»   » ಚಿತ್ರ : ಸ್ಪರ್ಶನಿರ್ದೇಶನ : ಸುನಿಲ್‌ ಕುಮಾರ್‌ ದೇಸಾಯಿ ಅಭಿನಯ : ಸುದೀಪ್‌ , ರೇಖಾ, ಸಿಹಿಕಹಿ ಚಂದ್ರು, ಕಾಶಿ, ನವೀನ್‌ ಮಯೂರ್‌, ಸುಧಾರಾಣಿ

ಚಿತ್ರ : ಸ್ಪರ್ಶನಿರ್ದೇಶನ : ಸುನಿಲ್‌ ಕುಮಾರ್‌ ದೇಸಾಯಿ ಅಭಿನಯ : ಸುದೀಪ್‌ , ರೇಖಾ, ಸಿಹಿಕಹಿ ಚಂದ್ರು, ಕಾಶಿ, ನವೀನ್‌ ಮಯೂರ್‌, ಸುಧಾರಾಣಿ

Subscribe to Filmibeat Kannada

ಚಂದಕಿಂತಾ ಚಂದ ನೀನೇ ಸುಂದರ .. ಶಾಯಿರಿ, ದೃಶ್ಯಕಾವ್ಯ, ನಿರೂಪಣೆ ಎಲ್ಲದರಲ್ಲೂ ಸ್ಪರ್ಶ ಸರ್ವಾಂಗ ಸುಂದರ

ಚಿತ್ರ ಮಾಧ್ಯಮದ ಎಲ್ಲ ಸಾಧ್ಯತೆಗಳನ್ನು ದುಡಿಸಿಕೊಂಡ ಚಿತ್ರಗಳು ಅಪರೂಪವಾಗುತ್ತಿವೆ ಎಂಬ ಸಾರ್ವಕಾಲಿಕ ಆರೋಪದಲ್ಲಿ ಅರ್ಥವಿಲ್ಲದೆ ಇಲ್ಲ. ಇತ್ತ ಆರ್ಟ್‌ ಸಿನಿಮಾ ಎಂದು ಕರೆದುಕೊಳ್ಳುವ ಸಿನಿಮಾಗಳು ಕಲಾತ್ಮಕ ಅಭಿವ್ಯಕ್ತಿಯನ್ನೇ ಕಳೆದುಕೊಂಡು ತೀರಾ ಹಸಿಹಸಿಯಾಗಿರುತ್ತವೆ ಅಥವಾ ಬದುಕಿನ ಪ್ರತಿಬಿಂಬದಂತೆ ಕಾಣುತ್ತವೆ. ನಮಗೆ ಸಿನಿಮಾಗಳಲ್ಲಿ ಬದುಕಿನ ಯಥಾವತ್‌ ಚಿತ್ರಣ ಬೇಕಾಗಿಲ್ಲ. ದೃಶ್ಯ, ಕಾವ್ಯ , ಶ್ರವ್ಯ, ನೃತ್ಯ ಹೀಗೆ ಎಲ್ಲ ಕಲೆಗಳೂ ಬೆರೆತ ಆ ಮಾಧ್ಯಮ ಬದುಕಿನಿಂದ ಎತ್ತಿಕೊಂಡ ಕತೆಯನ್ನು ರೂಪಾಂತರಗೊಳಿಸದೇ ಹೋದರೆ ತನಗೆ ತಾನೇ ಅನ್ಯಾಯ ಮಾಡಿಕೊಳ್ಳುತ್ತದೆ.

ಆದರೆ ಹಾಗೆ ರೂಪಾಂತರಗೊಳಿಸುವ ಹೊತ್ತಿಗೇ ಅದನ್ನು ವೈಭವೀಕರಿಸಿ, ಅದು ಬದುಕಿನಿಂದ ಯೋಜನ ದೂರವಿದೆ ಎಂಬ ಭಾವನೆ ಹುಟ್ಟಿಸುವ ಚಿತ್ರಗಳೂ ಬರುತ್ತಿವೆ. ಇವೆರಡರ ನಡುವೆ ಸ್ಪರ್ಶ ದಂತಹ ಚಿತ್ರಗಳು ಶ್ರಾವಣದಲ್ಲಿ ತಪ್ಪಿ ಉಳಿದ ಕೋಗಿಲೆಯ ಸಂಗೀತದ ಹಾಗೆ ಮನಸ್ಸನ್ನು ಪ್ರಸನ್ನಗೊಳಿಸುತ್ತವೆ.

ಸುನಿಲ್‌ ಕುಮಾರ್‌ ದೇಸಾಯಿಯಂಥವರಿಗೆ ಮಾತ್ರ ಇಂಥದ್ದೊಂದು ಸಿನಿಮಾ ಮಾಡಲು ಸಾಧ್ಯ. ಶಾಯಿರಿ, ದೃಶ್ಯ ಕಾವ್ಯ, ನಿರೂಪಣಾ ವಿಧಾನ , ಚೌಕಟ್ಟು ಎಲ್ಲದರಲ್ಲೂ ಹೊಸತನ ಸಾಧಿಸಿರುವ ಚಿತ್ರ, ಸ್ಪರ್ಶ. ಸುದೀಪ್‌ ಸಂಜೀವ್‌ನಂಥ ಹೊಸ ಹುಡುಗನ ಜೊತೆಗೆ ಹೊಸ ಹುಡುಗಿ ರೇಖಾ ಇದ್ದಾಳೆ. ಅಪರೂಪಕ್ಕೆಂಬಂತೆ ಸಿಹಿಕಹಿ ಚಂದ್ರು ಅವರಂಥ ಅಬ್ಬರದ ಕಲಾವಿದರೂ ಅಭಿನಯಿಸಿದ್ದಾರೆ. ಒಂದೇ ಒಂದು ದೃಶ್ಯದಲ್ಲಿ ಬಂದು ಹೋಗುವ ಕಾಶಿಯಿಂದ ಹಿಡಿದು, ಕೊನೆತನಕವೂ ಜೊತೆಗಿರುವ ನವೀನ್‌ ಮಯೂರ್‌ ತನಕ ಪ್ರತಿಯಾಬ್ಬರೂ ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಹಾಗೆ ನೋಡಿದರೆ ಇದು ಛಾಯಾಗ್ರಾಹಕ ವೇಣು, ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಸಂಕಲನಕಾರ ಜನಾರ್ದನ್‌ ಅವರ ತ್ರಿವೇಣಿ ಸಂಗಮದ ಚಿತ್ರ. ಈ ಸಂಗಮ ಸ್ಥಾನದಲ್ಲಿ ಸುನಿಲ್‌ ಕುಮಾರ್‌ ದೇಸಾಯಿ ನಿಂತಿದ್ದಾರೆ. ಅವರ ಕಲ್ಪನೆಗಳನ್ನು ಪಂಚೇಂದ್ರಿಯಗಳಿಗೆ ತಲುಪಿಸುವ ಕೆಲಸವನ್ನು ವೇಣು ಹಾಗೂ ಹಂಸ ಮಾಡುತ್ತಾರೆ. ಜೊತೆಗೆ ಇಟಗಿ ವೀರಣ್ಣರ ಶಾಯಿರಿಗಳು ಮಾತಿನ ಏಕತಾನತೆಯನ್ನು ಕತ್ತರಿಸಿ, ಭಾವನೆಗೆ ಹೊಸ ಅಭಿವ್ಯಕ್ತಿ ನೀಡಿದೆ.

ಬಿಲ್ಲಿನಿಂದಲೇ ಹೊರಟರೂ ಬಾಣ

ಕೊನೆಗೂ ಗುರಿ ಮುಟ್ಟಲಿಲ್ಲ

ನನ್ನದೇನೂ ತಪ್ಪಿಲ್ಲ ಗೆಳತಿ

ಬಿಟ್ಟವನು ಗುರಿಕಾರನಲ್ಲ

ಇದು ಇಟಗಿ ವೀರಣ್ಣನವರ ಶಾಯಿರಿಯ ಒಂದು ಸ್ಯಾಂಪಲ್‌ . ಇದೇ ಇಡೀ ಚಿತ್ರದ ಸಾರವನ್ನು ಹಿಡಿದಿಡುವ ಸಾಲು ಕೂಡ. ಮೊದಲ ನೋಟಕ್ಕೆ ಪ್ರೇಮಿಸುವ ನಾಯಕ ನಾಯಕಿಯರು ಎಲ್ಲ ಬಂಧಗಳನ್ನೂ ಮೀರಿ ಒಂದಾಗುತ್ತಾರೆ. ಇನ್ನೇನು ಸಕಲ ಸುಖಗಳೂ ಸನಿಹದಲ್ಲಿವೆ ಎಂದು ಅವರು ಅಂದುಕೊಳ್ಳುತ್ತಿರುವ ಹೊತ್ತಿಗೆ ನಡೆಯಬಾರದ ಘಟನೆ ನಡೆದುಹೋಗುತ್ತದೆ. ನಾಯಕಿಗಿಂತ ಆಕೆಯ ಆದರ್ಶ ದೊಡ್ಡದು ಅಂತ ನಾಯಕನಿಗೆ ಅರಿವಾಗುತ್ತದೆ.

ಗಾಂಧೀಜಿಗಿಂತ ಅವರ ತತ್ವಗಳನ್ನು ಪ್ರೀತಿಸಿದರೆ ದೇಶ ಉದ್ಧಾರವಾಗುತ್ತಿತ್ತು ಎನ್ನುವ ಮಾತು ಕೇಳಿ ಕೇಳಿ ಬೇಸರವಾದವರಿಗೆ ದೇಸಾಯಿ ಇಲ್ಲಿ ಒಂದು ಪಾತ್ರವನ್ನೇ ಸೃಷ್ಟಿಸಿದ್ದಾರೆ. ಅವನೇ ಕಥಾನಾಯಕ. ಆತನಿಗೆ ತನ್ನ ಪ್ರೇಮಕ್ಕಿಂತ ಆದರ್ಶ ದೊಡ್ಡದು. ಆ ಆದರ್ಶ ಆತನದೂ ಅಲ್ಲ. ಆತ ನಾಯಕಿಯಿಂದ ಎರವಲು ಪಡೆದಂಥದ್ದು. ಈ ಗೊಂದಲದಲ್ಲಿ ಇಬ್ಬಂದಿಯಾಗುವ ನಾಯಕನ ತೊಳಲಾಟಗಳೇ ಕತೆ. ಯಥಾ ಪ್ರಕಾರ ತರ್ಕದ ಒರೆಗಲ್ಲಿಗೆ ತಿಕ್ಕಿ ದೇಸಾಯಿ ಸರ್ವರಿಗೊಳಿತನು ಬಯಸಲಿ ಚಿತ್ರ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಪೂರ್ವಾರ್ಧದ ತುಂಬ ವೇಣು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದರೆ, ಹಂಸಲೇಖ ಅಲ್ಲಲ್ಲಿ ಕದ್ದ ರಾಗಗಳನ್ನೇ ಅಚ್ಚುಕಟ್ಟಾಗಿ, ಸ್ವಂತವೆಂಬಷ್ಟು ಸರಾಗವಾಗಿ ಬಳಸಿಕೊಂಡಿದ್ದಾರೆ. ನಿಮಗೆ ಆಲ್‌ಜೈಮರ್‌ ಖಾಯಿಲೆ ಇದ್ದರೆ, ಹಳೆಯ ರಾಗಗಳು ಕಾಡದೇ ಹೋದರೆ ಕಿವಿ ಕಾದು ಕಂಪಿಸುವಷ್ಟು ಶ್ರದ್ಧೆಯಿಂದ ಕೇಳಬಹುದು. ಹಂಸಲೇಖ ಗೀತರಚನೆ ಮಾಡುವ ಘನಕಾರ್ಯಕ್ಕೆ ಕೈ ಹಾಕಿಲ್ಲವಾದ್ದರಿಂದ ಪ್ರಾಸಗಳು ಹಾಸಿ ಹೊದೆಯುವಷ್ಟಿಲ್ಲ. ಮೈಲಿಗಲ್ಲುಗಳ ಥರ ಅಲ್ಲೊಂದು ಇಲ್ಲೊಂದು ಸಿಕ್ಕರೂ ನಿರಾಶೆಯಾಗುವುದಿಲ್ಲ.

ನೀವು ಮೊದಲೇ ಊಟಿ ನೋಡಿದ್ದರೆ, ಸ್ಪರ್ಶ ನೋಡಿದ ಮೇಲೆ ಮತ್ತೊಮ್ಮೆ ಹೋಗಿ ಬರೋಣ ಎನ್ನಿಸದೇ ಇರದು. ಊಟಿಯಲ್ಲಿ ಇದೆಲ್ಲಾ ಎಲ್ಲಿದೆ ಎಂದು ನೀವು ಬೆರಗಾಗಲೂ ಅವಕಾಶವಿದೆ. ವೇಣು ಒಂದೊಂದು ಫ್ರೇಮಿನಲ್ಲೂ ಒಂದೊಂದು ಕಲಾಕೃತಿಯನ್ನೇ ಕಡೆದಿಟ್ಟಿದ್ದಾರೆ. ಎಲ್ಲಕ್ಕಿಂತ ಇಷ್ಟವಾಗುವುದು ನಾಯಕ ಸುದೀಪ್‌ ಅಭಿನಯವಲ್ಲ , ನಾಯಕಿ ರೇಖಾಳ ಸೌಂದರ್ಯವೂ ಅಲ್ಲ , ಸಿಹಿಕಹಿ ಚಂದ್ರು ಅವರ ಶೈಲಿ. ಅವರು ತಮ್ಮೆಲ್ಲಾ ಗುಂಗುಗಳಿಂದ, ಭ್ರಮೆಗಳಿಂದ ಕಳಚಿಕೊಂಡಿದ್ದಾರೆ. ನೆತ್ತಿ ಬಂಜರಾಗಿದ್ದರೂ ಪಾತ್ರ ಫಲವತ್ತಾಗಿದೆ.

ಸುಧಾರಾಣಿ ಮಧ್ಯಂತರದ ಹೊತ್ತಿಗೆ ಆಗಮಿಸುತ್ತಾರೆ. ಪ್ರೇಮಿಗಳ ನಡುವಣ ಕೊಂಡಿ ಕಳಚಿ ಬೀಳುವುದಕ್ಕೆ ಆಕೆಯೇ ಕುಂಟು ನೆಪ. ಯಾಕೆಂದರೆ ಆಕೆ ಚಿತ್ರದಲ್ಲಿ ಒಂದು ಕಾಲು ಕಳೆದುಕೊಂಡು ಕುಂಟಿಯಾಗುತ್ತಾಳೆ. ಅಭಿನಯ ಮರೆಯದ, ಕೆನ್ನೆಯ ಗುಳಿ ನಲುಗದ, ಹಳೆಯ ನಗೆ ಮಾಸದ ಸುಧಾರಾಣಿ ಚಿತ್ರಕ್ಕೆ ಹೊಸ ತಿರುವು ಕೊಟ್ಟ ಹಾಗೇ, ನಿಮಗೂ ರಿಲೀಫ್‌ ಕೊಡುತ್ತಾರೆ.

ನಿಮ್ಮ ಸಂಗಾತಿಯ ಜೊತೆ ಒಂದು ಪುಟ್ಟ ರೈಲು ನಿಲ್ದಾಣ ಮಾತ್ರ ಇರುವ ಮಲೆನಾಡಿನ ಆತ್ಮದಂತಿರುವ ಹಳ್ಳಿಗೆ ಹೋಗಿ, ಅಲ್ಲಿ ಒಂದು ವಾರ ಕಳೆದು ಬಂದ ಮೋಹ ರಹಿತ ಆನಂದವನ್ನು ಸ್ಪರ್ಶ ಕೊಡುತ್ತದೆ ಅನ್ನುವುದು ಈ ಚಿತ್ರದ ಕುರಿತ ಕೊನೆಯ ಮಾತು ಯಾಕಾಗಿರಬಾರದು ?

ಮಿಸ್‌ ಮಾಡಿಕೊಳ್ಳಲೇ ಬಾರದ ಒಂದು ಅನುಭವ ಇದು.

ರಜತ ಪರದೆಗೆ ಬಂದ ಐದಡಿ ಆರಿಂಚಿನ ಹುಡುಗಿ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada