Sitaare Zameen Par Review ; ಮನಸ್ಸಿಗೆ ಮುದ ನೀಡುತ್ತಲೇ ಕಣ್ಣಂಚು ಒದ್ದೆ ಮಾಡುವ ಚಿತ್ರ, ಸಿತಾರೆ ಜಮೀನ್ ಪರ್..!
Star Cast: ಆಮಿರ್ ಖಾನ್, ಜೆನಿಲಿಯಾ ದೇಶ್‌ಮುಖ್, ಆರುಶ್ ದತ್ತ, ಗೋಪಿ ಕೃಷ್ಣನ್ ವರ್ಮಾ, ವೇದಾಂತ್ ಶರ್ಮಾ, ನಮನ್ ಮಿಶ್ರಾ, ರಿಷಿ ಶಹಾನಿ, ರಿಷಭ್ ಜೈನ್, ಆಶಿಶ್ ಪೆಂಡ್ಸೆ, ಸಂವಿತ್ ದೇಸಾಯಿ, ಸಿಮ್ರಾನ್ ಮಂಗೇಶ್ಕರ್, ಆಯುಷ್ ಬನ್ಸಾಲಿ, ಡಾಲಿ ಅಹ್ಲುವಾಲಿಯಾ, ಗುರುಪಾಲ್ ಸಿಂಗ್, ಬ್ರಿಜೇಂದ್ರ ಕಲಾ
Director : ಆರ್ ಎಸ್ ಪ್ರಸನ್ನ
ಹಿಂದಿ ಚಿತ್ರರಂಗ ಒಂದು ಸಿದ್ದ ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದವರು ಆಮಿರ್ ಖಾನ್. ಕೇವಲ ಕಮರ್ಷಿಯಲ್ ಚಿತ್ರಗಳನ್ನು ಮಾತ್ರ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದವರು ಇವರು. ಇದಕ್ಕೆ 'ಸಿತಾರೆ ಜಮೀನ್ ಪರ್' ಚಿತ್ರ ಸದ್ಯದ ಉದಾಹರಣೆ. ಹೌದು. ಸಿತಾರೆ ಜಮೀನ್ ಪರ್ .. ಆಮಿರ್ ಖಾನ್ ಅವರ ಸಿನಿಮಾ ರುಚಿ ಎಂತಹದ್ದು ಎನ್ನುವುದಕ್ಕೆ ಹಿಡಿಯಬಹುದಾದ ಮತ್ತೊಂದು ಅತ್ಯುತ್ತಮ ಕೈಗನ್ನಡಿ.
ನಿಜಾ.. ಸಿತಾರೆ ಜಮೀನ್ ಪರ್ ಚಿತ್ರ ಸ್ಪ್ಯಾನಿಷ್‌ನ ಕ್ಯಾಂಪಿಯೋನ್ಸ್ ಚಿತ್ರದ ಯಥಾವತ್ತು ನಕಲು. ಆದರೆ.. ಕಥೆ ಹಳೆಯದಾದ್ದರೂ ಇಲ್ಲಿರುವ ಭಾವನೆಗಳ ಗೂಡು ಹೃದಯಕ್ಕೆ ತುಂಬಾ ಹತ್ತಿರವಾಗುತ್ತೆ. ಹಾಗಿದ್ದರೆ ಸಿತಾರೆ ಜಮೀನ್ ಪರ್ ಚಿತ್ರ ಹೇಗಿದೆ ? ಸೋತು ಹೈರಾಣಾದ ಆಮಿರ್ ಖಾನ್‌ಗೆ ಈ ಚಿತ್ರ ಗೆಲುವನ್ನು ತಂದು ಕೊಡುತ್ತಾ ಎಂದು ತಿಳಿಯಲು ಮುಂದೆ ಓದಿ.

ಕಥಾಹಂದರ
ಕುಳ್ಳ - ಹಠಮಾರಿ ಮತ್ತು ಸ್ವಾರ್ಥಿ ಗುಲ್ಶನ್ ಅರೋರಾ { ಆಮಿರ್ ಖಾನ್ } ತನ್ನ ತಾಯಿಯ ಜೊತೆ ವಾಸ ಮಾಡುತ್ತಿರುತ್ತಾನೆ. ನಾಯಕಿಯಾಗುವ ತನ್ನ ಕನಸಿಗೆ ಕೊಳ್ಳಿ ಇಟ್ಟಿರುವ ಸುನೀತಾ {ಜೆನಿಲಿಯಾ} ಇತನ ಪತ್ನಿ.
ಸಾಂಸಾರಿಕ ಬದುಕಿನಲ್ಲಿ ಮತ್ತು ವೃತ್ತಿಯಲ್ಲಿ ಎರಡು ಕಡೆ.. ಸುಖ, ನೆಮ್ಮದಿಯಿಂದ ವಂಚಿತನಾದ ಈ ಗುಲ್ಶನ್ ಅರೋರಾ ಅದೊಂದು ದಿನ ಪೊಲೀಸರ ವಾಹನಕ್ಕೆ ಡಿಕ್ಕಿ ತನ್ನ ಕಾರನ್ನು ಗುದ್ದುತ್ತಾನೆ. ಆ ನಂತರ ನ್ಯಾಯಾಲಯ ಜೈಲಿನ ಬದಲು ವಿಶೇಷ ಚೇತನರಿಗೆ ಬಾಸ್ಕೆಟ್ ಬಾಲ್ ಕಲಿಸುವ ಕೆಲಸವನ್ನು ವಹಿಸುತ್ತೆ. ಡೌನ್ ಸಿಂಡ್ರೋಮ್ ಹೊಂದಿರುವ ವ್ಯಕ್ತಿಗಳ ತಂಡವನ್ನು ರಚಿಸಿ ಪಂದ್ಯಾವಳಿಗೆ ಸಿದ್ದ ಪಡಿಸುವಂತೆ ಸೂಚಿಸುತ್ತೆ.
ಮೊದಲೇ ಮುಂಗೋಪಿಯಾದ ಗುಲ್ಶನ್ ಬೇರೆ ವಿಧಿ ಇಲ್ಲದೆ ನ್ಯಾಯಾಲಯ ಹೇಳಿದ ಅಸಡ್ಡೆ ಮನೋಭಾವದೊಂದಿಗೆ ಕೆಲಸ ಮಾಡಲು ಮುಂದಾಗುತ್ತಾನೆ. ಕ್ಷಣಕ್ಷಣಕ್ಕೂ ಕಿರಿಕಿರಿಗೊಳಗಾಗುತ್ತಾನೆ. ಆ ನಂತರ ಏನಾಗುತ್ತೆ ? ವಿಶೇಷ ಚೇತನರ ಕುರಿತು ಪೂರ್ವಾಗ್ರಹ ಪೀಡಿತವಾದ ಗುಲ್ಶನ್ ಅರೋರಾ ಬದಲಾಗುತ್ತಾನಾ ? ಬದುಕು ನೋಡುವ ದೃಷ್ಟಿಕೋನ ಬದಲಾಗುತ್ತಾ ? ಎನ್ನುವುದನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಬೇಕು.
ಆಮಿರ್ ಖಾನ್ ಅಭಿನಯ
ಲಾಲ್ ಸಿಂಗ್ ಚಡ್ಡಾದಲ್ಲಿ ಅನೇಕರು ಆಮಿರ್ ಖಾನ್ ಅವರ ಅಭಿನಯವನ್ನು ಅಪಹಾಸ್ಯ ಮಾಡಿದ್ದರು. ಚಿತ್ರದ ಸೋಲಿಗೆ ಆಮಿರ್ ಖಾನ್ ಅವರ ಅಭಿನಯವೇ ಪ್ರಮುಖ ಕಾರಣವೆಂದು ಹೇಳಿದ್ದರು. ಹೀಗಾಗಿ ಇಲ್ಲಿ ಆಮಿರ್ ಹೇಗೆ ಅಭಿನಯಿಸಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು.
ವಿಶೇಷ ಅಂದರೆ ಚಿತ್ರದ ಆರಂಭದಲ್ಲಿ ಆಮಿರ್ ಖಾನ್ ಅವರ ಅಭಿನಯ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನೇ ನೆನಪಿಸುತ್ತೆ. ಆ ಚಿತ್ರದ ಹ್ಯಾಂಗೋವರ್‌ನಲ್ಲಿಯೇ ಆಮಿರ್ ಅಭಿನಯಿಸಿದ್ದಾರೆ ಎನ್ನುವ ಭಾವನೆ ಬರುತ್ತೆ. ಆದರೆ.. ಅದೃಷ್ಟವಶಾತ್ ಆ ನಂತರ ಆಮಿರ್ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ಧಾರೆ. ಬಾಸ್ಕೆಟ್ ಬಾಲ್ ತರಬೇತುದಾರನ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದಾರೆ.

ಹತ್ತು ವಿಶೇಷ ಚೇತನ ಮಕ್ಕಳೇ ಚಿತ್ರದ ಜೀವಾಳ
ಚಿತ್ರದಲ್ಲಿರುವ ಹತ್ತು ವಿಶೇಷ ಚೇತನರು ಇಡೀ ಚಿತ್ರದ ಜೀವಾಳ. ಸುನಿಲ್ (ಆಶಿಶ್ ಪೆಂಡ್ಸೆ).. ಸತ್ಬೀರ್ (ಆರುಷ್ ದತ್ತ).. ಲೋಟಸ್ (ಆಯುಷ್ ಬನ್ಸಾಲಿ).. ಶರ್ಮಾಜಿ (ರಿಷಿ ಶಹಾನಿ).. ಗುಡ್ಡು (ಗೋಪಿ ಕೃಷ್ಣ ಕೆ ವರ್ಮಾ).. ರಾಜು (ರಿಷಭ್ ಜೈನ್).. ಬಂಟು (ವೇದಾಂತ್ ಶರ್ಮಾ).. ಗೋಲು (ಸಿಮ್ರಾನ್ ಮಂಗೇಶ್ಕರ್).. ಕರೀಮ್ (ಸಂವಿತ್ ದೇಸಾಯಿ).. ಮತ್ತು ಹರ್ಗೋವಿಂದ್, (ನಮನ್ ಮಿಶ್ರಾ).. ಈ ಹತ್ತು ಜನ ಈ ಸಿತಾರೆ ಜಮೀನ್ ಪರ್ ಚಿತ್ರದ ಜೀವಾಳ. ಈ ಹತ್ತು ಜನ ಇಲ್ಲಿ ಅಭಿನಯಿಸಿಲ್ಲ. ಬದಲಿಗೆ ತಮ್ಮ ಬದುಕು ಬದುಕಿದ್ದಾರೆ. ಇವರ ಮುಗ್ದತೆ.. ಆ ನಗು.. ಪ್ರೇಕ್ಷಕರಿಗೆ ಚಿತ್ರಮಂದಿರದಿಂದ ಆಚೆ ಬಂದ ನಂತರ ಕೂಡ ಕಾಡುತ್ತೆ.
ಬೇರೆ ಪಾತ್ರವರ್ಗ
ಇದು ಆಮಿರ್ ಖಾನ್ ಸಿನಿಮಾ ಆದರೂ ಕೂಡ ಇಲ್ಲಿ ಎಲ್ಲಿಯೂ ಯಾರನ್ನು ಓವರ್ ಟೇಕ್ ಮಾಡಲು ಆಮಿರ್ ಖಾನ್ ಮುಂದಾಗಿಲ್ಲ. ಪ್ರತಿಯೊಂದು ಪಾತ್ರಕ್ಕೂ ಆಮಿರ್ ಖಾನ್ ಸ್ಪೆಸ್ ನೀಡಿದ್ದಾರೆ. ಜೆನಿಲಿಯಾ ದೇಶ್‌ಮುಖ್.. ಡಾಲಿ ಅಹ್ಲುವಾಲಿಯಾ.. ಗುರುಪಾಲ್ ಸಿಂಗ್ ಮತ್ತು ಬೀಜೆಂದ್ರ ಕಲಾ ಅವರು ಇಲ್ಲದೇ ಈ ಚಿತ್ರ ಅಪೂರ್ಣ. ಎಲ್ಲರು ತಮ್ಮ ಕೆಲಸವನ್ನು ತುಂಬಾನೇ ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ.
ನಿರ್ದೇಶನ
ಆಗಲೇ ಹೇಳಿದಂತೆ ಈ ಚಿತ್ರ ಸ್ಪ್ಯಾನಿಷ್‌ನ ಕ್ಯಾಂಪಿಯೋನ್ಸ್ ಚಿತ್ರದ ರಿಮೇಕ್. ಆದರೂ ಕೂಡ ಈ ಭಾವನೆ ಚಿತ್ರ ನೋಡುವಾಗ ಬರುವುದಿಲ್ಲ. ಅದಕ್ಕೆ ಕಾರಣ ಚಿತ್ರದ ನಿರ್ದೇಶಕ ಆರ್.ಎಸ್ ಪ್ರಸನ್ನ ಮತ್ತು ಚಿತ್ರಕಥೆಯನ್ನು ಬರೆದ ಡಿವಿ ನಿಧಿ ಶರ್ಮಾ. ಚಿತ್ರದ ಮೊದಲಾರ್ಧ ತುಸು ನಿಧಾನವಾದರೂ ಕೂಡ ದ್ವೀತಿಯಾರ್ಧದಲ್ಲಿ ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ಈ ಜೋಡಿ ಯಶಸ್ವಿಯಾಗಿದೆ.
