twitter
    For Quick Alerts
    ALLOW NOTIFICATIONS  
    For Daily Alerts

    The Great Indian Kitchen Review: ಅಡುಗೆಮನೆಯಲ್ಲಿ ಬೆತ್ತಲಾಗುವ 'ಗಂಡಸು'

    |

    ನಾವೆಲ್ಲರೂ ಪ್ರತಿದಿನ ಕಾಣುವ, ನಮ್ಮ ಕಣ್ಣೇದುರೇ ನಡೆವ 'ಸಾಮಾನ್ಯ' ಸಂಗತಿ ಎಂದು ನಂಬಿ ತಲ-ತಲಾಂತರಗಳಿಂದ ಮಾಡಿಕೊಂಡು ಬರುತ್ತಿರುವ ಶೋಷಣೆಯನ್ನು ಧುತ್ತನೆ ಮುಖಕ್ಕೆ ರಾಚುತ್ತದೆ ಮಲಯಾಳಂ ಸಿನಿಮಾ 'ದಿ ಗ್ರೇಟ್ ಇಂಡಿಯನ್ ಕಿಚನ್'.

    ಜೋ ಬೇಬಿ ನಿರ್ದೇಶಿಸಿರುವ 'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾ ನಿಜಕ್ಕೆ ಬಹು ಹತ್ತಿರದಲ್ಲಿದೆ. 'ಹೊಟ್ಟೆ, ಗಂಡಿನ ಹೃದಯದ ದಾರಿ' ಎಂಬ ಗಾದೆಯೊಂದಿದೆ. ಆದರೆ ಆ ಹೊಟ್ಟೆ ತಣ್ಣಗೆ ಮಾಡಲು ಮಹಿಳೆಯರು ಪಡುವ ಶ್ರಮವನ್ನು ಈ ಸಿನಿಮಾ ಇಂಚಿಂಚೂ ತೋರಿಸುತ್ತದೆ.

    ಈ ಸಿನಿಮಾದಲ್ಲಿ ನಾಯಕ, ನಾಯಕಿಗೆ ಹೆಸರೇ ಇಲ್ಲ. ಸಿನಿಮಾದ ನಾಯಕ, ನಾಯಕಿ ಎಲ್ಲ ಜಾತಿ, ಧರ್ಮದ ಮಧ್ಯಮ, ಬಡವರ್ಗದ ಮನೆಯ ಗಂಡು-ಹೆಣ್ಣನ್ನು ಪ್ರತಿನಿಧಿಸುವ ಕಾರಣ ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಿಗೆ ಹೆಸರನ್ನೇ ಇಡಲಾಗಿಲ್ಲ.

    ಮಹಿಳಾ ಶೋಷಣೆ ವಿರುದ್ಧ ಈಗಾಗಲೇ ಹಲವಾರು ಸಿನಿಮಾಗಳು ಬಂದಿವೆ, ಗಮನ ಸೆಳೆದಿವೆ. ಆದರೆ ಅದೆಲ್ಲವಕ್ಕಿಂತಲೂ ತುಸು ಎತ್ತದಲ್ಲಿ ನಿಲ್ಲುತ್ತದೆ 'ದಿ ಗ್ರೇಟ್ ಇಂಡಿಯನ್ ಕಿಚನ್' ಅದಕ್ಕೆ ಕಾರಣ ಸಿನಿಮಾದ ಕತೆಗಿರುವ ವಿಶಾಲ ವ್ಯಾಪ್ತಿ. ಪ್ರತಿ ಮನೆಯಲ್ಲೂ ನಡೆವ ನಾವೆಲ್ಲರೂ ಅಲಕ್ಷಿಸಿರುವ ಸಾಮಾನ್ಯ ವಿಷಯವನ್ನೇ ಪ್ರೇಕ್ಷಕನ ಎದುರು ಇಟ್ಟಿದ್ದಾರೆ ನಿರ್ದೇಶಕ ಜೋ ಬೇಬಿ. ಸೂಕ್ಷ್ಮ ಸ್ವಭಾವದ ಗಂಡಸರಿಗೆ ಈ ಸಿನಿಮಾ ನೋಡಿ ಅಪರಾಧ ಭಾವ ಕಾಡುವುದು ಖಂಡಿತ.

    ಅಡುಗೆ ಮನೆಗೂ ಗಂಡಿಗೂ ಇರುವ 'ಅಂತರ' ಎಷ್ಟು?

    ಅಡುಗೆ ಮನೆಗೂ ಗಂಡಿಗೂ ಇರುವ 'ಅಂತರ' ಎಷ್ಟು?

    ಡೈನಿಂಗ್ ಟೇಬಲ್‌ ಮೇಲೆ ಕೂರುವ ಗಂಡಸಿಗೂ, ಪಕ್ಕದಲ್ಲೇ ಇರುವ ಅಡುಗೆ ಮನೆಗೂ ಇರುವ 'ಅಂತರ'ವನ್ನು ತೋರಿಸುತ್ತದೆ ಈ ಸಿನಿಮಾ. ಕುಟುಂಬ ಮೌಲ್ಯ, ಸಂಪ್ರದಾಯದ ಹೆಸರಲ್ಲಿ ಹೆಣ್ಣಿನ ಮೇಲೆ ನಡೆಸಲಾಗುತ್ತಿರುವ ಶೋಷಣೆಯನ್ನು ಬಯಲು ಮಾಡುತ್ತದೆ 'ದಿ ಗ್ರೇಟ್ ಇಂಡಿಯನ್ ಕಿಚನ್'. ಕಾಫಿ ಕಪ್ ಅನ್ನು ಸಿಂಕ್ ನಲ್ಲಿ ಇಟ್ಟು ಹೋಗುವ ತೀರಾ ಸಾಮಾನ್ಯ ದೃಶ್ಯವೂ ಸಹ ಪುರುಷ ಪ್ರೇಕ್ಷಕನಿಗೆ 'ಗಿಲ್ಟ್' ಕಾಡುವಂತೆ ಮಾಡಿಬಿಡುತ್ತದೆ. ಇಂಥಹಾ ಹಲವು ದೃಶ್ಯಗಳು ಸಿನಿಮಾದಲ್ಲಿವೆ.

    ಬಹಳ ಸರಳವಾದ ಕತೆ

    ಬಹಳ ಸರಳವಾದ ಕತೆ

    ಸಾಮಾನ್ಯ ಕುಟುಂಬದ ಯುವತಿಯೊಬ್ಬಾಕೆ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾಳೆ. ಅಲ್ಲಿ ಆಕೆ ಅಡುಗೆ ಮಾಡುವ, ಮನೆ ತೊಳೆಯುವ, ಕಸ ಗುಡಿಸುವ, ಬಟ್ಟೆ ಒಗೆಯುವ ಇತರೆ ಕೆಲಸಗಳನ್ನು ಮಾಡುತ್ತಿರುತ್ತಾಳೆ. ಆರಂಭದಲ್ಲಿ ನಗು-ನಗುತ್ತಲೇ ಎಲ್ಲ ಕೆಲಸಗಳನ್ನು ಮಾಡುವ ಯುವತಿಗೆ ದಿನಗಳೆದಂತೆ ತಾನಿಲ್ಲಿ ಗುಲಾಮಳು ಎಂಬುದು ಅರಿವಾಗುತ್ತಾ ಹೋಗುತ್ತದೆ, ಕೊನೆಗೊಂದು ದಿನ ಆಕೆ ಧಿಕ್ಕರಿಸಿ ಮನೆಯಿಂದ ಹೊರನಡೆಯುತ್ತಾಳೆ.

    ವಾಚ್ಯವಲ್ಲದ ಸಿನಿಮಾ

    ವಾಚ್ಯವಲ್ಲದ ಸಿನಿಮಾ

    ಮಹಿಳಾ ಶೋಷಣೆ ವಿರುದ್ಧ ಸಿನಿಮಾ ಎಂದ ಮಾತ್ರಕ್ಕೆ ಸಿನಿಮಾದಲ್ಲಿ ಭಾಷಣಗಳು, ಮಹಿಳಾ ಪೀಡಕ ಪುರುಷ ಪಾತ್ರಗಳು ಇಲ್ಲ.'ಫೆಮಿನಿಸ್ಟ್' ಮಹಿಳಾ ಪಾತ್ರಗಳೂ ಇಲ್ಲ. ಸಿನಿಮಾದಲ್ಲಿ ಸಂಭಾಷಣೆ ಅತಿ ವಿರಳವಾಗಿದೆ. ಪತಿ ಪಾತ್ರಧಾರಿ ಸಹ ಪತ್ನಿ ಪೀಡನೆ ಮಾಡುವುದಿಲ್ಲ. ಬದಲಿಗೆ ದೃಶ್ಯಗಳ ಮೂಲಕ, ಪಾತ್ರಗಳ ವರ್ತನೆ ಮೂಲಕ ತಾನು ಹೇಳಬೇಕೆಂದುಕೊಂಡ ವಿಷಯವನ್ನು ದಾಟಿಸಿದ್ದಾರೆ ನಿರ್ದೇಶಕ ಜೋ ಬೇಬಿ.

    ನಿಮಿಷ ಸಜಯನ್ ಅಭಿನಯ ಅದ್ಭುತ

    ನಿಮಿಷ ಸಜಯನ್ ಅಭಿನಯ ಅದ್ಭುತ

    ನಾಯಕಿ ಪಾತ್ರಧಾರಿ ನಿಮಿಷ ಸಜಯನ್, ನಾಯಕ ಸೂರಜ್ ವೆಂಜರಮೂಡು ಇಬ್ಬರೂ ಅದ್ಭುತವಾಗಿ ನಟಿಸಿದ್ದಾರೆ. ನಾಯಕಿ ನಿಮಿಷ ಸಜಯನ್ ನಟನೆ ಅತ್ಯಂತ ಸಹಜವಾಗಿದೆ. ಇಡೀಯ ಸಿನಿಮಾ ಯಾವುದೊ ನಿಜವಾದ ಮನೆಯಲ್ಲಿ ಕ್ಯಾಮೆರಾ ಇಟ್ಟು ತೆಗೆದಿರುವಂತೆ ಅತ್ಯಂತ ಸಹಜವಾಗಿದೆ. ಸಿನಿಮಾದ ಕ್ಯಾಮೆರಾ ಕೆಲಸ ಮತ್ತು ಹಿನ್ನೆಲೆ ಸಂಗೀತವಂತೂ ಅದ್ಭುತ. ಬಾಣಲೆಯ ಎಣ್ಣೆ, ಕಾಯಿ ತುರಿವಾಗ ಉಂಟಾಗುವ ಶಬ್ದ, ಅಡುಗೆ ಮಾಡುವಾಗ ಉಂಟಾಗುವ ಇತರೆ ಶಬ್ದಗಳು ಸಿನಿಮಾ ನೋಡುವಾಗ ಹೊಸದೇ ಅರ್ಥ ತಾಳುತ್ತವೆ. ಕೇವಲ ಕ್ಯಾಮೆರಾ ಕೋನದ ಬದಲಾವಣೆಯಿಂದ ಸಾಮಾನ್ಯ ದೃಶ್ಯಕ್ಕೆ ವಿಶೇಷ ಅರ್ಥ ಕಲ್ಪಿಸಿದ್ದಾರೆ ನಿರ್ದೇಶಕ ಜೋ ಬೇಬಿ.

    ಕಡ್ಡಾಯವಾಗಿ ನೋಡಲೆ ಬೇಕಾದ ಸಿನಿಮಾ

    ಕಡ್ಡಾಯವಾಗಿ ನೋಡಲೆ ಬೇಕಾದ ಸಿನಿಮಾ

    ತಮ್ಮ ಸೂಕ್ಷ್ಮ ಸಿನಿಮಾಗಳಿಂದಾಗಿ ಜಗತ್ತನ್ನು ಸೆಳೆದಿರುವ ಮಲಯಾಳಂ ಸಿನಿಮಾ ರಂಗ 'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾದಿಂದ ತಾನೇನು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದೆ. 'ದಿ ಗ್ರೇಟ್ ಇಂಡಿಯನ್ ಕಿಚನ್' ಕಡ್ಡಾಯವಾಗಿ ನೋಡಲೇ ಬೇಕಾದ ಸಿನಿಮಾ.

    English summary
    The Great Indian Kitchen Malayalam movie review. Movie directed by Joe Baby.
    Monday, February 1, 2021, 15:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X