Ulidavaru Kandanthe Review: ಅವತ್ತಿಗೆ ಬಹಳ ಮುಂದುವರೆದಿದ್ದ ರಕ್ಷಿತ್ ಪ್ರಯೋಗ 'ಉಳಿದವರು ಕಂಡಂತೆ'
ಕಳೆದ 10 ವರ್ಷಗಳಲ್ಲಿ ಸಿನಿಮಾ ಚಿತ್ರಣವೇ ಬದಲಾಗಿ ಹೋಗಿದೆ. ಕಥೆ, ಚಿತ್ರಕಥೆ, ಮೇಕಿಂಗ್, ಪ್ರಮೋಷನ್ ಎಲ್ಲವೂ ಹೊಸ ರೂಪ ಪಡೆದುಕೊಂಡಿದೆ. ಕೆಲವು ಸಿನಿಮಾಗಳನ್ನು ನೋಡಿದಾಗ ಅದೇ ಇದು ಇವತ್ತಿಗೆ ಸರಿಹೊಂದುವ ಸಿನಿಮಾ ಅಲ್ಲ. ಇನ್ನು 10 ವರ್ಷ ಬಿಟ್ಟು ಬಂದಿದ್ರೆ ಗೆಲ್ತಿತ್ತು ಎಂದು ಮಾತನಾಡುತ್ತೇವೆ. ಕನ್ನಡ ಚಿತ್ರರಂಗದಲ್ಲಿ ಅಂತಹ ಸಾಕಷ್ಟು ಉದಾಹರಣೆಗಳಿವೆ.
ಪುಟ್ಟಣ್ಣ ಕಣಗಾಲ್, ರವಿಚಂದ್ರನ್ ಹೀಗೆ ಬಹಳ ಮುಂದಾಲೋಚನೆ ಮಾಡಿ ಸಿನಿಮಾಗಳನ್ನು ಮಾಡಿದವರು. ಯಾರು ಹೇಳದ ಕಥೆಯನ್ನು ಮತ್ಯಾರು ಹೇಳೋಕೆ ಸಾಧ್ಯವಾಗದ ರೀತಿ ಹೇಳಬೇಕು ಎಂದು ಬಯಸಿದವರು. ರಕ್ಷಿತ್ ಶೆಟ್ಟಿ ಆಲೋಚನೆಗಳು ಇದೇ ರೀತಿ ಇರುತ್ತದೆ. ಸದ್ಯ 'ರಿಚರ್ಟ್ ಆಂಟನಿ' ಚಿತ್ರಕಥೆ, ಪ್ರೀ ಪ್ರೊಡಕ್ಷನ್‌ನಲ್ಲಿ ಸಿಂಪಲ್ ಸ್ಟಾರ್ ಬ್ಯುಸಿಯಾಗಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾ ಬಂದು ಹೋಗಿ 10 ವರ್ಷ ಕಳೆದಿದೆ. ಈಗ ಸೀಕ್ವೆಲ್ ಮಾಡುವ ಪ್ರಯತ್ನ ಚಾಲ್ತಿಯಲ್ಲಿದೆ.

ಅವತ್ತಿಗೆ 'ಉಳಿದವರು ಕಂಡಂತೆ' ಕಥೆ ಕೆಲವರಿಗ ಅರ್ಥವಾಗಲಿಲ್ಲ. ರಕ್ಷಿತ್ ಶೆಟ್ಟಿ ಸಿನಿಮಾ ಶೈಲಿ ಕೆಲವರಿಗೆ ರುಚಿಸಲಿಲ್ಲ. ಇವತ್ತು ದೇಶ ವಿದೇಶದ ಸಿನಿಮಾ, ವೆಬ್ ಸೀರಿಸ್ ನೋಡುತ್ತಿದ್ದೇವೆ. ಸಿನಿಮಾ ಭಾಷ್ಯ ಬದಲಾಗಿದೆ. ಇಂತಹ ಸಮಯದಲ್ಲಿ 'ಉಳಿದವರು ಕಂಡಂತೆ' ಸಿನಿಮಾ ಬಂದಿದ್ರೆ ನಿಜಕ್ಕೂ ಗೆಲ್ತಿತ್ತು ಎನ್ನುವುದು ಕೆಲವರ ವಾದ. ಬಾಕ್ಸಾಫೀಸ್‌ನಲ್ಲಿ ಗೆಲ್ಲದೇ ಇದ್ದರೂ ಸಿನಿಮಾ ಕಲ್ಟ್ ಸ್ಟೇಟಸ್ ಪಡೆದುಕೊಂಡಿದೆ. ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಸಿನಿಮಾ ಕಥೆ
ದಕ್ಷಿಣ ಕನ್ನಡದ ಮಲ್ಪೆಯಲ್ಲಿ ಒಂದು ಕೊಲೆ ನಡೆಯುತ್ತದೆ. ಪತ್ರಕರ್ತೆ ರೆಜೀನಾ(ಶೀತಲ್ ಶೆಟ್ಟಿ)ಅದರ ತನಿಖಾ ವರದಿ ಮಾಡಲು ಶುರುಮಾಡುವುದರೊಂದಿಗೆ ಸಿನಿಮಾ ಕಥೆ ಶುರುವಾಗುತ್ತದೆ. ಸತ್ಯ ಹುಡುಕುವ ಅವಳ ಹಾದಿಯಲ್ಲಿ, ಇತರರು ಆ ಪ್ರಕರಣವನ್ನು ಹೇಗೆ ನೋಡಿದ್ರು ಎನ್ನುವುದನ್ನು ದಾಖಲಿಸುತ್ತಾ ಹೋಗುತ್ತಾಳೆ. ಅದೆಲ್ಲವನ್ನು ಒಟ್ಟಿಗೆ ಸೇರಿಸಿದಾಗ ಸತ್ಯ ಗೋಚರವಾಗುತ್ತದೆ. ಅಷ್ಟಕ್ಕೂ ಆ ಪ್ರಕರಣ ಏನು? ತನಿಖೆಯ ಹೇಗಿರುತ್ತೆ? ಅದರಲ್ಲಿ ಬರುವ ಪಾತ್ರಗಳು ಯಾವುವು? ಎನ್ನುವುದು 'ಉಳಿದವರು ಕಂಡಂತೆ' ಸಿನಿಮಾ.

ಆಂಥಾಲಜಿ ಮಾದರಿಯಲ್ಲಿ ಒಬ್ಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ 5 ಕಥೆಗಳ ಸುತ್ತ ನಿಜವಾದ ಕಥೆ ಸುತ್ತುತ್ತದೆ. ಪ್ರತಿ ಪಾತ್ರ ತನ್ನ ದೃಷ್ಟಿಕೋನದಲ್ಲಿ ನಿರೂಪಿಸುತ್ತಾ ಹೋದಂತೆ ಪ್ರೇಕ್ಷಕರನ್ನು ತನ್ನೊಳಗೆ ಸೆಳೆದುಕೊಳ್ಳುತ್ತದೆ. ಒಂದೇ ಗುಟುಕಿಗೆ ನೋಡಿ ಅರ್ಥ ಮಾಡಿಕೊಳ್ಳುವ ಸಿನಿಮಾ ಇದಲ್ಲ. ಇದೇ ಕಾರಣಕ್ಕೋ ಏನೋ ಫಲಿತಾಂಶ ವ್ಯತಿರಿಕ್ತವಾಗಿತ್ತು. ವಿಭಿನ್ನ ಸಿನಿಮಾ ಮಾಡುವ ರಕ್ಷಿತ್ ಶೆಟ್ಟಿ ಕನಸು ಈಡೇರಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗಲೇ ಇಲ್ಲ.
ಸಿನಿಮಾ ಹೇಗಿದೆ?
ಹಳೇ ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆ ಪಡೆದು ರಕ್ಷಿತ್ ಶೆಟ್ಟಿ ಈ ಸಿನಿಮಾ ಕಟ್ಟಿಕೊಟ್ಟಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗಾಗಿ ಎಲ್ಲರಿಗೂ ಇಷ್ಟವಾಗುವುದಿಲ್ಲ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ನೋಡುತ್ತಿದ್ದವರಿಗೆ 'ಉಳಿದವರು ಕಂಡಂತೆ' ವಿಭಿನ್ನ ಎನ್ನುವುದಕ್ಕಿಂತ ವಿಚಿತ್ರ ಎನಿಸಿಬಿಟ್ಟಿತ್ತು. ಮನರಂಜನೆಗಿಂತ ಸಿನಿಮಾ ನೋಡುಗರ ತಲೆಗೆ ಹೆಚ್ಚು ಕೆಲಸ ಕೊಟ್ಟಿತ್ತು.
ಅತಿಯಾದ ತಿರುವುಗಳು ಗೊಂದಲಕ್ಕೀಡು ಮಾಡುತ್ತದೆ. ತುಳು ಭಾಷೆಯ ಡೈಲಾಗ್‌ಗಳು ಗೊಂದಲ ಮೂಡಿಸಿದ್ದು ಸುಳ್ಳಲ್ಲ. ಹಾಗಾಗಿ ಅವತ್ತಿನ ಪ್ರೇಕ್ಷಕರಿಗೆ ಸಿನಿಮಾ ಕನೆಕ್ಟ್ ಆಗಲಿಲ್ಲ. ಆದರೆ ರಕ್ಷಿತ್ ಶೆಟ್ಟಿ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಟ್ವಿಸ್ಟ್‌ಗಳನ್ನು ಕೆಲವರು ಎಂಜಾಯ್ ಮಾಡಿದ್ದರು. ಇದು 10 ವರ್ಷಗಳ ನಂತರ ಬರಬೇಕಿದ್ದ ಸಿನಿಮಾ ಎಂದು ಹೇಳಿದವರು ಇದ್ದಾರೆ. ಇಷ್ಟು ವರ್ಷಗಳಲ್ಲಿ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಹಾಗಾಗಿ ಸೀಕ್ವೆಲ್ ಮಾಡಿದರೆ ಖಂಡಿತ ನೋಡುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಕರಾವಳಿಯ ಸಂಸ್ಕೃತಿಯನ್ನು ಬಹಳ ಸೊಗಸಾಗಿ ತೆರೆಮೇಲೆ ತಂದ ಕೆಲವೇ ಸಿನಿಮಾಗಳಲ್ಲಿ 'ಉಳಿದವರು ಕಂಡಂತೆ' ಕೂಡ ಒಂದು. ಸಂಪೂರ್ಣ ಸಿನಿಮಾ ಕಥೆ ಆ ಭಾಗದಲ್ಲೇ ನಡೆಯುತ್ತದೆ. ಇದು ಹೊಸ ಅನುಭವ ನೀಡಿತ್ತು. ಇನ್ನು ಹುಲಿಕುಣಿತವನ್ನು ಸೊಗಸಾಗಿ ಕಟ್ಟಿಕೊಟ್ಟು ಕರುನಾಡು ಕುಣಿಯುವಂತೆ ಮಾಡಿದ್ದರು.
ಪಾತ್ರಗಳು, ಕಲಾವಿದರು
'ಉಳಿದವರು ಕಂಡಂತೆ' ಚಿತ್ರದಲ್ಲಿ ಹೀರೊ ರಕ್ಷಿತ್ ಶೆಟ್ಟಿ ಇರಬಹುದು. ಆದರೆ ಚಿತ್ರದ ಪ್ರತಿ ಪಾತ್ರವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಮುನ್ನ ಆಗಿ ಕಿಶೋರ್ ಅವರನ್ನು ಮರೆಯೋಕೆ ಸಾಧ್ಯವಿಲ್ಲ. ಇನ್ನು ರಿಷಬ್ ಶೆಟ್ಟಿ ಸಣ್ಣ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ತಾರಾ ಹಾಗೂ ರಿಷಬ್ ನಡುವಿನ ಭಾವನಾತ್ಮಕ ಸನ್ನಿವೇಶ ಹೈಲೆಟ್. ಇನ್ನು ಡೆಮಾಕ್ರಸಿ ಹೆಸರಿನ ಬಾಲಕ ಸೋಹನ್ ಶೆಟ್ಟಿಯನ್ನು ಮರೆಯೋಕೆ ಸಾಧ್ಯವಿಲ್ಲ.
ಆಪರೇಷನ್ ಸಕ್ಸಸ್ ಪೇಶೆಂಟ್ ಡೆಡ್
ರಕ್ಷಿತ್ ಶೆಟ್ಟಿ ಕಟ್ಟಿಕೊಟ್ಟ 'ಉಳಿದವರು ಕಂಡಂತೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಸ್ವತಃ ನಿರ್ಮಾಪಕರು ಈ ವಿಚಾರವನ್ನು ಒಪ್ಪಿಕೊಂಡಿದ್ದರು. ಆದರೆ ಇಂತಹ ವಿಭಿನ್ನ ಪ್ರಯೋಗಕ್ಕೆ ನಿರ್ದೇಶಕ ಸಿಂಪಲ್ ಸುನಿ ಕೂಡ ಕೈಜೋಡಿಸಿದ್ದರು. ಅದ್ಯಾಕೋ ಆ ಬಳಿಕ ರಕ್ಷಿತ್ ಶೆಟ್ಟಿ ನಟನೆಯಲ್ಲೇ ಬ್ಯುಸಿ ಆಗಿಬಿಟ್ಟರು. ಮತ್ತೆ ಡೈರೆಕ್ಟರ್ ಸೀಟ್‌ನಲ್ಲಿ ಕೂರಲಿಲ್ಲ. ಆ ಕಥೆಯ ಮುಂದುವರೆದ ಭಾಗವನ್ನು ಕಟ್ಟಿಕೊಡಲು 'ರಿಚರ್ಡ್ ಆಂಟನಿ'ಗಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.


Click it and Unblock the Notifications