»   » ನಾವು ನೋಡಿದ ಚಿತ್ರ - ವಂದೇ ಮಾತರಂ

ನಾವು ನೋಡಿದ ಚಿತ್ರ - ವಂದೇ ಮಾತರಂ

Posted By:
Subscribe to Filmibeat Kannada

*ಆರ್‌. ಪದ್ಮನಾಭ

ದೇಶಭಕ್ತಿಯ ಚಿತ್ರ ನಮಗೇನೂ ಹೊಸದಲ್ಲ. ಅದರಲ್ಲೂ ದೇಶ ಭಕ್ತಿ ಮತ್ತು ಭಯೋತ್ಪಾದಕತೆಯನ್ನು ಹದವಾಗಿ ಬೆರೆಸಿದ ಚಿತ್ರಗಳಂತೂ ಸಾಕಷ್ಟು ಬಂದುಹೋಗಿವೆ. ಕಳೆದ ವರ್ಷ ಬಿಡುಗಡೆಯಾದ ಎಕೆ-47 ಆಗಲೀ, ಹಿಂದಿಯಲ್ಲಿ ಬಂದ ಬಾರ್ಡರ್‌, ಮಿಷನ್‌ ಕಾಶ್ಮೀರ್‌, ಬಾಂಬೇಗಳೇ ಆಗಲೀ, ಇಂಥ ಚಿತ್ರಗಳಿಗೆ ಉದಾಹರಣೆ.

ಕನ್ನಡದಲ್ಲೂ ದೇಶ ಭಕ್ತಿಯ ಚಿತ್ರಗಳನ್ನು ನೀಡಲು ಯತ್ನಿಸಿ ಸೋತವರಿದ್ದಾರೆ. ನಮ್ಮ ಪ್ರೇಕ್ಷಕರಿಗೆ ದೇಶಕ್ಕಿಂತ ರಾಜ್ಯ ದೊಡ್ಡದು. ಕನ್ನಡಕ್ಕಾಗಿ ಹೋರಾಡು ನಾಯಕನಷ್ಟು ದೇಶಕ್ಕಾಗಿ ಹೋರಾಡುವ ನಾಯಕ ಗ್ರೇಟ್‌ ಅಲ್ಲ. ಅದಕ್ಕಾಗಿಯೇ ಹ್ಯಾಟ್ಸ್‌ ಆಫ್‌ ಇಂಡಿಯಾ ಸೋಲುತ್ತದೆ. ವೀರಪ್ಪ ನಾಯ್ಕ ಗೆಲ್ಲುತ್ತಾನೆ ! ವಂದೇ ಮಾತರಂ ಕೂಡ ಹೆಸರೇ ಹೇಳುವ ಹಾಗ ದೇಶ ಪ್ರೇಮಿ ಚಿತ್ರ. ಭಾರತದ ನೆತ್ತಿಯಲ್ಲಿರುವ ಕಾಶ್ಮೀರವನ್ನು ಕತ್ತರಿಸಿಕೊಂಡು ಹೋಗಬೇಕು ಎಂದುಕೊಂಡಿರುವ ಕೈಸರ್‌ ಶೂಜಾನ ಕೈಯಿಂದ ದೇಶವನ್ನು ಪಾರುಮಾಡುವ ಒಂದು ಡಜನ್‌ ಶೂರರ ಕತೆ. ಈ ಶೂರರಿಗೆ ನಾಯಕಿಯಾಗಿ ತೆಲುಗಿನ ಆ್ಯಂಗ್ರಿ ಯಂಗ್‌ ವುಮನ್‌ ವಿಜಯಶಾಂತಿ ಇದ್ದಾರೆ. ನಾಯಕರಾಗಿ ಕನ್ನಡ ರೆಬೆಲ್‌ ಸ್ಟಾರ್‌ ಅಂಬರೀಷ್‌ ಇದ್ದಾರೆ.

ಚಿತ್ರ ಆರಂಭವಾಗುವುದೇ ಹೊಡೆದಾಟದಿಂದ. ನಂತರ ಚಿತ್ರದುದ್ದಕ್ಕೂ ಹೊಡೆದಾಟಗಳ ಸರಮಾಲೆಯೇ. ವಿಜಯಶಾಂತಿ, ಪೊಲೀಸ್‌ ಇಲಾಖೆಯ ಅಧಿಕಾರಿ ಗಾಯತ್ರಿ ಬ್ರಹ್ಮಾವರ್‌ ಆಗಿ ಕಾಣಿಸಿಕೊಂಡಿದ್ದಾರೆ. ಸದಾ ತಮಗಿಷ್ಟ ಬಂದ ದಿರಿಸು ತೊಟ್ಟುಕೊಂಡು ಓಡಾಡುವ ಆಕೆ ಸರ್ವ ಶಕ್ತಿ. ಪೊಲೀಸ್‌ ಇಲಾಖೆಯ ಮಂದಿಗೇ ಸಿಂಹ ಸ್ವಪ್ನ. ಮೇಲಧಿಕಾರಿಗಳ ಎದುರೇ ಅಧಿಕಾರಿಯಾಬ್ಬನನ್ನು ಪಾಯಿಂಟ್‌ ಬ್ಲಾಕ್‌ನಲ್ಲಿ ಹೆದರಿಸುವ ಪ್ರಯತ್ನವನ್ನೂ ಆಕೆ ಮಾಡುತ್ತಾಳೆ.

ದೇಶ ಪ್ರೇಮ ಎಂದರೆ ಮಾರಾಮಾರಿ ಹಾಗೂ ನಿರಂತರ ಹೊಡೆದಾಟ ಎಂದು ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಭಾವಿಸಿದ್ದಾರೆ ಅನ್ನುವುದೂ ನಿಜ. ಯಾಕೆಂದರೆ ಎರಡು ಗಂಟೆ ಹತ್ತು ನಿಮಿಷದ ಚಿತ್ರದಲ್ಲಿ ಇಪ್ಪತ್ತು ನಿಮಿಷ ಹಾಡುಗಳಿಗೆ ಇಪ್ಪತ್ತು ನಿಮಿಷ ಸಂಭಾಷಣೆಗಳಿಗೆ ಮೀಸಲಾಗಿದ್ದರೆ, ಉಳಿದ ತೊಂಬತ್ತು ನಿಮಿಷ ಹೊಡೆದಾಟಕ್ಕೂ ಬೆನ್ನಟ್ಟುವಿಕೆಗೂ ಮೀಸಲಾಗಿದೆ. ಒಂದು ಚೇಸ್‌ ಅಂತೂ ಕನಿಷ್ಠ ಇಪ್ಪತ್ತು ನಿಮಿಷ ನಡೆಯುತ್ತದೆ. ಹೀಗಾಗಿ ಪ್ರೇಕ್ಷಕರಿಗೆ ಬೆಂಗಳೂರಿನಿಂದ ನೆಲಮಂಗಲಕ್ಕೆ ಹೋಗಿ ಬಂದ ಅನುಭವ ಆಗುತ್ತದೆ.

ಇದು ಇಷ್ಟಕ್ಕೇ ಸೀಮಿತವಾಗಿಲ್ಲ ಅನ್ನುವುದೂ ನಿಜ. ನಡು ನಡುವೆ ಸೆಂಟಿಮೆಂಟ್‌ನ ಎಳೆಯನ್ನು ತುರುಕಲು ಪ್ರಕಾಶ್‌ ಪ್ರಯತ್ನಿಸಿ ಸೋತಿದ್ದಾರೆ. ಯಾಕೆಂದರೆ ಅಲ್ಲಿ ಸೆಂಟಿ ಮೆಂಟ್‌ಗೆ ಅವಕಾಶವೇ ಇಲ್ಲ. ಅಲ್ಲಿರುವುದು ಕ್ರೆೃಂ ಆ್ಯಂಡ್‌ ಪನಿಷ್‌ಮೆಂಟ್‌.

ವಿಜಯ ಶಾಂತಿ, ಅಂಬರೀಷ್‌ ಜೊತೆಗೇ ವಿನೋದ್‌ ರಾಜ್‌, ಕುಮಾರ್‌ ಗೋವಿಂದ್‌, ಹರೀಶ್‌, ನವೀನ್‌, ಎ,ಬಿ, ಸಿ,ಡಿ....ಹೀಗೆ ತಾರೆಯರ ದಂಡೇ ಇಲ್ಲಿದೆ. ಪ್ರತಿಯಾಬ್ಬರಿಗೂ ರೇಷನ್‌ ಅಂಗಡಿಯ ನಿಯಮದಂತೆ ಒಂದೊಂದು ಹಿಡಿ ಸಂಭಾಷಣೆ ಹಾಗೂ ಒಂದೊಂದು ಲೀಟರ್‌ ಕ್ಲೋಸಪ್ಪು ಲಭ್ಯ. ಹಬ್ಬದ ಪ್ರಯುಕ್ತ ವಿಶೇಷ ಎಂಬಂತೆ ಒಂದೊಂದು ಹೊಡೆದಾಟಕ್ಕೂ ಅವಕಾಶ ಇದೆ. ಹಾಗೇ ದಾಮಿನಿ, ರೀತು ಸಿಂಗ್‌ ಹಾಗೂ ಅಖಿಲಾ ಎಂಬ ತ್ರಿದೇವಿಯರೂ ಚಿತ್ರದಲ್ಲಿದ್ದಾರೆ. ಅವರಿಗೆ ಅಂಗಾಂಗ ಪ್ರದರ್ಶನಕ್ಕಾಗಲೀ, ಪ್ರತಿಭಾ ಪ್ರದರ್ಶನಕ್ಕಾಗಲೀ ಅವಕಾಶವಿಲ್ಲ.

