Seat Edge Review: 'ಸೀಟ್ ಎಡ್ಜ್'ನಲ್ಲಿ ದೆವ್ವದ ಜಾಡು ಹಿಡಿದು ಹೊರಟ ವ್ಲಾಗರ್ ಕಥೆ
ದೆವ್ವ ಭೂತಗಳ ಅಸ್ತಿತ್ವ ನಿಜವೇ? ನಿಜವಾಗಿಯೂ ದೆವ್ವಗಳು ಇದ್ಯಾ? ಇಲ್ವಾ? ಈ ಪ್ರಶ್ನೆ ಇಂದು ನಿನ್ನೆಯದಲ್ಲ. ದೆವ್ವ ಭೂತದ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ಕೆಲವರು ನಾವು ದೆವ್ವ, ಭೂತ ನೋಡಿದ್ದೇವೆ ಅಂದ್ರೆ ಮತ್ತೆ ಕೆಲವರು ಅದೆಲ್ಲಾ ಸುಳ್ಳು ಎಂದು ವಾದಿಸುತ್ತಾರೆ. ಇದೆಲ್ಲವನ್ನು ಪಕ್ಕಕ್ಕಿಟ್ಟರು ಈ ವಾರ ದೆವ್ವದ ಕುರಿತಾಗಿ ಕನ್ನಡ ಸಿನಿಮಾ ಬಿಡುಗಡೆಯಾಗಿದೆ.
ಕಾಮಿಡಿ ಹಾರರ್ 'ಸೀಟ್ ಎಡ್ಜ್' ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಸಿದ್ದು ಮೂಲಿಮನಿ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಚೇತನ್ ಶೆಟ್ಟಿ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯೂಟ್ಯೂಬ್ ವೀಡಿಯೋಗಳನ್ನು ಮಾಡಲು ಯುವಕರು ನಾನಾ ಕಸರತ್ತು ಮಾಡುತ್ತಾರೆ. ಅದರಲ್ಲಿ ಘೋಸ್ಟ್ ಹಂಟಿಂಗ್ ಕೂಡ ಒಂದು. ಈ ಚಿತ್ರದಲ್ಲಿ ಕೂಡ ಅದೇ ಕಥೆಯಿದೆ.

'ಸೀಟ್ ಎಡ್ಜ್' ಕಥೆ
ಐಟಿ ಕೆಲಸ ಬಿಟ್ಟು ವ್ಲಾಗರ್ ಆಗಿ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಹೊಂದಿನ ಯುವಕ ಸಿದ್ದು(ಸಿದ್ದು ಮೂಲಿಮನಿ). ಮೊದಲಿಗೆ ನನ್ನೋಡಿ ಎನ್ನುವ ಯೂಟ್ಯೂಬ್ ಚಾನಲ್ ಮಾಡಿ ತರಹೇವಾರಿ ವೀಡಿಯೋಗಳನ್ನು ಮಾಡಿ ಸಿದ್ದು ಜನಪ್ರಿಯತೆ ಗಳಿಸುತ್ತಾನೆ. ಮುಂದೆ ಘೋಸ್ಟ್ ಹಂಟಿಂಗ್ ಕುರಿತು ವಿಡಿಯೋ ಮಾಡಿ 'ಸೀಟ್ ಎಡ್ಜ್' ಎಂಬ ಹೊಸ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡುತ್ತಾನೆ.
ಮುಂದೆ ಘೋಸ್ಟ್ ಟೌನ್ ಎಂಬ ಜಾಗಕ್ಕೆ ಹೋಗಿ ಒಂದು ರಾತ್ರಿ ಆ ಭೂತ ಬಂಗಲೆಯಲ್ಲಿ ಕಳೆದು, ಅಲ್ಲಿನ ವಿಚಿತ್ರ ಸಂಗತಿಗಳನ್ನು ವಿಡಿಯೋ ಮಾಡುವ ಸಾಹಸಕ್ಕೆ ಮುಂದಾಗುತ್ತಾನೆ. ಈ ಹಾದಿಯಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾನೆ. ಮುಂದೇನು? ಅಷ್ಟಕ್ಕೂ ಸಿದ್ದು ಘೋಸ್ಟ್ ಟೌನ್‌ಗೆ ಹೋಗಿದ್ಯಾಕೆ? ಆ ಭೂತ ಬಂಗಲೆಯ ಹಿನ್ನೆಲೆ ಏನು? ಸಿದ್ದು ಸಂಕಷ್ಟದಿಂದ ಪಾರಾಗುತ್ತಾನಾ? ಈ ಪ್ರಶ್ನೆಗಳಿಗೆ ತೆರೆಮೇಲೆ ಉತ್ತರ ಸಿಗಲಿದೆ.

