ವಿಮರ್ಶೆ: 'ಬಂಗಾರದ ಮನುಷ್ಯ'ನ ಪ್ರತಿರೂಪ ಶಿವಣ್ಣನ ಈ 'ಬಂಗಾರ' ರೂಪ
'ಬಂಗಾರ s/o ಬಂಗಾರದ ಮನುಷ್ಯ'... ಹೆಸರೇ ಹೇಳುವಂತೆ ಇದು 'ಬಂಗಾರದ ಮನುಷ್ಯ'ನ ಪುತ್ರನ ಸುತ್ತ ಸುತ್ತುವ ಚೆಂದದ ಸಿನಿಮಾ. 'ಬಂಗಾರದ ಮನುಷ್ಯ' ಚಿತ್ರವನ್ನೇ ಸ್ಫೂರ್ತಿಯಾಗಿರಿಸಿಕೊಂಡು ತಯಾರು ಮಾಡಿರುವ ಬಂಗಾರದಂಥ ಸಿನಿಮಾ. ಅಣ್ಣಾವ್ರ ಧ್ಯೇಯವನ್ನಿಟ್ಟುಕೊಂಡು ಸಕಲ ಅನ್ನದಾತರಿಗೆ ಅರ್ಪಣೆ ಮಾಡಿರುವ ಈ ಚಿತ್ರ ಯುವ ಜನತೆಗೆ ಪ್ರೇರಣೆ ನೀಡುವುದರಲ್ಲಿ ಅನುಮಾನ ಬೇಡ. ಅಷ್ಟರಮಟ್ಟಿಗೆ ಈ ಸಿನಿಮಾ ಎರಡನೇ 'ಬಂಗಾರದ ಮನುಷ್ಯ'.
'ಬಂಗಾರ s/o ಬಂಗಾರದ ಮನುಷ್ಯ' ಸಿನಿಮಾ ಸಂಪೂರ್ಣ ವಿಮರ್ಶೆ ಇಲ್ಲಿದೆ. ಫೋಟೋ ಸ್ಲೈಡ್ ಗಳಲ್ಲಿ ಓದಿರಿ....
ಎರಡನೇ 'ಬಂಗಾರದ ಮನುಷ್ಯ'
ಮಿಲನ್ ನಲ್ಲಿ ಇರುವ ಕೋಟ್ಯಾಧಿಪತಿ ಶಿವು (ಶಿವರಾಜ್ ಕುಮಾರ್)ಗೂ ಕರ್ನಾಟಕದ ರಾಂಪುರದಲ್ಲಿ ಬಾಳಿ ಬದುಕಿದ ಬಂಗಾರದ ಮನುಷ್ಯ (ರಾಜ್ ಕುಮಾರ್)ನಿಗೂ ಒಂದು ಅವಿನಾಭಾವ ಸಂಬಂಧ ಇದೆ. ಅದೇ ಭಾವ ಬಂಧನದ ಬೆಸುಗೆ ಹಿಡಿದು ಮಿಲನ್ ನಿಂದ ರಾಂಪುರಕ್ಕೆ ಪ್ರಯಾಣ ಬೆಳೆಸುವ ಶಿವು ಕಥೆಯೇ 'ಬಂಗಾರ s/o ಬಂಗಾರದ ಮನುಷ್ಯ' ಸಿನಿಮಾದ ಹೂರಣ.
ಅನ್ನದಾತರ ಸಮಸ್ಯೆ ಕುರಿತ ಸಿನಿಮಾ
ನಾಳೆ ಬಗ್ಗೆ ನಂಬಿಕೆಯೇ ಇಲ್ಲದ ಶಿವು ಒಂದ್ಕಡೆ ಆದರೆ ನಾಳೆ ಕನಸಿನಲ್ಲಿಯೇ ಬದುಕಿದ 'ಬಂಗಾರದ ಮನುಷ್ಯ' ಇನ್ನೊಂದು ಕಡೆ. ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡುವ ಶಿವು, ರೈತರ ಸಮಸ್ಯೆಗಳನ್ನ ರೈತರ ಸಮ್ಮುಖದಲ್ಲಿಯೇ ಬಗೆಹರಿಸುವ 'ಬಂಗಾರ'. ಅದು ಹೇಗೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ, ಈಗಲೇ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಿ...
