Bhairathi Ranagal Review; ರೋಣಾಪುರದ ಜನರಿಗಾಗಿ ರಕ್ಕಸ ರಣಗಲ್ ರಕ್ತ ಚರಿತ್ರೆ

Rating:
3.0/5
Star Cast: ಶಿವರಾಜ್‌ಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್ ಮುಂತಾದವರು
Director: ನರ್ತನ್

'ಮಫ್ತಿ' ಚಿತ್ರದಲ್ಲಿ ರೋಣಾಪುರಕ್ಕೆ ರಾಕ್ಷಸನೂ, ರಕ್ಷಕನೂ ಆಗಿ ರಣಗಲ್ ರಾಜ್ಯಭಾರ ಮಾಡಿದ್ದು ಗೊತ್ತೇಯಿದೆ. ಆದರೆ ಈ ಭೈರತಿ ರಣಗಲ್ ಯಾರು? ಆತನ ಹಿನ್ನೆಲೆ ಏನು? ಎನ್ನುವುದಕ್ಕೆ ಉತ್ತರ ಎನ್ನುವಂತೆ 'ಭೈರತಿ ರಣಗಲ್' ಸಿನಿಮಾ ಮೂಡಿ ಬಂದಿದೆ. ಕನ್ನಡ ಚಿತ್ರರಂಗದಮಟ್ಟಿಗೆ ಇದು ಮೊದಲ ಪ್ರೀಕ್ವೆಲ್ ಸಿನಿಮಾ.

ತನ್ನ ಜನರಿಗೆ ಒಳ್ಳೆಯದು ಮಾಡಬೇಕು, ಅವರ ರಕ್ಷಣೆಗೆ ನಿಲ್ಲಬೇಕು, ಅದಕ್ಕಾಗಿ ಪ್ರಾಣ ತೆಗೆಯೋಕು ಸಿದ್ಧ, ಪ್ರಾಣ ಕೊಡುವುದಕ್ಕೂ ಸಿದ್ಧ ಎಂದು ರಣಗಲ್ ಶಪಥ ಮಾಡಿದ್ಯಾಕೆ? ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಂಗಿ ಯಾಕೆ ಅಣ್ಣನ ಜೊತೆ ಮಾತನಾಡಲ್ಲ? ರಣಗಲ್ ಮಾಫಿಯಾ ಡಾನ್ ಆಗಿ ಬದಲಾಗಿದ್ಯಾಕೆ? ಅಂತಹ ಬಲವಾದ ಕಾರಣ ಏನು? ಎನ್ನುವ ಪ್ರಶ್ನೆಗಳನ್ನು 'ಮಫ್ತಿ' ಸಿನಿಮಾ ಉಳಿಸಿತ್ತು.

Shivarajkumar Starrer Action thriller Bhairathi Ranagal Review and Rating

'ಭೈರತಿ ರಣಗಲ್' ಟೀಸರ್ ಬಂದಾಗಲೇ ಆತ ಮೊದಲಿಗೆ ವಕೀಲನಾಗಿದ್ದ. ಬಳಿಕ ಡಾನ್ ಆಗಿದ್ದಾನೆ ಎನ್ನುವುದು ಗೊತ್ತಾಗಿತ್ತು. ಆದರೆ ಇಷ್ಟಕ್ಕೆಲ್ಲಾ ಕಾರಣವಾದ ಆ ಘಟನೆ ಏನು? ಎನ್ನುವುದರ ಸುತ್ತಾ ಈ ಸಿನಿಮಾ ಕತೆ ಸುತ್ತುತ್ತದೆ. ಕೊನೆಗೆ ಎಲ್ಲಿಂದ ಶುರುವಾಯಿತೋ ಅಲ್ಲಿಗೆ ಬಂದು ನಿಲ್ಲುತ್ತದೆ. ಎಂಡ್‌ ಕಾರ್ಡ್ ವೇಳೆಗೆ ಸೀಕ್ವೆಲ್ ಕೂಡ ಬರುತ್ತಾ? ಎನ್ನುವ ಕುತೂಹಲವನ್ನು ಮೂಡಿಸುತ್ತದೆ.

ರಣಗಲ್ ಕಥೆಯೇನು?

ರೋಣಾಪುರದ ಮಾಫಿಯಾ ಡಾನ್ ರಣಗಲ್ ಬಂಧನದೊಂದಿಗೆ 'ಮಫ್ತಿ' ಸಿನಿಮಾ ಕಥೆ ಮುಗಿದಿತ್ತು. ಈಗ ರಣಗಲ್ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ಕಥೆ ಶುರುವಾಗುತ್ತದೆ. 21 ವರ್ಷಗಳ ಹಿಂದಕ್ಕೆ ಹೋಗುತ್ತದೆ. ರಣಗಲ್ ಬಾಲ್ಯದ ದಿನಗಳು. ಊರಿನಲ್ಲಿ ನೀರಿಗಾಗಿ ಹಾಹಾಕಾರ. ಸರ್ಕಾರಕ್ಕೆ ಎಷ್ಟೇ ಅರ್ಜಿ ಸಲ್ಲಿಸಿದರೂ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬೇಸತ್ತು ಬಾಲಕ ರಣಗಲ್ ಸರ್ಕಾರಿ ಕಛೇರಿಗೆ ಬಾಂಬ್ ಇಟ್ಟು 6 ಜನರನ್ನು ಕೊಲ್ಲುತ್ತಾನೆ.

Shivarajkumar Starrer Action thriller Bhairathi Ranagal Review and Rating

ಮಾಡಿದ ತಪ್ಪಿಗೆ 21 ವರ್ಷ ಶಿಕ್ಷೆ ಆಗುತ್ತದೆ. ಆದರೆ ಅವನಿಂದಲೇ ರೋಣಾಪುರಕ್ಕೆ ನೀರು ಬರುವಂತಾಗುತ್ತದೆ. ಈ ಪ್ರಯತ್ನದಲ್ಲಿ ಕಬ್ಬಿಣ್ಣದ ನಿಕ್ಷೇಪ ಇರುವುದು ಪತ್ತೆ ಆಗಿ ಪರಾಡೆ(ರಾಹುಲ್ ಬೋಸ್) ಅಕ್ರಮ ಗಣಿಗಾರಿಕೆ, ಕೈಗಾರಿಕೆ ಆರಂಭಿಸುತ್ತಾನೆ. ರೋಣಾಪುರದ ಸಾವಿರಾರು ಜನ ಆ ಕಾರ್ಖಾನೆಗಳಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಜೈಲಿನಲ್ಲೇ ಓದಿ ವಕೀನಾಗುವ ರಣಗಲ್ ಹೊರಗರ ಬರುವ ವೇಳೆಗೆ ಪರಾಡೆ ದಬ್ಬಾಳಿಕೆ ಹೆಚ್ಚಾಗಿರುತ್ತದೆ. ಅದರಿಂದ ಕಾರ್ಖಾನೆ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಬೆಂಬಲಕ್ಕೆ ರಣಗಲ್ ನಿಲ್ತಾನೆ. ಆದರೆ ಕಾನೂನು ಪ್ರಕಾರ ನ್ಯಾಯ ಕೊಡಿಸಲು ಸಾಧ್ಯವಾಗದೇ ಇದ್ದಾಗ ಅದೇ ಕಾನೂನನ್ನು ಕೈಗೆ ತೆಗೆದುಕೊಳ್ತಾನೆ. ಮುಂದೇನು? ಎನ್ನುವುದು ಇನ್ನುಳಿದ ಕಥೆ.

ಸಿನಿಮಾ ಹೇಗಿದೆ?

'ಮಫ್ತಿ' ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದರಿಂದ ಸಹಜವಾಗಿಯೇ ಪ್ರೀಕ್ವೆಲ್ ಮೇಲೆ ನಿರೀಕ್ಷೆ ಇತ್ತು. ನರ್ತನ್ ಆ ಪ್ರಯತ್ನದಲ್ಲಿ ಭಾಗಶಃ ಸಫಲರಾಗಿದ್ದಾರೆ. ಹೆಚ್ಚು ಪ್ರಯೋಗ ಮಾಡಲು ಹೋಗದೇ ಒಂದು ಡೀಸೆಂಟ್ ಸಿನಿಮಾ ಮಾಡಿ ಗೆದ್ದಿದ್ದಾರೆ. ಪ್ರೇಕ್ಷಕರಿಗೆ ಬಹಳ ಹತ್ತಿರವಾಗಿ ರಣಗಲ್ ಪಾತ್ರದ ಸುತ್ತಾ ಕಥೆಯನ್ನು ಹೆಣೆದಿದ್ದಾರೆ. ಭಾವನಾತ್ಮಕ ಅಂಶಗಳನ್ನು ಜೋಡಿಸುತ್ತ ಅಲ್ಲಲ್ಲಿ ಸಣ್ಣ ಸಣ್ಣ ಎಲಿವೇಷನ್ ಸೀನ್ಸ್ ಇಟ್ಟು ಸಿನಿಮಾ ನೋಡಿಸಿಕೊಂಡು ಹೋಗಿದ್ದಾರೆ.

ಫಸ್ಟ್ ಹಾಫ್‌ನಲ್ಲಿ ರಣಗಲ್ (ಶಿವಣ್ಣ) ಮಾತು ಕಮ್ಮಿ. ರೋಣಾಪುರದ ಜನರ ನೋವು, ಕಾರ್ಮಿಕರ ಸಂಕಷ್ಟಗಳ ಸುತ್ತಾ ಕಥೆ ಸಾಗುತ್ತದೆ. ಘಟ್ಟ ಎಂಬ ಸೈಕೋ ರಾಕ್ಷಸನ ಆರ್ಭಟವೂ ಇದೆ. ವಕೀಲನಾಗಿ ಜನರ ಪರ ನಿಲ್ಲುವ ರಣಗಲ್ ಮೇಲೆ ಆ ಊರಿನ ಸರ್ಕಾರಿ ಆಸ್ಪತ್ರೆಗೆ ಬರುವ ವೈದ್ಯೆ ವೈಶಾಲಿ(ರುಕ್ಮಿಣಿ ವಸಂತ್) ಪ್ರೀತಿ ಹುಟ್ಟುತ್ತದೆ. ಕಾರ್ಖಾನೆ ಕಾರ್ಮಿಕರು ತಮಗಾದ ಅನ್ಯಾಯಕ್ಕೆ ನ್ಯಾಯ ಕೇಳಿದ್ದಕ್ಕೆ ಜೀವವನ್ನೇ ಕಳೆದುಕೊಳ್ಳುತ್ತಾರೆ. ಅಲ್ಲಿಗೆ ರಣಗಲ್ ಕರಿಕೋಟು ಪಕ್ಕಕ್ಕಿಟ್ಟು ಲಾಂಗ್ ಹಿಡಿಯುವುದರೊಂದಿಗೆ ಇಂಟರ್‌ವಲ್.

ಸೆಕೆಂಡ್‌ ಹಾಫ್‌ನಲ್ಲಿ ತನ್ನವರಿಗಾಗಿ ಪರಾಡೆ ವಿರುದ್ಧ ಭೈರತಿ ರಣಗಲ್ ತನ್ನದೇ ಮೈನಿಂಗ್ ಸಾಮ್ರಾಜ್ಯ ಕಟ್ಟುತ್ತಾನೆ. ಅಲ್ಲಿಂದ ಮುಂದೆ ಪರಾಡೆ ಹಾಗೂ ರಣಗಲ್ ನಡುವಿನ ಏಟು ಎದಿರೇಟು ಇನ್ನುಳಿದ ಕಥೆ. ಕೊನೆ ಕೊನೆಗೆ ತಮ್ಮ ಸಾಮ್ರಾಜ್ಯ ಉಳಿಸಿಕೊಳ್ಳಲು ಇಬ್ಬರು ಸರ್ಕಾರ ಮೇಲೆ ಪ್ರಭಾವ ಬೀರುವ ಮಟ್ಟಕ್ಕೆ ಬೆಳೆಯುತ್ತಾರೆ. ರಾಜಕೀಯ ನಾಯಕರನ್ನೇ ರಣಗಲ್ ಎದುರು ಹಾಕಿಕೊಂಡಾಗ ರೋಣಾಪುರಕ್ಕೆ ಗಣ ಬರುವಂತಾಗುತ್ತದೆ.

ಫಸ್ಟ್‌ ಹಾಫ್ಟ್ ಕೊಂಚ ಸ್ಲೋ ಅನ್ನಿಸುತ್ತದೆ. ಕಾರ್ಮಿಕರ ಸಂಕಷ್ಟಗಳನ್ನು ನಿಧಾನವಾಗಿ ನರ್ತನ್ ತೋರಿಸುತ್ತಾ ಹೋಗುತ್ತಾರೆ. ಶಿವಣ್ಣ ಆರ್ಭಟವೂ ಕಮ್ಮಿ ಇರುವುದರಿಂದ ಆ ರೀತಿ ಭಾಸವಾಗಬಹುದು. ಆದರೆ ಇಂಟರ್‌ವರ್ ಫೈಟ್ ಬಳಿಕ ಸಿನಿಮಾ ವೇಗ ಪಡೆದುಕೊಳ್ಳುತ್ತದೆ. ಸೆಕೆಂಡ್ ಹಾಫ್‌ನಲ್ಲಿ ಅಸಲಿ ಮಜಾ ಸಿಗುತ್ತದೆ. ನರ್ತನ್ ಸಂಭಾಷಣೆ ಅದಕ್ಕೆ ಸಾಥ್ ಕೊಡುತ್ತದೆ. ಸಣ್ಣ ಸಣ್ಣ ಡೈಲಾಗ್ಸ್ ಕೂಡ ಇಷ್ಟವಾಗುತ್ತದೆ. ಕ್ಲೈಮ್ಯಾಕ್ಸ್ ಅಂತೂ ರೋಟೀನ್ ಅನ್ನಿಸಿಬಿಡುತ್ತದೆ. ಎಮೋಷನಲ್ ಸನ್ನಿವೇಶಗಳು ಅಷ್ಟಾಗಿ ಇಪ್ಯಾಕ್ಟ್ ಮಾಡಲ್ಲ. ಇದೇ ಚಿತ್ರದ ದೊಡ್ಡ ಮೈನಸ್.

ಕಲಾವಿದರ ಅಭಿನಯ

ನಟನೆ ವಿಚಾರಕ್ಕೆ ಬಂದರೆ ಶಿವಣ್ಣನ ಸ್ಟ್ರಾಂಗ್ ಸ್ಕ್ರೀನ್ ಪ್ರಸೆನ್ಸ್ ಮತ್ತೊಮ್ಮೆ ಇಷ್ಟವಾಗುತ್ತದೆ. ರಣಗಲ್ ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ. ಕಣ್ಣಿನಲ್ಲೇ ನಟಿಸೋ ಆ ಪರಿ ಅಭಿಮಾನಿಗಳಿಗೆ ಮಜಾ ಕೊಡುತ್ತದೆ. ಇನ್ನು ಖಡಕ್ ವಾಯ್ಸ್, ಲಾಂಗ್ ಝಳಪಿಸುವ ಪರಿ ಅದಕ್ಕೆ ಮತ್ತಷ್ಟು ಬಲ ತುಂಬಿದೆ. ನಾಯಕಿಯಾಗಿ ರುಕ್ಮಿಣಿಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಆದರೂ ತೆರೆಮೇಲೆ ಇದಷ್ಟು ಹೊತ್ತು ಇಷ್ಟವಾಗುತ್ತಾರೆ.

