆಂಟ್ ಇಲ್ಲ ಎನಿಸುವುದನ್ನು ಮೈನಸ್ ಪಾಯಿಂಟ್ ಎಂದು ಪರಿಗಣಿಸಬಹುದಾಗಿದ್ದು, ಹೆಚ್ಚೇನೂ ನಿರೀಕ್ಷೆ ಇಟ್ಟುಕೊಳ್ಳದೇ ಒಂದೊಳ್ಳೆ ಮನರಂಜನೆ ಹಾಗೂ ಮೆಸೇಜ್ ನೀಡುವ ಚಿತ್ರ ನೋಡಲು ಇಚ್ಛಸುವವರಿಗೆ ಈ ಸಿನಿಮಾ ಪರ್ಫೆಕ್ಟ್ ಚಾಯ್ಸ್.


Click it and Unblock the Notifications











