Bagheera Review:ಫುಲ್ ಫೈಟು.. ಸಿನಿಮಾ ಬೆಂಕಿ.. ಇಲ್ಲಿ ಮುಖ ಬೆಲೆಯಿಲ್ಲ, ಮುಖವಾಡಕ್ಕೆ ಬೆಲೆ
ಮೂರು ವರ್ಷಗಳ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ರಿಲೀಸ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಸಿನಿಮಾವನ್ನು ನೋಡುವುದಕ್ಕೆ ಸಿನಿಪ್ರಿಯರು ಇಷ್ಟು ದಿನ ಕಾದು ಕೂತಿದ್ದರು. ಅದರಲ್ಲೂ 'ಬಘೀರ' ಒಬ್ಬ ಸೂಪರ್ ಹೀರೋ ಸಿನಿಮಾ ಅಂತ ಗೊತ್ತಾದ ಮೇಲಂತೂ ಥಿಯೇಟರ್‌ಗೆ ಯಾವಾಗ ಬರುತ್ತೋ ಅಂತ ಕಾದು ಕೂತಿದ್ದರು. ಕೊನೆಗೂ 'ಬಘೀರ' ಥಿಯೇಟರ್‌ನಲ್ಲಿ ಅಬ್ಬರಿಸುವುದಕ್ಕೆ ಆರಂಭ ಮಾಡಿದ್ದಾಗಿದೆ.
'ಬಘೀರ'ನಿಗೆ ಕಥೆ ಕೊಟ್ಟಿದ್ದು ಪ್ರಶಾಂತ್ ನೀಲ್. ಆಕ್ಷನ್ ಕಟ್ ಹೇಳಿದ್ದು ಡಾ.ಸೂರಿ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದಿದೆ ಅಂದರೆ, ಅದರ ತೂಕವೇ ಬೇರೆ ಅನ್ನೋದು ನಂಬಿಕೆ. ಈ ಕಾರಣಕ್ಕೆ 'ಬಘೀರ' ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳ ಸಾಲಿನಲ್ಲಿ ನಿಂತಿತ್ತು. ಹಾಗಿದ್ದರೆ, 'ಬಘೀರ' ಸಿನಿಮಾ ಹೇಗಿದೆ? ಕನ್ನಡದ ಮೊದಲ ಸೂಪರ್ ಹೀರೋ ಇಷ್ಟ ಆಗುತ್ತಾನಾ? ಪ್ಲಾಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ತಿಳಿಯಲು ಮುಂದೆ ಓದಿ.

'ಬಘೀರ'ನ ಕಥೆಯೇನು?
ಹೀರೋ ವೇದಾಂತ್‌ಗೆ ಚಿಕ್ಕವನಿದ್ದಾನಿಂದಲೂ ಸೂಪರ್ ಹೀರೋ ಆಗಬೇಕು ಅನ್ನೋ ಆಸೆ. ಅಮ್ಮ (ಸುಧಾರಾಣಿ) ಮಗನಿಗೆ ಸೂಪರ್ ಹೀರೋ ಅಂದರೆ ಯಾರು ಅನ್ನೋದನ್ನು ಅರ್ಥ ಮಾಡಿಸುತ್ತಾರೆ. ಬಳಿಕ ಬೆಳೆದು ಪೊಲೀಸ್ ಅಧಿಕಾರಿಯಾಗುತ್ತಾನೆ. ಪೊಲೀಸ್ ಆಗಿ ವೇದಾಂತ್ ಇರುವಾಗ 'ಬಘೀರ' ಯಾರು? ಅವನು ಜನರ ಸಮಸ್ಯೆಗಳಿಗೆ ಹೇಗೆಲ್ಲ ಸ್ಪಂದಿಸುತ್ತಾನೆ? ಕನ್ನಡದ ಸೂಪರ್ ಹೀರೋ ಹೇಗಾಗುತ್ತಾನೆ? ಅನ್ನೋದು ಸಿನಿಮಾ ಒಂದೆಳೆ ಕಥೆ.
ಹೇಗಿದೆ ನಿರ್ದೇಶನ?
'ಬಘೀರ'ನಿಗೆ ಕಥೆ ಕೊಟ್ಟಿರೋದು ಪ್ರಶಾಂತ್ ನೀಲ್ ಆದರೂ, ಆಕ್ಷನ್ ಕಟ್ ಹೇಳಿದ್ದು ಡಾ.ಸೂರಿ. ಕಥೆ ಬಿಟ್ಟು ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಇವರದ್ದೇ. ಪ್ರಶಾಂತ್ ನೀಲ್ ನಂತರ ಕನ್ನಡದಲ್ಲಿ ಒಬ್ಬ ಕಮರ್ಷಿಯಲ್ ನಿರ್ದೇಶಕ ಆಗಬಹುದು ಅನ್ನೋ ಭರವಸೆಯನ್ನು ಮೂಡಿಸಿದ್ದಾರೆ. ಚಿತ್ರಕಥೆ ಬೋರ್ ಹೊಡೆಸುವುದಿಲ್ಲ. ಕಥಾ ನಾಯಕನ ಪರಿಚಯ ಮಾಡುತ್ತಾ ಕಥೆಯೊಳಗೆ ಎಳೆದುಕೊಂಡು ಹೋಗುವ ತಂತ್ರ ಇಷ್ಟ ಆಗುತ್ತೆ. ಡೈಲಾಗ್‌ನಲ್ಲೂ ಅಬ್ಬರವಿಲ್ಲ. ಕಥೆಗೆ ಪಾತ್ರದ ಮ್ಯಾನರಿಸಂ ಎಷ್ಟು ಬೇಕೋ ಅಷ್ಟು ಇದೆ ಅಂತ ಅನಿಸುತ್ತೆ.
ಪಾತ್ರಗಳು ಹೇಗಿವೆ?
ಡಾ. ಸೂರಿ ಹೀರೋ ಪಾತ್ರವನ್ನು ತೆರೆಮೇಲೆ ಚೆನ್ನಾಗಿ ತಂದಿದ್ದಾರೆ. ಎರಡು ಶೇಡ್‌ಗಳಲ್ಲೂ ಶ್ರೀಮುರಳಿ ಚೆನ್ನಾಗಿ ಕಾಣಿಸುತ್ತಾರೆ. ಶ್ರೀಮುರಳಿ ಪೊಲೀಸ್ ಅಧಿಕಾರಿ ಹಾಗೂ ಸೂಪರ್ ಹೀರೋ ಪಾತ್ರದಲ್ಲೂ ಇಷ್ಟ ಆಗುತ್ತಾರೆ. ಆ ಪಾತ್ರಗಳಿಗೆ ಬೇಕಿರೋ ಫಿಸಿಕ್ ಹಾಗೂ ಬಾಡಿ ಲ್ಯಾಂಗ್ವೇಜ್ ಶ್ರೀಮುರಳಿಯಲ್ಲಿ ನೋಡಬಹುದು. ಸೂಪರ್ ಹೀರೋಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಗರುಡ ರಾಮ್ ಖಡಕ್ ಅಭಿನಯ ಕೊಟ್ಟಿದ್ದಾರೆ. ರುಕ್ಮಿಣಿ ವಸಂತ್ ಸಿನಿಮಾದಲ್ಲಿ ಚೆನ್ನಾಗಿ ಕಾಣುತ್ತಾರೆ. ಹಾಗಂತ ಗ್ಲಾಮರ್‌ಗಾಗಿ ಅಷ್ಟೇ ಇವರ ಪಾತ್ರವಿಲ್ಲ. ಕಥೆಗೆ ಇವರ ಪಾತ್ರವೂ ಮುಖ್ಯ ಅನಿಸುತ್ತೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ಸುಧಾರಾಣಿ ಇವರೆಲ್ಲೂ 'ಬಘೀರ'ನಿಗೆ ಬಲ ಕೊಟ್ಟಿದ್ದಾರೆ.

ಪ್ರಶಾಂತ್ ನೀಲ್ ಕಲ್ಪನೆ ಹೇಗಿದೆ?
ಪ್ರಶಾಂತ್ ನೀಲ್ 'ಬಘೀರ'ನ ಸೃಷ್ಟಿಕರ್ತ. ಒಂದು ಸಿಂಪಲ್ ಕಥೆಗೆ ಮಾಸ್ ಫೀಲ್ ಕೊಡಬಹುದು ಅಂತ ಮತ್ತೆ ಸಾಬೀತು ಮಾಡಿದ್ದಾರೆ. ಅವರ ಸೂಪರ್ ಹೀರೋ ಕಲ್ಪನೆ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. 'ಕೆಜಿಎಫ್', 'ಸಲಾರ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳ ಸಾಲಿಗೆ ನಿಲ್ಲದೇ ಹೋದರೂ, ಇದೊಂದು ಅದ್ಭುತ ಪ್ರಯತ್ನ. ಕಥೆ ಸಿಂಪಲ್ ಅನಿಸಿದರೂ, ಅವರ ಕಲ್ಪನೆ ಸಿಂಪಲ್ ಅಲ್ಲ ಅನ್ನೋದು ಇಲ್ಲಿ ಪ್ರೂವ್ ಆಗಿದೆ.
ಸಿನಿಮಾದ ಪ್ಲಸ್ ಏನು?
ಅಜನೀಶ್ ಲೋಕನಾಥ್ ಮ್ಯೂಸಿಕ್ ಸಿನಿಮಾ ಹೈಲೈಟ್. ಆಕ್ಷನ್ ಹಾಗೂ ರೊಮ್ಯಾಂಟಿಕ್ ಎರಡೂ ಸನ್ನಿವೇಶಗಳಲ್ಲೂ ಅಜನೀಶ್ ಲೋಕನಾಥ್ ಸಖತ್ ಆಗಿಯೇ ಮ್ಯೂಸಿಕ್ ಕೊಟ್ಟಿದ್ದಾರೆ. ಪಾತ್ರಗಳನ್ನು ಪರಿಚಯಿಸುವಾಗ ಅಜನೀಶ್ ಕೊಟ್ಟ ಹಿನ್ನೆಲೆ ಸಂಗೀತ ಸಖತ್ ಕಿಕ್ ಕೊಡುತ್ತೆ. ಚೇತನ್ ಡಿಸೋಜಾ ಅವರ ಆಕ್ಷನ್ ಸೀಕ್ವೆನ್ಸ್ ಮಜಾ ಕೊಡುತ್ತೆ. ಸೂಪರ್ ಹೀರೋ ಸಿನಿಮಾ ನೋಡಿದಷ್ಟೇ ಫೀಲ್ ಆಗುತ್ತೆ. ಎ. ಜೆ. ಶೆಟ್ಟಿ ಕ್ಯಾಮರಾ ವರ್ಕ್ 'ಬಘೀರ'ನ ಮತ್ತೊಂದು ಹೈಲೈಟ್.
ಮೈನಸ್ ಏನು?
ಹಾಗಂತ 'ಬಘೀರ' ಸಿನಿಮಾ ಮೈನಸ್ ಪಾಯಿಂಟ್ ಇಲ್ಲವೇ ಇಲ್ಲ ಅಂತಲ್ಲ. ಚಿತ್ರಕಥೆಯನ್ನು ಇನ್ನಷ್ಟು ಅದ್ಭುತವಾಗಿ ಬರೆಯಬಹುದಿತ್ತು ಅನಿಸುತ್ತೆ. ಕೆಲವು ಸನ್ನಿವೇಶಗಳು ಮತ್ತಷ್ಟು ಖಡಕ್ ಆಗಿ ಇರಬೇಕಿತ್ತು. ಹೀಗಾಗಿ ಈಗಾಗಲೇ ಬ್ಯಾಟ್ ಮ್ಯಾನ್ ಅಂತಹ ಸೂಪರ್ ಹೀರೋ ಸಿನಿಮಾ ನೋಡಿರುವವರಿಗೆ ಸ್ವಲ್ಪ ನಿರಾಸೆ ಮೂಡಿಸಬಹುದು. ಲಾಜಿಕ್ ಆಗಿ ಸಿನಿಮಾ ನೋಡಿದರೆ ಸಮಸ್ಯೆ ಎನಿಸಬಹುದು. ಭಾಷೆಯ ವಿಷಯಕ್ಕೆ ಬಂದರೆ, ನೆಟಿವಿಟಿ ಮಿಸ್ ಆಗಿದೆ. ಇದೆಲ್ಲವೂ ಮೈನರ್ ಅಷ್ಟೇ. ಒಟ್ನಲ್ಲಿ ಕನ್ನಡದಲ್ಲಿ ಇಂತಹದ್ದೊಂದು ಸಿನಿಮಾವನ್ನು ಥಿಯೇಟರ್‌ನಲ್ಲಿಯೇ ನೋಡಿ ಅನುಭವ ಪಡೆಯುವುದೇ ಉತ್ತಮ.


Click it and Unblock the Notifications











