ವಿಮರ್ಶೆ: 'ಟಾಯ್ಲೆಟ್'ನಲ್ಲಿ ಕಂಡ ದೇಶದ ಗಂಭೀರ ಸಮಸ್ಯೆ
ಅಕ್ಷಯ್ ಕುಮಾರ್ ಮತ್ತೊಂದು ಸಾಮಾಜಿಕ ಸಂದೇಶದ ಸಿನಿಮಾ ಸಿನಿಮಾ ಮಾಡಿದ್ದಾರೆ. ಮೋದಿ ಅವರ 'ಸ್ವಚ್ಛ ಭಾರತ' ಮತ್ತು ದೇಶದ ಗಂಭೀರ ಸಮಸ್ಯೆ 'ಶೌಚಾಲಯ ವ್ಯವಸ್ಥೆ' ಬಗ್ಗೆ ಚಿತ್ರ ಇದಾಗಿದ್ದು, ಮನರಂಜನೆ ಜೊತೆಗೆ ಸಿನಿಮಾ ಸಾಮಾಜಿಕ ಸಂದೇಶವನ್ನು ಸಾರಿದೆ.
ಚಿತ್ರ: ಟಾಯ್ಲೆಟ್: ಏಕ್ ಪ್ರೇಮ್ ಕಥಾ
ನಿರ್ಮಾಣ: ವೈಕಾಮ್ 18 ಮೋಷನ್ ಪಿಕ್ಚರ್ಸ್
ನಿರ್ದೇಶನ: ಶ್ರೀ ನಾರಾಯಣ್ ಸಿಂಗ್
ಛಾಯಾಗ್ರಹಣ: ಅನ್ಸುಮಾನ್ ಮಹಾಲೆ
ತಾರಾಬಳಗ: ಅಕ್ಷಯ್ ಕುಮಾರ್, ಭೂಮಿ ಪೆಡೆನೆಕರ್, ಅನುಪಮ್ ಖೇರ್, ಸನಾ ಖಾನ್ ಮತ್ತು ಇತರರು
ಬಿಡುಗಡೆ: ಆಗಸ್ಟ್ 11, 2017
ಒಳ್ಳೆಯ ಕಥೆ
'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾದ ಶಕ್ತಿ ಅಂದರೆ ಚಿತ್ರದ ಕಥೆ. 'ಶೌಚಾಲಯ ವ್ಯವಸ್ಥೆ' ಎನ್ನುವ ಒಂದು ಕಥಾವಸ್ತುವನ್ನು ಇಟ್ಟುಕೊಂಡು ಸಿನಿಮಾ ಕಥೆ ಹೆಣೆಯಲಾಗಿದೆ. ಚಿತ್ರದ ನಾಯಕ ಕೇಶವ್ (ಅಕ್ಷಯ್ ಕುಮಾರ್) ಮತ್ತು ಆತನ ಪತ್ನಿ ಭೂಮಿ (ಜಯಾ) ಪ್ರೀತಿಸಿ ಮದುವೆಯಾಗಿರುತ್ತಾರೆ. ನಂತರ ಕೇಶವ್ ಮನೆಯಲ್ಲಿ 'ಟಾಯ್ಲೆಟ್' ಇಲ್ಲ ಎಂಬ ಕಾರಣಕ್ಕೆ ಆತನ ಪತ್ನಿ ಜಯಾ ವಿಚ್ಛೇದನ ನೀಡುತ್ತಾಳೆ. ಈ ರೀತಿ ಬೇರಾದ ಜೋಡಿ ಮತ್ತೆ ಒಂದಾಗುತ್ತಾರಾ ಎಂಬುದು ಸಿನಿಮಾದ ಕಥೆ.
ಉತ್ತಮ ಅಭಿನಯ
ಕೇಶವ್ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ತಮ್ಮ ನೈಜ ನಟನೆಯ ಮೂಲಕ ಎಲ್ಲರಿಗೂ ಇಷ್ಟ ಆಗುತ್ತಾರೆ. ನಟಿ ಜಯಾ ಹಾಗೂ ಅನುಪಮ್ ಖೇರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಿನಿಮಾ ನೋಡಲು ಬಂದ ಒಬ್ಬ ಸಾಮಾನ್ಯ ಪ್ರೇಕ್ಷಕನಿಗೆ ಈ ಪಾತ್ರಗಳು ಹತ್ತಿರವಾಗುತ್ತದೆ.
ಗಂಭೀರ ಸಮಸ್ಯೆ
ಇಂದಿಗೂ ಭಾರತದ ಎಷ್ಟೋ ಹಳ್ಳಿಗಳಲ್ಲಿ ಸರಿಯಾಗಿ ಶೌಚಾಲಯ ಇಲ್ಲ. ಅಲ್ಲದೆ ಮಹಿಳೆಯರು ಬಯಲಿನಲ್ಲಿಯೇ ಮಲವಿಸರ್ಜನೆ ಮಾಡುವ ಸ್ಥಿತಿ ಇವತ್ತಿಗೂ ಇದೆ. ಇಂತಹ ಗಂಭೀರ ವಿಷಯಗಳನ್ನು ಸಿನಿಮಾದಲ್ಲಿ ಸೂಕ್ಷ್ಮವಾಗಿ ನಿರ್ದೇಶಕ ಶ್ರೀ ನಾರಾಯಣ್ ಸಿಂಗ್ ಹೇಳಿದ್ದಾರೆ.
ವಾಸ್ತವಕ್ಕೆ ಹತ್ತಿರ
'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಕಥೆ ವಾಸ್ತವಕ್ಕೆ ಬಹಳ ಹತ್ತಿರವಾಗಿದೆ. ಒಂದು ದೊಡ್ಡ ಸಮಾಜಿಕ ವಿಷಯವನ್ನು ಎಲ್ಲೂ ಬೋರ್ ಆಗದಂತೆ ಹಾಸ್ಯ ರೂಪದಲ್ಲಿ ಹೇಳಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಇನ್ನೂ ಅಕ್ಷಯ್ ಕುಮಾರ್ ಸಿನಿಮಾ ಎನ್ನುತ್ತಿದ್ದಾಗೆ ಕಾಮಿಡಿ ಇರಬೇಕು ಎಂಬ ನಿರೀಕ್ಷೆ ಇಟ್ಟುಕೊಳ್ಳುವ ಅಭಿಮಾನಿಗಳಿಗೂ ಸಿನಿಮಾ ತೃಪ್ತಿ ನೀಡಿದೆ.
ರಾಜಕೀಯದ ಅಂಶ
ಸಿನಿಮಾದ ನಾಯಕಿ ಭೂಮಿ ತನ್ನ ಪತಿ ಕೇಶವ್ ಮನೆಯಲ್ಲಿ ಟಾಯ್ಲೆಟ್ ಇಲ್ಲ ಎಂಬ ಕಾರಣಕ್ಕೆ ವಿಚ್ಛೇದನ ನೀಡಿರುತ್ತಾಳೆ. ನಂತರ ಆಕೆಗಾಗಿ ಒಂದು ಶೌಚಾಲಯ ಕಟ್ಟುವುದಕ್ಕೆ ಮುಂದಾದ ಕೇಶವ್ ಜೀವನ ಹೇಗೆಲ್ಲ ರಾಜಕೀಯದ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು.
ಮ್ಯೂಸಿಕ್ ಚೆನ್ನಾಗಿದೆ
'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾ ತಾಂತ್ರಿಕವಾಗಿಯೂ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಮೇಕಿಂಗ್, ಸಂಗೀತ ಎಲ್ಲವೂ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ.
ಕೊನೆಯ ಮಾತು
ಅದೇ ಹಾಡು, ಫೈಟ್, ಡ್ಯಾನ್ಸ್ ಸಿನಿಮಾಗಳ ನಡುವೆ ಬಂದಿರುವ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರ ಹೊಸ ಅನುಭವ ನೀಡುತ್ತದೆ. ಕೊಟ್ಟ ಹಣಕ್ಕೆ ಮೋಸ ಇಲ್ಲದೆ ಮನರಂಜನೆ ಜೊತೆಗೆ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಸಿಗುತ್ತದೆ.


Click it and Unblock the Notifications











