»   » ಮೊದಲ ಯತ್ನದಲ್ಲೇ ಸಿನಿಮಾ ತಂತ್ರದ ಎಲ್ಲ ಮಗ್ಗುಲುಗಳನ್ನು ತಡವುವಲ್ಲಿ ಯಶಸ್ಸು ಕಂಡಿರುವ ಅಶೋಕ್‌ ಪಾಟೀಲ್‌ ಶಾಪಗ್ರಸ್ತ ಸ್ಯಾಂಡಲ್‌ವುಡ್‌ಗೆ ಸಂಜೀವಿನಿಯಂತೆ ಕಂಡಿದ್ದಾರೆ

ಮೊದಲ ಯತ್ನದಲ್ಲೇ ಸಿನಿಮಾ ತಂತ್ರದ ಎಲ್ಲ ಮಗ್ಗುಲುಗಳನ್ನು ತಡವುವಲ್ಲಿ ಯಶಸ್ಸು ಕಂಡಿರುವ ಅಶೋಕ್‌ ಪಾಟೀಲ್‌ ಶಾಪಗ್ರಸ್ತ ಸ್ಯಾಂಡಲ್‌ವುಡ್‌ಗೆ ಸಂಜೀವಿನಿಯಂತೆ ಕಂಡಿದ್ದಾರೆ

Subscribe to Filmibeat Kannada

ಚಿತ್ರ : ಶಾಪನಿರ್ದೇಶನ : ಅಶೋಕ್‌ ಪಾಟೀಲ್‌ತಾರಾಗಣ : ರಮೇಶ್‌, ಬಿ.ಸಿ. ಪಾಟೀಲ್‌, ಅನುಪ್ರಭಾಕರ್‌, ಜೈ ಜಗದೀಶ್‌, ನೀಗ್ರೋ ಜಾನಿ
* ಸುಂದರ್‌

ಇದು ಪಕ್ಕಾ ಸಿಡ್ನಿ ಷೆಲ್ಡಾನ್‌ ಕತೆ. ಒಬ್ಬ ಸೈಕಿಕ್‌ನ ಸುತ್ತು ಸುತ್ತುವ ಥ್ರಿಲ್ಲರ್‌.

ಹೀಗಂತ ಶಾಪ ಚಿತ್ರವನ್ನು ಸರಳೀಕೃತಗೊಳಿಸಿದರೆ ಅನ್ಯಾಯ ಮಾಡಿದಂತಾಗಬಹುದು. ಯಾಕೆಂದರೆ ಈ ನೆಲಕ್ಕೆ ಪರಕೀಯ ಅನಿಸಬಹುದಾದಂತ ಕತೆಯಾಂದನ್ನು ಅಶೋಕ್‌ ಪಾಟೀಲ್‌ ಅಚ್ಚುಕಟ್ಟಾಗಿ ಲೋಕಲೈಸ್‌ ಮಾಡಿದ್ದಾರೆ. ಕಮರ್ಷಿಯಲ್‌ ಸೂತ್ರಗಳನ್ನು ನಾಜೂಕಾಗಿ ಬಳಸಿಕೊಂಡಿದ್ದಾರೆ. ಮನುಷ್ಯನೊಳಗಣ ಸುಕೃತಿ, ವಿಕೃತಿಗಳನ್ನು ನವಿರಾಗಿ ಬಿಂಬಿಸಿದ್ದಾರೆ. ಸಿನಿಮಾ ತಂತ್ರಜ್ಞಾನದ ಎಲ್ಲ ಮಗ್ಗುಲುಗಳನ್ನು ತಡವಿದ್ದಾರೆ, ಆದರೆ ಅದರ ದುರುಪಯೋಗವಂತೂ ಖಂಡಿತಾ ಆಗಿಲ್ಲ. ತಾಂತ್ರಿಕ ಪರಿಣಿತಿಯನ್ನು ಮೆರೆಯುವ ರಭಸದಲ್ಲಿ ಭಾವನಾಲೋಕವನ್ನು ಕಡೆಗಣಿಸಿಲ್ಲ . ಅಲ್ಲೂ ಮತ್ತದೇ ಸಂಯಮ.

ಶಾಪ ಒಬ್ಬ ತಿರಸ್ಕೃತನ ಕತೆ, ಕಳಕೊಂಡವನ ಕತೆ, ಬಾಲ್ಯವೇ ಒಂದು ಶಾಪವಾದವನ ಕತೆ, ನೆನಪುಗಳ ಕಾಟದಿಂದ ತಪ್ಪಿಸಿಕೊಳ್ಳಲಾಗದವನ ಕತೆ, ನಿರುಮ್ಮಳ ಪ್ರೀತಿಗಾಗಿ ಅರಸುತ್ತಾ ಕೊನೆಗೆ ನೋವನ್ನೇ ಉಡುಗೊರೆಯಾಗಿ ಪಡೆದವನ ಕತೆ, ಬದುಕಿನ ಪ್ರತಿ ಹಂತದಲ್ಲೂ ವೈಫಲ್ಯವನ್ನೇ ಕಂಡು ನೊಂದವನ ಕತೆ. ಆತ ಹತಾಶ, ಭಗ್ನ ಹೃದಯಿ, ಸಜ್ಜನ, ಭಯ ವಿಹ್ವಲ, ನಿರಾಶಾವಾದಿ.

ಹೀಗೆ ಎಲ್ಲವನ್ನೂ ನೆಗೆಟಿವ್‌ ಆ್ಯಂಗಲ್‌ನಲ್ಲೇ ಯೋಚಿಸುವವನ ಬದುಕು ದುರಂತ ಕಾಣುವುದು ಅನಿವಾರ್ಯ ಅನ್ನುವುದನ್ನು ನಿರ್ದೇಶಕರು ತುಂಬಾ ಸಾಬರ್‌ ಆಗಿ ನಿರೂಪಿಸುತ್ತಾರೆ. ಚಿತ್ರ ಆರಂಭವಾಗುವುದೇ ನಾಯಕನ ಫ್ಲಾಶ್‌ ಬ್ಯಾಕ್‌ನಿಂದ. ಆತ ಜಗತ್ತಿಗೆ ಕಾಲಿಟ್ಟಾಕ್ಷಣ ಅಮ್ಮ ಸಾಯುತ್ತಾಳೆ. ಅದೇ ಕಾರಣಕ್ಕೆ ಈತ ಅಪ್ಪನಿಗೆ ಬೇಡದ ಮಗು. ಮಲತಾಯಿಯೇ ಅಮ್ಮನಾಗಿ ಸಲಹಿದರೂ, ಆಕೆಗೆ ಅಪ್ಪನ ಹಿಂಸೆ. ಮಕ್ಕಳ ಮುಂದೆ ಹೆತ್ತವರು ಜಗಳವಾಡಿದರೆ ಏನಾಗುತ್ತದೆ ಅನ್ನೋದನ್ನು ಈ ಚಿತ್ರ ಹೇಳುತ್ತದೆ. ಮಲತಾಯಿ ಮನೆ ಬಿಟ್ಟು ಹೋಗುತ್ತಾಳೆ. ಈ ಹುಡುಗ ಅಪ್ಪನ ಅವಹೇಳನದ ಮಾತುಗಳನ್ನು ಕೇಳುತ್ತಾ ಬೆಳೆಯುತ್ತಾನೆ. ಈತನ ಏಕೈಕ ಸಂಗಾತಿಯಾದ ಕೊಳಲನ್ನೂ ಅಪ್ಪ ನೀರಿಗೆಸೆಯುತ್ತಾನೆ. ಹಾಗಾಗಿ ಈತ ಮುರಿದುಹೋದ ಕೊಳಲು.

ಅನಂತರ ಪ್ರೀತಿಸಿದ ಹಡುಗಿ ಕೈ ಕೊಡುತ್ತಾಳೆ. ಪ್ರತಿಕ್ಷಣವೂ ಸತ್ತು ಹೋದ ಅಪ್ಪನ ಆತ್ಮ ಬಂದು ನೀನೊಬ್ಬ ದಡ್ಡ. ಜೀವನದಲ್ಲಿ ಏನನ್ನೂ ಸಾಧಿಸಲಾರೆ ಎಂದು ಅಣಕಿಸುತ್ತದೆ. ಮನೋ ವೈದ್ಯರು ಇದನ್ನು ಮನಸ್ಸಿನೊಳಗಿನ ನೆಗೆಟಿವ್‌ ಯೋಚನೆ ಎನ್ನುತ್ತಾರೆ. ನೆನಪುಗಳು ನಿನ್ನನ್ನು ಆಳುವುದಕ್ಕೆ ಬಿಡಬೇಡ. ನೀನೇ ನೆನಪುಗಳನ್ನು ಆಳು. ಭಾವನೆಗಳನ್ನು ಬಚ್ಚಿಟ್ಟುಕೊಳ್ಳಬೇಡ. ನೇರವಾಗಿ ಹೇಳಿಬಿಡು ಅನ್ನುತ್ತಾರೆ. ಆದರೆ ಈತನಿಗೆ ಭಯ. ತನ್ನ ಭಾವನೆಗಳನ್ನು ಪ್ರೀತಿಪಾತ್ರರ ಮುಂದೆ ಹೇಳಿಕೊಂಡಾಗಲೆಲ್ಲಾ ಅವರನ್ನು ಕಳಕೊಳ್ಳುತ್ತೇನೆ ಅನ್ನುವ ವಿಚಿತ್ರ ಭೀತಿ. ಈ ಸಾರಿಯೂ ಹಾಗೇ ಆಗುತ್ತದೆ. ಪ್ರೀತಿಸಿದ ಹುಡುಗಿ ಕಾವೇರಿಯ ಮುಂದೆ ತನ್ನ ಮನಸ್ಸನ್ನು ತೆರೆದಿಡುತ್ತಾನೆ. ಆದರೆ ತುಂಬಾ ತಡವಾಯಿತು ಅನ್ನುತ್ತಾಳೆ ಆಕೆ. ಯಾಕೆಂದರೆ ಆ ಹೊತ್ತಿಗಾಗಲೇ ಇನ್ನೊಬ್ಬನ ಜೊತೆ ಆಕೆಯ ಮದುವೆ ನಿಶ್ಚಯವಾಗಿದೆ.

ಇಲ್ಲಿಂದ ಚಿತ್ರಕ್ಕೊಂದು ವಿಚಿತ್ರ ತಿರುವು ಸಿಗುತ್ತದೆ. ಅಲ್ಲಿಯತನಕ ಹೇಡಿಯಾಗಿದ್ದ ನಾಯಕನ ಮೈಯಾಳಗೆ ವಿಚಿತ್ರ ಆವೇಶ ಬರುತ್ತದೆ. ಅದಕ್ಕೆ ತಕ್ಕಂತೆ ಕಾವೇರಿಯನ್ನು ಬಿಡುವುದಿಲ್ಲ ಅನ್ನುವ ರೈತರ ಪ್ರತಿಭಟನಾ ಮೆರವಣಿಗೆಯೂ ಇವನ ಮನಸ್ಸಿನಲ್ಲಿ ಕ್ರೂರ ಯೋಚನೆಯನ್ನು ಬಿತ್ತುತ್ತದೆ. ಕಾವೇರಿಯ ಗಂಡ ತಮಿಳುನಾಡಿನವನು ಅನ್ನೋದು ಇನ್ನೊಂದು ಟ್ವಿಸ್ಟ್‌ . ನಾಯಕ ಪಕ್ಕಾ ಪ್ರೊಫೆಷನಲ್‌ ಕೊಲೆಗಾರನಂತೆ ತಂತ್ರ ರೂಪಿಸುತ್ತಾನೆ. ಆದರೆ ಅವನಿಂದ ಈ ಕೆಲಸ ಸಾಧ್ಯವಾಗುವುದಿಲ್ಲ. ಇನ್ನೇನು ಗುಂಡು ಹಾರಿಸಬೇಕು ಅನ್ನುವ ಹೊತ್ತಲ್ಲಿ ಅಮ್ಮನ ಮಾತು ನೆನಪಾಗುತ್ತದೆ. ನಾವು ಬದುಕುವುದಕ್ಕೆ ಇನ್ನೊಬ್ಬರನ್ನು ಸಾಯಿಸಬಾರದು. ಅನಂತರ ನಾಯಕ ತನ್ನ ತಂತ್ರವನ್ನು ಬದಲಾಯಿಸಿ ಒಬ್ಬ ಕಟುಕನನ್ನು ಈ ಕಾರ್ಯಕ್ಕೆ ನೇಮಿಸುತ್ತಾನೆ. ಆತನ ತತ್ವವೇನೆಂದರೆ ಒಬ್ಬ ಬದುಕುವುದಕ್ಕೆ ಇನ್ನೊಬ್ಬ ಸಾಯಲೇಬೇಕು. ಕಾವೇರಿಯ ಗಂಡನ ಕೊಲೆ ಇನ್ನೇನು ನಡೆಯಬೇಕು ಅನ್ನುವ ಹೊತ್ತಲ್ಲಿ ಕಾವೇರಿ ನಾಯಕನ ಮನೆಗೆ ಬರುತ್ತಾಳೆ. ತನ್ನ ಗಂಡನ ಜೊತೆಗೆ ಬಾಳುವುದು ಸಾಧ್ಯವಿಲ್ಲ ಅನ್ನುತ್ತಾಳೆ. ಆದರೆ ಆ ಹೊತ್ತಿಗೆ ತೀರಾ ತಡವಾಗಿರುತ್ತದೆ. ಅಲ್ಲಿ ಕೊಲೆಯಾಗುತ್ತದೆ, ಅದಕ್ಕೆ ಸಾಕ್ಷಿಯಾದ ನಾಯಕಿಯೂ ಸಾಯುತ್ತಾಳೆ. ಕೊನೆಗೆ ನಾಯಕ ಪಶ್ಚಾತ್ತಾಪದಲ್ಲಿ ಬೇಯುತ್ತಾ ಕಾವೇರಿಯನ್ನು ಸೇರುತ್ತಾನೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada