Maaveeran Review: ಶಿವಕಾರ್ತಿಕೇಯನ್, ಸರಿತಾ ನಟನೆಯ 'ಮಾವೀರನ್' ಚಿತ್ರದ ವಿಮರ್ಶೆ ಹಾಗೂ ರೇಟಿಂಗ್
ಈ ಜುಲೈ ಮಧ್ಯಂತರದಲ್ಲಿ ಅಂದರೆ ಜುಲೈ 14ರಂದು ಬಿಡುಗಡೆಯಾದ ಹಲವು ಚಿತ್ರಗಳ ಪೈಕಿ ಶಿವಕಾರ್ತಿಕೇಯನ್ ನಟನೆಯ ಮಾವೀರನ್ ಸಹ ಒಂದು. ಕಳೆದ ವರ್ಷ ಬಿಗ್ ಬಜೆಟ್‌ನ ಪ್ರಿನ್ಸ್ ಚಿತ್ರದ ಮೂಲಕ ಸಿನಿ ರಸಿಕರ ಎದುರಿಗೆ ಬಂದು ಕೈ ಸುಟ್ಟುಕೊಂಡಿದ್ದ ಶಿವ ಕಾರ್ತಿಕೇಯನ್ ಈ ಬಾರಿ ಮಾವೀರನ್ ಎಂಬ ಪೊಲಿಟಿಕಲ್ ಎಂಟರ್‌ಟೈನರ್ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.
ಹೌದು, ಮಾವೀರನ್ ಒಂದು ಪೊಲಿಟಿಕಲ್ ಎಂಟರ್‌ಟೈನರ್ ಸಿನಿಮಾವಾಗಿದೆ. ಪೊಲಿಟಿಕಲ್ ಎಂಟರ್‌ಟೈನರ್ ಎಂದ ಕೂಡಲೇ ಬೇರೆ ಚಿತ್ರಗಳ ಹಾಗೆ ಇಲ್ಲಿ ಮಚ್ಚು ಲಾಂಗುಗಳ ಆರ್ಭಟ ಭೀಕರವಾಗಿಲ್ಲ. ಬದಲಾಗಿ ನಿರ್ದೇಶಕರು ಕಥೆಯನ್ನು ಹಾಸ್ಯ ರೂಪದಲ್ಲಿ ಪ್ರಸ್ತುತಪಡಿಸಿ ಗೆದ್ದು ಬೀಗಿದ್ದಾರೆ.

ಚಿತ್ರದ ಒನ್‌ಲೈನ್ ಸ್ಟೋರಿ ಏನು?
ಚಿತ್ರದ ನಾಯಕ ಓರ್ವ ಕಾಮಿಕ್ ಆನಿಮೇಷನ್ ಚಿತ್ರ ಬರೆಯುವ ಆರ್ಟಿಸ್ಟ್. ಈತ ರಚಿಸುವ ಕಾಲ್ಪನಿಕ ಕಥೆಯ ನಾಯಕ ನಿಜವಾಗಿ ತನ್ನ ಮೇಲೆ ಆವಾಹವಾಗಿ ಏನೆಲ್ಲಾ ಸಂಭವಿಸುತ್ತೆ, ಆ ಶಕ್ತಿ ಈತನಿಗೆ ಭ್ರಷ್ಟ ರಾಜಕಾರಣಿ ವಿರುದ್ಧ ಹೋರಾಡಲು ಹೇಗೆ ಸಹಾಯವಾಗುತ್ತೆ ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ.
ಚಿತ್ರದ ಕಥೆ ಏನು?
ಇನ್ನು ಮಾವೀರನ್ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲ್ಲಲು ಕಾರಣ ಚಿತ್ರದ ವಿಭಿನ್ನ ಹಾಗೂ ನೂತನ ಕಥೆ ಎಂದರೆ ತಪ್ಪಾಗಲಾರದು. ಮಾಡೋನ್ ಅಶ್ವಿನ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಸ್ಲಂನಲ್ಲಿ ತನ್ನ ತಾಯಿ ಹಾಗೂ ತಂಗಿ ಜತೆ ಬದುಕು ಬಂದಂತೆ ಸ್ವೀಕರಿಸಿ ಜೀವನ ಸಾಗಿಸಬೇಕು ಎನ್ನುವ ಫಿಲಾಸಫಿ ಹೊಂದಿರುವ ನಾಯಕ ವಾಸ ಮಾಡುತ್ತಿರುತ್ತಾನೆ. ಯಾರಿಗೂ ಎದುರು ಮಾತನಾಡಲು ಧೈರ್ಯವಿರದ ನಾಯಕ ಹಾಗೂ ಇಡೀ ಸ್ಲಂನ ಜನರನ್ನು ವಸತಿ ಯೋಜನೆಯಡಿಯಲ್ಲಿ ಹೊಸ ಅಪಾರ್ಟ್‌ಮೆಂಟ್‌ವೊಂದಕ್ಕೆ ಅಲ್ಲಿನ ಎಂಎಲ್ಎ ಸ್ಘಳಾಂತರಿಸುತ್ತಾನೆ. ವೃತ್ತಿಯಲ್ಲಿ ವ್ಯಂಗ್ಯ ಚಿತ್ರಕಾರನಾಗಿರುವ ನಾಯಕನಿಗೆ ನಡೆಯುವ ಒಂದು ಘಟನೆಯಿಂದ ತಾನೇ ಬರೆಯುವ ಊಹಾ ವ್ಯಂಗ್ಯ ಚಿತ್ರ ಸರಣಿಯ ನಾಯಕನಾದ ಮಾವೀರನ್‌ನ ಶಕ್ತಿ ಬರುತ್ತದೆ. ಅಶರೀರವಾಣಿ ಹೇಳುವ ಪ್ರತಿಯೊಂದು ವಿಷಯವೂ ಜರುಗಲು ಆರಂಭಿಸುತ್ತದೆ. ಇನ್ನು ಜನರಿಗೆ ಎಂಎಲ್ಎ ನೀಡಿರುವ ಮನೆಗಳು ಕಳಪೆ ಎಂಬ ಸತ್ಯ ಹೊರಬೀಳುತ್ತೆ. ಆದರೆ ಎಂಎಲ್ಎ ಗೂಂಢಾಗಿರಿಯ ಮುಂದೆ ಯಾರೊಬ್ಬರೂ ಸಹ ದನಿ ಎತ್ತಲಾಗುವುದಿಲ್ಲ.
ಹೀಗಿರುವಾಗ ಎಲ್ಲರಿಗೂ ನಾಯಕ ತನಗೆ ಸಿಗುವ ಮಾವೀರನ್ ಶಕ್ತಿಯಿಂದ ಚಮತ್ಕಾರಗಳನ್ನು ಮಾಡಲು ಆರಂಭಿಸುತ್ತಾನೆ. ಹೀಗೆ ತನಗೇ ತಿಳಿಯದೇ ಸಿಗುವ ಶಕ್ತಿಯಿಂದ ನಾಯಕ ಏನೆಲ್ಲಾ ಮಾಡ್ತಾನೆ, ಆ ಶಕ್ತಿಯಿಂದ ಎಂಎಲ್ಎ ವಂಚನೆಗೆ ಪಾಠ ಕಲಿಸುತ್ತಾನಾ ಅಥವಾ ಆ ಶಕ್ತಿ ಕೆಲ ದಿನಗಳ ಬಳಿಕ ಮಾಯವಾಗಿ ಮತ್ತೆ ನಾಯಕ ಪೀಕಲಾಟಕ್ಕೆ ಸಿಲುಕಿಕೊಳ್ತಾನಾ ಎಂಬುದೇ ಚಿತ್ರದ ಕಥೆ. ಇಷ್ಟು ಒಳ್ಳೆಯ ಕಥೆಯನ್ನು ನಿರ್ದೇಶಕ ಹಾಸ್ಯ ರೂಪದಲ್ಲಿ ತೆರೆ ಮೇಲೆ ತಂದಿರುವುದು ಚಿತ್ರ ಜನರಿಗೆ ಇಷ್ಟವಾಗಲು ಪ್ರಮುಖ ಕಾರಣವಾಗಿದೆ. ಆರಂಭದಿಂದ ಅಂತ್ಯದವರೆಗೂ ಡಬಲ್ ಮೀನಿಂಗ್ ಇಲ್ಲದೇ ನಗಿಸುವ ಪೊಲಿಟಿಕಲ್ ಕಾಮಿಡಿ ಎಂಟರ್‌ಟೈನರ್ ಚಿತ್ರ ಇದಾಗಿದ್ದು, ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಹುದಾದ ಸಿನಿಮಾವಾಗಿದೆ.
ಪಾಸಿಟಿವ್ ಹಾಗೂ ನೆಗೆಟಿವ್:
ಮಾವೀರನ್ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಚಿತ್ರದ ಕಥೆ ಹಾಗೂ ಸ್ಕ್ರೀನ್ ಪ್ಲೇ. ಶುರುವಿನಿಂದ ಅಂತ್ಯದವರೆಗೂ ನಗಿಸುತ್ತಾ ಸಾಗುವ ಕಥೆ ಸಿನಿ ರಸಿಕರಿಗೆ ಎಲ್ಲಿಯೂ ಬೋರ್ ಹೊಡೆಯದ ಹಾಗೆ ನೋಡಿಕೊಳ್ಳುತ್ತೆ. ಗಂಭೀರ ಸಮಸ್ಯೆಯೊಂದರ ವಿರುದ್ಧದ ಹೋರಾಟವನ್ನು ಹಾಸ್ಯಮಯವಾಗಿ ತೋರಿಸಿ ಯಶಸ್ಸು ಸಾಧಿಸಿರುವುದು ನಿರ್ದೇಶಕ ಜಾಣ್ಮೆಯನ್ನು ತೋರಿಸುತ್ತೆ. ಇನ್ನು ಸಂಗೀತ ನಿರ್ದೇಶನ ಉತ್ರಮವಾಗಿದ್ದು, ಸನ್ನಿವೇಶಕ್ಕೆ ತಕ್ಕ ಹಾಡುಗಳು ನೆನಪಿನಲ್ಲಿ ಉಳಿಯುತ್ತವೆ. ನಾಯಕನಾಗಿ ಶಿವಕಾರ್ತಿಕೇಯನ್ ನಟನೆ ಅದ್ಭುತವಾಗಿದ್ದು, ಒಂದಷ್ಟು ಪ್ರಶಸ್ತಿಗಳೂ ಲಭಿಸುವಷ್ಟು ಚೆನ್ನಾಗಿದೆ. ನಾಯಕನ ತಾಯಿಯಾಗಿ ಸರಿತಾ ನಟನೆ ಸೂಪರ್, ಸರಿತಾ ಅದ್ಭುತ ನಟನೆಯನ್ನು ತುಂಬಾ ದಿನಗಳಿಂದ ಮಿಸ್ ಮಾಡಿಕೊಂಡವರಿಗೆ ಇದು ಉಡುಗೊರೆ. ಇನ್ನುಳಿದಂತೆ ಖಳನಾಯಕನಾಗಿ ಮಿಸ್ಕಿನ್ ನಟನೆ ಹಾಗೂ ಕಾಮಿಡಿಯನ್ ಯೋಗಿ ಬಾಬು ಎಂದಿನಂತೆ ಅತ್ಯುತ್ತಮವಾಗಿ ನಟಿಸಿದ್ದಾರೆ. ಉಳಿದ ಎಲ್ಲಾ ಪಾತ್ರಗಳೂ ಸಹ ಚೆನ್ನಾಗಿ ಮೂಡಿಬಂದಿವೆ. ಚಿತ್ರದಲ್ಲಿ ನೆಗೆಟಿವ್ ಅಂಶಗಳಿಗೆ ಎಲ್ಲಿಯೂ ಅವಕಾಶ ಸಿಕ್ಕಿಲ್ಲ.
ಒಟ್ಟಾರೆಯಾಗಿ ಬಹು ದಿನಗಳ ಬಳಿಕ ಡಬಲ್ ಮೀನಿಂಗ್ ಕಾಮಿಡಿ ಇಲ್ಲದೇ ನಗಿಸುವ ವಿಭೀನ್ನ ಸಿನಿಮಾ ಬಂದಿದ್ದು, ಇಂತಹ ಚಿತ್ರಗಳನ್ನು ವೀಕ್ಷಿಸುವ ಒಳ್ಳೆಯ ಅಭಿರುಚಿಯನ್ನು ಹೊಂದಿರುವ ಸಿನಿ ರಸಿಕರು ಈ ಚಿತ್ರವನ್ನು ಕಡ್ಡಾಯವಾಗಿ ಒಂದು ಬಾರಿ ನೋಡಲೇಬೇಕೆಂಬಂತಿದೆ.


Click it and Unblock the Notifications