Sikandar Twitter (X) Review ; ಬೆಳ್ಳಿತೆರೆಯಲ್ಲಿ ಸಲ್ಮಾನ್ ಖಾನ್ ಅಬ್ಬರ, ಆಡಂಬರ, ಹೇಗಿದ್ದಾನೆ ಸಿಕಂದರ್..?
ಸಲ್ಮಾನ್ ಖಾನ್‌ಗೆ ಈದ್ ಮೊದಲಿಂದ ತುಂಬಾನೇ ವಿಶೇಷವಾದದ್ದು. ಯಾಕೆಂದರೆ ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಚಿತ್ರಗಳು ಸಲ್ಮಾನ್ ಖಾನ್ ವರ್ಚಸ್ಸು ಹೆಚ್ಚಿಸಿವೆ. ವಾಟೆಂಡ್, ದಬಾಂಗ್, ಬಾಡಿಗಾರ್ಡ್, ಏಕ್ ಥಾ ಟೈಗರ್, ಕಿಕ್, ಭಜರಂಗಿ ಭಾಯಿಜಾನ್, ಸುಲ್ತಾನ್, ಹೀಗೆ ಈದ್ ಹಬ್ಬದ ಪ್ರಯುಕ್ತ ಬಂದ ಸಲ್ಮಾನ್ ಸಿನಿಮಾಗಳೆಲ್ಲವೂ ಬ್ಲಾಕ್ ಬಸ್ಟರ್‌ಗಳಾಗಿವೆ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸಿವೆ.
ಹೀಗಾಗಿಯೇ ಪ್ರತಿ ವರ್ಷ ಈದ್ ಹಬ್ಬದ ಪ್ರಯುಕ್ತ ತಮ್ಮ ಚಿತ್ರವನ್ನು ಬಿಡುಗಡೆ ಮಾಡುವ ಪರಿಪಾಠವನ್ನು ಸಲ್ಮಾನ್ ಖಾನ್ ಬೆಳೆಸಿಕೊಂಡು ಬಂದಿದ್ದಾರೆ. ಈ ವರ್ಷ ತಮ್ಮ ಸಿಕಂದರ್ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಎರಡು ವರ್ಷದ ನಂತರ ಬಿಡುಗಡೆಯಾಗುತ್ತಿರುವ ಸಲ್ಮಾನ್ ಖಾನ್ ಅಭಿನಯದ ಚಿತ್ರ ಇದು. ಈ ಕಾರಣಕ್ಕೆ ಸಹಜವಾಗಿ ಸಲ್ಮಾನ್ ಖಾನ್ ಅವರ ಅಭಿಮಾನಿಗಳಲ್ಲಿ ಕುತೂಹಲ ಇದೆ. ಬಾಲಿವುಡ್‌ಗೆ ಸಿಕಂದರ್ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿವೆ.

ಇನ್ನು ಚಿತ್ರದ ನಿರ್ದೇಶಕ ಎ.ಆರ್. ಮುರಗದಾಸ್. ದಕ್ಷಿಣದ ಖ್ಯಾತ ಹೆಸರು. ಗಜಿನಿ ಚಿತ್ರದ ಮೂಲಕ ಹಿಂದಿ ಪ್ರೇಕ್ಷಕರ ಹೃದಯವನ್ನು ಕೂಡ ಗೆದ್ದವರು. ಹೀಗಾಗಿ ಸಲ್ಮಾನ್ ಖಾನ್ ವಿಶಿಷ್ಟ ಮ್ಯಾನರಿಸಂಗೆ ಅನುಗುಣವಾಗಿ ಮುರಗದಾಸ್ ಚಿತ್ರವನ್ನು ಮಾಡಿರುತ್ತಾರೆ ಎನ್ನುವ ನಂಬಿಕೆ ಚಿತ್ರಪ್ರೇಮಿಗಳಿಗಿದೆ. ಹೀಗೆ ಹಲವು ವಿಶೇಷತೆಗಳನ್ನು ಹೊಂದಿರುವ ಸಿಕಂದರ್ ಚಿತ್ರ ಇಂದು ಬಿಡುಗಡೆಯಾಗಿದೆ. ಹಾಗಿದ್ದರೆ ಹೇಗಿದೆ ಸಿಕಂದರ್. ಚಿತ್ರ ನೋಡಿ ಪ್ರೇಕ್ಷಕರು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಲಂಡನ್ ಪ್ರೇಕ್ಷಕ ಕಂಡಂತೆ ಸಿಕಂದರ್ !
ಈಗಷ್ಟೇ ನಾನು ಲಂಡನ್‌ನಲ್ಲಿ ಸಿಕಂದರ್ ಸಿನಿಮಾ ನೋಡಿದೆ, ಅದ್ಭುತ ಚಿತ್ರ ಮತ್ತು ಅದ್ಭುತ ಅನುಭವ. ಅತ್ಯುತ್ತಮ ಹಿನ್ನೆಲೆ ಸಂಗೀತ ಮತ್ತು ಕಥೆಯ ಜೊತೆ ಸಲ್ಮಾನ್ ಖಾನ್ ಅದ್ಭುತವಾಗಿ ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ ಸೇರಿದಂತೆ ಅತ್ಯುತ್ತಮ ಪಾತ್ರವರ್ಗ ಹೊಂದಿರುವ ಚಿತ್ರ ಇದು.
ಹಿಂದಿನ ಚಿತ್ರಗಳಿಗಿಂತ ಸಿಕಂದರ್ ಬೆಸ್ಟ್
ಸಿಕಂದರ್ ಸಲ್ಮಾನ್ ಖಾನ್ ಅವರ ಹಿಂದಿನ ಕೆಲ ಚಿತ್ರಗಳಿಗಿಂತ ಚೆನ್ನಾಗಿದೆ. ಸಲ್ಮಾನ್ ಖಾನ್ ಅವರ ಎಂಟ್ರಿ ಹುಚ್ಚು ಹಿಡಿಸುತ್ತೆ. ಆಕ್ಷನ್ ಮತ್ತು ಹಾಡುಗಳು ಚೆನ್ನಾಗಿವೆ.ಚಿತ್ರದಲ್ಲಿ ಭಾವನಾತ್ಮಕ ಅಂಶಗಳು ಕೂಡ ಇವೆ.
ಚಿತ್ರಮಂದಿರದಲ್ಲಿಯೇ ನೋಡುವಂತಹ ಸಿನಿಮಾ
ಸಿಕಂದರ್ ಮೂಲಕ ಹಳೆಯ ಸಲ್ಮಾನ್ ಖಾನ್ ಮರಳಿ ಬಂದಿದ್ದಾರೆ. ಬೆಳ್ಳಿಪರದೆಯ ಮೇಲೆಯೇ ನೋಡುವಂತಹ ಚಿತ್ರ ಇದು. ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಚಿತ್ರಮಂದಿರದಿಂದ ಹೊರ ಬಂದರು ಕೂಡ ಆ ಸಂಗೀತ ಕಿವಿಗಳಲ್ಲಿ ರಿಂಗಣಿಸುತ್ತಿದೆ. ಸಲ್ಮಾನ್ ಖಾನ್ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಅಭಿಮಾನಿಗಳ ನಾಡಿ ಮಿಡಿತವನ್ನು ಅರಿತು ಮುರಗದಾಸ್ ಚಿತ್ರವನ್ನು ಮಾಡಿದ್ದಾರೆ. ನಾವು ಕಾತುರದಿಂದ ಕಾಯುತ್ತಿದ್ದ ಈ ಚಿತ್ರವನ್ನು ಪ್ರತಿಯೊಬ್ಬ ಸಿನಿಮಾ ಪ್ರೇಮಿ ಕೂಡ ಇಷ್ಟ ಪಡುತ್ತಾನೆ. ಶಿಳ್ಳೆ, ಚಪ್ಪಾಳೆ ಹೊಡೆಯುವ ಅನೇಕ ದೃಶ್ಯಗಳು ಚಿತ್ರದಲ್ಲಿವೆ.
ಅದ್ಭುತ ಅನುಭವ
ಈಗಷ್ಟೇ ಸಿಕಂದರ್ ಚಿತ್ರ ನೋಡಿದೆ. ಅದ್ಭುತ ಅನುಭವ. ಸಲ್ಮಾನ್ ಖಾನ್ ಅದ್ಭುತವಾಗಿ ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಮಿಂಚಿದ್ದಾರೆ.ಎ ಆರ್ ಮುರಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ಹೊಸತನ ಇದೆ. ನೋಡಲೇಬೇಕಾದ ಚಿತ್ರ ಇದು.
