Don't Miss!
- News
ಬೆಂಗಳೂರಿನ ಮಾರತ್ತಹಳ್ಳಿ ಬಳಿಯ ಮುನ್ನೆಕೊಲ್ಲಾಲ ರೈಲ್ವೆ ಮೇಲ್ಸೇತುವೆ ಅಂಡರ್ಪಾಸ್ ಸಿದ್ಧ- ಯಾರಿಗೆ ಅನುಕೂಲ? ವರದಿ ಇಲ್ಲಿದೆ
- Finance
Milk Price: ಅಮುಲ್ ಬಳಿಕ ಈ ಬ್ರ್ಯಾಂಡ್ ಹಾಲಿನ ದರ 3 ರೂಪಾಯಿ ಏರಿಕೆ!
- Lifestyle
ನಿಮ್ಮ ಕೂದಲು ಉದುರುವುದಕ್ಕೂ ಮೊಬೈಲ್ಗೂ ಸಂಬಂಧವಿದೆ ಗೊತ್ತೆ?
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Madhagaja Review: ಹಳೆ ಮದ್ಯ, ಹಳೆ ಬಾಟಲಿ, ಲೇಬಲ್ಲು 'ಮದಗಜ'
ಎರಡು ಊರಿನ ನಡುವೆ ದ್ವೇಷ, ಒಂದೂರಿನಲ್ಲಿ ಬರೀ ವಿಲ್ಲನ್ನುಗಳು, ಕೊಚ್ಚುವುದೊಂದೇ ಅವರ ಕೆಲಸ. ಇನ್ನೊಂದು ಊರಿನಲ್ಲಿ 'ಹೀರೋ'ಗಳು ಅವರದ್ದೂ ಕೊಚ್ಚುವುದೇ ಕೆಲಸ. ಅಪ್ಪ ಊರ ಜನರನ್ನು ದುಷ್ಟರಿಂದ ಕಾಯುವ ದೊರೆ, ಮಗ ಯುವರಾಜ. ವಯಸ್ಸಾದ ಅಪ್ಪನ ಜಾಗ ತುಂಬುವ ಮಗನ ಹೆಗಲಿಗೆ ಊರ ಜನರನ್ನು ಕಾಪಾಡುವ ಜವಾಬ್ದಾರಿ. ಈ ಕತೆಯನ್ನು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಉಜ್ಜಿ ಬಿಸಾಡಲಾಗಿದೆ. ಅದೇ ಕತೆಯನ್ನು 'ಮದಗಜ'ಗಾಗಿ ಹೆಕ್ಕಿಕೊಂಡಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್.
ಸಿನಿಮಾದಲ್ಲಿ ಹೇರಳವಾಗಿ ಆಕ್ಷನ್ ದೃಶ್ಯಗಳಿವೆ, ಒಂದು ಫೈಟ್ ಮುಗಿಯುತ್ತಿದ್ದಂತೆ ಮತ್ತೊಂದು ಶುರುವಾಗುತ್ತದೆ. ಆ ಫೈಟ್ ಇನ್ನೊಂದು ಫೈಟ್‌ಗೆ ನಾಂದಿಯಾಗುತ್ತದೆ. ಈ ಫೈಟ್, ಇನ್ನೊಂದು ಫೈಟ್, ಮತ್ತೊಂದು ಫೈಟ್‌ಗಳ ನಡುವಲ್ಲಿ ಒಂದು ಪ್ರೇಮ ಕತೆ, ತಾಯಿ-ಮಗನ ಬಾಂಧವ್ಯದ ಎಳೆಯನ್ನು ಪೋಣಿಸಿದ್ದಾರೆ ನಿರ್ದೇಶಕ. ಸಿನಿಮಾದ ಒಂದು ತಮಾಷೆಯ ಸಂಗತಿಯೆಂದರೆ ಜಗಪತಿ ಬಾಬು ಮನೆಯಲ್ಲಿ ಶುಭವೇನಾದರೂ ನಡೆವಾಗಲೇ ವಿಲನ್‌ಗಳು ಎಂಟ್ರಿಯಾಗುತ್ತಾರೆ.
ಸಿನಿಮಾದಲ್ಲಿ ಫ್ಯಾಕ್ಚ್ಯುಲ್ ಎರರ್‌ಗಳು ಢಾಳಾಗಿವೆ, ಜಗಪತಿ ಬಾಬು ರಾತ್ರಿ ಸಮಯ ತಹಶೀಲ್ದಾರ್ ಕಚೇರಿಗೆ ಹೋಗುತ್ತಾರೆ. ಸಿನಿಮಾದಲ್ಲಿ ಜಗಪತಿ ಬಾಬು, ಮುರಳಿ ಪಾತ್ರದ ತಂದೆ ಎಂಬುದು ವಿಲನ್‌ಗೆ ಗೊತ್ತಾಗುವ ಮೊದಲೇ ದೃಶ್ಯವೊಂದರಲ್ಲಿ ಅದೇ ವಿಲನ್, 'ಮುರಳಿಯ ತಂದೆ ಜಗಪತಿ ಬಾಬು' ಎಂದು ಹೇಳಿಬಿಟ್ಟಿರುತ್ತಾನೆ! ಕೋರ್ಟ್ ಆವರಣದಲ್ಲಿ ನಡೆಯುವ ಗನ್ ಫೈರ್ ಯಾಕಾಗಿ ನಡೆಯುತ್ತದೆ, ಅದನ್ನು ಯಾರು ಮಾಡಿಸುತ್ತಾರೆ ಎಂಬುದು ಗೊತ್ತೇ ಆಗುವುದಿಲ್ಲ. ಜಗಪತಿ ಬಾಬು ಮನೆಯ ಮುಂದೆ ಮಚ್ಚು ಹಿಡಿದು ನಿಂತು ವೀರಾವೇಶದ ಮಾತನ್ನಾಡುವ ಬೆಂಬಲಿಗರು, ವಿಲನ್‌ಗಳು ಬಂದಾಗ ಜಗಪತಿ ಬಾಬು ಒಬ್ಬರನ್ನೇ ಬಿಟ್ಟು ಅದೆಲ್ಲಿ ಕಣ್ಮರೆ ಆಗುತ್ತಾರೊ ಗೊತ್ತಾಗುವುದಿಲ್ಲ.

ಪ್ರೇಕ್ಷಕರು ಊಹಿಸಿದಂತೆ ಕತೆ ಸಾಗುತ್ತದೆ
'ಮದಗಜ' ಸಿನಿಮಾದ ದೊಡ್ಡ ಸಮಸ್ಯೆ ಅದರ ನಿರೀಕ್ಷಿತ ಹಾದಿ. ಪ್ರೇಕ್ಷಕ ಊಹಿಸುವಂತೆಯೇ ಕತೆ ನಡೆಯುತ್ತದೆ. ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಪ್ಲಾಟ್ ಪಾಯಿಂಟ್ 'ತಾಯಿ ಸೆಂಟಿಮೆಂಟ್' ಅನ್ನು ಕಟ್ಟಿ ಕೊಡುವ ಪ್ರಯತ್ನವನ್ನು ನಿರ್ದೇಶಕ ಮಾಡಿದ್ದಾರಾದರೂ ಅದೂ ಸಹ ಪರಿಣಾಮಕಾರಿಯಾಗಿ ಪ್ರೇಕ್ಷಕನ ಎದೆಗೆ ನಾಟುವುದಿಲ್ಲ. ಆದರೆ ತಾಯಿ, ಕಂಬಕ್ಕೆ ಗೆರೆ ಹಾಕಿ ಮಗ ಇಷ್ಟೆತ್ತರ ಬೆಳದಿರಬಹುದೆಂದು ಊಹಿಸಿ ಸುಖಿಸುವ ದೃಶ್ಯ ಚೆನ್ನಾಗಿದೆ.

ಸಂಭಾಷಣೆ ಇನ್ನಷ್ಟು ಮೊನಚಾಗಿರಬಹುದಿತ್ತು
ಸಿನಿಮಾದ ಡಬ್ಬಿಂಗ್ ಅಲ್ಲಲ್ಲಿ ಕೃತಕ ಎನಿಸುತ್ತದೆ. ಎಡಿಟಿಂಗ್ ಸಹ ಉತ್ತಮವಾಗಿರಬಹುದಿತ್ತೇನೋ. ಮುರಳಿ, ವಿಲನ್‌ಗಳಿಗೆ 'ಖಾಲಿ ಪಂಚ್' ಹೊಡೆಯುವುದು ಸಹ ಎಡಿಟ್ ಆಗದೆ ತೆರೆ ಮೇಲೆ ಬಂದಿದೆ! ಸಿನಿಮಾದ ಸಂಭಾಷಣೆಯಲ್ಲಿ ಮೊನಚು ಕಡಿಮೆ. ಹಿನ್ನೆಲೆ ಸಂಗೀತದ ಅಬ್ಬರ ಜೋರಾಗಿದೆ. ಮುರಳಿ, ಆಶಿಕಾ ರಂಗನಾಥ್‌ರ ಯುಗಳ ಗೀತೆಯೊಂದು ಇಂಪಾಗಿದೆ. ಆ ಹಾಡಿನ ದೃಶ್ಯ ಸಂಯೋಜನೆಯೂ ಚೆನ್ನಾಗಿದೆ.

ಯಾರು ಹೇಗೆ ನಟಿಸಿದ್ದಾರೆ?
ಇನ್ನು ನಟನೆಯ ವಿಷಯಕ್ಕೆ ಬರುವುದಾದರೆ ಶ್ರೀಮುರಳಿ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಇಲ್ಲಿ ಅವರಿಗೆ ನಟನೆಗಿಂತಲೂ ಫೈಟ್ ಮೇಲೆ ಹೆಚ್ಚು ಗಮನವಹಿಸಬೇಕಾಗಿದ್ದ ಅನಿವಾರ್ಯತೆಯಿದ್ದ ಕಾರಣ ಅವರು ಅದನ್ನೇ ಮಾಡಿದ್ದಾರೆ. ಫೈಟ್ ದೃಶ್ಯಗಳಲ್ಲಿ ಮುರಳಿ ಚೆನ್ನಾಗಿ ಕಾಣುತ್ತಾರೆ. ಇನ್ನು ಜಗಪತಿ ಬಾಬು ಅದೇ ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ಕೊಟ್ಟು ಸುಮ್ಮನಾಗಿದ್ದಾರೆ. ತಾಯಿ ಪಾತ್ರದಲ್ಲಿ ದೇವಯಾನಿ ನಟನೆ ಚೆನ್ನಾಗಿದೆ. ರಂಗಾಯಣ ರಘು ಅವರ ಅನುಭವಕ್ಕೆ ಯಾವ ಪಾತ್ರವೂ ಸವಾಲಲ್ಲ. ಆಶಿಕಾ ರಂಗನಾಥ್ ಸಿಕ್ಕ ಅವಕಾಶದಲ್ಲಿ ಗಮನ ಸೆಳೆಯುತ್ತಾರೆ. ವಿಲನ್ ಆಗಿ ಗರುಡ ಸಾಧ್ಯವಾದಷ್ಟು ಕ್ರೂರತೆ ಪ್ರದರ್ಶಿಸಿದ್ದಾರೆ. ಇನ್ನು ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆಆರ್ ಪೇಟೆ ತಮಗೆ ಕೊಟ್ಟ ಕಾರ್ಯವನ್ನು ಮುಗಿಸಿದ್ದಾರೆ. ಮೊದಲಾರ್ಧದಲ್ಲಿ ಚಿಕ್ಕಣ್ಣರ ಕೆಲವು ಪಂಚ್ ಡೈಲಾಗ್‌ಗಳು ನಗೆ ಉಕ್ಕಿಸುತ್ತವೆ.

ಸಿನಿಮಾ ಶ್ರೀಮಂತ ಅನುಭವ ನೀಡುತ್ತದೆ
ಸಿನಿಮಾ ಒಟ್ಟಾರೆಯಾಗಿ ಶ್ರೀಮಂತ ಅನುಭವ ನೀಡುತ್ತದೆ. ಇದಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅಭಿನಂದನಾರ್ಹರು. ಕ್ಯಾಮೆರಾ ಕೆಲಸ ಗಮನ ಸೆಳೆಯುತ್ತದೆ. ಫೈಟ್ ದೃಶ್ಯಗಳು ಚೆನ್ನಾಗಿವೆ ಇದಕ್ಕೆ ಆಕ್ಷನ್ ನಿರ್ದೇಶಕರು ಅಭಿನಂದನಾರ್ಹರು.

ಈ ಕಾಲದ ತುರ್ತು
ಚಿತ್ರರಂಗದಲ್ಲಿ ಕತೆಗಳ ಕೊರತೆ ಇದೆ ಎಂಬ ದೂರನ್ನು ನಿರ್ಲಕ್ಷಿಸಲಾಗದು ನಿಜ. ಆದರೆ ಇರುವ ಕತೆಯನ್ನು ಬಳಸಿ 'ನೋಡೆಬಲ್ ಸಿನಿಮಾ' ಮಾಡುವ ಚಾಕಚಕ್ಯತೆ ನಿರ್ದೇಶಕನಿಗೆ ಇರಲೇಬೇಕಾದ ತುರ್ತು ಈಗಿದೆ. ಒಟಿಟಿ ಮಾಧ್ಯಮಗಳಿಂದ ವಿಶ್ವ ಸಿನಿಮಾಕ್ಕೆ ಪ್ರೇಕ್ಷಕ ತೆರೆದುಕೊಂಡಿರುವ ಹೊತ್ತಿನಲ್ಲಿ ಅದೇ ಆರು ಫೈಟು, ನಾಲ್ಕು ಸಾಂಗು, ತಾಯಿ ಸೆಂಟಿಮೆಂಟ್ ಮಾದರಿಗೆ ಜೋತುಬೀಳುವುದನ್ನು ನಿರ್ದೇಶಕರ ವೃತ್ತಿಪರತೆಯ ಕೊರತೆಯೆಂದೇ ಹೇಳಬೇಕಾಗುತ್ತದೆ.