Taali Review: ಸುಶ್ಮಿತಾ ಸೇನ್ ನಟನೆಗೆ ಫುಲ್ ಮಾರ್ಕ್ಸ್, ಹೋರಾಟ ಕಟ್ಟಿಕೊಡುವಲ್ಲಿ ನಿರ್ದೇಶಕರು ವಿಫಲ!
Star Cast: Sushmita Sen, Ankur Bhatia, Sheetal Kale, Krutika Deo
Director: Ravi Jadhav
Platform: JioCinema
ಟ್ರಾನ್ಸ್‌ಜೆಂಡರ್ ಕಥೆಗಳನ್ನು ಆಧರಿಸಿ ಹಲವು ಸಿನಿಮಾಗಳು ಬಂದಿವೆ. ಹಾಗೆಯೇ ಅವರ ಜೀವನವನ್ನು ಚಿತ್ರಿಸುವ ಸಾಕಷ್ಟು ಸಾಕ್ಷ್ಯಚಿತ್ರಗಳು ನಮಗೆ ಸಿಗುತ್ತವೆ. ಬಾಲಿವುಡ್‌ನಲ್ಲಿಯೂ ಅನೇಕ ಪ್ರಯೋಗಗಳು ನಡೆದಿದ್ದು, ಅವುಗಳ ಸಾಲಿಗೆ ನಟಿ ಸುಶ್ಮಿತಾ ಸೇನ್ ಅವರ ಹೊಸ ಸೀರಿಸ್ 'ತಾಲಿ' ಸೇರಿಕೊಂಡಿದೆ.

ನಟರಂಗ ಎಂಬ ಉತ್ತಮ ಚಿತ್ರ ನೀಡಿದ ರಾಷ್ಟ್ರಪ್ರಶಸ್ತಿ ವಿಜೇತ ಮರಾಠಿ ನಿರ್ದೇಶಕ ರವಿ ಜಾಧವ್ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ. ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಶ್ರೀಗೌರಿ ಸಾವಂತ್ ಅವರ ಜೀವನಚರಿತ್ರೆಯ ವೆಬ್ ಸರಣಿಯಲ್ಲಿ, ಸುಶ್ಮಿತಾ ಸೇನ್ ತಮ್ಮ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಈ ಸೀರಿಸ್ ಪ್ರಸ್ತುತ ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಿದೆ.
ಬಾಲಿವುಡ್ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ಇಂದಿಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಕೇವಲ ಹಂಗಿಸಲು, ಹಾಸ್ಯ ದೃಶ್ಯಗಳಲ್ಲಿ ಬಳಸಲಾಗುತ್ತಿದೆ. ಹೀಗಾಗಿಯೇ 'ತಾಲಿ' ಇಂದಿನ ಕಾಲಘಟ್ಟದಲ್ಲಿ ಬಹುಮುಖ್ಯ ಚಿತ್ರವಾಗಿ ಕಾಣುತ್ತಿದೆ. ಹಾಗಾದರೆ ಈ ವೆಬ್ ಸರಣಿಯಲ್ಲಿ ಏನಿದೆ..ಏನಿರಬೇಕಿತ್ತು...? ಶ್ರೀಗೌರಿ ಸಾವಂತ್ ಅವರ ಜೀವನವನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆಯೇ ಎಂಬುದನ್ನು ಮುಂದೆ ತಿಳಿಯೋಣ.

ತಾಲಿ ಕಥೆಯೇನು?
ದೇಶದಲ್ಲಿ ಹೆಣ್ಣು, ಗಂಡು ಎಂಬ ಎರಡೇ ಆಯ್ಕೆಗಳಿದ್ದಾಗ ಲೈಂಗಿಕ ಅಲ್ಪಸಂಖ್ಯಾತರಿಗೆ ಒಂದು ಗುರುತು ಇಲ್ಲದ ಸಂದರ್ಭದಲ್ಲಿ ತಮ್ಮವರಿಗಾಗಿ ಹೋರಾಟ ಮಾಡಿದ ಶ್ರೀಗೌರಿ ಸಾವಂತ್ ಅವರ ಕಥೆಯಿದು. ಟ್ರಾನ್ಸ್‌ಜೆಂಡರ್ ಸಮುದಾಯದ ಹಕ್ಕುಗಳ ಕಾನೂನು ಮಾನ್ಯತೆಗಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಗೆದ್ದ ಶ್ರೀಗೌರಿ ಸಾವಂತ್ ಅವರ ಜೀವನಾಧಾರಿತ ಕಥೆ. 2014 ರಲ್ಲಿ, ಸುಪ್ರೀಂ ಕೋರ್ಟ್ ಟ್ರಾನ್ಸ್‌ಜೆಂಡರ್ ಸಮುದಾಯವನ್ನು "ತೃತಿಯ ಲಿಂಗ" ಎಂದು ಗುರುತಿಸಿತು. ಇದಕ್ಕೆ ಗೌರಿ ಸಾವಂತ್ ಕೂಡ ಕಾರಣ.
ಸೀರಿಸ್‌ನಲ್ಲಿ ಎಲ್ಲವನ್ನೂ ಹೇಳಲಾಗಿದೆಯೇ?
ತಾಲಿ ಸೀರಿಸ್‌ನಲ್ಲಿ ಗೌರಿಯವರ ಬಾಲ್ಯ, ತಂದೆಯೊಂದಿಗಿನ ಸಂಬಂಧದಲ್ಲಿನ ಒತ್ತಡ, ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಳ್ಳುವುದು, ತಾಯ್ತನದ ಹಂಬಲ, ಅದಕ್ಕಿಂತ ಹೆಚ್ಚಾಗಿ ತನ್ನವರಿಗಾಗಿ ಕಾನೂನು ಹಕ್ಕುಗಳಿಗಾಗಿ ಆಕೆ ನಡೆಸುವ ಹೋರಾಟವನ್ನು ತೋರಿಸಲಾಗಿದೆ. ಟ್ರಾನ್ಸ್‌ಜೆಂಡರ್ ಗಳನ್ನು ದೇಶದ ನಾಗರಿಕರಾಗಿ ಗುರುತಿಸಲ್ಪಡಬೇಕು ಮತ್ತು ಅವರಿಗೆ ಅರ್ಹ ಗೌರವ ನೀಡಬೇಕು ಎಂದು ಸುಪ್ರೀಂಕೋರ್ಟ್ ಕದ ತಟ್ಟುವ ಗೌರಿಯವರ ಕಥೆಯನ್ನು ತಿಳಿಸಿದ್ದಾರೆ.

ನಟನೆ ಹೇಗಿದೆ..?
ವೆಬ್ ಸರಣಿಯ ತುಂಬಾ ನಟಿ ಸುಶ್ಮಿತಾ ಸೇನ್ ಆವರಿಸಿಕೊಂಡಿದ್ದಾರೆ. ಗಣೇಶ್ ಆಗಿಯೂ, ಗೌರಿಯಾಗಿಯೂ ಸುಶ್ಮಿತಾ ನಿಮ್ಮನ್ನು ಕಾಡಬಲ್ಲರು. 'ತಾಲಿ' ಮೂಲಕ ಸುಶ್ಮಿತಾ ಸೇನ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೆಲವೊಮ್ಮೆ ಗಟ್ಟಿ ದನಿಯ ಗಂಡಾಗಿ, ಕೆಲವೊಮ್ಮೆ ತಾಯಿಯಾಗಿ ಸಂತೈಸುವಾಗ ಆಕೆಯನ್ನೇ ನೊಡಬೇಕು ಎನ್ನಿಸುತ್ತದೆ. ಆಕೆಯ ಭಾವಾಭಿವ್ಯಕ್ತಿ, ಅವರ ಬಾಡಿ ಲಾಂಗ್ವೆಜ್, ನಡವಳಿಕೆ ಮತ್ತು ಮೇಕ್ಅಪ್ ಈ ಪಾತ್ರಕ್ಕೆ ಸರಿಯಾದ ಆಯ್ಕೆ ಸುಶ್ಮಿತಾ ಸೇನ್ ಅನಿಸದೆ ಇರದು.
ತಾಲಿಯ ಪಾಸಿಟಿವ್ ಅಂಶಗಳು
ತಾಲಿ ಸರಣಿಯಲ್ಲಿ ಗಣೇಶ್ ಬಾಲ್ಯದ ದಿನಗಳ ತಳಮಳ, ಕುಟುಂಬದೊಂದಿಗಿನ ಸಂಬಂಧಗಳ ಬಗ್ಗೆ ಚೆನ್ನಾಗಿ ತೋರಿಸಲಾಗಿದೆ. ಮಕ್ಕಳನ್ನು ಎಲ್ಲಿ ಬೇಕೋ ಅಲ್ಲಿ ಎಸೆದು ಹೋಗುವುದು, ಗೌರಿ ಅವುಗಳನ್ನು ದತ್ತು ತೆಗೆದುಕೊಳ್ಳುವ ಅಂಶಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಹಿಂದಿನ ದಿನಗಳಲ್ಲಿ ಟ್ರಾನ್ಸ್‌ಪೀಪಲ್‌ಗಳನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬುದನ್ನು ಹಲವು ದೃಶ್ಯಗಳು ಚಿತ್ರಿಸಿವೆ.
ತಾಲಿಯ ನೆಗೆಟಿವ್ ಅಂಶಗಳು
ತಾಲಿಯಲ್ಲಿ ಕೆಲವು ಅಂಶಗಳನ್ನು ಕಡೆಗಣಿಸಲಾಗಿದೆ. ಶ್ರೀಗೌರಿ ಸಾವಂತ್ ಅವರ ಹೋರಾಟದ ಬಹುತೇಕ ಭಾಗಗಳನ್ನು ಬಿಟ್ಟುಬಿಡಲಾಗಿದೆ. ಪೊಲೀಸರು, ಮಾಧ್ಯಮಗಳು ಮತ್ತು ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದ ಅವರು ಹೇಗೆ ಪ್ರಭಾವಿ ವ್ಯಕ್ತಿಯಾದರು ಎಂಬುದನ್ನು ತೋರಿಸಿಲ್ಲ. ಯಾವುದೇ ಹೋರಾಟಕ್ಕೂ ಪ್ರಾಮುಖ್ಯತೆ ನೀಡಿಲ್ಲ. ಚಿಕಾಗೋದಲ್ಲಿ ಅವರು ಮಾತಾಡಿದ್ದು ಏನು ಎಂಬುದನ್ನು ತೋರಿಸಿಲ್ಲ. ಆಸ್ಪತ್ರೆಯಲ್ಲಿ ಕ್ಷಮೆ ಕೇಳದಿದ್ದರೆ ಬಟ್ಟೆ ಬಿಚ್ಚುವುದಾಗಿ ಹೆದರಿಸುವ ಅಂಶವನ್ನು ಸೇರಿಸುವ ಅವಶ್ಯಕತೆಯಿರಲಿಲ್ಲ.
ತಾಲಿ ಬಗ್ಗೆ ಕೊನೆಯ ಮಾತು
ತಾಲಿ ಈ ಸಮಯದಲ್ಲಿಯೂ ಕಾಡುವ ವೆಬ್ ಸರಣಿಯಾಗಿದೆ. 2014 ರಲ್ಲಿ ಸುಪ್ರೀಂ ಕೋರ್ಟ್ ಟ್ರಾನ್ಸ್‌ಜೆಂಡರ್ ಸಮುದಾಯವನ್ನು ತೃತಿಯ ಲಿಂಗ ಎಂದು ಗುರುತಿಸುವ ಮುನ್ನ ಅವರ ಸ್ಥಿತಿ ಹೇಗಿತ್ತು ಎಂಬ ಅಂಶಗಳ ಮೇಲೆ ಈ ಸರಣಿ ಬೆಳಕು ಚೆಲ್ಲುತ್ತದೆ. ಮಕ್ಕಳನ್ನು ದತ್ತು ತೆಗೆದುಕೊಳ್ಳಲು, ಮದುವೆಯಾಗಲು, ವಾಹನ ಚಲಾಯಿಸಲು ಅಥವಾ ಯಾವುದೇ ರೀತಿಯ ಸರ್ಕಾರಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿಯ ದರ್ಶನ ಮಾಡಿಸುತ್ತದೆ. ಸುಶ್ಮಿತಾ ಸೇನ್ ಅವರ ನಟನೆಗಾಗಿ ಈ ಸೀರಿಸ್ ಒಮ್ಮೆ ನೋಡಬಹುದು.


Click it and Unblock the Notifications