ಇನ್ನು ಇಂದಿನ ಕಾಲದ ಯುವ ಪೀಳಿಗೆಗೆ ಪ್ರಸನ್ನ ಇಲ್ಲಿ ಭೋದನೆ ಮಾಡಿಲ್ಲ. ಬದಲಿಗೆ ಹಾಸ್ಯದ ಮೂಲಕ ಕಣ್ಣುಗಳನ್ನು ತೆರೆಸುವ ಪ್ರಯತ್ನ ಮಾಡಿದ್ದಾರೆ. ಕೇವಲ ಜೆನ್ ಝೆಡ್ ಮಾತ್ರವಲ್ಲ ಎಲ್ಲ ವರ್ಗದ ಪ್ರೇಕ್ಷಕರಿಗೆ ತಮ್ಮ ಚಿತ್ರದ ಮೂಲಕ ಸಂದೇಶವನ್ನು ನೀಡಿದ್ದಾರೆ ಪ್ರಸನ್ನ.
ಕೊನೆ ಮಾತು
ಒಟ್ನಲ್ಲಿ ಅನೇಕ ದಿನಗಳ ನಂತರ ಬಾಲಿವುಡ್‌ನಲ್ಲಿ ಮನೆ ಮಂದಿಯೆಲ್ಲ ಕುಳಿತು ಯಾವುದೇ ಮುಜುಗರ ಇಲ್ಲದೇ ನೋಡಬಹುದಾದ ಸದಭಿರುಚಿಯ ಚಿತ್ರ ಸಿತಾರೆ ಜಮೀನ್ ಪರ್ ಚಿತ್ರ ತೆರೆಗೆ ಬಂದಿದೆ. ಹಾಸ್ಯದ ಹೆಸರಿನಲ್ಲಿ ಹೌಸ್‌ಫುಲ್ 5 ಚಿತ್ರದಲ್ಲಿ ಅಶ್ಲೀಲ- ಅಸಭ್ಯ ದೃಶ್ಯಗಳನ್ನು ನೋಡಿ, ಡೈಲಾಗ್‌ಗಳನ್ನು ಕೇಳಿ ಮುಜುಗರಕ್ಕೀಡಾದ ಪ್ರೇಕ್ಷಕರ ಮನಸನ್ನು ಈ ಚಿತ್ರದಲ್ಲಿನ ಶುದ್ದ ಹಾಸ್ಯ ಕುಣಿಸುತ್ತೆ. ಚಿತ್ರದ ಕಥಾವಸ್ತು ಆ ನಂತರ ಅಳಿಸುತ್ತೆ.
ಇನ್ನು ಬಾಕ್ಸಾಫೀಸ್ ವಿಚಾರಕ್ಕೆ ಬಂದರೆ ಈ ಚಿತ್ರಕ್ಕೆ ಬೇರೆ ಸ್ಟಾರ್‌ಗಳಂತೆ, ಆಮಿರ್ ಖಾನ್ ಅವರ ಹಿಂದಿನ ಚಿತ್ರಗಳಿಗೆ ಸಿಕ್ಕಂತೆ ಓಪನಿಂಗ್ ಸಿಗುವುದಿಲ್ಲ. ಆದರೆ ನಿಧಾನವಾಗಿ ಈ ಚಿತ್ರ ಬಾಕ್ಸಾಫೀಸ್‌ನ ಆವರಿಸಿಕೊಳ್ಳುತ್ತೆ. ಆ ಎಲ್ಲ ಲಕ್ಷಣ ಈ ಚಿತ್ರಕ್ಕಿದೆ. ಪ್ರೇಕ್ಷಕರ ಬಾಯಿ ಮಾತುಗಳ ಮೇಲೆ ಈ ಚಿತ್ರದ ಮುಂದಿನ ಭವಿಷ್ಯ ನಿಂತಿದೆ.
ಕೊನೆಯದಾಗಿ 'ನಾನು ಈ ಮಕ್ಕಳಿಗೆ ಕಲಿಸುತ್ತಿಲ್ಲ. ಈ ಮಕ್ಕಳು ನನಗೆ ಪಾಠ ಕಲಿಸುತ್ತಿದ್ದಾರೆ' ಎಂದು ಆಮಿರ್ ಖಾನ್ ಚಿತ್ರದಲ್ಲಿ ಹೇಳುವ ಸಂಭಾಷಣೆ ಇಲ್ಲಿ ನೂರಕ್ಕೆ ನೂರು ಸತ್ಯ. ಒಳ್ಳೆಯ ಚಿತ್ರಗಳನ್ನು ನೋಡಲು ಬಯಸುವವರಿಗೆ ಈ ಚಿತ್ರ ಒಳ್ಳೆಯ ಅನುಭವ ನೀಡುತ್ತೆ.


Click it and Unblock the Notifications











