»   » ಪ್ರೇಕ್ಷಕರ ನಗಿಸಲು ಹೋಗಿ ನಗೆಪಾಟಲಿಗೆ ಏಕೆ ಈಡಾದೆಯೋ ನಾರಾಯಣ ? ಎಂದು ನೀವು ಕೇಳಿದರೆ, ಅದಕ್ಕೆ ಉತ್ತರ ‘ವಿಶಾಲಾಕ್ಷ್ಮನ ಗಂಡ’ ನೀಡ್ತಾನೆ..

ಪ್ರೇಕ್ಷಕರ ನಗಿಸಲು ಹೋಗಿ ನಗೆಪಾಟಲಿಗೆ ಏಕೆ ಈಡಾದೆಯೋ ನಾರಾಯಣ ? ಎಂದು ನೀವು ಕೇಳಿದರೆ, ಅದಕ್ಕೆ ಉತ್ತರ ‘ವಿಶಾಲಾಕ್ಷ್ಮನ ಗಂಡ’ ನೀಡ್ತಾನೆ..

Subscribe to Filmibeat Kannada


ದಶಕದ ಹಿಂದೆ ತೆರೆಕಂಡ ‘ವೆಸ್ಟಿ ಮಡಿಚ್ಚಿಕಟ್ಟು ’ ಎಂಬ ತಮಿಳು ಚಿತ್ರದ ರೀಮೇಕ್‌ ಕನ್ನಡದ ‘ವಿಶಾಲಾಕ್ಷಮ್ಮನ ಗಂಡ’. ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆದ ಈ ಪತಿ ಮಹಾಶಯ ಹೆಂಡತಿಯಿಂದ ಉಗಿಸಿಕೊಳ್ಳುತ್ತಿದ್ದರೆ, ಪ್ರೇಕ್ಷಕರು ಗೊಳ್ಳೆಂದು ನಗುತ್ತಿರುತ್ತಾರೆ. ಅದರ ಒಂದು ಸ್ಯಾಂಪಲ್‌ ಇಲ್ಲಿದೆ.

‘ನೀವೆಂಥಾ ಷಂಡಾ ರೀ... ಈಗಿನ ಕಾಲದಲ್ಲಿ ಯಾವುದೇ ಒಬ್ಬ ಷಂಡನಿಗೂ ರೋಷ ಅನ್ನೋದು ಇರುತ್ತೆ. ನಿಮಗೆ ಅದೂ ಇಲ್ಲ. ನಾನು ಮಾಡೋ ಅಡುಗೆಗೆ ಉಪ್ಪುಕಾರ ಇರೋಲ್ವಾ ಹೇಳ್ರೀ. ಹೆಂಡ್ತೀನ ಗಂಡ ಚೆನ್ನಾಗಿ ನೋಡ್ಕೋಬೇಕು ಅನ್ನೋ ಆಸೆ ಎಲ್ಲ ಹೆಂಡ್ತಿಗೂ ಇರತ್ತೆ. ತನ್ನ ಗಂಡನಿಗೆ ಪೌರುಷ ಇರಬೇಕು ಅಂಥ ಎಲ್ಲ ಹೆಂಡ್ತಿನೂ ಬಯಸ್ತಾರೆ, ಆದ್ರೆ ನೀವ್ಯಾಕ್ರೀ ಹೀಗೆ? ನೀವೇನು ಗಂಡಸಲ್ವಾ’

ಇಷ್ಟೆಲ್ಲಾ ಉಗೀತಿದ್ರು... ಕೇಳಿಯೂ ಕೇಳದಂತೆ, ಇಂಗು ತಿಂದ ಮಂಗನಂತೆ ನಿಲ್ಲುವ ಇಂಥ ಗಂಡನ ಬಗ್ಗೆ ನಿಮಗೆ ಆಯ್ಯೋ ಪಾಪ ಎನಿಸುತ್ತದಾ ?

ಒಟ್ಟಾರೆಯಾಗಿ ಇದೊಂದು ಹಾಸ್ಯಮಯ ಸಾಂಸಾರಿಕ ಚಿತ್ರ ಎನ್ನಲಡ್ಡಿಯಿಲ್ಲ. ನಗಿಸಲು ಪ್ರಯತ್ನಿಸಿರುವ ಹಳೆಯ ಜೋಕುಗಳೇ ಚಿತ್ರದ ಕಥಾವಸ್ತು. ಮಧ್ಯಂತರದವರೆಗೂ ಪುಕ್ಕುಲತನದಿಂದ ಥರಥರ ನಡುಗುವ ನಾಯಕ, ಆಕಸ್ಮಿಕವಾಗಿ ತಾನು ಕಂಡ ಕೊಲೆಗೆ ಸಾಕ್ಷಿ ಹೇಳುವ ಧೈರ್ಯವನ್ನೂ ಮಾಡ್ತಾನೆ. ನಾರಾಯಣನ ಗ್ರಹಚಾರಕ್ಕೆ ಜೈಲು ಸೇರಿದ ಆ ಕೊಲೆಗಾರ ಜೈಲಿನಿಂದ ತಪ್ಪಿಸಿಕೊಂಡು ಬಂದು ಈ ಬಡಪಾಯಿ ಪುಕ್ಕಲು ಪತೀನ ಕೊಲ್ಲಲು ಮಹಿಷಾಸುರನಂತೆ ನಿಲ್ಲುತ್ತಾನೆ.

ಮಗನ ಒತ್ತಾಯಕ್ಕೆ ಮಣಿದು ಇದ್ದಕ್ಕಿದ್ದಂತೆ ಹೀಮ್ಯಾನ್‌, ಸೂಪರ್‌ ಮ್ಯಾನ್‌, ಫ್ಯಾಂಟಮ್‌, ಸ್ಪೈಡರ್‌ಮ್ಯಾನ್‌ ಇತ್ಯಾದಿ ಇತ್ಯಾದಿಗಳನ್ನೂ ಮೀರಿಸುವ ಪೌರುಷವಂತನಾಗುವ ನಾಯಕ, ತಾನೂ ಒಬ್ಬ ಗಂಡಸು ಎಂದು ನಿರೂಪಿಸುತ್ತಾನೆ. ಧೈರ್ಯಂ ಸವ್ರರ್ತ ಸಾಧನಂ ಎಂಬಲ್ಲಿಗೆ ಚಿತ್ರ ಅಂತ್ಯ.

ಈ ಕಥೆಯ ಹಂದರದೊಳಗೆ ಈಗಾಗಲೇ ಹಲವಾರು ಚಿತ್ರಗಳಲ್ಲಿ ಬಂದು ಸವಕಲಾಗಿರುವ ಜೋಕುಗಳು, ವಿಭಿನ್ನ ಶೈಲಿಯಲ್ಲಿ ಬಂದು ಹೋಗಿವೆ. ಫೈಟ್‌ನಲ್ಲೂ ಲೀನವಾಗಿರುವ ಕಾಮಿಡಿ, ಕಾಶೀನಾಥರನ್ನು ನೆನಪಿಸುತ್ತವೆ. ಈತನಕ ಪ್ರಣಯರಾಜನನ್ನು ಮೀರಿಸುತ್ತಿದ್ದ ಎಸ್‌. ನಾರಾಯಣ್‌ ಈ ಚಿತ್ರದಲ್ಲಿ ನಿಮಗೆ ವಿಭಿನ್ನವಾಗಿ ಕಂಡರೆ ಅಚ್ಚರಿ ಇಲ್ಲ.

ಅಂದಹಾಗೆ ಘಟವಾಣಿ ಅಲ್ಲದಿದ್ದರೂ, ಪುಕ್ಕಲು ಗಂಡನನ್ನು ಹೀನಾಮಾನ ಉಗಿಯುವ ಹೆಂಡತಿಯಾಗಿ ಅನು ಪ್ರಭಾಕರ್‌, ಅರಳು ಹುರಿದಂತೆ ಮಾತಾಡುವ ಮಾಸ್ಟರ್‌ ಪಂಕಜ್‌, ಮಾಂಸ ಪರ್ವತದಂತಿರುವ ದೊಡ್ಡಣ್ಣ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಪ್ರಶಾಂತ್‌ ರಾಜ್‌ರ ರಾಗವೂ ಈ ಚಿತ್ರದಲ್ಲಿ ಸುಧಾರಿಸಿದೆ. ಹಾಡುಗಳು ಒಂದೆರಡು ಬಾರಿ ಕೇಳುವಂತಿವೆ. ಮ್ಯಾಥ್ಯೂ ಛಾಯಾಗ್ರಹಣವೂ ಓಕೆ. ಒಟ್ಟಾರೆ ಮನೆಯಲ್ಲಿ ಹೆಂಡತಿಯೆದುರು ಇಲಿಯಾಗಿದ್ದರೂ, ಹೊರಗೆ ಹುಲಿಯಾಗಿದ್ದಲ್ಲಿ ಮಾತ್ರ ಹೆಂಡ್ತಿ ಒಪ್ಪುತ್ತಾಳೆ ಎನ್ನುವುದೇ ಚಿತ್ರದ ಥಿಯರಿ. ಈ ಥಿಯರಿ ಇಷ್ಟ ಆಗ್ದೇ ಇದ್ರು. ಚಿತ್ರ ಇಷ್ಟ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

ಪ್ರದರ್ಶನ : ಬೆಂಗಳೂರು - ತ್ರಿವೇಣಿ, ಮಾರುತಿ; ಮೈಸೂರು - ಲಕ್ಷ್ಮೀ, ಸರಸ್ವತಿ, ರಣಜಿತ್‌; ಮಂಡ್ಯ - ಸಿದ್ಧಾರ್ಥ; ಚಿತ್ರದುರ್ಗ - ವೆಂಕಟೇಶ್ವರ; ದಾವಣಗೆರೆ - ಪದ್ಮಾಂಜಲಿ; ಶಿವಮೊಗ್ಗ - ಲಕ್ಷ್ಮೀ; ಚಿಕ್ಕಮಗಳೂರು - ಮಿಲನ್‌; ಹುಬ್ಬಳ್ಳಿ - ಸುದರ್ಶನ್‌; ಬಿಜಾಪುರ - ಡ್ರೀಮ್‌ಲ್ಯಾಂಡ್‌.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada