Shakhahaari OTT Twitter review; ಅದ್ಭುತ ಕ್ಲೈಮ್ಯಾಕ್ಸ್, ಛೇ ಥಿಯೇಟರ್‌ನಲ್ಲಿ ಮಿಸ್ ಮಾಡ್ಕೊಂಡೆ
ಕನ್ನಡದಲ್ಲಿ ಗುಣಮಟ್ಟದ ಸಿನಿಮಾಗಳು ಬರುತ್ತಿಲ್ಲ ಎನ್ನುವ ಆರೋಪದ ನಡುವೆ ಒಳ್ಳೆ ಸಿನಿಮಾಗಳನ್ನು ಜನ ನೋಡುತ್ತಿಲ್ಲ ಎನ್ನುವ ಕೊರಗು ಇದೆ. ಈ ವರ್ಷ ದೊಡ್ಡ ಸಿನಿಮಾಗಳು ಬರದೇ ಇರಬಹುದು. ಆದರೆ ಒಂದಷ್ಟು ಕಂಟೆಂಟ್ ಇರುವ ಸಿನಿಮಾಗಳು ಬಂದಿವೆ. ಅವುಗಳನ್ನು ಚಿತ್ರಮಂದಿರಗಳಲ್ಲಿ ನೋಡಿದವರ ಸಂಖ್ಯೆ ಕಮ್ಮಿ.
ಬರ್ತಾ ಬರ್ತಾ ಜನ ಓಟಿಟಿಯಲ್ಲಿ ಸಿನಿಮಾ ನೋಡಲು ಹೆಚ್ಚು ಮನಸ್ಸು ಮಾಡಿದಂತೆ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ನೋಡುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಚೆನ್ನಾಗಿದೆ ಎನ್ನುವ ಪ್ರತಿಕ್ರಿಯೆ ಸಿಕ್ಕರೇ ಹೌದಾ ಓಟಿಟಿಯಲ್ಲಿ ನೋಡೋಣ ಬಿಡು ಎನ್ನುತ್ತಿದ್ದಾರೆ. ಬ್ಲಿಂಕ್, ಶಾಖಾಹಾರಿ ಸಿನಿಮಾಗಳ ವಿಚಾರಗಳಲ್ಲಿ ಕೂಡ ಹೀಗೆ ಆಗಿತ್ತು. 'ಬ್ಲಿಂಕ್' ಚಿತ್ರವನ್ನು ಓಟಿಟಿಯಲ್ಲಿ ನೋಡಿ ಅಯ್ಯೋ ದೊಡ್ಡಪರದೆಯಲ್ಲಿ ಮಿಸ್ ಮಾಡಿಕೊಂಡೆ ಎಂದು ಪೇಚಾಡಿದವರು ಇದ್ದಾರೆ. ಇದೇ ಮಾತು 'ಶಾಖಾಹಾರಿ' ಚಿತ್ರಕ್ಕೂ ಅನ್ವಯಿಸುತ್ತಿದೆ.

ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆ ನಟನೆಯ 'ಶಾಖಾಹಾರಿ' ಸಿನಿಮಾ ಅಮೇಜಾನ್ ಪ್ರೈಂಗೆ ಬಂದಿದೆ. ಈಗ ಸಿನಿಮಾ ನೋಡಿದವರು ಹಾಡಿ ಹೊಗಳುತ್ತಿದ್ದಾರೆ. ಸಂದೀಪ್ ಸುಂಕದ್ ಈ ಮರ್ಡರ್ ಮಿಸ್ಟರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫೆಬ್ರವರಿ 16ಕ್ಕೆ ತೆರೆಗಪ್ಪಳಿಸಿದ್ದ ಸಿನಿಮಾ ಸದ್ಯ ಓಟಿಟಿಯಲ್ಲಿ ಸದ್ದು ಮಾಡ್ತಿದೆ. ನಟ ನೀನಾಸಂ ಸತೀಶ್ ಸೇರಿದಂತೆ ಹಲವರು ಸಿನಿಮಾ ನೋಡಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಮ್ಮನ್ನು ಒಳಗೆ ಸೆಳೆದೊಯ್ಯುತ್ತದೆ
ಶಾಖಾಹಾರಿ.. ಯಾವ ನೀರಿಕ್ಷೆಯು ಇಲ್ಲದೆ ಸುಮ್ಮನೆ ಸಿನಿಮಾ ನೋಡುತ್ತಾ ಹೋದಾಗ, ಸಿನಿಮಾ ನಮ್ಮನ್ನು ಒಳಗೆ ಸೆಳೆದೊಯ್ಯುತ್ತದೆ, ಸುಳಿಯಂತೆ. ಪ್ರಾಮಾಣಿಕವಾದ, ಯಾರನ್ನೂ ಮೆಚ್ಚಿಸಲು ಅಲ್ಲದೆ ತಮ್ಮಷ್ಟಕ್ಕೆ ತಂಡ ಧ್ಯಾನಿಸಿದೆ.ಸಿನಿಮಾ ಬರೀ ನಿರ್ದೇಶಕ,ಅಥವಾ ನಟರಲ್ಲದೆ ಸಮೂಹದ ಕೆಲಸ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.ಗೆಳೆಯ ಗೋಪಿ ವಾವ್! ರಘು ಅಣ್ಣ ನಮ್ಮ ಹೆಮ್ಮೆ! ನಿರ್ದೇಶಕ ಸಂದೀಪ್ ,ಮತ್ತು ಛಾಯಾಗ್ರಹಣ, ಸಂಗೀತ ಎಲ್ಲವೂ ಅದ್ಭುತ. ನೋಡಲೇಬೇಕಾದ ನಮ್ಮ ಚಿತ್ರ ಎಂದು ನೀನಾಸಂ ಸತೀಶ್ ಬರೆದುಕೊಂಡಿದ್ದಾರೆ.
ಅತ್ಯುತ್ತಮ ಚಿತ್ರ
"ತುಂಬಾ ಚೆನ್ನಾಗಿದೆ ಶಾಖಾಹಾರಿ, ಏನ್ ನಟನೆ ಗುರು ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆದು. ರೀಸೆಂಟ್ ಆಗಿ ನಮ್ಮ ಕನ್ನಡದಲ್ಲಿ ಮೂಡಿದ ಅತ್ಯುತ್ತಮ ಚಿತ್ರ" ಎಂದು ಕಾರ್ತಿಕ್ ಮಾಳಿಗನಾಡು ಎಂಬುವವರು ಟ್ವೀಟ್ ಮಾಡಿದ್ದಾರೆ.

