Gatha Vaibhava Review: ಪುನರ್ಜನ್ಮದ ಪ್ರೇಮ ಕಥೆಗಳದ್ದೇ 'ಗತ ವೈಭವ'; ಪ್ಲಸ್ ಏನು? ಮೈನಸ್ ಏನು?
ಪ್ರೇಕ್ಷಕರಿಗೆ ಪ್ರೇಮ ಕಥೆಗಳನ್ನು ಬಿನ್ನ-ವಿಭಿನ್ನ ಶೈಲಿಯಲ್ಲಿ ಹೇಳುವುದರಲ್ಲಿ ಸಿಂಪಲ್ ಸುನಿ ನಿಸ್ಸೀಮರು. ಈಗ ಬಾರಿ ಕೂಡ ಒಂದು ವಿಶಿಷ್ಟ ಪ್ರೇಮಕಥೆಯನ್ನು ಹೊತ್ತು ಬಂದಿದ್ದಾರೆ. ಅದುವೇ 'ಗತ ವೈಭವ'. ಹೊಸ ಹೀರೋನಾ ಇಟ್ಕೊಂಡು ವಿಭಿನ್ನ ಕಥೆಯನ್ನು ತೆರೆಮೇಲೆ ತರುವ ಸಾಹಸಕ್ಕೆ ಸಿಂಪಲ್ ಸುನಿ ಕೈ ಹಾಕಿದ್ದಾರೆ. ಈ ಸಾಹಸದಲ್ಲಿ ಗೆದ್ದರಾ? ಸೋತ್ರಾ? ಅನ್ನೋದು ಮುಂದೆ ಗೊತ್ತಾಗುತ್ತೆ.
ಹೊಸ ಪ್ರತಿಭೆ ದುಷ್ಯಂತ್ 'ಗತ ವೈಭವ'ದ ಹೀರೋ. ಆಶಿಕಾ ರಂಗನಾಥ್ ಈ ಸಿನಿಮಾಗೆ ನಾಯಕಿ. ಇವರಿಬ್ಬರಿಗೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಿಂಪಲ್ ಸುನಿಯೇ ಹೇಳಿರುವಂತೆ ಇಂದು ಫ್ಯಾಂಟಸಿ ಸಿನಿಮಾ. ತಮ್ಮ ಬರವಣಿಗೆ ಹಾಗೂ ನಿರೂಪಣಾ ಶೈಲಿಯಿಂದಲೇ ಗಮನ ಸೆಳೆದಿರುವ ಸಿಂಪಲ್ ಸುನಿಯ 'ಗತ ವೈಭವ' ಪ್ರೇಕ್ಷಕರಿಗೆ ಇಷ್ಟ ಆಗುತ್ತಾ? ಕಥೆ ಏನು ಅನ್ನೋದೇ ಇಂಟ್ರೆಸ್ಟಿಂಗ್.

ಈ ಸಿನಿಮಾವನ್ನು 100 ದಿನಗಳಿಗೂ ಅಧಿಕ ಕಾಲ ಶೂಟಿಂಗ್ ಮಾಡಲಾಗಿದೆ. ದೇಶ-ವಿದೇಶದಲ್ಲಿ ಚಿತ್ರೀಕರಣ ನಡೆದಿದೆ. ವಿಎಫ್‌ಎಕ್ಸ್ ಅನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಇದು ಸ್ಯಾಂಡಲ್‌ವುಡ್‌ನ ಮತ್ತೊಂದು ಹಿಟ್ ಸಿನಿಮಾಗಳ ಸಾಲಿಗೆ ಸೇರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಹಾಗಿದ್ದರೆ, 'ಗತ ವೈಭವ' ಸಿನಿಮಾದ ಕಥೆಯೇನು? ಸಿನಿಮಾದ ಪ್ಲಸ್ ಏನು? ಮೈಸನ್ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ಗತ ವೈಭವ' ಕಥೆಯೇನು?
