»   » ದತ್ತಾತ್ರೇಯರಂಥ ಪ್ರಶಸ್ತಿ ವಿಜೇತ ನಟ, ಬೇಡಿಕೆಯಲ್ಲಿರುವ ಸಂಗೀತ ನಿರ್ದೇಶಕ ರಾಜೇಶ್‌ ರಾಮನಾಥನ್‌ ಎಲ್ಲರೂ ಕಾಶಿಬ್ರಾಂಡ್‌ ಮುಂದೆ ಅಸಹಾಯಕರಾಗಿದ್ದಾರೆ. ಕಾಶಿನಾಥ್‌ ಇನ್ನು ನಿವೃತ್ತರಾಗಬಹುದು.

ದತ್ತಾತ್ರೇಯರಂಥ ಪ್ರಶಸ್ತಿ ವಿಜೇತ ನಟ, ಬೇಡಿಕೆಯಲ್ಲಿರುವ ಸಂಗೀತ ನಿರ್ದೇಶಕ ರಾಜೇಶ್‌ ರಾಮನಾಥನ್‌ ಎಲ್ಲರೂ ಕಾಶಿಬ್ರಾಂಡ್‌ ಮುಂದೆ ಅಸಹಾಯಕರಾಗಿದ್ದಾರೆ. ಕಾಶಿನಾಥ್‌ ಇನ್ನು ನಿವೃತ್ತರಾಗಬಹುದು.

Subscribe to Filmibeat Kannada

ಚಿತ್ರ : ಸುಂದರ ನಾನು ಸುಂದರಿ ನೀನುನಿರ್ದೇಶನ : ಅನಿಲ್‌ ಬೈಂದೂರುತಾರಾಗಣ : ಕಾಶೀನಾಥ್‌, ರುಚಿತಾ ಪ್ರಸಾದ್‌, ದತ್ತಾತ್ರೇಯ
*ಸತ್ಯನಾರಾಯಣ

ಕಾಶೀನಾಥ್‌ ಅವರಿಗೊಂದು ಇಮೇಜ್‌ ಇದೆ. ಅದು ಈಗಿನ ಸಂದರ್ಭಕ್ಕೆ ಹೊಂದಿಕೊಳ್ಳುತ್ತದೆಯೇ ಇಲ್ಲವೇ ಅನ್ನೋದು ಮುಖ್ಯ ಅಲ್ಲ. ಕಾಶಿ ನಾಯಕರಾದ ಮೇಲೆ ಆ ಚಿತ್ರವೂ ಅದೇ ಶೈಲಿಯಲ್ಲಿರಬೇಕು ಎಂಬ ನಿರ್ದೇಶಕರಿರುವಾಗ ಸುಂದರ ನಾನು ಸುಂದರಿ ನೀನು ಚಿತ್ರ ತಯಾರಾಗುತ್ತದೆ. ಇಲ್ಲಿ ಕಾಶಿನಾಥ್‌ ಮುಖ ಕಿವುಚುವ ಮುನ್ನವೇ ಪ್ರೇಕ್ಷಕರು ಮುಖ ಸಿಂಡರಿಸುತ್ತಾರೆ. ಕಾಶಿನಾಥ್‌ ಬದಲಾಗಿಲ್ಲ. ಆದರೆ ಅವರ ಸಿನಿಮಾ ನೋಡುವ ಪ್ರೇಕ್ಷಕರು ಈಗ ಬದಲಾಗಿದ್ದಾರೆ. ಮುಂಬೈನಿಂದ ಬಂದ ನಿರ್ದೇಶಕರಿಗಾಗಲಿ ನಿರ್ಮಾಪಕರಿಗಾಗಲಿ ಈ ವಿಷ್ಯದ ಅರಿವಾದಂತಿಲ್ಲ.

ಒಂದು ಹಸಿ ಹಸಿ ಹಾಸ್ಯ ಚಿತ್ರಕ್ಕೆ ಬೇಕಾಗುವ ಎಲ್ಲಾ ಸರಕುಗಳೂ ಇಲ್ಲಿವೆ. ಹಳ್ಳಿಯಿಂದ ಪಟ್ಟಣಕ್ಕೆ ಬರುವ ನಾಯಕನನ್ನು ಮೂರು ಚೆಲುವೆಯರು ಕಾಡುತ್ತಾರೆ. ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ನಾಯಕ ಇನ್ನಷ್ಟು ಎಡವಟ್ಟುಗಳನ್ನು ಮಾಡುತ್ತಾ ಹೋಗುತ್ತಾನೆ.

ಚಿತ್ರದ ಆರಂಭದ ದೃಶ್ಯಗಳೇ ಮುಂದಿನ ಅಪಾಯಕ್ಕೆ ಮುನ್ಸೂಚನೆ ಕೊಡುತ್ತದೆ. ನಾಯಕ ದಾರೀಲಿ ಹೋಗೋ ಹುಡುಗಿಯನ್ನ ಕಣ್ಣಲ್ಲೇ ಅಳತೆ ಮಾಡುತ್ತಾನೆ. ಅನಂತರ ನಾಟಕದ ದೃಶ್ಯ. ನಾಯಕನೇ ನಾಟಕದ ನಿರ್ದೇಶಕ. ನಾಯಕಿಯ ಪಾತ್ರ ಮಾಡಬೇಕಾದ ಹುಡುಗಿ ಕೊನೇ ಗಳಿಗೆಯಲ್ಲಿ ಓಡಿ ಹೋದಾಗ ರುಚಿತಾ ಪ್ರಸಾದ್‌ ಆ ಪಾತ್ರ ಮಾಡ್ತಾರೆ. ಪ್ರೇಮಾಂಕುರಕ್ಕೆ ಇಷ್ಟು ಸಾಕು. ನಾಯಕ- ನಾಯಕಿ ಎರಡು ಡ್ಯುಯೆಟ್‌ ಹಾಡಿದ ನಂತರ ನಾಯಕ ಕೆಲಸ ಕಳಕೊಳ್ಳುತ್ತಾನೆ. ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ತಂಗಿ ಕೇರಂ ಪಾನ್‌ನಂತೆ ವಾಪಸಾಗುತ್ತಾಳೆ. ಅದು ವರದಕ್ಷಿಣೆ ಕೇಸು.

ತಂಗಿಯ ಬದುಕನ್ನು ಉದ್ಧಾರ ಮಾಡುವ ಸಲುವಾಗಿ ನಾಯಕ ಪಟ್ಟಣಕ್ಕೆ ಹೋದ ಪುಟ್ಟನಾಗುತ್ತಾನೆ. ಅಲ್ಲಿಗೆ ಮಧ್ಯಂತರ. ಅನಂತರ ಇಡೀ ಚಿತ್ರವನ್ನು ಹಾಸ್ಯಮಯ ಮಾಡಬೇಕೆಂದು ನಿರ್ದೇಶಕರು ಪಣ ತೊಟ್ಟಂತಿದೆ. ಆಫೀಸಲ್ಲಿ ಬಾಸ್‌ ಮಗಳು, ಗಂಡನನ್ನು ತೊರೆದ ಸೆಕ್ರೆಟರಿ, ಮನೆಯಲ್ಲಿ ಮಾಲಿಕನ ಮಗಳು, ಇವರೆಲ್ಲರೂ ನಾಯಕನ ಜೊತೆ ಚಕ್ಕಂದ ಆಡೋದಕ್ಕೆ ಪೈಪೋಟಿ ನಡೆಸುತ್ತಾರೆ. ಇದೇ ಸಂದರ್ಭವನ್ನು ಬಳಸಿಕೊಂಡು ದ್ವಂದ್ವಾರ್ಥದ ಮಾತು, ದೃಶ್ಯಗಳು ಹಾಜರಾಗುತ್ತವೆ. ಮೂವರು ಉಪನಾಯಕಿಯರು ತಮ್ಮ ಚೆಲುವಿನ ದರ್ಶನ ಮಾಡಿಸುತ್ತಾರೆ. ಕಾಶಿನಾಥ್‌ ಎಂದಿನಂತೆ ಪೆಕರುಪೆಕರಾಗಿ ಉಗುರು ಕಚ್ಚುತ್ತಾರೆ.

ಮದುವೆಯಾಗು ಎಂದು ಪೀಡಿಸುವ ಹುಡುಗಿಯರ ಕೈಯಿಂದ ತಪ್ಪಿಸಿಕೊಳ್ಳಲು ನಾಯಕನಿಗೆ ಏಡ್ಸ್‌ ಕಾಯಿಲೆ ತಗಲಿದೆ ಎಂದು ಸುದ್ದಿ ಹಬ್ಬಿಸುವಲ್ಲಿಗೆ ನಿರ್ದೇಶಕರ ಅಭಿರುಚಿ ಪಾತಾಳಕ್ಕೆ ಜಾರುತ್ತದೆ. ಕ್ಲೈಮಾಕ್ಸ್‌ನಲ್ಲಿ ಹಳ್ಳಿ ನಾಯಕಿಯೇ ನಾಯಕನನ್ನು ರಕ್ಷಿಸುತ್ತಾಳೆ. ವರದಕ್ಷಿಣೆ ಕೇಸು ಕೂಡ ಇತ್ಯರ್ಥವಾಗುತ್ತದೆ.

ಆಗಾಗ ಸಭ್ಯತೆಯ ಗಡಿಯಾಚೆಗೆ ಜಿಗಿಯುವ ಸುಂದರ ನಾನು ಸುಂದರಿ ನೀನು ಚಿತ್ರದ ಏಕೈಕ ಹೈಲೈಟ್‌ ಅಂದರೆ ನಾಯಕಿ ರುಚಿತಾ ಪ್ರಸಾದ್‌. ಅಶೋಕ್‌ ಕಶ್ಯಪ್‌ರಂಥ ಪ್ರಶಸ್ತಿ ವಿಜೇತ ಛಾಯಾಗ್ರಾಹಕ, ದತ್ತಾತ್ರೇಯರಂಥ ಇನ್ನೊಬ್ಬ ಪ್ರಶಸ್ತಿ ವಿಜೇತ ನಟ, ಈಗ ಬೇಡಿಕೆಯಲ್ಲಿರುವ ಸಂಗೀತ ನಿರ್ದೇಶಕ ರಾಜೇಶ್‌ ರಾಮನಾಥನ್‌ ಮೊದಲಾದವರು ಈ ಚಿತ್ರದಲ್ಲಿದ್ದರೂ ಇವರೆಲ್ಲರೂ ಕಾಶಿಬ್ರಾಂಡ್‌ ಮುಂದೆ ಅಸಹಾಯಕರಾಗಿದ್ದಾರೆ.

ಯಾಕೆಂದರೆ ನಿರ್ದೇಶಕ ಅನಿಲ್‌ ಬೈಂದೂರು ರಚಿಸಿದ ಕತೆ, ಚಿತ್ರಕತೆಯೇ ಆ ಮಟ್ಟದಲ್ಲಿದೆ.

ಪೋಲಿ ಚಿತ್ರಕ್ಕೂ ನೋಡಿಸಿಕೊಂಡು ಹೋಗುವ ಗುಣವಿರುತ್ತದೆ. ಆದರೆ ಈ ಚಿತ್ರದಲ್ಲಿ ಆ ನಿರೀಕ್ಷೆಯೂ ಹುಸಿಯಾಗಿದೆ. ಕಾಶಿನಾಥ್‌ ಇನ್ನು ನಿವೃತ್ತರಾಗಬಹುದು.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada