UI Review: ಫುಲ್ ಫೋಕಸ್ ಮಾಡಿ ನೋಡಬೇಕಾದ ಉಪ್ಪಿ ಎಂಡ್‌ಲೆಸ್ 'ಯುಐ' ಪ್ರಪಂಚ; ಆದ್ರೆ...

ಉಪೇಂದ್ರ ನಟಿಸೋ ಸಿನಿಮಾಗಳಿಗಿಂತ ನಿರ್ದೇಶನ ಮಾಡುವ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಭಿನ್ನ ವಿಭಿನ್ನ ಚಿತ್ರಗಳನ್ನು ಉಪ್ಪಿ ತೆರೆಗೆ ತಂದಿದ್ದಾರೆ. ಇವತ್ತು ಬರುವಂತಹ ಸಿನಿಮಾಗಳನ್ನು 20 ವರ್ಷಗಳ ಹಿಂದೆಯೇ ಉಪ್ಪಿ ಮಾಡಿಬಿಟ್ಟಿದ್ದರು ಎಂದು ಅಭಿಮಾನಿಗಳು ಹೇಳುತ್ತಾರೆ.

Rating:
3.0/5
Star Cast: ಉಪೇಂದ್ರ, ರೀಷ್ಮಾ ನಾಣಯ್ಯ, ಆರ್ಮುಗ ರವಿಶಂಕರ್, ಅಚ್ಯುತ್‌ ಕುಮಾರ್ ಮುಂತಾದವರು.
Director: ಉಪೇಂದ್ರ

ಬರೋಬ್ಬರಿ 10 ವರ್ಷಗಳ ಬಳಿಕ ಉಪ್ಪಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಅಂದಾಗಲೇ ಕುತೂಹಲ ಮೂಡಿತ್ತು. ಮೂರು ನಾಮದ ರೀತಿ ಕಾಣುವ 'UI' ಟೈಟಲ್‌ನಿಂದಲೇ ಗಿಕಿಕ್ ಶುರು ಮಾಡಿದ್ದರು. ಬಳಿಕ ಟೀಸರ್, ವಾರ್ನರ್, ಟ್ರೋಲ್ ಸಾಂಗ್, ಚೀಪ್ ಸಾಂಗ್ ಅಂತೆಲ್ಲಾ ಸದ್ದು ಮಾಡಿದ್ದರು. ಇದೀಗ ಸಿನಿಮಾ ತೆರೆಗಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಿದೆ.

UI kannada movie review  Upendra Starrer dystopian Film Review

ಟ್ರೈಲರ್ ಕೂಡ ರಿಲೀಸ್ ಮಾಡದೇ 'UI' ಚಿತ್ರದ ಕಥೆಯನ್ನು ರಿಯಲ್ ಸ್ಟಾರ್ ಗುಟ್ಟಾಗಿಯೇ ಇಟ್ಟಿದ್ದರು. ಆದರೆ ಎಲ್ಲಾ ಕುತೂಹಲಕ್ಕೆ ಬ್ರೇಕ್ ಬಿದ್ದು ಸಿನಿಮಾ ಇದೀಗ ತೆರೆಗಪ್ಪಳಿಸಿದೆ. ಅಷ್ಟಕ್ಕೂ 'UI' ಕಥೆಯೇನು? ಸಿನಿಮಾ ಹೇಗಿದೆ? ಪ್ಲಸ್ ಏನು? ಮೈನಸ್ ಏನು? ಮುಂದೆ ಓದಿ.

'UI' ಸಿನಿಮಾ ಕಥೆ

ಇದು ಸಿನಿಮಾದೊಳಗಿನ ಸಿನಿಮಾ ಕಥೆ. ನಿರ್ದೇಶಕ ಉಪೇಂದ್ರ ನಿರ್ದೇಶನದ 'ನಾಮ'(ಚಿಹ್ನೆ) ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿರುತ್ತದೆ. ಒಮ್ಮೆ ನೋಡಿದರೆ ಯಾರು ಅರ್ಥವಾಗುತ್ತಿಲ್ಲ. ಫೋಕಸ್ ಮಾಡಿದ್ರೆ ಅರ್ಥವಾಗುತ್ತದೆ ಎಂದು ಪ್ರೇಕ್ಷಕರು ಪದೇ ಪದೇ ಸಿನಿಮಾ ನೋಡಲು ಮುಗಿಬೀಳ್ತಾರೆ. ಅರ್ಥ ಆದವರು ವಿಚಿತ್ರವಾಗಿ ಆಡಿದರೆ ಕೆಲವರು ಸಿನಿಮಾ ಬ್ಯಾನ್ ಮಾಡಿ ಎಂದು ಪ್ರತಿಭಟನೆ ನಡೆಸುತ್ತಿರುತ್ತಾರೆ.

ಈ ಚಿತ್ರಕ್ಕೆ ವಿಮರ್ಶೆ ಬರೆಯಲು ಸಾಧ್ಯವಾಗದೇ ಚಿತ್ರ ವಿಮರ್ಶಕನೊಬ್ಬ ತಲೆ ಕೆಡಿಸಿಕೊಂಡಿರುತ್ತಾನೆ. ಎಷ್ಟೇ ಬಾರಿ ನೋಡಿದರೂ ಆತನಿಗೆ ಸಿನಿಮಾ ಅರ್ಥವಾಗಿರಲ್ಲ. ಆಗ ಈ ಬಗ್ಗೆ ತಿಳಿದುಕೊಳ್ಳಲು ನಿರ್ದೇಶಕ ಉಪೇಂದ್ರರನ್ನು ಹುಡುಕಿ ಹೋಗ್ತಾನೆ. ಅಲ್ಲಿ ಅವರು ಸಿಗಲ್ಲ, ಆದರೆ ಅವರು ಬರೆದು ಸುಟ್ಟು ಹಾಕಲು ಹೋಗಿದ್ದ ಕಥೆಯ ಪ್ರತಿ ಸಿಗುತ್ತದೆ. ಅದನ್ನು ಆ ವಿಮರ್ಶಕ ಓದುತ್ತಾನೆ. ಅಷ್ಟಕ್ಕೂ ಆ 'ನಾಮ'ದ ಕಥೆ ಏನು? ಉಪೇಂದ್ರ ಅದನ್ನು ಸುಟ್ಟು ಹಾಕಲು ಬಯಸಿದ್ದು ಏಕೆ? ಅಷ್ಟು ನೋಡುವ 'ಕಲ್ಕಿ' ಕಥೆಯೇನು? ಎನ್ನುವುದೇ ಇನ್ನುಳಿದ 'ಯುಐ' ಸಿನಿಮಾ.

ಸಿನಿಮಾ ಹೇಗಿದೆ?

ಇದು ಸಿನಿಮಾದೊಳಗಿನ ಸಿನಿಮಾ ಕಥೆ ಎಂದು ಮೊದಲೇ ಹೇಳಿ ಉಪೇಂದ್ರ ನಿರೀಕ್ಷಣ ಜಾಮೀನು(Anticipatory Bail) ಪಡೆದು ಕಥೆ ಶುರು ಮಾಡುತ್ತಾರೆ. ಕಥೆಯ ನಿರೂಪಣೆಗೆ ತಾವೇ ಸೂತ್ರಧಾರರಾಗಿದ್ದಾರೆ. ಮೆಟಾಫರ್‌ಗಳಲ್ಲೇ ಸಾಕಷ್ಟು ವಿಚಾರಗಳನ್ನು ರಿಯಲ್ ಸ್ಟಾರ್ ಹೇಳುತ್ತಾ ಹೋಗುತ್ತಾರೆ. ಜನರೆಲ್ಲಾ ನಮ್ಮ ನಮ್ಮ ಆಲೋಚನೆಯಲ್ಲೇ ಕಳೆದು ಹೋಗಿದ್ದೇವೆ. ಮೆದುಳಿನಿಂದ ಅರ್ಥಾತ್ ಆ ಆಲೋಚನೆಗಳಿಂದ ಹೊರ ಬಂದರೆ ಮಾತ್ರ ಏನಾದರೂ ಬದಲಾವಣೆ ಸಾಧ್ಯ ಎಂದು ಟೈಟಲ್ ಕಾರ್ಡ್‌ನಿಂದ ಹೇಳಲು ಆರಂಭಿಸುತ್ತಾರೆ.

ವಾರ್ನರ್ ಟೀಸರ್ ನೋಡಿದಾಗ 2040ರಲ್ಲಿ ಏನೆಲ್ಲಾ ಆಗಬಹುದು ಎಂದು ಭವಿಷ್ಯದ ಬಗ್ಗೆ ಉಪ್ಪಿ ತೋರಿಸಿದ್ದರು. ಅದು ಕ್ಲೈಮ್ಯಾಕ್ಸ್‌ನಲ್ಲಿ ಬರುವಂಥದ್ದು. ಆದರೆ ಅದಕ್ಕೂ ಮುನ್ನ ಸದ್ಯದ ಪ್ರಪಂಚದ ಕತೆ ಹೇಳುತ್ತಾ ಹೋಗುತ್ತಾರೆ. ನಮ್ಮನ್ನು ಆಳುವ ನಾಯಕ, 5 ವರ್ಷಕ್ಕೆ ಮಾತ್ರ ಬರುವ ಮಹಾಯುದ್ಧ(ಚುನಾವಣೆ). ಅಲ್ಲಿಯವರೆಗೂ ಜನ ಮಲಗಿರುತ್ತಾರೆ. ತಮ್ಮದೇ ಭ್ರಮಾ ಲೋಕದಲ್ಲಿ ವಿರಹರಿಸುತ್ತಿರುತ್ತಾರೆ ಎಂದು ಬಿಡಿಸಿ ಹೇಳುತ್ತಾರೆ. ಮುಂದೆ ಸತ್ಯ ಹಾಗೂ ಭ್ರಮೆ(ಕಲ್ಕಿ)ಗೆ ರೂಪ ಕೊಟ್ಟು ಅಸಲಿ ಕಹಾನಿ ಶುರು ಮಾಡುತ್ತಾರೆ.

'ಯುಐ' ಪೋಸ್ಟರ್‌ ನೋಡಿದಾಗ ಕಲ್ಕಿ ಅವತಾರದಲ್ಲಿ ಉಪೇಂದ್ರ ಬರುವುದನ್ನು ತೋರಿಸಿದ್ದರು. ಇಲ್ಲಿ ಕೂಡ ಕಲ್ಕಿ ಇದ್ದಾನೆ. ಪ್ರಕೃತಿ ಮಾತೆಯ ಮೇಲಿನ ಜನರ ದೌರ್ಜನ್ಯದಿಂದ ಸತ್ಯ ಹಾಗೂ ಕಲ್ಕಿ(ಭ್ರಮೆ) ಹುಟ್ಟಿದ್ದಾರೆ. ಅವರಿಬ್ಬರ ನಡುವಿನ ಸಂಘರ್ಷದ ಕಥೆಯನ್ನು ಇಡೀ ಚಿತ್ರದಲ್ಲಿ ಹೇಳುತ್ತಾ ಸಾಗುತ್ತಾರೆ. ಜೊತೆಗೆ ಸಮಾಜವನ್ನು ಬದಲಿಸಬೇಕು ಎಂದು ಹೊರಟ ಉಪೇಂದ್ರ ತಾನೇ ಇವತ್ತು ಈ ಬದಲಾಗದ ಸಂತೆಯಲ್ಲಿ ಗೊಂದಲಕ್ಕೀಡಾಗಿದ್ದೇನೆ ಎಂದು ಹೇಳಲು ಪ್ರಯತ್ನಿಸಿರುವಂತೆ ಕಾಣುತ್ತದೆ.