'ಗತ ವೈಭವ'.. ಇದೊಂದು ಪುನರ್ಜನ್ಮದ ಕಥೆ. ಹಿಂದಿನ ಜನ್ಮ ಹೇಗಿತ್ತು? ಆ ಜನ್ಮದಲ್ಲಿ ಅವರು ಏನು ಮಾಡುತ್ತಿದ್ದರು? ಅವರ ಲವ್ ಸ್ಟೋರಿ ಇಂತಹದ್ದೇ ಎಳೆಯನ್ನು ಇಟ್ಟುಕೊಂಡು ಹೆಣೆದ ಕಥೆಯೇ 'ಗತ ವೈಭವ'. ಈ ಸಿನಿಮಾದಲ್ಲಿ ಸಿಂಪಲ್ ಸುನಿ ಒಟ್ಟು ನಾಲ್ಕು ಕಥೆಯನ್ನು ಹೇಳಿಕೊಂಡು ಹೋಗಿದ್ದಾರೆ. ಮೊದಲನೆಯದು ದೇವ ಕನ್ಯೆ ಹಾಗೂ ರಾಕ್ಷಸ. ಪೈರೆಟ್ಸ್ ಆಫ್ ದಿ ಕೆರಿಬಿಯನ್ ಎರಡನೇ ಕಥೆ, ಮೂರನೇ ಕಥೆ ಮಂಗಳೂರು ಭಾಗದ ಕಂಬಳ ಹಿನ್ನೆಲೆಯಲ್ಲಿ ನಡೆಯುತ್ತೆ. ನಾಲ್ಕನೆಯದ್ದು ಪ್ರಸ್ತುತ ಕಥೆ. ಈ ನಾಲ್ಕು ಕಥೆಗಳಿಗೆ ಸಿಂಪಲ್ ಸುನಿ ಟಚ್ ಕೊಟ್ಟಿರೋದೇ ಸಿನಿಮಾದ ಮ್ಯಾಜಿಕ್.
ಪರ್ಫಾಮೆನ್ಸ್ ಹೇಗಿದೆ?
ನಾಲ್ಕು ಕಥೆಗಳಲ್ಲಿ ನಾಲ್ಕು ಪಾತ್ರಗಳಲ್ಲಿ ದುಷ್ಯಂತ್ ಕಾಣಿಸಿಕೊಳ್ಳುತ್ತಾರೆ. ದುಷ್ಯಂತ ಅಭಿನಯ ಉತ್ತಮವಾಗಿದೆ. ಪ್ರೇಕ್ಷಕನಿಗೆ ಇದು ಅವರ ಮೊದಲನೇ ಸಿನಿಮಾ ಅಂತ ಅನಿಸುವುದೇ ಇಲ್ಲ. ಎಲ್ಲೂ ಹೊಸ ಹೀರೋ ಅನ್ನೋ ಫೀಲ್ ಕೊಡುವುದಿಲ್ಲ. ಸಿನಿಮಾರಂಗಕ್ಕೆ ಸಂಪೂರ್ಣವಾಗಿ ತಯಾರಿ ಮಾಡಿಕೊಂಡು ಬಂದಿರೋದು ಗೊತ್ತಾಗುತ್ತೆ. ಆಶಿಕಾ ರಂಗನಾಥ್ ಕೂಡ ನಾಲ್ಕು ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಅವರ ಅಭಿನಯಕ್ಕೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಾರೆ. ಹಾಗೇ ಆಶಿಕಾ ಅಣ್ಣನ ಪಾತ್ರದಲ್ಲಿ ಡ್ಯಾನ್ಸರ್ ಕಿಶನ್ ಕೂಡ ಗಮನ ಸೆಳೆಯುತ್ತಾರೆ.
ಟೆಕ್ನಿಕಲಿ ಸಿನಿಮಾ ಹೇಗಿದೆ?
'ಗತ ವೈಭವ'ದ ಕೆಲವು ಎಪಿಸೋಡ್‌ಗಳಲ್ಲಿ ವಿಎಫ್‌ಎಕ್ಸ್ ಬಳಕೆ ಎದ್ದು ಕಾಣುತ್ತೆ. ವಿಎಫ್‌ಎಕ್ಸ್ ವಿಚಾರದಲ್ಲಿ ಎಲ್ಲೂ ಕಳಪೆ ಅಂತ ಅನಿಸುವುದಿಲ್ಲ. ಅತಿರೇಕ ಅಂತಾನೂ ಎನಿಸುವಂತೆಯೂ ಇಲ್ಲ. ದೇವಲೋಕದ ಸೀನ್‌ಗಳು, ಪೈರೆಟ್ಸ್ ಆಫ್ ದಿ ಕೆರಿಬಿಯನ್ ಸೀನ್‌ಗಳು ಎಲ್ಲವೂ ನ್ಯಾಚುಲರ್ ಆಗಿದೆ ಅಂತ ಅನಿಸುತ್ತೆ. ಟೆಕ್ನಿಕಲಿ ಈ ಸಿನಿಮಾ ಸೌಂಡ್ ಆಗಿದೆ. ಇನ್ನು ಸಿಂಪಲ್ ಸುನಿ ನಿರ್ದೇಶನ ಕೂಡ ಓಕೆ.

