Hanuman Review: ದೊಡ್ಡ ಚಿತ್ರಗಳಿಗೆ ಸೆಡ್ಡು ಹೊಡೆಯುತ್ತಿರುವ 'ಹನುಮಾನ್' ಕಥೆಯೇನು? ಇಲ್ಲಿದೆ ಕಂಪ್ಲೀಟ್ ರಿವ್ಯೂ
ತೆರೆಮೇಲೆ ಮ್ಯಾಜಿಕ್ ಮಾಡದ ಹೊರತು ಯಾವುದೇ ಸಿನಿಮಾ ಪ್ರೇಕ್ಷಕರ ಮನಗೆಲ್ಲುವುದಿಲ್ಲ. ಸ್ಟಾರ್ ಹೀರೊ, ಸ್ಟಾರ್ ಡೈರೆಕ್ಟರ್, ಭಾರೀ ಬಜೆಟ್ ಮಾತ್ರ ಒಂದು ಯಶಸ್ವಿ ಚಿತ್ರಕ್ಕೆ ಸಾಕಗಲ್ಲ. ಒಳ್ಳೆ ಕಥೆ, ಚಿತ್ರಕಥೆ, ಸನ್ನಿವೇಶಗಳು, ಅಭಿನಯ , ಹಾಡು ಹೀಗೆ ಸಾಕಷ್ಟು ಅಂಶಗಳು ಮುಖ್ಯವಾಗುತ್ತದೆ. ಸದ್ಯ ತೆಲುಗಿನ ಸಣ್ಣ ಚಿತ್ರವೊಂದು ದೊಡ್ಡ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿದೆ.
ಪ್ರಶಾಂತ್ ವರ್ಮ ನಿರ್ದೇಶನದಲ್ಲಿ ತೇಜ ಸಜ್ಜಾ ಹಾಗೂ ಅಮೃತಾ ಅಯ್ಯರ್ ನಟನೆಯ 'ಹನುಮಾನ್' ಸಿನಿಮಾ ಈಗ ಟಾಕ್ ಆಫ್ ದ ಟೌನ್ ಆಗಿದೆ. ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಕೂಡ 'ಹನುಮಾನ್' ಮುಂದೆ ಸಪ್ಪೆ ಎನಿಸಿಬಿಟ್ಟಿದೆ. ಉತ್ತರ ಭಾರತ, ಹಾಗೂ ವಿದೇಶಗಳಲ್ಲಿ ಈ ಫ್ಯಾಂಟಸಿ ಸೂಪರ್ ಹೀರೊ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಟಾಲಿವುಡ್ ಮಂದಿ ಕೂಡ ಇದರಿಂದ ದಂಗಾಗಿದ್ದಾರೆ.

ಸಣ್ಣ ಬಜೆಟ್‌ನಲ್ಲಿ ಒಂದು ಅದ್ಭುತ ದೃಶ್ಯಕಾವ್ಯ ಕಟ್ಟಿಕೊಟ್ಟು ಪ್ರಶಾಂತ್ ವರ್ಮ ಮತ್ತವರ ತಂಡ ಗೆದ್ದಿದೆ. ಆಂಧ್ರ, ತೆಲಂಗಾಣ ಸೇರಿದಂತೆ ಹಲವೆಡೆ 'ಹನುಮಾನ್' ಚಿತ್ರಕ್ಕೆ ಥಿಯೇಟರ್ ಕೊಡಲು ಕೆಲವರು ಹಿಂದೇಟು ಹಾಕಿದ್ದರು. ಆದರೆ ದೊಡ್ಡ ಸಿನಿಮಾಗಳನ್ನು ಹಿಂದಿಕ್ಕಿ ಈ ಸಣ್ಣ ಸಿನಿಮಾ ಅಬ್ಬರಿಸುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಚಿತ್ರ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ಅಷ್ಟಕ್ಕೂ ಈ ಚಿತ್ರದಲ್ಲಿ ಅಂಥಾದ್ದೇನಿದೆ? ಕಥೆಯೇನು? ಕಂಪ್ಲೀಟ್ ರಿವ್ಯೂ ಮುಂದೆ ಓದಿ.
'ಹನುಮಾನ್' ಕಥೆಯೇನು?
ಅಂಜನಾದ್ರಿ ಎನ್ನುವ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆಯಿದು. ಹನುಮಂತು (ತೇಜ ಸಜ್ಜಾ) ತನ್ನ ಊರಿನಲ್ಲಿ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ಕಾಲ ಕಳೆಯುತ್ತಿರುತ್ತಾನೆ. ಸಹೋದರಿ ಅಂಜಮ್ಮ (ವರಲಕ್ಷ್ಮಿ ಶರತ್ ಕುಮಾರ್) ಜೊತೆಗೆ ಆತನ ಜೀವನ ಸಾಗುತ್ತಿರುತ್ತದೆ. ಮೀನಾಕ್ಷಿ (ಅಮೃತ ಅಯ್ಯರ್) ಅಂದ್ರೆ ಬಾಲ್ಯದಿಂದಲೂ ಹನುಮಂತುಗೆ ಇಷ್ಟ. ಆದರೆ ಅದನ್ನು ಆಕೆಗೆ ಹೇಳಲು ತಿಣುಕಾಡುತ್ತಿರುತ್ತಾನೆ. ಇನ್ನು ಅಂಜನಾದ್ರಿಯಲ್ಲಿ ಪಾಳೇಗಾರ ಜಗಪತಿ ಆರ್ಭಟ ಜೋರಾಗಿರುತ್ತದೆ. ಮತ್ತೊಂದು ಕಡೆ ಮೈಕೆಲ್ (ವಿನಯ್ ರಾಯ್) ಬಾಲ್ಯದಿಂದಲೂ ಸೂಪರ್ ಹೀರೋ ಆಗಬೇಕೆಂದು ಕನಸು ಕಾಣುತ್ತಿರುತ್ತಾನೆ. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾನೆ.
ಒಮ್ಮೆ ಸಂಕಷ್ಟಕ್ಕೆ ಸಿಲುಕುವ ಮೀನಾಕ್ಷಿಯನ್ನು ರಕ್ಷಿಸಲು ಹೋಗಿ ಹನುಮಂತು ಪ್ರಪಾತದಲ್ಲಿ ಬೀಳುತ್ತಾನೆ. ಅಲ್ಲಿ ಆತನಿಗೆ ರುಧಿರ ಮಣಿ ಸಿಗುತ್ತದೆ. ಅದರಿಂದ ಆತನಿಗೆ ಸೂಪರ್ ಪವರ್ ಬರುತ್ತದೆ. ಅಲ್ಲಿಂದ ಮುಂದೆ ಹನುಮಂತು ಏನೆಲ್ಲಾ ಮಾಡ್ತಾನೆ? ಆತನಿಗಿರುವ ಸೂಪರ್ ಪವರ್ ಮೇಲೆ ಮೈಕೆಲ್ ಕಣ್ಣುಬಿದ್ದು ಏನೆಲ್ಲಾ ಆಗುತ್ತದೆ? ಪಾಳೇಗಾರ ಗಜಪತಿಗೆ ಹನುಮಂತು ಹೇಗೆ ಬುದ್ಧಿ ಕಲಿಸುತ್ತಾನೆ? ಕೊನೆಗೆ ರುಧಿರ ಮಣಿ ಏನಾಗುತ್ತದೆ? ಎನ್ನುವುದನ್ನೆಲ್ಲಾ ತೆರೆಮೇಲೆ ನೋಡಬೇಕು.
ಸಿನಿಮಾ ಹೇಗಿದೆ?
'ಹನುಮಾನ್' ಕಥೆ ಹಳೆಯದ್ದೇ ಅನಿಸಿದರೂ ಟ್ರೀಟ್‌ಮೆಂಟ್ ಹೊಸದಾಗಿದೆ. ನಾಯಕನಿಗೆ ಸೂಪರ್ ಪವರ್ ಸಿಗುವುದು, ಅದರಿಂದ ಆತ ತನ್ನವರನ್ನು ರಕ್ಷಿಸುವುದು, ಶತ್ರುಗಳನ್ನು ನಾಶ ಮಾಡುವುದನ್ನು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ನಮ್ಮ ಪುರಾಣಗಳಲ್ಲಿರುವ ಈ ಸೂಪರ್ ಪವರ್ ಕಾನ್ಸೆಪ್ಟ್ ಆಧರಿಸಿ ಹಾಲಿವುಡ್ ಮಂದಿ ಕೂಡ ಸಿನಿಮಾಗಳನ್ನು ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನಗಳು ನಮ್ಮಲ್ಲಿ ನಡೆಯುತ್ತದೆ.
ಸಿನಿಮಾ ಬಹಳ ರೋಚಕವಾಗಿಯೇ ಶುರುವಾಗುತ್ತದೆ. ಆದರೆ ನಡುವೆ ಕೊಂಚ ಸೀದಾಸಾದಾ ಎನಿಸಿಬಿಡುತ್ತದೆ. ಇಂಟರ್‌ವಲ್ ಬಳಿಕ ಮತ್ತೆ ಸಿನಿಮಾ ಗ್ರಾಫ್ ಏರುತ್ತದೆ. ಹನುಮಂತುಗೆ ಸೂಪರ್ ಪವರ್ ಸಿಕ್ಕಿದ ಮೇಲೆ ರೋಚಕ ಸನ್ನಿವೇಶಗಳು ತೆರೆಮೇಲೆ ಬರುತ್ತದೆ. ಮಕ್ಕಳಿಗಂತೂ ಇಂತಹ ಸನ್ನಿವೇಶಗಳು ಬಹಳ ಇಷ್ಟವಾಗುತ್ತದೆ. ಕ್ಲೈಮ್ಯಾಕ್ಸ್ ವೇಳೆಗೆ ಸಿನಿಮಾ ಮತ್ತಷ್ಟು ರೋಚಕಘಟ್ಟ ತಲುಪುತ್ತದೆ. ಇನ್ನು ಹನುಮಂತ ತನಗೆ ಸಿಕ್ಕ ಸೂಪರ್ ಪವರ್‌ನಿಂದ ಮಾಡುವ ಚಮತ್ಕಾರಗಳು ಚಿಕ್ಕ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ.

ಹನುಮಂತ ಅನಾಯಾಸವಾಗಿ ದೊಡ್ಡ ಬಂಡೆಕಲ್ಲನ್ನು ಎತ್ತುವುದು, ಮರದ ಬೇರಿನಿಂದ ಆಗಸದಲ್ಲಿ ಹಾರುವ ಹೆಲಿಕ್ಯಾಪ್ಟರ್ ಹಿಡಿದು ನಿಲ್ಲಿಸುವಂತಹ ಸನ್ನಿವೇಶಗಳು ಸಖತ್ ಕಿಕ್ ಕೊಡುತ್ತದೆ. ಕೇವಲ 25 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಭುತವಾಗಿ ಗ್ರಾಫಿಕ್ಸ್ ಬಳಿಕ ಸಿನಿಮಾವನ್ನು ಕಟ್ಟಿಕೊಟ್ಟಿರುವುದು ಸೂಪರ್ ಎನಿಸುತ್ತದೆ. ಕೊನೆ 20 ನಿಮಿಗಳಂತೂ ಪ್ರೇಕ್ಷಕರು ಅದ್ಭುತ ಅನುಭನ ನೀಡುತ್ತದೆ. ನಿರ್ದೇಶಕ ಪ್ರಶಾಂತ್ ವರ್ಮ ಬಹಳ ದೊಡ್ಡಮಟ್ಟದಲ್ಲಿ ಹನುಮಾನ್ ಸರಣಿ ಸಿನಿಮಾ ಮಾಡುತ್ತಿದ್ದಾರೆ. ಅದರ ಮೊದಲ ಭಾಗವಾಗಿ 'ಹನುಮಾನ್' ಸಿನಿಮಾ ಮೂಡಿ ಬಂದಿದೆ ಅಷ್ಟೇ.
ರಾಮನಿಗೆ ಹನುಮಂತ ಕೊಟ್ಟ ಮಾತೇನು? ಎನ್ನುವ ಕುತೂಹಲಕಾರಿ ಪ್ರಶ್ನೆಯೊಂದಿಗೆ ಕ್ಲೈಮ್ಯಾಕ್ಸ್‌ನಲ್ಲಿ ಸೀಕ್ವೆಲ್ ಘೋಷಣೆ ಮಾಡಲಾಗಿದೆ. 'ಜೈ ಹನುಮಾನ್' ಟೈಟಲ್‌ನಲ್ಲಿ ಸರಣಿಯ ಮುಂದಿನ ಸಿನಿಮಾ ತೆರೆಗೆ ಬರಲಿದೆ. ಆ ಸಿನಿಮಾ ಮತ್ತಷ್ಟು ದೊಡ್ಡದಾಗಿರುತ್ತದೆ ಎನ್ನುವ ಸುಳಿವು ಸಿಕ್ಕಿದ್ದು ಮುಂದಿನ ವರ್ಷ 'ಜೈ ಹನುಮಾನ್' ತೆರೆಗೆ ಬರಲಿದೆ.
ಕಲಾವಿದರ ನಟನೆ
ಹನುಮಂತು ಪಾತ್ರದಲ್ಲಿ ತೇಜಾ ಸಜ್ಜಾ ಇಷ್ಟವಾಗುತ್ತಾರೆ. ಸ್ಟಾರ್ ನಟರಿಗೆ ಇಂತಹ ಸೂಪರ್ ಪವರ್ ಸಿನಿಮಾ ರೊಟೀನ್ ಅನಿಸಿಬಿಡಬಹುದು. ಆದರೆ ತೇಜ ಸಜ್ಜಾ ರೀತಿಯ ಯುವ ನಟನಿಗೆ ಸೂಪಪರ್ ಪವರ್ ಸಿಕ್ಕಿದರೆ ಆತ ಮಾಡುವ ಸಾಹಸಗಳು ನೋಡುಗರಿಗೆ ಮಜಾ ಕೊಡುತ್ತದೆ. ಅದೇ ಕಾರಣಕ್ಕೋ ಏನೋ ನಿರ್ದೇಶಕರು ಆತನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ನಾಯಕಿಯಾಗಿ ಬೆಂಗಳೂರು ಹುಡುಗಿ ಅಮೃತಾ ಅಯ್ಯರ್ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರ ಲವ್ ಸ್ಟೋರಿ ಕಾಮನ್ ಎನಿಸಿಬಿಡುತ್ತದೆ. ಇನ್ನುಳಿದಂತೆ ವರಲಕ್ಷ್ಮೀ ಒಂದು ಪವರ್‌ಫುಲ್ ಸೀನ್‌ನಲ್ಲಿ ಅಬ್ಬರಿಸಿದ್ದಾರೆ. ಆದರೆ ವಿಲನ್ ಆಗಿ ವಿನಯ್ ರೈ ಅಷ್ಟಾಗಿ ಸಪ್ಪೆ ಎನಿಸಿಬಿಡುತ್ತಾರೆ. ಇನ್ನುಳಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಟೆಕ್ನಿಕಲಿ ಸಿನಿಮಾ ಹೇಗಿದೆ?
ಕೆಲವರು ಹನುಮಾನ್ ಸಿನಿಮಾ ಗ್ರಾಫಿಕ್ಸ್ ತೋರಿಸಿ ಪ್ರಭಾಸ್ ನಟಿಸಿದ 'ಆದಿಪುರುಷ್' ಚಿತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ. ನಿಜವಾಗಿಯೂ ಚಿತ್ರದ ಗ್ರಾಫಿಕ್ಸ್ ಹುಬ್ಬೇರಿಸುವಂತಿದೆ. ಇಷ್ಟು ಕಡಿಮೆ ಬಜೆಟ್‌ನಲ್ಲಿ ಈ ಔಟ್‌ಫುಟ್ ಸೂಪರ್ ಅಂತ್ಲೇ ಹೇಳಬೇಕು. ಚಿತ್ರಕ್ಕೆ ಅನುದೀಪ್ ದೇವ್, ಗೌರಿಹರಿ, ಕೃಷ್ಣ ಸೌರಭ್ ಸಂಗೀತ ಮತ್ತೊಂದು ಹೈಲೆಟ್. ಅದರಲ್ಲೂ ರಾಮಧೂತನ ಸ್ತ್ರೋತ್ರ, ಹನುಮಾನ ಚಾಲೀಸ ಥಿಯೇಟರ್‌ನಲ್ಲಿ ಮೈ ಜುಮ್ ಎನಿಸುವ ಅನುಭವ ನೀಡುತ್ತದೆ. ಸ್ಟಾರ್ ಕಲಾವಿದರಿಲ್ಲದೇ, ಸಣ್ಣ ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇಂತಾದೊಂದು ಸಿನಿಮಾ ಕಟ್ಟಿಕೊಟ್ಟಿರುವ ಚಿತ್ರತಂಡದ ಶ್ರಮವನ್ನು ಮೆಚ್ಚಲೇಬೇಕು.
ಕೊನೆ ಮಾತು
ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟರೆ 'ಹನುಮಾನ್' ನಿಜಕ್ಕೂ ಒಂದೊಳ್ಳೆ ಪ್ರಯತ್ನ. ಚಿಕ್ಕ ಮಕ್ಕಳಂತೂ ಸಿನಿಮಾವನ್ನು ಸಖತ್ ಎಂಜಾಯ್ ಮಾಡುತ್ತಾರೆ. ಕಥೆ ಹಳೆಯದು ಅನಿಸಿದರೂ ಸಿನಿಮಾ ಕೊಟ್ಟ ಕಾಸಿಗೆ ಮೋಸವಿಲ್ಲ. ಸಂಕ್ರಾಂತಿ ಸಂಭ್ರಮದಲ್ಲಿ ಫ್ಯಾಮಿಲಿ ಸಮೇತ ಒಮ್ಮೆ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.


Click it and Unblock the Notifications











