UI Twitter Review ; ನೀವು ಬುದ್ದಿವಂತರಾಗಿದ್ದರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ..!
ಉಪೇಂದ್ರ ಕನ್ನಡ ಚಿತ್ರರಂಗದ ಬುದ್ದಿವಂತ ನಿರ್ದೇಶಕ. ತಮ್ಮ ಚಿತ್ರಗಳಿಂದ ಕೇವಲ ಕನ್ನಡಿಗರ ತಲೆಯಲ್ಲಿ ಮಾತ್ರ ಅಲ್ಲ ಅಕ್ಕ-ಪಕ್ಕ ರಾಜ್ಯದ ಚಿತ್ರಪ್ರೇಮಿಗಳ ತಲೆಯಲ್ಲಿ ಕೂಡ ಹುಳ ಬಿಡುವ ಚಾಕ್ಯಚಕ್ಯತೆ ಇವರದ್ದು. ಇಂದು ಬಿಡುಗಡೆಯಾದ ಯುಐ ಚಿತ್ರದಲ್ಲಿ ಪ್ರೇಕ್ಷಕರು ನಿರೀಕ್ಷೆ ಮಾಡಿದ್ದು ಕೂಡ ಇದನ್ನೇ. ಆ ನಿರೀಕ್ಷೆ ಹುಸಿಯಾಗಿಲ್ಲ. ಎಂದಿನಂತೆ ಉಪೇಂದ್ರ ಈ ಬಾರಿ ಕೂಡ ಪ್ರೇಕ್ಷಕರ ಬುದ್ದಿವಂತಿಕೆಗೆ ಸವಾಲು ಹಾಕಿದ್ದಾರೆ. ನೀವು ಬುದ್ದಿವಂತರಾಗಿದ್ದರೆ ಚಿತ್ರಮಂದಿರದಿಂದ ಈಗಲೇ ಎದ್ದು ಹೊರಡಿ ಎಂದಿದ್ದಾರೆ. ದಡ್ಡರಾಗಿದ್ದರೆ ಈ ಚಿತ್ರವನ್ನು ಸಂಪೂರ್ಣ ನೋಡಿ ಎಂದು ಹೇಳಿದ್ದಾರೆ.
ಹೌದು, ಎ ಚಿತ್ರದಲ್ಲಿ ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂದು ಹೇಳಿದ್ದ ಉಪೇಂದ್ರ ಈ ಬಾರಿ ಯುಐ ಚಿತ್ರವನ್ನು ದಡ್ಡರಿಗಾಗಿ ಮಾತ್ರ ಮಾಡಿದ್ದಾರೆ. ಚಿತ್ರದ ಆರಂಭದಲ್ಲಿಯೇ ಬೆಳ್ಳಿಪರದೆಯ ಮೇಲೆ ನಾವು ಮೇಲೆ ಹೇಳಿರುವ ಸಾಲುಗಳನ್ನು ಪೋಣಿಸುವ ಮೂಲಕ ಆರಂಭದಿಂದ್ಲೇ ಪ್ರೇಕ್ಷಕರ ಬುದ್ದಿವಂತಿಕೆಗೆ ಸವಾಲು ಹಾಕುತ್ತಾ ಹೋಗಿದ್ದಾರೆ.

ಇನ್ನು ಉಪೇಂದ್ರ ನಿರ್ದೇಶನದ ಚಿತ್ರಗಳು ಸುಲಭಕ್ಕೆ ಅರ್ಥವಾಗಲ್ಲ. ಯುಐ ಕೂಡ ಇದಕ್ಕೆ ಇನ್ನೊಂದು ಉದಾಹರಣೆಯಂತೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಚಿತ್ರವನ್ನು ನೋಡಿರುವ ಪ್ರೇಕ್ಷಕರೊಬ್ಬರು ನಿಮ್ಮ ಮಾತು ಮೊದಲೇ ಕೇಳಬೇಕಿತ್ತು ಚಿತ್ರಮಂದಿರದಿಂದ ಆಚೆ ಬಂದಿದ್ದರೆ ಚೆನ್ನಾಗಿರ್ತಿತ್ತು ಎಂದಿದ್ದಾರೆ. ಇದಕ್ಕೆ ಉಪೇಂದ್ರ ಕೂಡ ಉತ್ತರವನ್ನು ನೀಡಿದ್ದು ಕಾತುರದಿಂದ ಕಾಯುತ್ತಿದ್ದೇನೆ. U I ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು ಬರೆದುಕೊಂಡಿದ್ದಾರೆ.
ಉಪೇಂದ್ರ ಅವರ ಬ್ರ್ಯಾಂಡ್ ಸಿನಿಮಾ..!
ಚಿತ್ರದ ಮೊದಲಾರ್ಧದ ಕುರಿತು ವಿಮರ್ಶೆಯನ್ನು ಮಾಡಿರುವ ಚಿತ್ರಪ್ರೇಮಿಯೊಬ್ಬರು ಚಿತ್ರದ ಆರಂಭ ಉಪೇಂದ್ರ ಅವರ ಶೈಲಿಯಲ್ಲಿ ತುಂಬಾನೇ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿನ ಸಾಹಸ ಸನ್ನಿವೇಶಗಳು ಮತ್ತು ಚಿತ್ರದ ಕ್ವಾಲಿಟಿ ಚೆನ್ನಾಗಿದೆ ಎಂದು ಹೇಳಿರುವ ಇವರು ಫಸ್ಟ್ ಹಾಫ್ ನಲ್ಲಿ ಬರುವ ಕೆಲ ಡೈಲಾಗ್‌ಗಳು ಬೆಂಕಿ ಎಂದಿದ್ಧಾರೆ. ಚಿತ್ರ ಮುಗಿಯೋವರೆಗೆ ಹೇಗಿದೆ ಎಂದು ಹೇಳಲು ಆಗುವುದಿಲ್ಲ ಎಂದಿದ್ದಾರೆ.
ಮಾಸ್ ಬ್ಯಾಟಿಂಗ್
ಇನ್ನು ಚಿತ್ರವನ್ನು ನೋಡಿರುವ ಮತ್ತೊಬ್ಬರು ಈ ತರಹದ ಕಥಾವಸ್ತುವನ್ನು ಹೆಣೆಯಲು ಯಾರಿಂದ ಕೂಡ ಸಾಧ್ಯ ಇಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಚಿತ್ರ ಸಖತ್ ಕ್ರೇಜಿಯಾಗಿದೆ ಎಂದು ಹೇಳಿದರೆ ಇನ್ನೊಬ್ಬರು ಹಳೆಯ ಉಪ್ಪಿ ಯುಐ ಮೂಲಕ ಬೆಳ್ಳಿ ತೆರೆಗೆ ಮರಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕಡ್ಡಾಯವಾಗಿ ನೋಡಲೇಬೇಕಾದ ಸಿನಿಮಾ
ಉಪೇಂದ್ರ ನಿರ್ದೇಶನದ ಯುಐ ಚಿತ್ರವನ್ನು ಭಾರತೀಯ ಚಿತ್ರರಂಗದಲ್ಲಿ ಬಂದ ಕ್ರಾಂತಿಕಾರಿ ಚಿತ್ರ ಎಂದು ಬಣ್ಣಿಸಿರುವ ಚಿತ್ರಪ್ರೇಮಿಯೊಬ್ಬರು ಹೊಸ ಕಾಲದ ಚಿತ್ರಪ್ರೇಮಿಗಳು ಕಡ್ಡಾಯವಾಗಿ ನೋಡಲೇಬೇಕಾದ ಚಿತ್ರ ಇದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಅನೇಕ ನಿರ್ದೇಶಕರಿಗೆ ಮತ್ತು ನಟರಿಗೆ ಸ್ಫೂರ್ತಿಯ ಚಿಲುಮೆ ಎಂದಿದ್ಧಾರೆ.
ಕ್ಲೈಮ್ಯಾಕ್ಸ್‌ಗೋಸ್ಕರ ಇನ್ನೊಮ್ಮೆ ನೋಡಬೇಕು
ಕ್ಲೈಮ್ಯಾಕ್ಸ್ ಅರ್ಥ ಆಗೋಕೆ ಇನ್ನೊಂದು ಸಲ ಚಿತ್ರವನ್ನು ನೋಡಬೇಕು ಎಂದು ಒಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮತ್ತೊಬ್ಬರು ಮೂವಿ ಸೈಕ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಈ ತರಹದ ಚಿತ್ರಗಳನ್ನು ಮಾಡಲು ಕೇವಲ ಉಪೇಂದ್ರ ಅವರಿಂದ ಮಾತ್ರ ಸಾಧ್ಯ ಎಂದಿದ್ದಾರೆ.
ಒಟ್ನಲ್ಲಿ ಮೊದಲ ದಿನದ ಮೊದಲ ಶೋನಲ್ಲಿ ಉಪೇಂದ್ರ ನಿರ್ದೇಶನದ ಯುಐ ಚಿತ್ರಕ್ಕೆ ಅನೇಕರು ಮನ ಸೋತಿದ್ದಾರೆ. ಉಪೇಂದ್ರ ಅವರ ಪ್ರಯತ್ನ ಮತ್ತು ಪ್ರಯೋಗವನ್ನು ಹೊಗಳುತ್ತಿದ್ದಾರೆ. ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.


Click it and Unblock the Notifications