ಕಾರ್ಮಿಕರ ನಾಯಕ ವರದ ಆಗಿ ಗೋಪಾಲಕೃಷ್ಣ ದೇಶಪಾಂಡೆ, ಕೈಗಾರಿಕೋದ್ಯಮಿ ಪರಾಡೆ ಆಗಿ ರಾಹುಲ್ ಬೋಸ್ ಆಯ್ಕೆ ಉತ್ತಮವಾಗಿದೆ. ಇನ್ನು ಆತನ ಭಂಟನಾಗಿ ಅವಿನಾಶ್, ಶಿವಣ್ಣನ ಸಹೋದರಿಯಾಗಿ ಛಾಯಾ ಸಿಂಗ್ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಘಟ್ಟ ಪಾತ್ರಧಾರಿಯ ಆರ್ಭಟ ಕೂಡ ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತದೆ. ಅಲ್ಲಲ್ಲಿ ನಟ ರಮೇಶ್ ಅರವಿಂದ್ ತಮ್ಮ ಹಿನ್ನೆಲೆ ಧ್ವನಿ ಮೂಲಕ ರಣಗಲ್ ಚರಿತ್ರೆ ಹೇಳುತ್ತಾ ಸಾಗುತ್ತಾರೆ.

ಟೆಕ್ನಿಕಲಿ ಸಿನಿಮಾ

ಕಥೆ ಸಂಪಲ್ ಎನಿಸಿದರೂ ನರ್ತನ್ ಪರಿಣಾಮಕಾರಿಗಾಗಿ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಚೆನ್ನಾಗಿದೆ. ನವೀನ್ ಕುಮಾರ್ ಛಾಯಾಗ್ರಹಣ ಹೈಲೆಟ್ ಎಂದೇ ಹೇಳಬೇಕು. ಕ್ಲೋಸ್‌ ಅಪ್ ಶಾಟ್ಸ್ ಮಾತ್ರವಲ್ಲ ಒಂದಷ್ಟು ಏರಿಯಲ್ ಶಾಟ್ಸ್ ಕೂಡ ಇಷ್ಟವಾಗುತ್ತದೆ. ನಿಜ ಹೇಳಬೇಕು ಅಂದ್ರೆ ಮೊದಲ ಬಾರಿಗೆ ರವಿ ಬಸ್ರೂರು ಬಿಜಿಎಂ ಆರ್ಭಟ ಕಮ್ಮಿ ಇದೆ. ಸನ್ನಿವೇಶಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಇದೆ.

ಭಾವನಾತ್ಮಕ ಸನ್ನಿವೇಶಗಳನ್ನು ತಮ್ಮ ಸಂಗೀತದಿಂದ ನೋಡುಗರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿದ್ದಾರೆ. ಆಕಾಶ್ ಹಿರೇಮಠ್ ಸಂಕಲನ ಪೂರಕವಾಗಿದೆ. ಬಹಳ ಅದ್ಧೂರಿಯಾಗಿಯೇ ಸಿನಿಮಾ ಮೂಡಿ ಬಂದಿದೆ. ಹಾಕಿರುವ ಸೆಟ್‌ಗಳು, ಲೋಕೇಶನ್‌ಗಳು ಎಲ್ಲವೂ ಚಿತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.

ಕೊನೆಮಾತು

ಶಿವಣ್ಣನ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ 'ಭೈರತಿ ರಣಗಲ್'. ರಾ ಆಕ್ಷನ್ ಹಾಗೂ ಸೆಂಟಿಮೆಂಟ್ ಮಿಕ್ಸ್ ಮಾಡಿ ಮಾಡಿರುವ ಆಕ್ಷನ್ ಎಂಟರ್‌ಟೈನರ್. ಒಂದೇ ಹೇಳಬೇಕು ಅಂದ್ರೆ ಸಾದಾ ಸೀದಾ ಆಕ್ಷನ್ ಸಿನಿಮಾ. ಒಮ್ಮೆ ನೋಡಿ ಎಂಜಾಯ್ ಮಾಡಬಹುದು. ಭಾರೀ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಹೋಗುವುದು ಉತ್ತಮ.

More from Filmibeat

English summary
Bhairathi Ranagal Review: Perfect prequel for Mufti;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X