45 Review: ಕಾಲನ ಎದುರು 'ಶಿವ'ತಾಂಡವ.. ತೆರೆಮೇಲೆ ಅದ್ಭುತ '45' ದೈವಿಕ ಅನುಭವ
ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಎಲ್ಲರನ್ನು ತೃಪ್ತಿಪಡಿಸುವಂತಹ ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಆ ಪ್ರಯತ್ನದಲ್ಲಿ ಅರ್ಜುನ್ ಜನ್ಯಾ ಗೆದ್ದಿದ್ದಾರೆ. ಯಾರು ಎಷ್ಟು ಹೊತ್ತು ತೆರೆಮೇಲೆ ಇದ್ರು ಎನ್ನುವುದಕ್ಕಿಂತ ಅಂತಿಮವಾಗಿ ಅವರ ಹಾಜರಿ ಎಂಥಹ ಅನುಭವ ನೀಡುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ '45' ಸಿನಿಮಾ ತೆರೆಗಪ್ಪಳಿಸಿದೆ. ಈ ವರ್ಷದ ಹಿಟ್ ಸಿನಿಮಾಗಳ ಲಿಸ್ಟ್ ಸೇರುವ ಸುಳಿವು ಸಿಕ್ಕಿದೆ.
ಸ್ಟಾರ್ ನಟನ ವೀರಾಭಿಮಾನಿಯೊಬ್ಬ ಸಿನಿಮಾ ನಿರ್ದೇಶನ ಮಾಡಿದ್ರೆ ಹೇಗಿರುತ್ತೆ? ಎನ್ನುವುದಕ್ಕೆ '45' ಬೆಸ್ಟ್ ಎಕ್ಸಾಂಪಲ್. ನಾನು ಶಿವಣ್ಣ, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ಅವರ ಅಭಿಮಾನಿ ಎಂದು ಅರ್ಜುನ್ ಜನ್ಯಾ ಪದೇ ಪದೆ ಹೇಳುತ್ತಿದ್ದರು. ಇದೀಗ ತಮ್ಮ ನೆಚ್ಚಿನ ನಟರನ್ನು ಅಭಿಮಾನಿಗಳು ಹೇಗೆ ತೆರೆಮೇಲೆ ನೋಡಲು ಬಯಸುತ್ತಾರೋ ಅದೇ ರೀತಿ '45' ಚಿತ್ರದಲ್ಲಿ ಮೂವರನ್ನು ಜನ್ಯಾ ತೋರಿಸಿ ಗೆದ್ದಿದ್ದಾರೆ. ಶಿವಣ್ಣದ ಆರ್ಭಟಕ್ಕೆ ನಾನಾ ಅವತಾರಗಳಿಗೆ ಶಿಳ್ಳೆ ಚಪ್ಪಾಳೆ ಸಿಗುತ್ತಿದೆ.

ಚಿತ್ರದ ಕಥೆ
ಐಟಿ ಉದ್ಯೋಗಿ ವಿನಯ್(ರಾಜ್ ಬಿ. ಶೆಟ್ಟಿ). ತನ್ನದೇ ಪ್ರಪಂಚದಲ್ಲಿ ಹಾಯಾಗಿ ಇರ್ತಾನೆ. ಅದೊಂದು ಘಟನೆ ಆತನ 'ಜೀವ'ನಕ್ಕೆ ಕುತ್ತು ತಂದುಬಿಡುತ್ತದೆ. ರಾಯಪ್ಪ(ಉಪೇಂದ್ರ)ನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಲ್ಲಿಂದ ಸಾವಿನ ತೂಗುಗತ್ತಿ ಕೆಳಗೆ 45 ದಿನಗಳ ಓಟ ಶುರುವಾಗುತ್ತದೆ. ಮುಂದೆ ಆತನ ಸಹಾಯಕ್ಕೆ ಶಿವಪ್ಪ(ಶಿವರಾಜ್‌ಕುಮಾರ್) ಬರ್ತಾನೆ. ಅಂತಿಮವಾಗಿ ಇದು ಶಿವಣ್ಣ ಹಾಗೂ ರಾಯಪ್ಪನ ಸಮರಕ್ಕೆ ವೇದಿಕೆಯಾಗುತ್ತದೆ. ಮುಂದೇನು ಎನ್ನುವುದು '45' ಸಿನಿಮಾ ಕಥೆ. ಇದಕ್ಕಿಂತ ಹೆಚ್ಚು ಹೇಳಿದರೆ ಸಿನಿಮಾ ನೋಡುವ ಸ್ವಾರಸ್ಯ ಹಾಳಾಗಬಹುದು.
ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ಅರ್ಜುನ್ ಜನ್ಯಾ ತೆರೆಗೆ ತಂದಿದ್ದಾರೆ. ಕಥೆಯ ಎಳೆ ಸಣ್ಣದಿರಬಹುದು. ಆದರೆ ಸಾಕಷ್ಟು ಐಡಿಯಾಗಳನ್ನು, ರೂಪಕಗಳನ್ನು ಸಾಲು ಸಾಲಾಗಿ ತರುತ್ತಾ. ಅದೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇನ್ನು ಉಪ್ಪಿ ನಿರ್ದೇಶನಕ್ಕೆ ದೊಡ್ಡ ಅಭಿಮಾನಿ ಆಗಿರುವ ಜನ್ಯಾ ಅಲ್ಲಲ್ಲಿ ಉಪ್ಪಿ ಸ್ಟೈಲ್ ಅಲ್ಲಿ ನಿರೂಪಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಕೊನೆಯದಾಗಿ ಶಿವಣ್ಣನ ಆರ್ಭಟವಂತೂ ಅಭಿಮಾನಿಗಳಿಗೆ ಹಬ್ಬದೂಟ.

ಇತ್ತೀಚೆಗೆ ಕೆಲ ಸಿನಿಮಾಗಳನ್ನು ನೋಡಿದಾಗ ಫಸ್ಟ್ ಹಾಫ್ ಸೂಪರ್, ಸೆಕೆಂಡ್ ಹಾಫ್ ಚೆನ್ನಾಗಿಲ್ಲ ಎನ್ನುವ ಆರೋಪಗಳು ಕೇಳಿಬರ್ತಿದೆ. ಆದರೆ '45' ಚಿತ್ರದಲ್ಲಿ ಫಸ್ಟ್ ಹಾಫ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡರೆ ಸೆಕೆಂಡ್ ಹಾಫ್ ಸೀಟಿನ ತುದಿಗೆ ಬಂದು ಕೂರುವಂತೆ ಮಾಡಿಬಿಡುತ್ತದೆ. ಶಿವಣ್ಣ ಬರೋದು ತಡವಾದರೂ ಬಂದಮೇಲೆ ಕೊನೆವರೆಗೂ 'ಶಿವ'ತಾಂಡವ ಮಾಡುತ್ತಾರೆ. ಚಿತ್ರದ ಮೂಲಕ ಶಿವಣ್ಣನಿಗೆ 'ಗಾಡ್ ಆಫ್ ಮಾಸಸ್' ಎಂಬ ಬಿರುದನ್ನು ಜನ್ಯಾ ಕೊಟ್ಟಿದ್ದಾರೆ.
ಪುರಾಣ ಪುರಾಣದ ಹಿನ್ನೆಲೆಯಲ್ಲಿ ಜನ್ಯಾ ಒಂದು ಸಂದೇಶ ಸಾರುವ ಪ್ರಯತ್ನವನ್ನು ಮಾಡಿದ್ದಾರೆ. 3 ಬೇರೆ ಬೇರೆ ಪ್ರಪಂಚಗಳನ್ನು ತೆರೆದಿಟ್ಟು ಭೌತಿಕ ಮತ್ತು ಆಧ್ಯಾತ್ಮಿಕ ಪ್ರಪಂಚಗಳ ಸುತ್ತಾ ಪ್ರೇಕ್ಷಕರಿಗೆ ಕಥೆ ಹೇಳುತ್ತಾ ಸಾಗುತ್ತಾರೆ. ಅಲ್ಲಲ್ಲಿ ಕಾಮಿಡಿ ಸನ್ನಿವೇಶಗಳು ಇವೆ. ಮುಖ್ಯವಾಗಿ ರಾಜ್. ಬಿ ಶೆಟ್ಟಿ ಹಾಗೂ ಶಿವಣ್ಣ, ರಾಜ್. ಬಿ ಶೆಟ್ಟಿ ಹಾಗೂ ಉಪೇಂದ್ರ, ರಾಜ್. ಬಿ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಭೇಟಿ ಸನ್ನಿವೇಶಗಳು ಮಜಾ ಕೊಡುತ್ತದೆ. ಡೈಲಾಗ್ಸ್ ಚಿತ್ರದ ಮತ್ತೊಂದು ಹೈಲೆಟ್.
ಕಲಾವಿದರ ನಟನೆ
ಸಾಮಾನ್ಯವಾಗಿ ಉಪೇಂದ್ರ ಸ್ಕ್ರೀನ್ ಪ್ರೆಸೆನ್ಸ್ ಮೀರಿಸೋಕೆ ಕಷ್ಟ ಎನ್ನುವ ಮಾತಿದೆ. ಆದರೆ ಆಪ್ತ ಶಿವಣ್ಣನೇ ಆ ಕೆಲಸ ಮಾಡಿ ಗೆದ್ದಿದ್ದಾರೆ. ಶಿವನ ನಾನಾ ಅವತಾರಗಳನ್ನು ಪ್ರದರ್ಶನ ಚಿತ್ರದ ಮತ್ತೊಂದು ಹೈಲೆಟ್. ಅದರಲ್ಲೂ ಲೇಡಿ ಗೆಟಪ್ ಬಿಗ್ ಸರ್‌ಪ್ರೈಸ್. ರಾಯಪ್ಪನಾಗಿ ಉಪ್ಪಿ ಆರ್ಭಟ ಮರೆಯೋಕೆ ಸಾಧ್ಯವಿಲ್ಲ. ದಶಕಗಳ ಹಿಂದಿನ ಉಪ್ಪಿಯನ್ನು ಮತ್ತೆ ತೆರೆಮೇಲೆ ನೋಡುವ ಅವಕಾಶ ಸಿಗುತ್ತದೆ. ಇನ್ನು ಅಮಾಯಕನಾಗಿ ರಾಜ್. ಬಿ ಶೆಟ್ಟಿಗೆ ಹೇಳಿ ಮಾಡಿಸಿದ ಪಾತ್ರ ಇದು. ಅದನ್ನು ಅಷ್ಟೇ ಸೊಗಸಾಗಿ ನಿಭಾಯಿಸಿದ್ದಾರೆ. ಇನ್ನುಳಿದಂತೆ ಕೌಸ್ತುಭಾ ಮಣಿ, ರಾಜೇಂದ್ರನ್ ತಮ್ಮ ತಮ್ಮ ಪಾತ್ರ ಸೊಗಸಾಗಿ ನಿಭಾಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಸುಧಾರಾಣಿ ಇಷ್ಟವಾಗುತ್ತಾರೆ.
ತಾಂತ್ರಿಕವಾಗಿ '45'
ಅರ್ಜುನ್ ಜನ್ಯಾ ನಿರ್ದೇಶಕರಾಗಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ. ಶಿವಣ್ಣ, ಉಪ್ಪಿ ರೀತಿಯ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವುದಕ್ಕೆ ಧೈರ್ಯ ಬೇಕು. ಅದನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಅನಿಲ್ ಸಂಭಾಷಣೆ ಅದಕ್ಕೆ ಸಾಥ್ ಕೊಟ್ಟಿದೆ. ವಿಭಿನ್ನ ಕೋನಗಳಲ್ಲಿ ಕ್ಯಾಮರಾ ಇಟ್ಟು ಅರ್ಜುನ್ ಜನ್ಯಾ ಕಲ್ಪನೆಗೆ ಜೀವ ತುಂಬಿದ್ದಾರೆ ಸತ್ಯಾ ಹೆಗಡೆ. ತಾವೇ ಸಂಗೀತ ನಿರ್ದೇಶನ ಮಾಡಿರುವುದರಿಂದ ಅದ್ಭುತವಾಗಿ ಬಿಜಿಎಂ ಮಾಡಿದ್ದಾರೆ ಜನ್ಯಾ. ಒಂದು ಹಾಡನ್ನು ಕಟ್ ಮಾಡಿ 2.30 ನಿಮಿಷಕ್ಕೆ ಚಿತ್ರದ ಕಾಲಾವಧಿ ಇಳಿಸಿದ್ದು ಅವ್ರ ಜಾಣ್ಮೆ. ಇನ್ನು ಇಂತಾದೊಂದು ಸಿನಿಮಾ ಮಾಡಲು ನಿರ್ಮಾಪಕರಿಗೆ ಧೈರ್ಯ ಬೇಕು. ರಮೇಶ್ ರೆಡ್ಡಿ ಕಥೆ ಕೇಳಿದ್ದನ್ನೆಲ್ಲಾ ಕೊಟ್ಟು ಸಿನಿಮಾ ಮಾಡಿದ್ದಾರೆ.
ಕೊನೆ ಮಾತು
ಸಣ್ಣಪುಟ್ಟ ತಪ್ಪುಗಳನ್ನು ಹೊರತುಪಡಿಸಿ '45' ಅದ್ಭುತ ಸಿನಿಮಾ. ಶಿವಣ್ಣನ ಅಭಿಮಾನಿಗಳಿಗಂತೂ ಹಬ್ಬ. ಫ್ಯಾಮಿಲಿ ಸಮೇತ ಸಿನಿಮಾ ನೋಡಿ ಎಂಜಾಯ್ ಮಾಡಿ. ಬರೀ ಕ್ಲೈಮ್ಯಾಕ್ಸ್ ನಿಮ್ಮ ಟಿಕೆಟ್ ದುಡ್ಡು ವಾಪಸ್ ಕೊಡುತ್ತೆ. ಇನ್ನುಳಿದಿದ್ದೆಲ್ಲಾ ಬೋನಸ್. ಕ್ರಿಸ್‌ಮಸ್ ರಜೆ ಸಮಯದಲ್ಲಿ ಮಕ್ಕಳ ಸಮೇತ ಚಿತ್ರಮಂದಿರಕ್ಕೆ ಭೇಟಿ ಕೊಡಿ.


Click it and Unblock the Notifications