ಕ್ಲೈಮ್ಯಾಕ್ಸ್ ಸೂಪರ್
"ಅತ್ಯುತ್ತಮ ಕ್ಲೈಮ್ಯಾಕ್ಸ್‌ಗಳಲ್ಲಿ 'ಶಾಖಾಹಾರಿ' ಚಿತ್ರದ್ದು ಒಂದಾಗಿದೆ. ಮರ್ಡರ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ. ರಂಗಾಯಣ ರಘು ಸರ್ ಮತ್ತು ಗೋಪಾಲ್ ದೇಶಪಾಂಡೆ ಸರ್ ಅವರಿಗೆ ಹ್ಯಾಟ್ಸಪ್. ಸಿನಿಮಾದ ಕೊನೆಯ ಅರ್ಧ ಗಂಟೆ ಇಬ್ಬರೂ ಜಿದ್ದಿಗೆ ಬಿದ್ದು ನಟನೆ ಮಾಡಿದ್ದಾರೆ. ಈ ಸಿನಿಮಾ ನೋಡಲೇಬೇಕು" ಎಂದು ಶಿವು ಮಂಜು ಟ್ವೀಟ್ ಮಾಡಿದ್ದಾರೆ.
ಭರವಸೆಯ ಚೊಚ್ಚಲ ಚಿತ್ರ
'ಶಾಖಾಹಾರಿ' ಭರವಸೆಯ ಚೊಚ್ಚಲ ಚಿತ್ರವಾಗಿದೆ. ಸಂದೀಪ್ ಸುಂಕದ್ ಅವರು ಮಾನವನ ಭಾವನೆಗಳು ಮತ್ತು ಅನಿರೀಕ್ಷಿತ ಕ್ಷಣಗಳನ್ನು ಸಮಾನ ಅಳತೆಯಲ್ಲಿ ಅಳವಡಿಸುವ ಚಿತ್ರಕಥೆಯ ಮೇಲೆ ಉತ್ತಮ ನಿಯಂತ್ರಣದೊಂದಿಗೆ ನಮ್ಮನ್ನು ಪ್ರಕ್ರಿಯೆಗಳಲ್ಲಿ ಹೂಡಿಕೆ ಮಾಡುತ್ತಾರೆ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ನನಗೆ ಇದು ಬೆಸ್ಟ್ ಕ್ಲೈಮ್ಯಾಕ್ಸ್
ಈ ಅದ್ಭುತ ಚಿತ್ರವನ್ನು ತೆರೆಮೇಲೆ ಮಿಸ್ ಮಾಡಿಕೊಂಡೆ.. ಯಾಕಂದ್ರೆ ಅದೇ ಸಮಯದಲ್ಲಿ ನನ್ನ ಸಿನಿಮಾಗಳು ಬಿಡುಗಡೆಯಾಗಿತ್ತು. ಅದಕ್ಕಾಗಿ ನಿಜಕ್ಕೂ ಬೇಸರವಾಗುತ್ತಿದೆ. ನಾನು ನೋಡಿದಂತೆ ಬರವಣಿಗೆ, ಅದನ್ನು ತೆರೆಗೆ ತಂದಿರೋದು, ಕಥೆ, ಟ್ವಿಸ್ಟ್‌ಗಳು, ಕಥೆಯ ಕಟ್ಟಿಕೊಟ್ಟಿರುವ ಬಗೆ ಅದ್ಭುತ. ಇನ್ನು ರಂಗಾಯಣ ರಘು ಹಾಗೂ ಗೋಪಾಲ ದೇಶಪಾಂಡೆ ರೀತಿಯ ರಕ್ಕಸ ಕಲಾವಿದರು ಇದ್ದಾಗ ಮ್ಯಾಜಿಕ್ ನೋಡಬಹುದು. ನನಗೆ ಇದು ಬೆಸ್ಟ್ ಕ್ಲೈಮ್ಯಾಕ್ಸ್. ಕನ್ನಡದಲ್ಲಿ ಬಹಳ ದಿನಗಳ ಬಳಿಕ ಅದ್ಭುತ ಪರ್ಫಾರ್ಮನ್ಸ್" ಎಂದು ನಟ ಪೃಥ್ವಿ ಅಂಬರ್ ಇನ್‌ಸ್ಟಾದಲ್ಲಿ ಬರೆದಿದ್ದಾರೆ.


Click it and Unblock the Notifications










