Toby Review: ಕ್ಷಣ ಯೋಚಿಸದೇ ಇನ್ನೊಬ್ಬರನ್ನು ಕೊಲ್ಲುವ 'ಟೋಬಿ'ಗೂ ಅಳು ಬರುತ್ತದೆ!
Star Cast: Raj B Shetty, Samyuktha Hornadu, Chaithra J Achar, Raj Deepak Shetty, Gopal Deshpande
Director: Basil Alchalakkal
ರಾಜ್ ಬಿ ಶೆಟ್ಟಿ, ಸಂಯುಕ್ತ ಹೊರನಾಡು, ಚೈತ್ರಾ ಜೆ ಆಚಾರ್ ನಟಿಸಿರುವ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಟೋಬಿ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದೆ. ಟಿ.ಕೆ.ದಯಾನಂದರ ಸಣ್ಣ ಕಥೆಯನ್ನಾಧರಿಸಿ ರಾಜ್ ಬಿ ಶೆಟ್ಟಿ ಚಿತ್ರಕಥೆ ಬರೆದಿದ್ದು, ಟೋಬಿ ಸಿನಿಮಾಗೆ ಬಾಸಿಲ್ ಅಲ್ಚಲಕ್ಕಲ್ ಆಕ್ಷನ್ ಕಟ್ ಹೇಳಿದ್ದಾರೆ.
ಟೋಬಿ ಟ್ರೈಲರ್ ರಿಲೀಸ್ ಆದಾಗಿನಿಂದ ರಾಜ್ ಬಿ ಶೆಟ್ಟಿ ಮಾಸ್ ಲುಕ್‌ಅನ್ನು ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಹಾಗಾದರೆ ಸಿನಿಮಾದಲ್ಲಿ ಏನು ಹೇಳಲಾಗಿದೆ..? ಕಲಾವಿದರ ನಟನೆ, ಸಂಗೀತ, ಮುಖ್ಯವಾಗಿ ಆಕ್ಷನ್ ಸೀನ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಟೋಬಿಯ ಒನ್ ಲೈನ್ ಸ್ಟೋರಿಯೇನು?
ಹರಕೆಯ ಕುರಿ ಕಾಣೆಯಾಗಿದೆ ಎಂಬುದರಿಂದ ಸಿನಿಮಾ ಆರಂಭವಾಗುತ್ತದೆ. ಆ ಕಾಣೆಯಾದ ಕುರಿ ವಾಪಸ್ ಬಂದರೆ ಮಾರಿಯಾಗಿರುತ್ತದೆ ಎಂಬುದು ಪೂಜಾರಿ ಹೇಳುವ ಮಾತು. ಅಂದರೆ ಇಲ್ಲಿ ಹರಕೆಯ ಕುರಿ ಯಾರು, ಮೂಗುತಿ ಮಾರಿಯಾಗಲು ಕಾರಣವೇನು ಎಂಬುದೆ ಕಥೆ. ಹೆಸರಿಲ್ಲದ ಅನಾಥ, ಮೂಕ ವಿಲಕ್ಷಣ ವ್ಯಕ್ತಿಯೊಬ್ಬ, ಮತ್ತೊಂದು ಅನಾಥ ಹೆಣ್ಣು ಮಗುವನ್ನು ಸಾಕುವ, ಮನೆ ಕಟ್ಟಲು, ಜೀವನ ಸಾಗಿಸಲು ಉಳ್ಳವರಿಗೆ ಹರಕೆಯ ಕುರಿಯಾಗುವ ಆತನ ಜೀವನದಲ್ಲಿ ನಡೆಯುವ ಘಟನೆಗಳೆ ಸಿನಿಮಾ.
'ಟೋಬಿ' ಸಿನಿಮಾ ಹೇಗಿದೆ?
ಟೋಬಿ (ಟೋಬಿಯಾ) ಆಗಿ ರಾಜ್ ಬಿ ಶೆಟ್ಟಿ ಜೀವಿಸಿದ್ದಾರೆ. ಸಿನಿಮಾ ಮೊದಲಾರ್ಧದಲ್ಲಿ ಟೋಬಿಯ ಜೀವನದ ಬಹುಪಾಲು ಭಾಗ ಜೈಲಿನಲ್ಲೇ ಕಳೆದು ಹೋಗುವುದು, ಕೆಲವು ಹಾಸ್ಯ ದೃಶ್ಯಗಳು ಇವೆ. ಮರಣೋತ್ತರ ಪರೀಕ್ಷೆ ವೇಳೆ ಹೆಣ ಕುಯ್ಯುವಾಗಲು ಟೋಬಿ ನಗುತ್ತಾ ಕೆಲಸ ಮಾಡುವುದು ಆತನ ವಿಲಕ್ಷಣತೆಗೆ ಉದಾಹರಣೆ. ಆದರೆ ಸಿನಿಮಾ ತುಂಬಾ ಸ್ಲೋ ಅನ್ನಿಸುತ್ತದೆ. ಮಧ್ಯಂತರಕ್ಕೂ ಮುನ್ನ ಬರುವ ಆಕ್ಷನ್ ಸೀನ್ ಪ್ರಸೆಂಟ್ ಮಾಡಿರುವ ರೀತಿ ಚೆನ್ನಾಗಿದೆ.
ಸಿನಿಮಾದ ಸೆಕೆಂಡ್ ಹಾಫ್‌ನಲ್ಲಿ ಬರೀ ರಕ್ತ ಸಿಕ್ತ ಅಧ್ಯಯವೇ. ಇದರ ಜೊತೆಗೆ ಅಪ್ಪ- ಮಗಳ ಕೆಲವು ಭಾವನಾತ್ಮಕ ಸನ್ನಿವೇಶಗಳು ಇವೆ. ಕ್ಷಣ ಯೋಚಿಸದೆ ಮನುಷ್ಯರನ್ನು ಕೊಂದು ಮೆಷಿನ್‌ಗೆ ಹಾಕುವ, ಅಳಿಯನನ್ನೇ ಕೊಲ್ಲಲು ಹೋಗುವ ಟೋಬಿಗೂ ಅಳು ಬರುವುದೇ ವಿಚಿತ್ರ. ಎರಡೂ ಹಾಡುಗಳಿದ್ದರೂ ಸಿನಿಮಾ ಮುಗಿದ ಮೇಲೆ ಮತ್ತೆ ನೆನಪಾಗುವುದಿಲ್ಲ. ಟೋಬಿಯ ಆಕ್ಷನ್ ಸೀನ್‌ಗಳು ನೋಡಬಹುದು. 'ಸೈತಾನ'ನ್ನು ತೋರಿಸಬೇಕು ಎಂಬ ನಿರ್ದೇಶಕರ ಶ್ರಮ ಫಲಕೊಟ್ಟಿದೆ.

ಕಲಾವಿದರ ನಟನೆ ಹೇಗಿದೆ??
ರಾಜ್ ಬಿ ಶೆಟ್ಟಿ ಪಾತ್ರದಲ್ಲಿ ಮುಳುಗಿದ್ದಾರೆ. ಟೋಬಿಯ ಮಗಳಾಗಿ ಚೈತ್ರ ಜೆ ಆಚಾರ್ ನಟನೆ ಇನ್ನು ಪಳಗಬೇಕು. ಭಾವನಾತ್ಮಕ ಸನ್ನಿವೇಶಕ್ಕಿಂತ ಗಯ್ಯಾಳಿಯಾಗಿ ನೆನಪಾಗುತ್ತಾರೆ. ಶವಾಗಾರದಲ್ಲಿ ಕೆಲಸ ಮಾಡುವವನ ಪಾತ್ರದಲ್ಲಿ ಗೋಪಾಲ್ ದೇಶಪಾಂಡೆ ಗಮನ ಸೆಳೆಯುತ್ತಾರೆ. ಖಳನಟನಾಗಿ ರಾಜ್ ದೀಪಕ್ ಶೆಟ್ಟಿ ನಟನೆ ಚೆನ್ನಾಗಿದೆ. ನಟಿ ಸಂಯುಕ್ತ ಹೊರನಾಡು ಕಣ್ಣಲೇ ಮಾತನಾಡುತ್ತಾರೆ.
ಸಿನಿಮಾ ಪ್ಲಸ್ ಅಂಡ್ ಮೈನಸ್
ಟೋಬಿಯ ಪ್ಲಸ್ ಪಾಯಿಂಟ್ ಕಥೆ ಮತ್ತು ರಾಜ್ ಬಿ ಶೆಟ್ಟಿ ನಟನೆ. ದೆವ್ವಕ್ಕೆ ಧರ್ಮ ಇರುತ್ತಾ??, ಬಡವ ಕೋಪ ಮಾಡಿಕೊಳ್ಳಬಾರದು, ಸೈತಾನ್ ಕಾಪಾಡಲು ಬಂದಂತೆ ನಂಬಿಸುತ್ತಾನೆ... ಹೀಗೆ ಕೆಲವು ಸಂಭಾಷಣೆ ಚೆನ್ನಾಗಿದೆ. ಮಧ್ಯಂತರದಲ್ಲಿ ಬರುವ ಒಂದು ಆಕ್ಷನ್ ಸೀನ್ ಮತ್ತು ಕೊನೆಯ 30 ನಿಮಿಷಗಳು ಸಿನಿಮಾದ ಜೀವಾಳ.

ಮೈನಸ್ ಎಂದರೆ ಸಿನಿಮಾದಲ್ಲಿ ಪಾತ್ರಗಳು ಬೇಗ ಬೇಗ ಬೆಳೆದರೂ ಸ್ಟೋರಿ ಮುಂದೆ ಓಡುವುದಿಲ್ಲ. ಟೋಬಿ ಮುಗ್ಧ ಎಂದು ಸಿನಿಮಾ ತಂಡ ಹೇಳಿಕೊಂಡಿದ್ದರೂ ಸಿನಿಮಾದಲ್ಲಿ ಟೋಬಿ ತುಂಬಾ ಮುಗ್ಧನಂತೆ ಕಾಣುವುದಿಲ್ಲ. ಮಾರಿ ಎಂಬ ದೇವರ ಬಗ್ಗೆ ಇನ್ನೂ ಸ್ಪಲ್ಪ ಮಾಹಿತಿ ಇದ್ದಿದ್ದರೇ ಸಿನಿಮಾಗೆ ಮತ್ತಷ್ಟು ಶಕ್ತಿ ಬರುತ್ತಿತ್ತು. ಆಕ್ಷನ್ ಮತ್ತು ರಾಜ್ ಬಿ ಶೆಟ್ಟಿ ಅಭಿಮಾನಿಗಳಾಗಿದ್ದರೇ ಒಮ್ಮೆ ಸಿನಿಮಾ ನೋಡಬಹುದು.


Click it and Unblock the Notifications