ಪ್ಲಸ್ ಪಾಯಿಂಟ್ ಏನು?
'ಗತ ವೈಭವ'ದ ಪ್ಲಸ್ ಪಾಯಿಂಟ್ ಸೆಕೆಂಡ್ ಹಾಫ್ ಹಾಗೂ ಕ್ಲೈಮ್ಯಾಕ್ಸ್. ಕೆಲವೊಮ್ಮೆ ಇಲ್ಲಿಂದಲೇ ಸಿನಿಮಾ ಶುರುವಾಗಿದ್ದರೆ ಅಂತ ಅನಿಸಿಬಿಡುವಷ್ಟು ಇಷ್ಟ ಆಗುತ್ತೆ. ಭಾವನಾತ್ಮಕ ಸನ್ನಿವೇಶಗಳನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವ ಹಾಗೆ ಕಟ್ಟಿಕೊಡುವುದರಲ್ಲಿ ಸಿಂಪಲ್ ಸುನಿ ಗೆದ್ದಿದ್ದಾರೆ. ಇನ್ನು ಸಿನಿಮಾದ ಕ್ಲೈಮ್ಯಾಕ್ಸ್ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ.
ಮೈನಸ್ ಪಾಯಿಂಟ್ ಏನು?
'ಗತ ವೈಭವ'ದ ಮೈನಸ್ ಪಾಯಿಂಟ್ ಫಸ್ಟ್ ಹಾಫ್. ಮೊದಲಾರ್ಧ ಸಿಕ್ಕಾಪಟ್ಟೆ ಎಳೆದಿದ್ದಾರೆ ಅಂತ ಅನಿಸುತ್ತೆ. ಫಸ್ಟ್ ಪಾರ್ಟ್‌ನಲ್ಲಿ ಎರಡು ಜನ್ಮಗಳನ್ನು ತೋರಿಸಿದ್ದಾರೆ. ದೇವಕನ್ಯೆ ಹಾಗೂ ರಾಕ್ಷಸನ ಸ್ಟೋರಿಯಲ್ಲಂತೂ ಏನು ನಡೀತಾ ಇದೆ ಅನ್ನೋ ಗೊಂದಲವನ್ನು ಸೃಷ್ಟಿಸಿಬಿಡುತ್ತೆ. ಸಿನಿಮಾ ಮುಂದೆ ಸಾಗುತ್ತಾ ಪ್ರೇಕ್ಷಕರಿಗೆ ಬೋರಿಂಗ್ ಅಂತ ಅನಿಸುತ್ತೆ. ಶಿಪ್‌ನಲ್ಲಿ ನಡೆಯುವ ಸನ್ನಿವೇಶಗಳು ಬೋರ್ ಹೊಡೆಸುತ್ತವೆ. ಇಲ್ಲಿ ಸಿಂಪಲ್ ಸುನಿ ಸ್ವಲ್ಪ ಕೆಲಸ ಮಾಡಬೇಕಿತ್ತು.
'ಗತ ವೈಭವ' ನೋಡ್ಬೇಕಾ?
ಸಿನಿಮಾದಲ್ಲಿ ಕೆಲವು ನೆಗೆಟಿವ್ ಅಂಶಗಳು ಇದ್ದರೂ, ಒಮ್ಮೆಯಂತೂ ಈ ಸಿನಿಮಾ ನೋಡಬಹುದು. ಸಿಂಪಲ್ ಸುನಿ ಮಾಡಿದ ಹೊಸ ಪ್ರಯತ್ನಕ್ಕಾದರೂ ಈ ಸಿನಿಮಾವನ್ನು ನೋಡಲು ಅಡ್ಡಿಯಿಲ್ಲ.


Click it and Unblock the Notifications