ಸಿನಿಮಾ ಹೇಗಿದೆ?
ಉತ್ತರ ಭಾರತದ ಘೋಸ್ಟ್ ಹಂಟರ್ ಖ್ಯಾತಿಯ ಸೌರಬ್ ತಿವಾರಿ ಎಂಬಾತ ಘೋಸ್ಟ್ ಟೌನ್‌ಗೆ ಹೋಗಿ ಬರುವುದರೊಂದಿಗೆ 'ಸೀಟ್ ಎಡ್ಜ್' ಕಥೆ ಶುರುವಾಗುತ್ತದೆ. ಬಳಿಕ ಸಿದ್ದು ಪರಿಚಯ. ಆತನ ಹಿನ್ನೆಲೆ, ಆತ ಯೂಟ್ಯೂಬ್ ಚಾನಲ್ ಮಾಡುವುದು. ನಡುವೆ ನಂದಿನಿ(ರವೀಕ್ಷಾ ಶೆಟ್ಟಿ) ಜೊತೆ ಪ್ರೀತಿ, ಹಾಡು ಪಾಡು ಎಲ್ಲವನ್ನು ಫಸ್ಟ್‌ಹಾಫ್‌ನಲ್ಲಿ ನೋಡಬಹುದು.
ಸಿದ್ದು ತಮ್ಮ ತಪ್ಪು ತಿದ್ದಿಕೊಳ್ಳಲು, ಘೋಸ್ಟ್ ಹಂಟ್ ವೀಡಿಯೋ ಮಾಡಲು ಘೋಸ್ಟ್‌ಟೌನ್‌ಗೆ ಹೋಗುವುದರೊಂದಿಗೆ ಸೆಕೆಂಡ್ ಹಾಫ್ ಶುರುವಾಗುತ್ತದೆ. ಫಸ್ಟ್ ಹಾಫ್‌ಗಿಂತ ಸೆಕೆಂಡ್ ಹಾಫ್ ಕುತೂಹಲ ಮೂಡಿಸುವಂತಿದೆ. ಆರಂಭದಲ್ಲಿ ತಮಾಷೆಯಾಗಿ ಸಾಗುವ ಸಿನಿಮಾ ಬಳಿಕ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ರಾಘು ರಾಮಣ್ಣ ಕೊಪ್ಪ, ಗಿರಿ ಶಿವಣ್ಣ ಕಾಮಿಡಿ ಮಾಡಿ ನಗಿಸೋ ಪ್ರಯತ್ನ ಮಾಡಿದ್ದಾರೆ.
ಕಲಾವಿದರ ನಟನೆ
ವ್ಲಾಗರ್ ಆಗಿ ಸಿದ್ದು ಮೂಲಿಮನಿ ಇಷ್ಟವಾಗುತ್ತಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಅವರು ಲೀಡ್ ರೋಲ್‌ಗಳಲ್ಲಿ ನಟಿಸಿದ್ದು ಈ ಬಾರಿ ಸಿಕ್ಕ ಅವಕಾಶ ಬಳಸಿಕೊಂಡಿದ್ದಾರೆ. ನಾಯಕಿ ರವೀಕ್ಷಾ, ರಾಘು ರಾಮಣ್ಣ ಕೊಪ್ಪ, ಗಿರಿ ಶಿವಣ್ಣ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ
ಯಾವುದೇ ವಿಚಾರದಲ್ಲಿ ರಾಜಿಯಾಗದೇ ನಿರ್ಮಾಪಕ ಗಿರಿಧರ್ ಟಿ ವಸಂತಪುರ 'ಸೀಟ್ ಎಡ್ಜ್' ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚೇತನ್ ಶೆಟ್ಟಿ ಒಂದೊಳ್ಳೆ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಿದ್ದು ಛಾಯಾಗ್ರಹಣ, ಸಂಗೀತ ಎಲ್ಲದರ ಸಾಥ್ ಸಿಕ್ಕಿದೆ.
ಕೊನೆ ಮಾತು
ಹೊಸಬರ ತಂಡ ಒಂದೊಳ್ಳೆ ಸಿನಿಮಾ ಮಾಡುವ ಪ್ರಯತ್ನ ಮಾಡಿದೆ. ಹಾರರ್ ಕಾಮಿಡಿ ಸಿನಿಮಾಗಳನ್ನು ಇಷ್ಟಪಡುವರಿಗೆ 'ಸೀಟ್ ಎಡ್ಜ್' ಸಿನಿಮಾ ಇಷ್ಟವಾಗುತ್ತದೆ.


Click it and Unblock the Notifications











