»   » ಪ್ರೀತಿಗೆ ಮಣಿವ, ಅನ್ಯಾಯ ಹಣಿವ ಪಾತ್ರ ಇರುವ ಚಿತ್ರದಲ್ಲಿ ಬಿ.ಸಿ. ಪಾಟೀಲ್‌ ಮೊದಲ ಬಾರಿಗೆ ‘ನಟಿಸಿದ್ದಾರೆ’

ಪ್ರೀತಿಗೆ ಮಣಿವ, ಅನ್ಯಾಯ ಹಣಿವ ಪಾತ್ರ ಇರುವ ಚಿತ್ರದಲ್ಲಿ ಬಿ.ಸಿ. ಪಾಟೀಲ್‌ ಮೊದಲ ಬಾರಿಗೆ ‘ನಟಿಸಿದ್ದಾರೆ’

Subscribe to Filmibeat Kannada


ರೀಮೇಕ್‌ ಟ್ರೆಂಡ್‌ ಶುರುವಾದ ನಂತರ ಕನ್ನಡ ಚಿತ್ರಗಳೂ ಗ್ರಾಮೀಣ ಪರಿಸರದ ಕತೆಯನ್ನೇ ನೆಚ್ಚಿಕೊಳ್ಳುತ್ತಿವೆ. ಶಿವಪ್ಪನಾಯಕ ರೀಮೇಕ್‌ ಚಿತ್ರವಲ್ಲದಿದ್ದರೂ ಕತೆ ನಡೆಯುವುದು ಬಳ್ಳಾರಿ ಸಮೀಪದ ಹಳ್ಳಿಯಲ್ಲಿ. ನಾಯಕನ ಮಗನ ಹೊರತಾಗಿ ಚಿತ್ರದಲ್ಲಿ ಬರುವ ಪಾತ್ರಗಳೆಲ್ಲವೂ ಪಂಚೆಧಾರಿಗಳೇ. ಇಲ್ಲಿ ಅತಿ ಕೆಟ್ಟವರೂ ಇದ್ದಾರೆ, ಅತಿ ಒಳ್ಳೆಯವರೂ ಇದ್ದಾರೆ. ಭಾವನೆಗಳ ಜಡಿಮಳೆಯಿದೆ, ತತ್ವಪದಗಳ ಹೊಳೆಯೇ ಇದೆ. ‘ಧರೆ ಹತ್ತಿ ಉರಿದರೆ ನಿಲಬಹುದು, ತೆರೆ ಹೊತ್ತಿ ಉರಿದರೆ ನಿಲಬಹುದೇ’ ಅನಿಸುವಂಥ ನಿರೂಪಣೆಯಿದೆ.

ಇದು ನಾಯಕರ ದ್ವೇಷ, ಪ್ರೀತಿಯ ಕತೆ. ಊರಿನ ಪಾರುಪತ್ಯೆಯನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಸಲುವಾಗಿ ಮಹಾಬಲ ನಾಯಕ್ಕ ತನ್ನ ದಾಯಾದಿ ಬಸಪ್ಪ ನಾಯಕನನ್ನು ಸಾಯಿಸುತ್ತಾನೆ. ಬಸಪ್ಪ ನಾಯಕನ ಕುರುಡಿ ತಾಯಿ ಮತ್ತು ಮೊಮ್ಮಗಳು ಅನಾಥರಾಗುತ್ತಾರೆ. ಆಗ ಆ ಮನೆಗೆ ಶಿವಪ್ಪನಾಯಕನ ಪ್ರವೇಶವಾಗುತ್ತದೆ. ಆತ ಮಹಾಬಲ ನಾಯಕನಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಾನೆ. ಅದಕ್ಕೆ ಪ್ರತಿಯಾಗಿ ಮಹಾಬಲ ನಾಯಕ, ಶಿವಪ್ಪನ ಮಗನನ್ನೇ ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ. ಮಧ್ಯಂತರದ ನಂತರ ಶಿವಪ್ಪನಾಯಕನ ಹಿನ್ನೆಲೆ ಬಿಚ್ಚಿಕೊಳ್ಳುತ್ತದೆ. ಸೈಕಲ್‌ ರಿಕ್ಷಾ ಓಡಿಸುತ್ತಿದ್ದ ಶಿವಪ್ಪ ಪರಿಸ್ಥಿತಿಯ ಪಿತೂರಿಗೆ ಸಿಲುಕಿ ಕೊಲೆಗಾರನೆಂಬ ಹಣೆಪಟ್ಟಿ ಧರಿಸುವುದು, ಊರಿನಿಂದ ಪಲಾಯನ ಮಾಡುವುದು ಇತ್ಯಾದಿ. ಚಿತ್ರದ ಕೊನೆಗೆ ಶಿವಪ್ಪನಾಯಕನ ತ್ಯಾಗ ಪ್ರೀತಿ, ಧೈರ್ಯಗಳ ಪರಿಚಯ ಚಿತ್ರದ ಪಾತ್ರವರ್ಗಕ್ಕೂ, ಪ್ರೇಕ್ಷಕರಿಗೂ ಏಕಕಾಲದಲ್ಲಿ ದೊರಕುತ್ತದೆ.

ನಾಯಕನನ್ನೇ ವೈಭವೀಕರಿಸುವ ‘ಶಿವಪ್ಪನಾಯಕ’ ಚಿತ್ರದ ವಿಶೇಷವೆಂದರೆ, ಸುಲಲಿತ ನಿರೂಪಣೆ ಮತ್ತು ಮಧುರ ಹಾಡುಗಳು. ಹಾಗಿದ್ದೂ ಕೆಲವು ಕೆಟ್ಟ ಜೋಕ್‌ಗಳು ಹೆಣ್ಮಕ್ಕಳನ್ನು ಸಿಟ್ಟಿಗೆಬ್ಬಿಸುತ್ತವೆ. ಬಿ.ಸಿ. ಪಾಟೀಲ್‌ ಮೊಟ್ಟಮೊದಲ ಬಾರಿ ನಟಿಸಿದ್ದಾರೆ, ಅನುಪ್ರಭಾಕರ್‌ ಚೆಂದವಾಗಿ ಕಾಣಿಸುತ್ತಾರೆ. ಜಯಂತಿಯ ಅಳುಪರ್ವ ಮುಂದುವರಿದಿದೆ, ಸಾಹಸ ದೃಶ್ಯಗಳು ರೋಚಕವಾಗಿವೆ.

ಬಳ್ಳಾರಿಯಂಥ ಗಡಿನಾಡ ಪ್ರದೇಶದಲ್ಲಿ ಕನ್ನಡ ಚಿತ್ರವೊಂದನ್ನು ಚಿತ್ರೀಕರಿಸಿರುವ ಸಾಹಸಕ್ಕಾಗಿ ಪಾಟೀಲ್‌ ಅವರನ್ನು ಅಭಿನಂದಿಸಬೇಕು. ಆ ಕಾರಣಕ್ಕೇ ಚಿತ್ರ ಕೊಂಚ ಒಗರು ಅನಿಸಿದರೂ ಇಷ್ಟವಾಗುತ್ತದೆ. ಮಿಕ್ಕಂತೆ ಇದು 70ರ ದಶಕದಲ್ಲಿ ಬರುತ್ತಿದ್ದ ಮಾಮೂಲು ಮಾರಾಮಾರಿ ಚಿತ್ರ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada