Jolly LLB 3 Review ; ಅಕ್ಷಯ್ ಕುಮಾರ್ VS ಅರ್ಷದ್ ವಾರ್ಸಿ, ಜಾದೂ ಮಾಡ್ತಾನಾ ಜಾಲಿ ? ಹೇಗಿದೆ ಸಿನಿಮಾ. ಇಲ್ಲಿದೆ ವಿಮರ್ಶೆ

Rating:
3.5/5
Star Cast: ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ, ಸೌರಭ್ ಶುಕ್ಲಾ, ಗಜರಾಜ್ ರಾವ್, ಸೀಮಾ ಬಿಸ್ವಾಸ್, ರಾಮ್ ಕಪೂರ್, ಹುಮಾ ಖುರೇಶಿ, ಅಮೃತಾ ರಾವ್ ಮುಂತಾದವರು
Director: ಸುಭಾಷ್ ಕಪೂರ್

ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಒಂದಾದ ಮೇಲೊಂದು ಗೆಲುವನ್ನೂ ಕಂಡವರು ಅಕ್ಷಯ್ ಕುಮಾರ್. ಆದರೆ.. ಕೊರೊನಾ ಕರಿನೆರಳು ಸರಿದ ಬಳಿಕ, ಅಕ್ಷಯ್ ಕುಮಾರ್ ಮಾಡಿದ್ದೆಲ್ಲವೂ ಪರಮ ತೋಪು ಸಿನಿಮಾಗಳೇ. ಕೊರೊನಾ ನಂತರ ಅಕ್ಷಯ್ ಕುಮಾರ್ ಅಭಿನಯದ ಹನ್ನೆರಡಕ್ಕಿಂತ ಅಧಿಕ ಸಿನಿಮಾಗಳು ಬಂದಿವೆ. ಈ ಹನ್ನೆರಡು ಸಿನಿಮಾಗಳಲ್ಲಿ ಪ್ರೇಕ್ಷಕರಿಂದ ಬ್ಲಾಕ್ ಬಸ್ಟರ್ ರೆಸ್ಫಾನ್ಸ್ ಪಡೆದಿದ್ದು ಕೇವಲ ಸೂರ್ಯವಂಶಿ ಚಿತ್ರ ಮಾತ್ರ.

''ಸೂರ್ಯವಂಶಿ'' ಹೊರತು ಪಡಿಸಿದರೆ ''ಓ ಮೈ ಗಾಡ್-02'' ಮಾತ್ರ ಗೆಲುವನ್ನು ಕಂಡಿದೆ. ಮಿಕ್ಕಂತೆ ಅಕ್ಷಯ್ ಕುಮಾರ್‌ ಗೆ ಸಿಕ್ಕಿದ್ದು ಸೋಲು ಮತ್ತು ಹಿನ್ನೆಡೆ. ಇನ್ನೂ ಈ ವರ್ಷ ಅಕ್ಷಯ್ ಕುಮಾರ್ ಅಭಿನಯದ ''ಸ್ಕೈಪೋರ್ಸ್''.. ''ಕೇಸರಿ 2''.. ''ಹೌಸ್‌ಫುಲ್ 5''.. ಚಿತ್ರಗಳು ತೆರೆಗೆ ಬಂದಿವೆ. ಆ ಪೈಕಿ ಗಮನ ಸೆಳೆದಿದ್ದು ''ಹೌಸ್‌ಫುಲ್ 5'' ಮಾತ್ರ. ಹೀಗಾಗಿಯೇ ಒಂದು ಕಾಲದಲ್ಲಿ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್ ಈಗೀಗ ಅನ್‌ಲಕ್ಕಿ ಕುಮಾರ್ ಎಂದು ಕರೆಯಲು ಶುರು ಮಾಡಿದೆ.

The Verdict Is In  Jolly LLB 3 Blends Mirth  Message  and Masterful Acting

ಹೀಗಿರುವಾಗ ಈ ವಾರ (ಸೆಪ್ಟೆಂಬರ್ 19) ಅಕ್ಷಯ್ ಕುಮಾರ್ ಅಭಿನಯದ ''ಜಾಲಿ ಎಲ್‌ಎಲ್‌ಬಿ 3'' ಚಿತ್ರ ತೆರೆಗೆ ಬಂದಿದೆ. ಈ ಚಿತ್ರದಲ್ಲಿ ಓರಿಜನಲ್ ಜಾಲಿ ಅರ್ಷದ್ ವಾರ್ಸಿ ಕೂಡ ಅಕ್ಷಯ್ ಕುಮಾರ್‌ಗೆ ಜೊತೆಯಾಗಿದ್ದಾರೆ. ಈ ಹಿನ್ನೆಲೆ ಚಿತ್ರದ ಮೇಲೆ ನಿರೀಕ್ಷೆಗಳಿವೆ. ಈ ನಿರೀಕ್ಷೆಯ ಪರೀಕ್ಷೆಯಲ್ಲಿ ಈ ಚಿತ್ರ ಪಾಸಾಯ್ತಾ..? ಚಿತ್ರ ಹೇಗಿದೆ..? ಚಿತ್ರದ ಕಥಾ ಹಂದರವೇನು..? ಎಂದು ತಿಳಿಯಲು ಮುಂದೆ ಓದಿ.

ಕಥಾಹಂದರ

2013ರಲ್ಲಿ ತೆರೆಗೆ ಬಂದಿದ್ದ ''ಜಾಲಿ ಎಲ್‌ಎಲ್‌ಬಿ'' ಚಿತ್ರ ಹಿಟ್ & ರನ್ ಪ್ರಕರಣದ ಸುತ್ತ ಸುತ್ತಿತ್ತು. ಆ ನಂತರ 2017ರಲ್ಲಿ ಬಂದ ''ಜಾಲಿ ಎಲ್‌ಎಲ್‌ಬಿ 2'' ಚಿತ್ರದಲ್ಲಿ ನಕಲಿ ಎನ್‌ಕೌಂಟರ್ ಪ್ರಕರಣ ಇತ್ತು. ಮೊದಲ ಭಾಗದಲ್ಲಿ ಅರ್ಷದ್ ವಾರ್ಸಿ 'ಜಾಲಿ'ಯಾಗಿ ಮಿಂಚಿದ್ದರೆ ಎರಡನೇ ಭಾಗದಲ್ಲಿ ಅಕ್ಷಯ್ ಕುಮಾರ್ 'ಜಾಲಿ' ಪಾತ್ರವನ್ನು ನಿರ್ವಹಿಸಿದ್ದರು. ಈಗ ''ಜಾಲಿ ಎಲ್‌ಎಲ್‌ಬಿ 3'' ಸರದಿ.

ರಾಜಸ್ತಾನದ ರೈತ ಮತ್ತು ಕವಿ ರಾಜಾರಾಮ್ ಸೋಲಂಕಿ ಆತ್ಮಹತ್ಯೆಯಿಂದ ಈ 'ಜಾಲಿ'ಯ ಕಥೆ ಬೆಳ್ಳಿತೆರೆಯಲ್ಲಿ ಅನಾವರಣವಾಗುತ್ತೆ. ಚಿತ್ರತಂಡ ಆರಂಭದಲ್ಲಿ ಹೇಳಿದಂತೆ 2011ರಲ್ಲಿ ಉತ್ತರ ಪ್ರದೇಶದಲ್ಲಿ ಪರ್ಸೌಲ್ ಎಂಬ ಹಳ್ಳಿಯಲ್ಲಿ ನಡೆದ ಸತ್ಯಘಟನೆಯನ್ನಾಧರಿಸಿ ಮಾಡಲಾದ ಚಿತ್ರ ಇದು.

ಇಂತಹ ಕಥೆ ರಾಜಸ್ತಾನದಿಂದ ಆ ನಂತರ ದೆಹಲಿಗೆ ಬರುತ್ತೆ. ಇಲ್ಲಿ ದೆಹಲಿಯ ನ್ಯಾಯಾಲಯದಲ್ಲಿ ಬಿಡಾರ ಹೂಡಿರುವವರೇ ಈ ಇಬ್ಬರು 'ಜಾಲಿ'ಗಳು. ಆ ಪೈಕಿ 'ಜಾಲಿ ನಂ- 2' ಅಂದರೆ ಅಕ್ಷಯ್ ಕುಮಾರ್‌ಗೆ 'ಜಾಲಿ ನಂ 1' ಅಂದರೆ ಅರ್ಷದ್ ವಾರ್ಸಿಯ ಕಕ್ಷಿದಾರರನ್ನು ಹೈಜ್ಯಾಕ್ ಮಾಡುವುದೇ ಕೆಲಸ. ಈ ಹಿನ್ನೆಲೆ ಇವರಿಬ್ಬರ ನಡುವಿನ ಸಂಬಂಧ ಹಾವು-ಮುಂಗುಸಿಯಂತೆ ಇರುತ್ತೆ.

ಆದರೆ ಇದೇ ಸಮಯದಲ್ಲಿ ದುಡ್ಡಿಗಾಗಿ ಬಡಿದಾಡಿಕೊಳ್ಳುವ ಇವರಿಬ್ಬರ ಕಣ್ಣನ್ನು ರಾಜಾರಾಮ್ ಸೋಲಂಕಿ ಪ್ರಕರಣ ತೆರೆಸುತ್ತೆ. ರಾಜಾರಾಮ್ ಸೋಲಂಕಿ ಆತ್ಮಹತ್ಯೆಯ ಬೆನ್ನಲ್ಲೇ ಅವನ ಸೊಸೆ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತೆ. ಆತ್ಮಹತ್ಯೆ ಮಾಡಿಕೊಂಡ ರಾಜಾರಾಮ್ ಸೋಲಂಕಿಗೆ ನ್ಯಾಯ ಕೊಡಿಸಲು ಇಬ್ಬರು ಜಾಲಿಗಳು ಮುಂದಾಗುತ್ತಾರೆ.

The Verdict Is In  Jolly LLB 3 Blends Mirth  Message  and Masterful Acting

ಒಬ್ಬರ ಮೇಲೊಬ್ಬರು ಕೆಂಡ ಕಾರುತ್ತಿದ್ದ ಈ ಇಬ್ಬರು 'ಜಾಲಿ'ಗಳು ಮುಂದೆ ಜೊತೆಯಲ್ಲಿಯೇ ಕೆಲಸ ಮಾಡುತ್ತಾರಾ..? ಆತ್ಮಸಾಕ್ಷಿಯನ್ನು ಮಾರಿ ಕೇವಲ ಹಣದಾಸೆಗೆ ಕೆಲಸ ಮಾಡುವ ಇವರಿಬ್ಬರ ಮನಸು ಬದಲಾಗಿದ್ಹೇಗೆ..? ರಾಜಾರಾಮ್ ಸೋಲಂಕಿಗೆ ನ್ಯಾಯ ಕೊಡಿಸಲು ಮುಂದಾದಾಗ ಇಬ್ಬರಿಗೆ ಎದುರಾಗುವ ಸವಾಲುಗಳೇನು..? ರಾಜಾರಾಮ್ ಸೋಲಂಕಿ ಪರ ನ್ಯಾಯಾಲಯದಲ್ಲಿ ಇಬ್ಬರಲ್ಲಿ ವಾದ ಮಾಡುವವರು ಯಾರು..? ಪ್ರತಿವಾದ ಮಾಡುವವರು ಯಾರು..? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಿ ಪಡೆಯಬೇಕು.

ಅಭಿನಯ ಹೇಗಿದೆ..?

ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೇಳಿ ಕೇಳಿ ಇವರಿಬ್ಬರು ನಗಿಸುವುದರಲ್ಲಿ ಮುಂದು. ಕಣ್ಣೀರು ಹಾಕಿಸುವ ಸಾಮರ್ಥ್ಯ ಕೂಡ ಇವರಿಬ್ಬರ ಅಭಿನಯಕ್ಕಿದೆ. ಈ ಚಿತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಇಬ್ಬರು ಪ್ರದರ್ಶಿಸಿದ್ದಾರೆ. ಆದರೆ.. ಸೌರಭ್ ಶುಕ್ಲಾ ಈ ಚಿತ್ರದ ಬಹುದೊಡ್ಡ ಆಕರ್ಷಣೆ. ಹಿಂದಿನ ಎರಡು ಭಾಗದಂತೆ ಇಲ್ಲಿಯೂ ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೌರಭ್ ಶುಕ್ಲಾ ತಮ್ಮ ಪಂಚ್ ಡೈಲಾಗ್ ಮತ್ತು ಹಾವ ಭಾವದ ಮೂಲಕ ಕಚಗುಳಿ ಇಡುತ್ತಾರೆ.

'ಟೆಂಡರ್' ಆಪ್ ಮೂಲಕ ಸ್ಥಳಿಯ ಪೊಲೀಸ್ ಚಂಚಲ್ ( ಶಿಲ್ಪಾ ಶುಕ್ಲಾ- ಚಕ್ ದೇ ಇಂಡಿಯಾ ಖ್ಯಾತಿಯ ಬಿಂದಿಯಾ ಪಾತ್ರಧಾರಿ)ಅವರ ಜೊತೆ ಪ್ರೀತಿಯಲ್ಲಿ ಬೀಳುವುದು, ಟ್ರ್ಯಾಕ್‌ ಸೂಟ್‌ನಲ್ಲಿ ನ್ಯಾಯಾಲಯಕ್ಕೆ ಬರುವುದು, ಫಿಟ್ನೆಸ್ ಫ್ರೀಕ್ ಜಡ್ಜ್ ಆಗಿ ಪ್ರೋಟಿನ್ ಶೇಕ್‌ಗಳನ್ನು ಕುಡಿಯುವುದು, ಹೀಗೆ ಸುಂದರ್ ಲಾಲ್ ತ್ರಿಪಾಠಿಯ ಪಾತ್ರದಲ್ಲಿ ಸೌರಭ್ ಶುಕ್ಲಾ ಅವರ ಅಭಿನಯ ಅದ್ಭುತ.

ಭಾರತ ದೇಶದ ಪ್ರಗತಿಗೆ ಬಡತನವೇ ಅಡ್ಡಿ ಎಂಬ ಧೋರಣೆಯನ್ನು ಹೊಂದಿರುವ ಉದ್ಯಮಿ ಹರಿಭಾಯಿ ಖೈತಾನ್ ಪಾತ್ರದಲ್ಲಿ ಗಜರಾವ್ ರಾವ್ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಇನ್ನೂ ರಾಜಾರಾಮ್ ಸೋಲಂಕಿ ಪತ್ನಿ ಪಾತ್ರದಲ್ಲಿ ಸೀಮಾ ಬಿಸ್ವಾಸ್ ಕಾಣಿಸಿಕೊಂಡಿದ್ದು, ತಮ್ಮ ಕಣ್ಣುಗಳ ಮೂಲಕವೇ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶವನ್ನು ಇವರು ಇಲ್ಲಿ ಹೊರ ಹಾಕಿದ್ದಾರೆ. ಅದರಲ್ಲಿಯೂ ಪರಿಹಾರದ ರೂಪದಲ್ಲಿ 10 ಲಕ್ಷ ರೂ. ಚೆಕ್‌ ನೀಡಲು ಬಂದಾಗ ಆ ಚೆಕ್ ಹರಿದು ಮುಖಕ್ಕೆ ಎಸೆಯುವ ಸನ್ನಿವೇಶ ಮನಸಿಗೆ ನಾಟುತ್ತೆ. ಚಿತ್ರದಲ್ಲಿ ನಾಯಕಿಯರ ಪಾತ್ರವನ್ನು ನಿರ್ವಹಿಸಿರುವ ಹುಮಾ ಖುರೇಶಿ ಮತ್ತು ಅಮೃತಾ ರಾವ್ ಅವರಿಗೆ ಹೆಚ್ಚಿನ ಕೆಲಸ ಇಲ್ಲ.

ಪ್ಲಸ್ ಪಾಯಿಂಟ್ ಏನು..?

ಚಿತ್ರದಲ್ಲಿನ ಕಲಾವಿದರ ಅಭಿನಯ ಹೊರತು ಪಡಿಸಿದರೆ, ನಿರ್ದೇಶಕ ಸುಭಾಷ್ ಕಪೂರ್ ಬರೆದಿರುವ ಸಂಭಾಷಣೆಗಳು ಚಿತ್ರದ ಬಲವನ್ನು ಇನ್ನೂ ಹೆಚ್ಚಿಸಿವೆ. ಅದರಲ್ಲಿಯೂ ಕ್ಲೈಮ್ಯಾಕ್ಸ್‌ನಲ್ಲಿನ ಡೈಲಾಗ್‌ಗಳಿಗೆ ಶಿಳ್ಳೆ ಚಪ್ಪಾಳೆ ಬೀಳುತ್ತವೆ. ರಂಗರಾಜನ್ ಅವರ ಛಾಯಾಗ್ರಹಣ ಮತ್ತು ಮಂಗೇಶ್ ಅವರ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಇರುವ ಒಂದು ಹಾಡು ಚಿತ್ರದ ಕಥೆಗೆ ಪೂರಕವಾಗಿದೆ.

ಮೈನಸ್ ಪಾಯಿಂಟ್ ಏನು ?

ಚಿತ್ರದ ಕಥೆಯನ್ನು ಚೆನ್ನಾಗಿ ಹೆಣೆದಿರುವ ನಿರ್ದೇಶಕ ಸುಭಾಷ್ ಕಪೂರ್ ಈ ಬಾರಿ ಚಿತ್ರಕಥೆಯಲ್ಲಿ ಎಡವಿದ್ದಾರೆ. ಚಿತ್ರದ ಮೊದಲಾರ್ಧ ನಿಧಾನಗತಿಯಲ್ಲಿ ಸಾಗುತ್ತೆ. ಅಲ್ಲಲ್ಲಿ ತಾಳ್ಮೆಯ ಪರೀಕ್ಷೆಯನ್ನು ಮಾಡುತ್ತೆ. ಇನ್ನೂ ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಈ ಇಬ್ಬರ ಜಾಲಿಗಳ ಎದುರು ಒಬ್ಬ ಪ್ರಬಲ ಪ್ರತಿಸ್ಫರ್ಧಿ ಚಿತ್ರದಲ್ಲಿ ಬೇಕಿತ್ತು. ಮೊದಲ ಭಾಗದಲ್ಲಿ ಬೊಮನ್ ಇರಾನಿ, ಎರಡನೇ ಭಾಗದಲ್ಲಿ ಅನು ಕಪೂರ್ ಇದ್ದಂತೆ ಪ್ರತಿವಾದ ಮಾಡಲು ಖಡಕ್ ಲಾಯರ್ ಅವಶ್ಯಕತೆ ಇತ್ತು. ಈ ಅವಕಾಶ ಈ ಬಾರಿ ರಾಮ್ ಕಪೂರ್‌ಗೆ ಸಿಕ್ಕಿದೆಯಾದರೂ ಜಾಲಿ ಪಾತ್ರಗಳ ಮುಂದೆ ರಾಮ್ ಕಪೂರ್ ಪಾತ್ರ ಸಪ್ಪೆ ಎನಿಸುತ್ತೆ.

ಕೊನೆ ಮಾತು

ಜಾಲಿ ಸರಣಿಯ ಹಿಂದಿನ ಎರಡು ಕೋರ್ಟ್‌ ರೂಮ್ ಡ್ರಾಮಾ ನಿಮಗೆ ಇಷ್ಟವಾಗಿದ್ದರೆ, ಈ ಚಿತ್ರ ಕೂಡ ಖಂಡಿತ ಇಷ್ಟವಾಗುತ್ತೆ. ಜ್ವಲಂತ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತಲೇ ಈ ಚಿತ್ರ ಸಂದೇಶವನ್ನು ನೀಡುತ್ತೆ. ನಗಿಸುತ್ತೆ. ಅಲ್ಲಲ್ಲಿ ಭಾವುಕವನ್ನಾಗಿಸುತ್ತೆ. ಕುಟುಂಬ ಸಮೇತ ಒಂದು ಬಾರಿ ಈ ಚಿತ್ರವನ್ನು ಮುಲಾಜಿಲ್ಲದೇ ನೋಡಬಹುದು.

More from Filmibeat

English summary
Akshay Kumar and Arshad Warsi are back in court! Our Jolly LLB 3 review breaks down the first-rate performances of the two leads and explains why the true star of this courtroom drama is the brilliant Saurabh Shukla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X