ಮಾಸ್ಟರ್ ಪೀಸ್ ಸಿಕಂದರ್
ಸಿಕಂದರ್ ಚಿತ್ರವನ್ನು ಸಲ್ಮಾನ್ ಖಾನ್ ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಕೇವಲ ಆಕ್ಷನ್ ದೃಶ್ಯಗಳಲ್ಲಿ ಮಾತ್ರವಲ್ಲ ಭಾವನಾತ್ಮಕ ದೃಶ್ಯಗಳಲ್ಲಿ ಕೂಡ ಸಲ್ಮಾನ್ ಅಭಿನಯ ಅದ್ಭುತವಾಗಿದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಈ ಚಿತ್ರ ಧೂಳೆಬ್ಬಿಸುವುದು ಖಚಿತ. ಪ್ರೇಕ್ಷಕರಿಗೆ ಏನು ಬೇಕು ಎನ್ನುವುದನ್ನು ಚೆನ್ನಾಗಿ ಅರಿತಿರುವ ನಿರ್ಮಾಪಕ ಸಾಜಿದ್ ನಾಡಿಯಾವಾಲಾ ಕಿಕ್ ನಂತರ ಮತ್ತೊಂದು ಪವರ್‌ಫುಲ್ ಚಿತ್ರ ನಿರ್ಮಾಣ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್‌ವಾಲ್ ಮಾತ್ರವಲ್ಲದೇ ಶರ್ಮನ್ ಜೋಶಿ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ಈದ್ ಹಬ್ಬಕ್ಕೆ ಹೇಳಿ ಮಾಡಿಸಿದ ಚಿತ್ರ ಸಿಕಂದರ್.
ಹಾಗಂಥ ಸಿಕಂದರ್ ಎಲ್ಲರಿಗೂ ಕೂಡ ಇಷ್ಟವಾಗಿದೆ ಅಂತೇನಿಲ್ಲ. ಕೆಲವರು ಚಿತ್ರವನ್ನು ತೆಗಳಿದ್ದಾರೆ. ಅದೇ ಪುರಾತನ ಕಾಲದ ಕಥೆಯನ್ನು ಹೊಂದಿರುವ ಕಮರ್ಷಿಯಲ್ ಚಿತ್ರ ಎಂದು ಟೀಕಿಸಿದ್ದಾರೆ. ಕೇವಲ ಒಂದು ಸ್ಟಾರ್‌ಗಳನ್ನು ಕೂಡ ಚಿತ್ರಕ್ಕೆ ನೀಡಿದ್ದಾರೆ.
ಸುವರ್ಣ ಅವಕಾಶ ಕೈ ಚೆಲ್ಲಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಮತ್ತು ಎ.ಆರ್.ಮುರಗದಾಸ್ ಸುವರ್ಣ ಅವಕಾಶ ಕೈ ಚೆಲ್ಲಿದ್ದಾರೆ. ಗಜಿನಿ ಅಂತಹ ಅದ್ಭುತ ಚಿತ್ರ ನೀಡಿದ ಮುರಗದಾಸ್, ಸಲ್ಮಾನ್ ಖಾನ್ ಜೊತೆ ಚಿತ್ರ ಮಾಡಿದ ಹಿನ್ನೆಲೆ ಈ ಚಿತ್ರ ಭರವಸೆ ಮೂಡಿಸಿತ್ತು. ಮೇಲಾಗಿ 200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರ ಇದು. ಹೀಗಾಗಿ ಬ್ಲಾಕ್‌ಬಸ್ಟರ್ ಆಗುವ ಭರವಸೆ ಇತ್ತು. ಆದರೆ ದುರದೃಷ್ಟವಶಾತ್ ನಿರೀಕ್ಷೆ ಹುಸಿಯಾಗಿದೆ. ನಿರೂಪಣೆಯಲ್ಲಿ ಚಿತ್ರತಂಡ ಸೋತಿದೆ.


Click it and Unblock the Notifications