'ಬಂಗಾರ'ದ ಕಂದ ಶಿವರಾಜ್ ಕುಮಾರ್
'ಬಂಗಾರದ ಮನುಷ್ಯ'ನ ಪುತ್ರನಾಗಿ ಶಿವರಾಜ್ ಕುಮಾರ್ ಅಭಿನಯ ಬೊಂಬಾಟ್ ಆಗಿದೆ. ಡ್ಯಾನ್ಸ್ ಮತ್ತು ಫೈಟ್ಸ್ ನಲ್ಲಿ ಶಿವಣ್ಣ ಎಂದಿನಂತೆ ಸೂಪರ್. 'ಬಂಗಾರದ ಮನುಷ್ಯ'ನ ಪುತ್ರನಾಗಿರುವ ಶಿವಣ್ಣ ಅಣ್ಣಾವ್ರನ್ನೇ ನೆನಪಿಸುತ್ತಾರೆ. ಎಷ್ಟೇ ಆಗಲಿ.. ಅವರು ಯಾರ ಮಗ.?!
ವಿದ್ಯಾ ಪ್ರದೀಪ್ ನಟನೆ ಅಷ್ಟಕಷ್ಟೆ
ಶಿವಣ್ಣನ ಜೋಡಿ ಆಗಿ ಕಾಣಿಸಿಕೊಂಡಿರುವ ವಿದ್ಯಾ ಪ್ರದೀಪ್ ನಟನೆ ಅಷ್ಟಕಷ್ಟೆ.
ಕಾಮಿಡಿ ಕಿಲಾಡಿಗಳು
ಸಿನಿಮಾದ ಉದ್ದಕ್ಕೂ ಚಿಕ್ಕಣ್ಣ ಇದ್ದರೂ, ಪ್ರೇಕ್ಷಕರನ್ನ ನಗಿಸುವುದು ಕಡಿಮೆ. ಸೆಕೆಂಡ್ ಹಾಫ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧು ಕೋಕಿಲ ಕೂಡ ಅಷ್ಟೇನು ಕಚಗುಳಿ ಇಡುವುದಿಲ್ಲ. ಇಬ್ಬರೂ 'ಕಾಮಿಡಿ ಕಿಲಾಡಿಗಳಿ'ದ್ದರೂ, ಅವರನ್ನ ನಿರ್ದೇಶಕರು ಸಮರ್ಪಕವಾಗಿ ಬಳಸಿಕೊಂಡಿಲ್ಲ.
ಉಳಿದವರ ಅಭಿನಯ
ಉಳಿದಂತೆ ಶ್ರೀನಾಥ್, ಶಿವರಾಂ, ವಿಶಾಲ್ ಹೆಗಡೆ, ಶ್ರೀನಿವಾಸ್ ಮೂರ್ತಿ, ಶರತ್ ಲೋಹಿತಾಶ್ವ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಅಣ್ಣಾವ್ರ ಸಿನಿಮಾ
'ಬಂಗಾರ s/o ಬಂಗಾರದ ಮನುಷ್ಯ'... ಡಾ.ರಾಜ್ ಕುಮಾರ್ ರವರ ಸಿನಿಮಾ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಚಿತ್ರಕಥೆಯ ರಿಯಲ್ ಹೀರೋ ಅವರೇ.! ಅಣ್ಣಾವ್ರ ಅಭಿಮಾನಿಗಳಿಗೂ ಈ ಸಿನಿಮಾ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.
ಕತ್ರಿ ಕೆಲಸ ಚುರುಕಾಗಿದಿದ್ರೆ....
ಫಸ್ಟ್ ಹಾಫ್ ನಲ್ಲಿ ಹೆಚ್ಚು ಕಾಲ ಮಿಲನ್ ನಲ್ಲಿಯೇ ನಿರ್ದೇಶಕರು ಟೈಮ್ ಪಾಸ್ ಮಾಡಿದ್ದಾರೆ. ಇಲ್ಲಿ ಸಂಕಲನ ಕೊಂಚ ಚುರುಕಾಗಿದಿದ್ರೆ, ಚಿತ್ರಕಥೆಗೆ ವೇಗ ಲಭಿಸುತ್ತಿತ್ತು.
ವಿ.ಹರಿಕೃಷ್ಣ ಮಂಕಾಗಿರುವಂತಿದೆ.!
'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದಲ್ಲಿ ವಿ.ಹರಿಕೃಷ್ಣ ಸಂಗೀತ ಕೊಂಚ ಮಂಕಾಗಿರುವಂತಿದೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅಷ್ಟು ಫೀಲ್ ಕೊಡುವುದಿಲ್ಲ. 'ಒಂದಾನೊಂದು ಊರಲ್ಲಿ...' ಹಾಡು ಮಾತ್ರ ಗುನುಗುವಂತಿದೆ. ಇನ್ನೂ ಜೈ ಆನಂದ್ ಛಾಯಾಗ್ರಹಣ ಕೂಡ ಚೆನ್ನಾಗಿ ಮೂಡಿಬಂದಿದೆ.
ನಿರ್ದೇಶಕರು ಇನ್ನೂ ಗಮನ ಹರಿಸಬೇಕಿತ್ತು
'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದ ಕಥೆ ಚೆನ್ನಾಗಿದೆ. ಆದ್ರೆ ಪ್ರೆಸೆಂಟೇಷನ್ ನಲ್ಲಿ ನಿರ್ದೇಶಕರು ಇನ್ನೂ ಗಮನ ಹರಿಸಬೇಕಿತ್ತು.
ಚಿತ್ರದ ಆಶಯ ಚೆನ್ನಾಗಿದೆ
ಸಾಲದ ಶೂಲದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಅನ್ನದಾತರ ಕಷ್ಟಕ್ಕೆ ಸ್ಪಂದಿಸಿ, ಪರಿಹಾರ ನೀಡುವ ನಿಟ್ಟಿನಲ್ಲಿ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದ ಆಶಯ ಶ್ಲಾಘನೀಯ. ಈ ಚಿತ್ರವನ್ನ ಇಡೀ ಫ್ಯಾಮಿಲಿ ಕೂತು ಆರಾಮಾಗಿ ನೋಡಬಹುದು.
ರೈತ ಮುನಿಸಿಕೊಂಡರೆ....
ಎಲ್ಲ ಹೊಟ್ಟೆ ತುಂಬಿಸುವ ರೈತ ಮುನಿಸಿಕೊಂಡರೆ, ಪರಿಣಾಮ ಏನಾಗಬಹುದು ಎಂಬ ಕಲ್ಪನೆ ಈ ಚಿತ್ರದಲ್ಲಿದೆ. ಇದರಲ್ಲಿ ಲಾಜಿಕ್ ಹುಡುಕದೆ, ರೈತರ ಕಷ್ಟಗಳಿಗೆ ವಾಸ್ತವದಲ್ಲೂ ಸ್ಪಂದಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ.
ಶುದ್ಧ 'ಬಂಗಾರ'
ಬರಗಾಲ, ರೈತರ ಆತ್ಮಹತ್ಯೆ, ಬೆಲೆ ಏರಿಕೆ ಬಿಸಿ... ಹೀಗೆ ಪ್ರಸ್ತುತ ವಿದ್ಯಮಾನಕ್ಕೆ ಹೇಳಿ ಮಾಡಿಸಿರುವ ಸಿನಿಮಾ 'ಬಂಗಾರ s/o ಬಂಗಾರದ ಮನುಷ್ಯ'.


Click it and Unblock the Notifications