ಚಿತ್ರದ ಕತೆಗಾರರ ಹೆಸರು ಭಾರವಿ. ಕತೆ ಬರೆಯುವ ತರಬೇತಿ ಸಂಸ್ಥೆಯನ್ನೂ ಅವರು ಆರಂಭಿಸಬಹುದೇನೋ. ಯಾಕೆಂದರೆ ಅವರು ಲೀಲಾಜಾಲ ಕತೆ ಹೇಳುತ್ತಾ ಹೋಗುತ್ತಾರೆ. ತರ್ಕವಾಗಲೀ, ಸಾತತ್ಯವಾಗಲೀ ಬೇಕು ಎಂಬ ಪರಿವೆಯೇ ಅವರಿಗೆ ಇದ್ದಂತಿಲ್ಲ. ಉದಾಹರಣೆಗೆ ಕಾಡಿನ ನಡುವಣ ಗುಡ್ಡದ ಮೇಲೆ ತನ್ನ ಗುಪ್ತ ಮಿಲಿಟರಿ ನೆಲೆಯನ್ನು ಹೂಡಿದ ಕೈಸರ್‌ ಶೂಜಾನ ತಾಣವನ್ನು ನಮ್ಮ ಡಜನ್‌ ನಾಯಕರು ಕ್ಷಣಾರ್ಧದಲ್ಲಿ ತಲುಪುತ್ತಾರೆ. ಶೂಜಾನ ಮಾತು ಕೇಳಿದ ತಕ್ಷಣ ಎಂಥವರೂ ಆತನಿಗೆ ವಶವಾಗುತ್ತಾರೆ. ಸಾವಿರಾರು ಮಕ್ಕಳು ವಂದೇ ಮಾತರಂ ಹೇಳಿದಾಕ್ಷಣ ಬದಲಾಗುತ್ತಾರೆ. ಆದರೆ, ತನ್ನ ತಮ್ಮನನ್ನು ಬದಲಾಯಿಸುವುದು ನಾಯಕಿಗೆ ಸಾಧ್ಯವಾಗುವುದಿಲ್ಲ !

ಇಂಥ ಚಿತ್ರಕ್ಕಾಗಿ ನಿರ್ಮಾಪಕಿ ಜಯಶ್ರೀ ದೇವಿ ಕೋಟ್ಯಂತರ ರೂಪಾಯಿ ಸುರಿದಿದ್ದಾರೆ. ನಾಲ್ಕಾರು ಭಾಷೆಯ ಕಲಾವಿದರನ್ನು ಒಂದು ಕಡೆ ಕೂಡಿಸಿದ್ದಾರೆ. ಅಂಬರೀಷ್‌ರಂಥ ಕಲಾವಿದರನ್ನು ಹಾಕಿಕೊಂಡು ಏಗಿದ್ದಾರೆ. ಕಳೆದ ಒಂದುವರೆ ವರ್ಷದಿಂದ ವಂದೇ ಮಾತರಂ ಶೂಟಿಂಗ್‌ ನಡೆಸಿದೆ. ಕಲಾವಿದರನ್ನು ಕಿತ್ತು ಹಾಕಿದ್ದು, ಹೊಸದಾಗಿ ಸೇರಿಸಿಕೊಂಡದ್ದು ನಡೆದಿದೆ.

ಆದರೆ, ಚಿತ್ರಕ್ಕೆ ಅದರಿಂದೇನೂ ಪ್ರಯೋಜನ ಆದಂತಿಲ್ಲ. ಭಾರವಿ ಎಕೆ-47 ಕತೆಯಿಂದ ಪ್ರಭಾವಿತರಾಗಿ ಅಂಥದ್ದೊಂದು ಚಿತ್ರ ಮಾಡುವಂತೆ ದೇವಿಯವರನ್ನು ಪ್ರೇರೇಪಿಸಿದ್ದಾರೆ ಅನ್ನುವುದಂತೂ ನಿಜ. ದೇವಿ, ಭಾರವಿ ಎಂಬ ಭಯೋತ್ಪಾದಕನಿಂದ ಪಾರಾದರೆ ಒಳ್ಳೆಯದು ಅಂತ ಅನಿಸುವುದಕ್ಕೆ ವಂದೇ ಮಾತರಂ ನೋಡಿದರೆ ಸಾಕು. ಅದಕ್ಕಾಗಿಯಾದರೂ ನೋಡಬೇಕು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada