For Quick Alerts
ALLOW NOTIFICATIONS  
For Daily Alerts

  ಡಿಶುಂ ಡಿಶುಂ ಪ್ರಿಯರಿಗೆ ಚಿತ್ರದುದ್ದಕ್ಕೂ ಥರಹೇವಾರಿ ಊಟ...

  By Staff
  |

  ಚಿತ್ರ : ಸೂರ್ಯ ಐಪಿಎಸ್‌ನಿರ್ದೇಶನ : ಬಿ.ಸಿ. ಪಾಟೀಲ್‌ತಾರಾಗಣ : ಬಿ.ಸಿ. ಪಾಟೀಲ್‌, ಕೀರ್ತಿರಾಜ್‌ , ಉಷಾ ಕಿರಣ, ಸಯ್ಯದ್‌, ರಥಸಪ್ತಮಿ ಅರವಿಂದ
  *ಮಹೇಶ್‌ ದೇವಶೆಟ್ಟಿ

  ಬಿ.ಸಿ. ಪಾಟೀಲ್‌ ಕೆರಳಿದರೆಂದರೆ
  ಬಂದೂಕಿನ ಬಾಯಿ ಮುಚ್ಚುವುದಾದರೂ ಹೇಗೆ
  ರೌಡಿಗಳ ತಲೆ ಚಿಂದಿಯಾಗದಿದ್ದರೆ ಹೇಗೆ
  ಅಲ್ಲಿಂದ ರಕುತದ ಹೊಳೆ ಹರಿಯದಿದ್ದರೆ ಹೇಗೆ
  ಹರಿಹರಿದು ಜನ ಮನದ ನಿದ್ದೆಗೆಡಿಸದಿದ್ದರೆ ಹೇಗೆ....?

  ಹೀಗೊಂದು ತಾಳವಿಲ್ಲದ ಹಾಡನ್ನು ಪ್ರೇಕ್ಷಕ ಗುನುಗುತ್ತಿದ್ದರೆ, ಪಾಟೀಲ್‌ ಅದರ ಬಗ್ಗೆ ಅಗುಳಷ್ಟು ಖಬರಿಲ್ಲದೆ ರೌಡಿಗಳನ್ನು ಎಕ್ಕಾ ಮಕ್ಕಾ ಒದೆಯುತ್ತಿರುತ್ತಾರೆ. ಯಾಕೆಂದರೆ ಆ ರೌಡಿ , ಪಾಟೀಲರ ಹೆಸರನ್ನು ಕೇಳಿರುತ್ತಾನೆ. ತನ್ನ ಹೆಸರು ಹೇಳುವ ಮುಂಚೆ ಕೇಳಿದವರ ಮುಖಕ್ಕೆ ಇಕ್ಕುವುದು ಪಾಟೀಲ್‌ ಸತ್‌ ಸಂಪ್ರದಾಯ. ಇಕ್ಕುತ್ತಲೇ ಪರಿಚಯಿಸಿಕೊಳ್ಳೋದು ಖಾಕಿ ತೊಟ್ಟಾತನ ಪರಂಪರೆ. ಇಂತಿಪ್ಪ ನಮ್ಮ ಸೂರ್ಯ ಐಪಿಎಸ್‌ಗೆ ಭ್ರಷ್ಟರೆಂದರೆ ಬುಗುಬುಗುನೆ ಕೋಪ ನೆತ್ತಿಗೇರುತ್ತದೆ. ರಾಜಕಾರಣಿಗಳೆಂದರೆ ರಕ್ತ ಕೊತಕೊತನೆ ಕುದಿಯುತ್ತದೆ. ಖಾಕಿಗೆ ಅವಮಾನ ಮಾಡಿದವರು ಖಾಕಿ ತೊಟ್ಟಿದ್ದರೂ ಕ್ಯಾರೇ ಅನ್ನದ ಕನ್ನಡದ ಕಂಠೀರವನೀತ. ಒಂಥರಾ ನಾನಾ ಪಾಟೇಕರ್‌ ಪ್ರೊಡಕ್ಟು !

  ಹೀಗಿದ್ದ ಸೂರ್ಯನಿಗೆ ಹೆಗಲ ಮೇಲೆ ಮತ್ತೆರಡು ನಕ್ಷತ್ರ ಅಂಟಿಸಿ ಹುಬ್ಬಳ್ಳಿಗೆ ವರ್ಗ ಮಾಡಲಾಗುತ್ತದೆ. ಅಲ್ಲಿಗೆ ಕಾಲಿಡುವಾಗಲೇ ಎಂಎಲ್‌ಎ ತಮ್ಮ ಮತ್ತವನ ಪಟಾಲಮ್ಮಿಗೆ ತದುಕಿ ತನ್ನ ಎಂಟ್ರಿ ಘೋಷಿಸುತ್ತಾನೆ. ಅಲ್ಲಿಂದಲೇ ಎಂಎಲ್‌ಎ ಕೀರ್ತಿರಾಜ್‌ ಮತ್ತು ಪಾಟೀಲ್‌ ನಡುವೆ ಸಮರ ಕಹಳೆ ಮೊಳಗುತ್ತದೆ. ಆಗಿನಿಂದ ಇವರಿಬ್ಬರ ನಡುವೆ ತಿಕ್ಕಾಟ ಗುದ್ದಾಟ ಶುರುವಾಗುತ್ತದೆ. ಅದರಲ್ಲಿ ಪಾಟೀಲ್‌ ತಂಗಿ, ಭಾವಿ ಅಳಿಯ , ಮಗಳು ಮತ್ತು ಹೆಂಡತಿ ಶಿವನ ಪಾದ ಸೇರುತ್ತಾರೆ. ಪಾಟೀಲ್‌ ಸಸ್ಪೆಂಡ್‌ ಆಗಿ ಮನೆ ಮೂಲೆ ಹಿಡಿಯುತ್ತಾರೆ. ಅಷ್ಟಕ್ಕೆ ಸುಮ್ಮನೆ ಕೂತರೆ ಖಾಕಿ ಬಟ್ಟೆ ತೊಟ್ಟದ್ದಕ್ಕೆ ಸಾರ್ಥಕವಾದರೂ ಏನು ? ತಗಳ್ಳಿ, ಸ್ಲೋ ಮೋಷನ್ನಿನಲ್ಲಿ ಮತ್ತೆ ಪಾಟೀಲ್‌ ಖಾಕಿ ತೊಟ್ಟು ಪಿಸ್ತೂಲು ಕೈಗೆತ್ತಿಕೊಳ್ಳುತ್ತಾರೆ. ಮುಂದೇನಾಗುತ್ತೆ ಅನ್ನೋದನ್ನು ಸಕಲ ಕಲಾವಲ್ಲಭರಾದ ಪ್ರೇಕ್ಷಕರಿಗೆ ಹೇಳುವುದು ಮಹಾಪರಾಧಂಗಳ್‌!

  ಮಾಮೂಲಿ ಕತೆಗೆ ಪಾಟೀಲ್‌ ತಮ್ಮ ಪೊಲೀಸ್‌ ಖದರ್‌ ತೊಡಿಸಿದ್ದಾರೆ. ಕನ್ನಡದಲ್ಲಿ ಈ ರೀತಿಯ ಕತೆಗಳನ್ನು ಇನ್ನೂ ಮೆಚ್ಚಿಕೊಳ್ಳುತ್ತಾರೆಂಬ ಭರವಸೆಯೂ ನಿರ್ದೇಶಕ ಪಾಟೀಲರಿಗೆ ಇದ್ದ ಹಾಗಿದೆ. ಹಾಗಾಗಿಯೇ ವಿರಾಮದ ಮುಂಚೆ ನಾಲ್ಕು, ಆಮೇಲೆ ನಾಲ್ಕು ಫೈಟ್‌ಗಳನ್ನು ಇಟ್ಟು ಸಮತಾ ವಾದದ ರೂವಾರಿಯಾಗಿದ್ದಾರೆ. ಪೊಲೀಸ್‌ ಅಧಿಕಾರಿಯಾದವರು ಸಂಸಾರಿಗಳಾಗಬಾರದು ಎಂಬ ಕ್ರಾಂತಿಕಾರಿ ನಿಲುವು ಕೂಡ ವ್ಯಕ್ತವಾಗಿದೆ. ಯಾಕೆಂದರೆ ನಾಯಕನೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಗೋವಿಂದಾ ಗೋವಿಂದ. ಸತ್ಯಘಟನೆ ಮತ್ತು ಸಮಕಾಲೀನ ಸಮಸ್ಯೆಗಳನ್ನು ಬಾಯಿ ಮಾತಿನಲ್ಲಾದರೂ ಉಳಿಸಿ ಹೊಸತನ ಮೂಡಿಸುವ ಪ್ರಯತ್ನವೂ ಇಲ್ಲಿದೆ. ನಮ್ಮ ಮುಖ್ಯಮಂತ್ರಿಗಳು ಬೆಂಗಳೂರನ್ನ ಸಿಂಗಪೂರ ಮಾಡದಿದ್ದರೂ ಪರವಾಗಿಲ್ಲ. ಅಟ್‌ಲೀಸ್ಟ್‌ ಹುಬ್ಬಳ್ಳಿಯನ್ನು ಬೆಂಗಳೂರನ್ನಾಗಿ ಮಾಡಲಿ ಎನ್ನುವ ಬಿ.ಎ. ಮಧು ಪಂಚಿಂಗ್‌ ಸಂಭಾಷಣೆ ಸಿಳ್ಳೆ ಗಿಟ್ಟಿಸುತ್ತವೆ. ಉತ್ತರ ಕರ್ನಾಟಕದ ಬಗ್ಗೆ ಸರಕಾರದ ನಿರ್ಲಕ್ಷ್ಯ ಹುಬ್ಬಳ್ಳಿಯ ಕೋಮುವಾದ, ಇದನ್ನು ಬಳಸಿಕೊಳ್ಳುವ ದುರುಳರಿಗೆ ಬುದ್ಧಿ ಕಲಿಸುವ ದೃಶ್ಯ ಆಯಾ ಪ್ರದೇಶದ ಜನರಿಗೆ ಇಷ್ಟವಾಗಬಹುದು. ಹಿಂದೊಮ್ಮೆ ಪೊಲೀಸ್‌ ಅಧಿಕಾರಿಯಾಗಿದ್ದರಿಂದ ಪಾಟೀಲರು ಸಹಜಾಭಿನಯ ಚತುರತೆ ತೋರಿಸಿದ್ದಾರೆ. ಯಾರೇ ಸತ್ತರೂ ಅವರ ಮುಖದ ಅರ್ಧ ನರವೂ ಅಲುಗಾಡುವುದಿಲ್ಲ. ಅದು ಗಂಭೀರ ಅಭಿನಯವೆಂದು ನೀವು ತಿಳಿಯಬೇಕು. ತಿಳಿಯದಿದ್ದರೆ ತಲೆ ಸಾವಿರ ಹೋಳಾಗುವ ಅಪಾಯವಿದೆ.

  ಅವರ ಪಾಡಿಗೆ ಅವರು ನಟಿಸಿದವರ ಪಟ್ಟಿಯಲ್ಲಿ ಕೀರ್ತಿರಾಜ್‌ , ಉಷಾ ಕಿರಣ, ಸಯ್ಯದ್‌, ರಥಸಪ್ತಮಿ ಅರವಿಂದ ಇದ್ದಾರೆ. ಜೆ.ಜೆ. ಕೃಷ್ಣ ಕೆಮೆರಾ ಕೆಲಸ ಒಮ್ಮೊಮ್ಮೆ ತಬ್ಬಿಬ್ಬುಗೊಳಿಸುವಷ್ಟು ಸಶಕ್ತವಾಗಿದೆ. ಸಂಕಲನಕಾರನೂ ಅದರೊಂದಿಗೆ ಸ್ಪರ್ಧೆ ನಡೆಸಿ ಸೋತಿದ್ದಾನೆ. ಪಡ್ಡೆ ಹೈಕಳಿಗೆ ತೃಪ್ತಿಯಾಗಲೆಂದು ಒಂದು ಕ್ಯಾಬರೆ ನೃತ್ಯವಿದೆ. p;#3253;ಿದೆ. ಗರ್ಭಪಾತವಾಗುವ ಸನ್ನಿವೇಶದಿಂದ ಹೆಂಗಸರೂ ಕರ್ಚೀಫ್‌ ಒದ್ದೆ ಮಾಡಿಕೊಳ್ಳಬಹುದು. ಇನ್ನೂ ಒಂದು ಮಾತು ಹೆಚ್ಚಿಗೆ ಆಡಿದರೆ ಪಾಟೀಲರ ಬಂದೂಕಿನ ಬಾಯಿ ಬಿಚ್ಚಬಹುದು ಹುಷಾರ್‌ ....

  (ವಿಜಯ ಕರ್ನಾಟಕ)

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more