ಆಡಂ-ಈವ್ ಕಥೆಯಿಂದ ಪ್ರಪಂಚ ಹೇಗೆಲ್ಲಾ ಬದಲಾಯಿತು. ಅತಿ ಆಸೆಯಿಂದ ಪ್ರಕೃತಿ ಮಾತೆಯ ವಿರುದ್ಧ ಮಾನವನ ಆಟ ಬಹಳ ದಿನ ನಡೆಯಲ್ಲ ಎಂದು ತಿಳಿಸೋ ಪ್ರಯತ್ನ ಮಾಡುತ್ತಾರೆ. ಭ್ರಮೆಯ ಪ್ರಪಂಚದಲ್ಲಿ ಸತ್ಯ ಯಾರಿಗೂ ಬೇಕಿಲ್ಲ, ಅಪ್ಪಿ ತಪ್ಪಿ ಸತ್ಯವನ್ನು ಅನುಸರಿಸಲು ಹೋಗುತ್ತೇನೆ ಎಂದವರಿಗೆ(ನಾಯಕಿಯ ಪಾತ್ರ) ಉಳಿಗಾಲವಿಲ್ಲ. ಕೊನೆಗೆ ಸತ್ಯ ಮರೆಯಾಗಿ ಭ್ರಮೆಯೇ ದಬ್ಬಾಳಿಕೆ ನಡೆಸುತ್ತದೆ ಎಂದು ತಿಳಿ ಹೇಳುತ್ತಾರೆ.

ನಾವು ಜಾತಿ, ಧರ್ಮ ಎಂದು ಕಿತ್ತಾಡುತ್ತಿದ್ದರೆ ಉಳ್ಳವರು ನಮ್ಮ ಮತ್ತಷ್ಟು ತುಳಿದು ಬದುಕುತ್ತಾರೆ. ನಾವು ಬದಲಾಗದ ಹೊರತು ಏನು ಬದಲಾಗಲ್ಲ. ಬೇಕಿರುವುದು ಮೊಬೈಲ್, ಕ್ರಿಕೆಟ್, ರೀಲ್ಸ್, ಮಂಗಳ ಗ್ರಹಕ್ಕೆ ಹೋಗುವುದಲ್ಲ, ದೇಶದ ರಕ್ಷಣೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಲ್ಲ. ಸ್ವಚ್ಛ ಸಮಾಜ, ನ್ಯಾಯ ನೀತಿ, ಸತ್ಯ ಎಂದು ಉಪ್ಪಿ ಉಪಮಾನಗಳಲ್ಲೇ ಚಿತ್ರಿಸಿದ್ದಾರೆ.

ಅಲ್ಲಲ್ಲಿ ಕೆಲ ಉಪ್ಪಿ ಶೈಲಿಯ ಡೈಲಾಗ್‌ಗಳು ಪ್ರೇಕ್ಷಕರಿಗೆ ಕಿಕ್ ಕೊಡುತ್ತದೆ. "ನಮ್ಮನ್ನು ಸೃಷ್ಟಿಸಿದ ದೇವರನ್ನು ತುಳಿಯುವುದಿಲ್ಲ. ನಾವು ಸೃಷ್ಟಿಸಿದ ದೇವರನ್ನು ಬೇಕಿದ್ದರೆ ತುಳಿಯುತ್ತೇನೆ" ಎನ್ನುವ ಡೈಲಾಗ್ ಚಪ್ಪಾಳೆ ಗಿಟ್ಟಿಸುತ್ತದೆ. ಟಿಪಿಕಲ್ ಉಪ್ಪಿ ಮಾರ್ಕ್ ಚಿತ್ರದಲ್ಲಿದೆ. ಹಾಗಂತ ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸುತ್ತದೆ ಎಂದುಕೊಂಡರೆ ತಪ್ಪಾಗುತ್ತದೆ. ಬಹುತೇಕ ಸಿನಿಮಾ ಸೆಟ್‌ಗಳಲ್ಲಿ ಬರೀ ಕತ್ತಲಲ್ಲೇ ಸಾಗುವುದು ಕೊಂಚ ಇರಿಸುಮುರಿಸು ಎನಿಸದೇ ಇರದು.

ಕಲಾವಿದರ ಅಭಿನಯ

ರಿಯಲ್ ಸ್ಟಾರ್ ಉಪೇಂದ್ರ ಒಂದಲ್ಲ ಎರಡಲ್ಲ, ಮೂರು ಪಾತ್ರಗಳಲ್ಲಿ ತೆರೆಮೇಲೆ ಬರ್ತಾರೆ. ನಿರ್ದೇಶಕ ಉಪೇಂದ್ರ ಆಗಿ ಕೊನೆಗೆ ಕಾಣಿಸಿಕೊಳ್ಳುತ್ತಾರೆ. ಅದಕ್ಕೂ ಮುನ್ನ ಸತ್ಯ ಹಾಗೂ ಕಲ್ಕಿ ಎಂಬ ಎರಡು ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಕೊನೆಗೆ ಕಲ್ಕಿ ಪಾತ್ರಕ್ಕೆ ಸರ್ವಾಧಿಕಾರಿಯ ಶೇಡ್‌ ಕೂಡ ಇದೆ. ಅಲ್ಲಿಗೆ ಭಿನ್ನ ವಿಭಿನ್ನ ಅವತಾರಗಳಲ್ಲಿ ಉಪೇಂದ್ರ ಪ್ರೇಕ್ಷಕರನ್ನು ರಂಜಿಸುತ್ತಾರೆ.

ನಾಯಕಿಯಾಗಿ ರೀಷ್ಮಾ ನಾಣಯ್ಯ ಗಮನ ಸೆಳೆಯುತ್ತಾರೆ. ಟಿಪಿಕಲ್ ಉಪೇಂದ್ರ ಸಿನಿಮಾಗಳ ನಾಯಕಿ ಪಾತ್ರವೇ ಇಲ್ಲಿ ಆಕೆಗೆ ಸಿಕ್ಕಿದೆ. ಚೆಲ್ಲು ಚೆಲ್ಲು ಹುಡುಗಿಯಾಗಿ ಇಷ್ಟವಾಗುತ್ತಾರೆ. ಇನ್ನು ಕತ್ರಿ ಸೀನ ಅಲಿಯಾಸ್ ಜನನಾಯಕ ವಾಮನ ಆಗಿ ಆರ್ಮುಗ ರವಿಶಂಕರ್ ಮಿಂಚಿದ್ದಾರೆ. ಕಾಮಿಡಿ ವಿಲನ್ ರೀತಿ ಅವರ ಪಾತ್ರ ಪೋಷಣೆ ನೋಡಬಹುದು. ಇನ್ನು ಸ್ವಾಮೀಜಿ ವೀರಬ್ರಮ್ಮೇಂದ್ರ ಆಗಿ ಅಚ್ಯುತ್‌ ಕುಮಾರ್ ಹೆಚ್ಚಿನ ಅವಕಾಶ ಪಡೆದುಕೊಂಡಿದ್ದಾರೆ.

ಟೆಕ್ನಿಕಲಿ ಸಿನಿಮಾ

ನಿರ್ದೇಶಕರಾಗಿ ಉಪೇಂದ್ರ ಎಂದಿನ ತಮ್ಮ ವಿಭಿನ್ನ ಶೈಲಿಯ ನಿರ್ದೇಶನದಿಂದ ಇಷ್ಟವಾಗುತ್ತಾರೆ. ಸಮಾಜದ ಓರೆಕೋರೆಗಳನ್ನು ತಮ್ಮದೇ ರೀತಿಯಲ್ಲಿ ತಿದ್ದುವ ಪ್ರಯತ್ನ ಮಾಡುತ್ತಾರೆ. ಇಷ್ಟು ದಿನ ನೀನು ಬದಲಾದರೆ ಎಲ್ಲಾ ಬದಲಾಗುತ್ತದೆ ಎನ್ನುತ್ತಿದ್ದ ಉಪೇಂದ್ರ ನಿನ್ನನ್ನು ಬದಲಾಯಿಸುವುದು ಕಷ್ಟ ಎಂದು ಕೈಎತ್ತಿಬಿಟ್ಟಿದ್ದಾರೆ. ಸುಲಭಕ್ಕೆ ಸಿನಿಮಾ ಸಾಮಾನ್ಯ ಪ್ರೇಕ್ಷಕನಿಗೆ ಅರ್ಥವಾಗಲ್ಲ, ಅದೇ ಚಿತ್ರದ ದೊಡ್ಡ ಹಿನ್ನಡೆ.

ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಹೈಲೆಟ್. ರೆಗ್ಯುಲರ್ ಉಪ್ಪಿ ಶೈಲಿಯ ಕರ್ಕಶ ಶಬ್ಧ ಅಲ್ಲಲ್ಲಿ ಕೇಳಬಹುದು. ಇನ್ನು ಅದೇ ಪದೇ ಪದೇ ಸ್ಕ್ರೀನ್ ಬ್ಲಾಂಕ್ ಆಗುವುದು, ಉಪ್ಪಿ ಸಿನಿಮಾಗಳಲ್ಲಿ ಕಾಮನ್ ಎಂದು ಸುಮ್ಮನಾಗಬೇಕು. ವೇಣು ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಗ್ರಾಫಿಕ್ಸ್ ಚಿತ್ರದ ಹೈಲೆಟ್. ಅದಕ್ಕಾಗಿಯೇ ಚಿತ್ರತಂಡ ಹೆಚ್ಚು ಸಮಯ ವ್ಯಯಿಸಿದ್ದು ಗೊತ್ತಾಗುತ್ತದೆ.

ಕೊನೆ ಮಾತು

'ಯುಐ' ಸಿನಿಮಾ ನೋಡಿ ಪ್ರೇಕ್ಷಕರು ಏನು ಹೇಳಬಹುದು ಎನ್ನುವುದನ್ನು ಉಪೇಂದ್ರ ಊಹಿಸಿ ಬಿಟ್ಟಿದ್ದಾರೆ. ಅದನ್ನು ತಾವೇ ನಿರ್ದೇಶನದ 'ನಾಮ' ಸಿನಿಮಾ ಬಗ್ಗೆ ಚಿತ್ರ ವಿಮರ್ಶಕನ ಜೊತೆ ಮಾತನಾಡುತ್ತಾ ಹೇಳುತ್ತಾರೆ. ಮಜಾ ತಗೊಳೋಕ್ಕೆ ಬಂದವರಿಗೆ ಈ ಕಥೆ ಅರ್ಥ ಆಗಲ್ಲ ಎನ್ನುತ್ತಾರೆ. ಅರ್ಥಾತ್ ಮನರಂಜನೆ ಬಯಸಿ ಹೋಗುವವರಿಗೆ ಸಿನಿಮಾ ಕೊಂಚ ಕಸಿವಿಸಿ ಎನಿಸಬಹುದು. ಉಪೇಂದ್ರ ಏನೋ ವಿಚಾರ ಹೇಳುತ್ತಾರೆ ಎಂದು ಇಷ್ಟಪಟ್ಟು ಹೋಗುವವರಿಗೆ 'ಯುಐ' ಇಷ್ಟವಾಗುತ್ತದೆ.

ಉಪೇಂದ್ರ ಮೊದಲೇ ಹೇಳಿದಂತೆ ಇದು ಸೈಕಲಾಜಿಕಲ್ ಸಿನಿಮಾ. ಆ ಕೋನದಲ್ಲಿ ಅರ್ಥ ಮಾಡಿಕೊಂಡು ನೋಡಿದರೆ ಅದ್ಭುತ ಎನಿಸುತ್ತದೆ. ಕೆಲವರಿಗೆ ಅರ್ಥವಾಗದೇ ಮತ್ತೆ ಮತ್ತೆ ನೋಡಬೇಕು ಎನ್ನುವಂತಿದೆ ಸಿನಿಮಾ. ರಿಯಲ್ ಸ್ಟಾರ್ ಅಭಿಮಾನಿಗಳು ತಪ್ಪದೇ ಸಿನಿಮಾ ನೋಡಿ.

More from Filmibeat

English summary
Upendra and Reeshma Nanaiah's UI film review and Rating;
Read more about: filmibeat original upendra ui
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X